ಸಾರಾಂಶ
‘ಕಾಂಗ್ರೆಸ್ ವಲಯದಲ್ಲಿ ಗುಲ್ಲೆದ್ದಿರುವ ಸಚಿವ ಸಂಪುಟ ಪುನಾರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಮೇಲ್ಮನೆಗೆ 4 ಸದಸ್ಯರ ನಾಮನಿರ್ದೇಶನ ಕುರಿತು ಪಕ್ಷದ ಹೈಕಮಾಂಡ್ ಚರ್ಚೆ ಆರಂಭಿಸುವುದೇ ಬೆಳಗಾವಿ ವಿಧಾನಮಂಡಳದ ಚಳಿಗಾಲ ಅಧಿವೇಶನದ ನಂತರ’ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಬೆಂಗಳೂರು : ‘ಕಾಂಗ್ರೆಸ್ ವಲಯದಲ್ಲಿ ಗುಲ್ಲೆದ್ದಿರುವ ಸಚಿವ ಸಂಪುಟ ಪುನಾರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಮೇಲ್ಮನೆಗೆ 4 ಸದಸ್ಯರ ನಾಮನಿರ್ದೇಶನ ಕುರಿತು ಪಕ್ಷದ ಹೈಕಮಾಂಡ್ ಚರ್ಚೆ ಆರಂಭಿಸುವುದೇ ಬೆಳಗಾವಿ ವಿಧಾನಮಂಡಳದ ಚಳಿಗಾಲ ಅಧಿವೇಶನದ ನಂತರ’ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಈ ಮೂಲಗಳ ಪ್ರಕಾರ, ಸಚಿವ ಸಂಪುಟ ಪುನಾರಚನೆ ವಿಚಾರದ ಚರ್ಚೆ ಬೆಳಗಾವಿ ಅಧಿವೇಶನ ಮುಗಿದ ನಂತರ ಆರಂಭವಾಗುವ ಸಾಧ್ಯತೆಯಿದೆ. ಆದರೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಂತೂ ಸದ್ಯಕ್ಕೆ ಯಾವ ಹಂತದಲ್ಲೂ ಚರ್ಚೆ ಆರಂಭವಾಗಿಲ್ಲ. ಅಧಿವೇಶನದ ನಂತರವೂ ಪಕ್ಷದ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಕಡಿಮೆ.
ಇನ್ನೂ ಮೇಲ್ಮನೆಯ 4 ಸ್ಥಾನಗಳಿಗೆ ನಾಮಕರಣಕ್ಕೆ ಸಂಬಂಧಿಸಿದಂತೆ ಆಕಾಂಕ್ಷಿಗಳು ನಾಯಕರ ಮನೆಗಳಿಗೆ ಪರೇಡ್ ಆರಂಭಿಸಿದ್ದರೂ ಅದರ ಬಗ್ಗೆ ಗಂಭೀರ ಚರ್ಚೆ ಆರಂಭವಾಗುವುದು ಮುಂದಿನ ಜನವರಿ ಮಾಸದಲ್ಲೇ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗ ನೀಡಿರುವ ದೆಹಲಿ ಭೇಟಿಯಿಂದಾಗಿ, ವಿಧಾನಮಂಡಳ ಅಧಿವೇಶನದ ಒಳಗೆ ಸಂಪುಟ ಪುನಾರಚನೆ ನಡೆಯಲಿದೆ ಎಂಬ ವದಂತಿ ಹಬ್ಬಿಸಲಾಗಿತ್ತು. ಆದರೆ, ಅಂತಹ ಯಾವುದೇ ಸಾಧ್ಯತೆಯಿಲ್ಲ. ಪುನಾರಚನೆ ವಿಚಾರ ಚರ್ಚೆ ಆರಂಭವಾಗುವುದೇ ವಿಧಾನಮಂಡಲ ಅಧಿವೇಶನದ ನಂತರ ಎಂದು ಉನ್ನತ ಮೂಲಗಳು ತಿಳಿಸಿವೆ.
