ಸಾರಾಂಶ
11 ದಿನ ಉಪವಾಸ ಮಾಡಿದ್ರೆ ಮನುಷ್ಯ ಬದುಕಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವ್ರತದ ಮೇಲೆ ಅನುಮಾನವನ್ನು ವ್ಯಕ್ತಪಡಿಸಿದ ಮಾಜಿ ಸಂಸದ ವೀರಪ್ಪ ಮೊಯ್ಲಿ, ನಿಜವಾದ ಬ್ರಾಹ್ಮಣರು, ಸ್ವಾಮೀಜಿಗಳು ಮೋದಿಯನ್ನು ಶ್ರೀರಾಮ ಮಂದಿರದ ಗರ್ಭಗುಡಿಗೆ ಬಿಡಬಾರದಿತ್ತು ಎಂದು ಹೇಳಿದರು.ರು
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
11 ದಿನ ಉಪವಾಸ ಮಾಡಿದ್ರೆ ಮನುಷ್ಯ ಬದುಕಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವ್ರತದ ಮೇಲೆ ಅನುಮಾನವನ್ನು ವ್ಯಕ್ತಪಡಿಸಿದ ಮಾಜಿ ಸಂಸದ ವೀರಪ್ಪ ಮೊಯ್ಲಿ, ನಿಜವಾದ ಬ್ರಾಹ್ಮಣರು, ಸ್ವಾಮೀಜಿಗಳು ಮೋದಿಯನ್ನು ಶ್ರೀರಾಮ ಮಂದಿರದ ಗರ್ಭಗುಡಿಗೆ ಬಿಡಬಾರದಿತ್ತು ಎಂದು ಹೇಳಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯಯಾತ್ರೆ ಮೇಲೆ ದಾಳಿ ನಡೆಸಿದ ಅಸ್ಸಾಂ ಸರ್ಕಾರ ಹಾಗೂ ಬಿಜೆಪಿ ಕಾರ್ಯಕರ್ತರ ನಡೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಉಪವಾಸ ಇದ್ದಂತೆ ಕಾಣಲಿಲ್ಲ: ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಮೋದಿ ಉಪವಾಸ ಮಾಡಿಲ್ಲ. ಎಳನೀರು ಮಾತ್ರ ಕುಡಿದು ಉಪವಾಸ ಮಾಡಿದ್ರೆ ಒಂದೆರೆಡು ದಿನದಲ್ಲಿ ಮನುಷ್ಯ ಬೀಳುತ್ತಾನೆ.
ಉಪವಾಸ ಅಂತ ಹೇಳಿ ಮೋದಿ ಬಹಳ ಜೋರಾಗಿ ಒಡಾಡಿದರು. ಉಪವಾಸ ಇದ್ದ ಹಾಗೆ ನರೇಂದ್ರ ಮೋದಿ ಕಾಣಲಿಲ್ಲ. ಆದರೆ ಇವರ ನಾಟಕ ಇನ್ನೂ ಮುಂದೆ ನಡೆಯಲ್ಲ ಎಂದರು.
ಬಿಜೆಪಿಯವರು ಅಯೋಧ್ಯೆಯಲ್ಲಿ. ರಾಮನನ್ನು ಮಾತ್ರ ಪ್ರತಿಷ್ಠಾಪಿಸಿದ್ದಾರೆ. ರಾಮ, ಆಂಜನೇಯ, ಸೀತೆ ಲಕ್ಷ್ಮಣನನ್ನು ಬೇರ್ಪಡಿಸಲಾಗುವುದಿಲ್ಲ. ಶ್ರೀರಾಮಚಂದ್ರ ಒಬ್ಬನೇ ಇರದೇ ಸೀತಾದೇವಿ, ಲಕ್ಷ್ಮಣ, ಆಂಜನೇಯ ಇದ್ದಾಗ ಮಾತ್ರ ಪರಿಪೂರ್ಣವಾಗುತ್ತದೆ.
