ಸಾರಾಂಶ
ಸದನದಿಂದ ಆರು ತಿಂಗಳ ಕಾಲ ಅಮಾನತಾಗಿದ್ದ 18 ಮಂದಿ ಬಿಜೆಪಿ ಶಾಸಕರ ಅಮಾನತು ಹಿಂಪಡೆದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು : ಸದನದಿಂದ ಆರು ತಿಂಗಳ ಕಾಲ ಅಮಾನತಾಗಿದ್ದ 18 ಮಂದಿ ಬಿಜೆಪಿ ಶಾಸಕರ ಅಮಾನತು ಹಿಂಪಡೆದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
ಕಳೆದ ವಿಧಾನಮಂಡಲದ ಅಧಿವೇಶನ ವೇಳೆ ಸ್ಪೀಕರ್ ಯು.ಟಿ.ಖಾದರ್ ಅವರು ಪೀಠಕ್ಕೆ ಅಗೌರವ ತೋರಿದ ಹಿನ್ನೆಲೆಯಲ್ಲಿ ಶಾಸಕರ ಅಮಾನತು ಮಾಡಿದ್ದರು.
ಈ ಬಗ್ಗೆ ಬಿಜೆಪಿ ನಾಯಕರ ನಿಯೋಗ ಏ.28 ರಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿ ಸರ್ಕಾರ ಹಾಗೂ ಸ್ಪೀಕರ್‌ಗೆ ಸೂಚನೆ ನೀಡುವಂತೆ ಮನವಿ ಮಾಡಿತ್ತು.
ಬೆನ್ನಲ್ಲೇ ಏ.29 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಪತ್ರ ಬರೆದಿದ್ದ ರಾಜ್ಯಪಾಲರು, ಬಿಜೆಪಿಯ 18 ಶಾಸಕರ ಅಮಾನತು ರದ್ದುಗೊಳಿಸುವ ಬಿಜೆಪಿಯ ನಿಯೋಗದ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸುವಂತೆ ಹಾಗೂ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದರು. ಆದರೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಭಾನುವಾರ ಸಂಜೆ ಸಭಾಧ್ಯಕ್ಷರ ಅಧ್ಯಕ್ಷತೆ ಸಭೆಯಲ್ಲಿ ಅಮಾನತು ಹಿಂಪಡೆಯಲು ನಿರ್ಧರಿಸಿದ ಬೆನ್ನಲ್ಲೇ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ರಾಜ್ಯಪಾಲರನ್ನು ಭೇಟಿ ಮಾಡಿ ಅಮಾನತು ಹಿಂಪಡೆದಿರುವ ಬಗ್ಗೆ ಆದೇಶ ಪ್ರತಿ ನೀಡಿದ್ದಾರೆ. ತಮ್ಮ ಸಲಹೆ ಪಾಲಿಸಿರುವುದಾಗಿ ವಿವರಣೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಮಾಧಾನಪಡಿಸುವ ಯತ್ನ?:
ಸರ್ಕಾರದ ವಿವಿದ ವಿಧೇಯಕಗಳನ್ನು ತಡೆ ಹಿಡಿದ್ದ ರಾಜ್ಯಪಾಲರು ಹಾಗೂ ರಾಜ್ಯಪಾಲರ ಪತ್ರದ ಬಗ್ಗೆ ಕ್ರಮ ಕೈಗೊಳ್ಳದ ಸರ್ಕಾರದ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಮತ್ತೊಂದೆಡೆ ಹಲವು ತಿಂಗಳಿಂದ ಬಾಕಿಯಿದ್ದ ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆ’ಯನ್ನು ಮತ್ತೆ ತಿರಸ್ಕರಿಸುವ ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸುವ ನಿರ್ಧಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರನ್ನು ಮುಖ್ಯಮಂತ್ರಿ ಅವರು ಖುದ್ದು ಭೇಟಿ ಮಾಡಿರುವುದು ಹಲವು ರೀತಿಯ ಚರ್ಚೆಗಳನ್ನು ಹುಟ್ಟು ಹಾಕಿದೆ.