ಒಂದು ವೇಳೆ ಸಿದ್ದರಾಮಯ್ಯ ಅವರ ಶುಕ್ರವಾರದ ಭೇಟಿಯ ವೇಳೆ ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಲು ಅವಕಾಶ ದೊರೆತರೆ ಸಂಪುಟ ಪುನಾರಚನೆ ಬಗೆಗಿನ ತಮ್ಮ ಇಂಗಿತವನ್ನು ವ್ಯಕ್ತಪಡಿಸುವ ಹಾಗೂ ಮೇಲ್ಮನೆಗೆ ನಾಮಕರಣ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಮಾತ್ರವಿದೆ ಎಂದು ಮೂಲಗಳು ಹೇಳುತ್ತವೆ.
ದೊಡ್ಡ ಮಟ್ಟದ ಪುನಾರಚನೆ:
ಉಪ ಚುನಾವಣೆಯ ಭರ್ಜರಿ ಜಯದ ಹಿನ್ನೆಲೆಯಲ್ಲಿ ಸಂಪುಟ ಪುನಾರಚನೆ ಮಾಡಬೇಕು ಎಂಬ ಆಸಕ್ತಿ ರಾಜ್ಯ ನಾಯಕತ್ವ ಮಾತ್ರವಲ್ಲದೇ ಹೈಕಮಾಂಡ್‌ನ ವರಿಷ್ಠರಿಗೂ ಆರಂಭವಾಗಿದ್ದು, ದೊಡ್ಡ ಮಟ್ಟದಲ್ಲೇ ಸಂಪುಟ ಪುನಾರಚನೆ ಕೈಗೊಳ್ಳಬೇಕು ಎಂಬ ಉದ್ದೇಶವಿದೆ.
ಆಡಳಿತದಲ್ಲಿ ಕ್ರಿಯಾಶೀಲರಿಲ್ಲದ ಕೆಲ ಸಚಿವರು (ಮಂಕಾಳು ವೈದ್ಯ, ಎಸ್.ಎಸ್. ಮಲ್ಲಿಕಾರ್ಜುನ್, ದರ್ಶನಾಪುರ ಮೊದಲಾದವರು), ಭ್ರಷ್ಟಾಚಾರದ ಆರೋಪಕ್ಕೆ ಸಿಲುಕಿರುವ ಹಾಗೂ ಅನಗತ್ಯ ಹೇಳಿಕೆ ನೀಡಿ ಪಕ್ಷವನ್ನು ಮುಜುಗರಕ್ಕೆ ತಳ್ಳುತ್ತಿರುವವರು (ಆರ್.ಬಿ. ತಿಮ್ಮಾಪುರ, ಕೆ.ಎನ್. ರಾಜಣ್ಣ, ಜಮೀರ್ ಅಹ್ಮದ್) ಮತ್ತು ಕಾಂಗ್ರೆಸ್ ಹೈಕಮಾಂಡ್ ಪಕ್ಷ ಸಂಘಟನೆ ಹಾಗೂ ಕೆಲ ಚುನಾವಣೆಗಳ ಕುರಿತು ನೀಡಿದ ಜವಾಬ್ದಾರಿ (ಸಂಪನ್ಮೂಲ ಪೂರೈಕೆ)ಯನ್ನು ನಿಭಾಯಿಸದ ಇಬ್ಬರು ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂಬ ಉದ್ದೇಶವಿದೆ.
ಇದಲ್ಲದೆ, ವಯಸ್ಸಿನ ಕಾರಣಕ್ಕೆ ಮತ್ತು ಜಾತಿ ಹಾಗೂ ಸಮುದಾಯ ಪ್ರಾತಿನಿಧ್ಯ ನೀಡುವ ಕಾರಣಕ್ಕೂ ಕೆಲ ಸಚಿವರನ್ನು ಬದಲಾಯಿಸಿ ಅವರ ಜಾಗಕ್ಕೆ ಯುವ ಶಾಸಕರಿಗೆ ಸರ್ಕಾರದಲ್ಲಿ ಅವಕಾಶ ನೀಡಬೇಕು ಎಂಬ ಉದ್ದೇಶವಿದೆ.