ಇವರು ಶ್ರೀರಾಮಚಂದ್ರನನ್ನೇ ಬೇರ್ಪಡೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಅದು ಸರಿ ಇಲ್ಲ ಎಂದು ಅಭಿಪ್ರಾಯಪಟ್ಟರು.ಕಾಂಗ್ರೆಸ್ ವಿರುದ್ಧ ಅಪಪ್ರಚಾರ
ಕಾಂಗ್ರೆಸ್ ನವರು ಶ್ರೀರಾಮನ ವಿರುದ್ಧ ಇದ್ದಾರೆ ಎಂದು ಅಪಪ್ರಚಾರ ಮಾಡುತ್ತಿರುವುದು ಖಂಡನೀಯ. ರಾಮಮಂದಿರವನ್ನು ರಾಜಕೀಯಗೊಳಿಸಬಾರದು.
ನಾವೂ ಶ್ರೀರಾಮಚಂದ್ರನ ಭಕ್ತರೇ. ಶ್ರೀರಾಮಚಂದ್ರನಿಗೆ ವಿರುದ್ಧವಾಗಿದ್ದೇವೆ ಎಂದು ಬಿಂಬಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಈ ಅಪಪ್ರಚಾರ ಮಾಡುವುದು ಸರಿಯಲ್ಲ.
ಕಾಂಗ್ರೆಸ್ ಮಹಾತ್ಮಾಗಾಂಧಿ ಹೇಳಿದ ರಾಮಾಯಣದ ರಾಮನನ್ನು ಪೂಜಿಸುತ್ತದೆ. ಬಿಜೆಪಿ ಹೇಳಿದ ಗೂಡ್ಸೆ ರಾಮನನ್ನು ಅಲ್ಲ ಎಂದರು.
ರಾಹುಲ್ ಗಾಂಧಿ ಮಣಿಪುರದಿಂದ ಆರಂಭಿಸಿದ ಭಾರತ್ ಜೋಡೋ ನ್ಯಾಯ ಯಾತ್ರೆಯು ಅಸ್ಸಾಂ ಪ್ರವೇಶಿಸಿದಾಗ ಬಿಜೆಪಿ ನೇತೃತ್ವದ ಸರ್ಕಾರ ಹಾಗೂ ಬಿಜೆಪಿ ಮುಖಂಡರು ಗೂಂಡಗಳನ್ನು ಬಿಟ್ಟು ನ್ಯಾಯಯಾತ್ರೆಗೆ ಅಡ್ಡಿಪಡಿಸಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ವಿಮಂತ್ ಬಿಸ್ವಾಸ್ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ದಾಳಿ ಮಾಡಿದವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾಕಾರರು ಬಿಜೆಪಿ ಅಸ್ಸಾಂ ಮುಖ್ಯಮಂತ್ರಿ ವಿಮಂತ್ ಬಿಸ್ವಾಸ್ ವಿರುದ್ದ ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಎಂ.ಶಿವಾನಂದ್, ಎಸ್.ಎಂ.ಮುನಿಯಪ್ಪ, ಕೆಪಿಸಿಸಿ ಸದಸ್ಯ ಎಂ.ಆಂಜಿನಪ್ಪ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ಎನ್ ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್, ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್,ಇಂಟೆಕ್ ರಾಜ್ಯಾಧ್ಯಕ್ಷ ಮಾಡ್ರೆನ್ ಶಿವಕುಮಾರ್. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕಳವಾರ ಶ್ರೀಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್, ಮತ್ತಿತರರು ಇದ್ದರು.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯಯಾತ್ರೆ ಮೇಲೆ ದಾಳಿ ಖಂಡಿಸಿ ಚಿಕ್ಕಬಳ್ಳಾಪುರ ನಗರದಲ್ಲಿ ಮಾಜಿ ಸಂಸದ ವೀರಪ್ಪ ಮೊಯ್ಲಿ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.