ಸಾರಾಂಶ
ಮೈತ್ರಿ ಅಭ್ಯರ್ಥಿ ಚುನಾವಣೆಯಲ್ಲಿ ಗೆಲವು ಸಾಧಿಸಿದರೆ ಜೆಡಿಎಸ್ ಹಾಗೂ ಕುಮಾರಸ್ವಾಮಿ ಅವರಿಗೆ ಶಕ್ತಿ ತುಂಬಿದಂತಾಗುತ್ತದೆ ಎಂದು ಜೆಡಿಎಸ್ ಮುಖಂಡ ಟಿ.ಎನ್. ಜವರಾಯಿಗೌಡ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಕೆಂಗೇರಿ
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಗೆ ವಿಧಾನಪರಿಷತ್ತಿನ ಶಿಕ್ಷಕರ ಕ್ಷೇತ್ರದ ಉಪಚುನಾವಣೆ ಸವಾಲಾಗಿದ್ದು, ಮೈತ್ರಿ ಅಭ್ಯರ್ಥಿಯಾಗಿ ಎ.ಪಿ. ರಂಗನಾಥ್ ಅವರು ಸ್ಪರ್ಧಿಸಿದರೆ ಗೆಲ್ಲುವ ಸಾಧ್ಯತೆಗಳಿವೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಟಿ.ಎನ್. ಜವರಾಯಿಗೌಡ ಹೇಳಿದರು.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಉಲ್ಲಾಳ್ ವಾರ್ಡ್ ಜೆಡಿಎಸ್ ಮುಖಂಡ ಎ.ಎಂ. ಹನುಮಂತೇಗೌಡರ ನಿವಾಸದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಮೈತ್ರಿ ಅಭ್ಯರ್ಥಿ ಚುನಾವಣೆಯಲ್ಲಿ ಗೆಲವು ಸಾಧಿಸಿದರೆ ಜೆಡಿಎಸ್ ಹಾಗೂ ಕುಮಾರಸ್ವಾಮಿ ಅವರಿಗೆ ಶಕ್ತಿ ತುಂಬಿದಂತಾಗುತ್ತದೆ. ಕ್ಷೇತ್ರದ ಮತದಾರರ ಋಣ ನನ್ನ ಮೇಲಿದೆ. ಅವರ ಋಣ ತೀರಿಸುವವರಿಗೂ ನಾನು ವಿಶ್ರಮಿಸುವುದಿಲ್ಲ ಎಂದರು.ಜೆಡಿಎಸ್ ಮುಖಂಡ ಹನುಮಂತೇಗೌಡ ಮಾತನಾಡಿ ಯಶವಂತಪುರ ವಿಧಾನಸಭಾ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆಯಾಗಿದ್ದು ಕೂದಲೆಳೆ ಅಂತರದಲ್ಲಿ ಗೆಲವಿನಿಂದ ವಂಚಿತರಾಗಿದ್ದೇವೆ. ಆದರೂ ಧೃತಿಗೆಡದೆ ಕಾರ್ಯಕರ್ತರು ಪಕ್ಷವನ್ನು ಸಂಘಟಿಸಬೇಕೆಂದು ಕರೆ ನೀಡಿದರು.
ಇದೇ ವೇಳೆ ರಾಮೋಹಳ್ಳಿ ಗ್ರಾಮ ಪಂಚಾಯಿತಿ ಜನತಾದಳ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಶಶಿ ಎನ್. ರಮೇಶ್ ಅವರನ್ನು ನೇಮಕ ಮಾಡಿ ಆದೇಶ ಪತ್ರ ನೀಡಲಾಯಿತು. ಮುಖಂಡರಾದ ಪಂಚಲಿಂಗಯ್ಯ, ಮರಿಲಿಂಗೇಗೌಡ, ಉಲ್ಲಾಳು ಜೆಡಿಎಸ್ ಘಟಕದ ದೇವರಾಜ್, ಕೆಂಗೇರಿ ಜೆಡಿಎಸ್ ಘಟಕದ ಚೇತನ್ ಗೌಡ ಪಾಲ್ಗೊಂಡಿದ್ದರು.