ಹೀಗೆ ದೊಡ್ಡ ಮಟ್ಟದಲ್ಲೇ ಸಂಪುಟ ಪುನಾರಚನೆ ನಡೆಸಬೇಕು ಎಂಬ ಉದ್ದೇಶವಿರುವುದರಿಂದ ಅದರ ಬಗ್ಗೆ ಚರ್ಚೆ ನಡೆಸಲು ಹಾಗೂ ಪರ್ಯಾಯಗಳನ್ನು ಹುಡುಕಿಕೊಳ್ಳಲು ಸಮಯದ ಅಗತ್ಯವಿದೆ.
ಜತಗೆ, ಯಾವ್ಯಾವ ಸಚಿವರನ್ನು ಕೈಬಿಡಬೇಕು ಮತ್ತು ಯಾರಿಗೆ ಅವಕಾಶ ನೀಡಬೇಕು ಎಂಬ ಬಗ್ಗೆ ಸಿದ್ದರಾಮಯ್ಯ ಅವರು ಒಂದು ಪಟ್ಟಿ ಸಿದ್ಧಪಡಿಸಿದರೆ, ಅಂತಹುದೇ ಪಟ್ಟಿಯನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತ್ಯೇಕವಾಗಿ ಸಿದ್ಧಪಡಿಸುವ ಸಾಧ್ಯತೆಯಿದೆ.
ಹೀಗಾಗಿ ಈ ನಾಯಕರ ಪಟ್ಟಿಯನ್ನು ಸಮೀಕರಿಸಿ ಅನಂತರ ಹೈಕಮಾಂಡ್ ಬಯಕೆಯ ಕೆಲ ಸೂಕ್ತ ಬದಲಾವಣೆಗಳನ್ನು ಮಾಡಿದ ನಂತರ ಸಂಪುಟ ಪುನಾರಚನೆಗೆ ಅಂತಿಮ ಮುದ್ರೆ ಬೀಳುವ ಸಾಧ್ಯತೆಯಿದೆ. ಈ ಎಲ್ಲ ಪ್ರಕ್ರಿಯೆ ನಡೆಸಲು ಸಾಕಷ್ಟು ಚರ್ಚೆ ನಡೆಯಬೇಕಿದೆ. ಹೀಗಾಗಿಯೇ ವಿಧಾನಮಂಡಲ ಅಧಿವೇಶನಕ್ಕೂ ಪೂರ್ವದಲ್ಲಿ ಸಂಪುಟ ವಿಸ್ತರಣೆ ಸಾಧ್ಯತೆಯೇ ಇಲ್ಲ ಎನ್ನಲಾಗುತ್ತಿದೆ.
ಈ ಪ್ರಕ್ರಿಯೆ ಅಧಿವೇಶನದ ನಂತರ ಆರಂಭವಾಗಲಿದೆ. ಪ್ರಕ್ರಿಯೆ ಶೀಘ್ರ ಪೂರ್ಣಗೊಂಡರೆ ಡಿಸೆಂಬರ್ ಮಾಸಾಂತ್ಯದ ವೇಳೆ ಪುನಾರಚನೆ ವಿಚಾರ ಒಂದು ಹಂತಕ್ಕೆ ಬರಬಹುದು. ಇಲ್ಲವೇ ಹೊಸ ವರ್ಷಕ್ಕೆ ಮುಂದೂಡಿಕೆಯಾದರೂ ಅಚ್ಚರಿಯಿಲ್ಲ ಎನ್ನುತ್ತವೆ ಮೂಲಗಳು.
ಬಜೆಟ್ ನಂತರ?:
ಮತ್ತೊಂದು ಮೂಲಗಳ ಪ್ರಕಾರ, ಸಂಪುಟದ ಕೆಲ ಸಚಿವರು ರಾಜ್ಯ ನಾಯಕತ್ವ ಹಾಗೂ ಹೈಕಮಾಂಡ್‌ನ ನಿಯಂತ್ರಣಕ್ಕೆ ಸಿಗದೆ ತಮ್ಮಿಚ್ಛೆಯಂತೆ ನಡೆದುಕೊಳ್ಳುತ್ತಿದ್ದಾರೆ ಅಂತವಹರಿಗೆ ಖಾತೆ ಕಳೆದುಕೊಳ್ಳುವ ಭೀತಿ ಹುಟ್ಟು ಹಾಕಲು ಈ ಸಂಪುಟ ಪುನಾರಚನೆಯ ಭೀತಿ ಹುಟ್ಟುಹಾಕಲಾಗಿದೆ.
ಹೀಗಾಗಿ, ಪುನಾರಚನೆ ಎಂಬುದೇನಿದ್ದರೂ ಮುಂದಿನ ಮಾರ್ಚ್ ಅಥವಾ ಏಪ್ರಿಲ್‌ನ ಬಜೆಟ್ ಅಧಿವೇಶನದ ನಂತರ ಮಾತ್ರ ನಡೆಯಬಹುದು. ಅಲ್ಲಿಯವರೆಗೂ ಆಗಾಗ ಸಂಪುಟ ಪುನಾರಚನೆಯ ಗುಮ್ಮ ಮಾತ್ರ ಆಗಾಗ ಸಚಿವರನ್ನು ಕಾಡಲು ಬಳಕೆಯಾಗಬಹುದು ಎನ್ನುತ್ತವೆ ಈ ಮೂಲಗಳು.
ಮೇಲ್ಮನೆಗೆ ಮೂರಲ್ಲ 4 ನಾಮಕರಣ
ಮೇಲ್ಮನೆಗೆ ಹಾಲಿ 3 ನಾಮನಿರ್ದೇಶನ ಮಾಡಬಹುದಾದ ಸ್ಥಾನಗಳು ತೆರವಾಗಿವೆ. ಜನವರಿಯಲ್ಲಿ ಮತ್ತೊಬ್ಬ ನಾಮನಿರ್ದೇಶನ ಸದಸ್ಯ ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ ಅವಧಿ ಪೂರ್ಣಗೊಳ್ಳಲಿದೆ. ಹೀಗಾಗಿ, ರಾಜ್ಯ ನಾಯಕತ್ವ ಈ 4 ಸ್ಥಾನಗಳಿಗೂ ಒಮ್ಮೆಲೆ ನಾಮನಿರ್ದೇಶನ ಮಾಡುವ ಉದ್ದೇಶ ಹೊಂದಿದೆ.
ಸಮಾಜಸೇವೆ ಕ್ಷೇತ್ರದಿಂದ ನಾಮನಿರ್ದೇಶನಗೊಂಡಿದ್ದ ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್, ಕ್ರೀಡೆಯಿಂದ ಪ್ರಕಾಶ್ ರಾಠೋಡ್ ಮತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಚನ್ನಪಟ್ಟಣದ ಶಾಸಕರಾಗಿ ಆಯ್ಕೆಯಾಗಿರುವ ಸಿ.ಪಿ. ಯೋಗೇಶ್ವರ್ ಅವರಿಂದ 3 ಸ್ಥಾನಗಳು ತೆರವಾಗಿವೆ.
ಇನ್ನೂ ಜನವರಿ ಮಾಸಕ್ಕೆ ಜೆಡಿಎಸ್‌ನ ತಿಪ್ಪೇಸ್ವಾಮಿ ಅವರ ಅವಧಿಯೂ ಮುಗಿಯಲಿದೆ. ಈ ನಾಲ್ಕು ಸ್ಥಾನಗಳಿಗೂ ಒಮ್ಮೆಲೇ ನಾಮನಿರ್ದೇಶನ ನಡೆಯಲಿದ್ದು, ಈ ಪ್ರಕ್ರಿಯೆಯೂ ಬೆಳಗಾವಿ ಅಧಿವೇಶನದ ನಂತರವೇ ಆರಂಭವಾಗಲಿವೆ.