ದಳಪತಿಗಳಿಗೆ ಶಾಸಕರನ್ನು ಟೀಕಿಸುವ ನೈತಿಕತೆಯೇ ಇಲ್ಲ : ಸುನೀಲ್‌ಕುಮಾರ್

| N/A | Published : Jul 06 2025, 01:48 AM IST / Updated: Jul 06 2025, 08:51 AM IST

ಸಾರಾಂಶ

ದೇವೇಗೌಡರು, ಕುಮಾರಸ್ವಾಮಿ ಅವರನ್ನು ಹೊರತುಪಡಿಸಿ ಜಿಲ್ಲೆಗೆ ನಿಖಿಲ್ ಕುಮಾರಸ್ವಾಮಿ ಅವರ ಕೊಡುಗೆ ಏನಿದೆ. ಮೂರು ಚುನಾವಣೆಯಲ್ಲಿ ಸೋಲನುಭವಿಸಿರುವ ಅವರಿಗೆ ಶಾಸಕ ಪಿ.ರವಿಕುಮಾರ್ ಅವರನ್ನು ಟೀಕಿಸುವ ಅರ್ಹತೆಯೇ ಇಲ್ಲ. ಜನಸೇವೆಯೊಂದಿಗೆ ರಾಜಕಾರಣದಲ್ಲಿ ಬೆಳೆದು ಬಂದು ಜನಬೆಂಬಲದೊಂದಿಗೆ ಶಾಸಕರಾಗಿದ್ದಾರೆ.

 ಮಂಡ್ಯ :  ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಮಂಡ್ಯ ಕ್ಷೇತ್ರದ ಪರಾಜಿತ ಅಭ್ಯರ್ಥಿ ಬಿ.ಆರ್. ರಾಮಚಂದ್ರ ಅವರಿಗೆ ಶಾಸಕ ಪಿ.ರವಿಕುಮಾರ್ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂದು ತಾಲೂಕು ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಎಸ್.ಸುನೀಲ್‌ಕುಮಾರ್ ಆರೋಪಿಸಿದರು.

ದೇವೇಗೌಡರು, ಕುಮಾರಸ್ವಾಮಿ ಅವರನ್ನು ಹೊರತುಪಡಿಸಿ ಜಿಲ್ಲೆಗೆ ನಿಖಿಲ್ ಕುಮಾರಸ್ವಾಮಿ ಅವರ ಕೊಡುಗೆ ಏನಿದೆ. ಮೂರು ಚುನಾವಣೆಯಲ್ಲಿ ಸೋಲನುಭವಿಸಿರುವ ಅವರಿಗೆ ಶಾಸಕ ಪಿ.ರವಿಕುಮಾರ್ ಅವರನ್ನು ಟೀಕಿಸುವ ಅರ್ಹತೆಯೇ ಇಲ್ಲ. ಜನಸೇವೆಯೊಂದಿಗೆ ರಾಜಕಾರಣದಲ್ಲಿ ಬೆಳೆದು ಬಂದು ಜನಬೆಂಬಲದೊಂದಿಗೆ ಶಾಸಕರಾಗಿದ್ದಾರೆ. ನಿಖಿಲ್ ಪ್ರಭಾವಿ ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದರೂ ಒಂದು ಚುನಾವಣೆಯಲ್ಲೂ ಗೆಲುವು ಸಾಧಿಸಲಾಗಿಲ್ಲ. ಅಂತಹವರಿಗೆ ಶಾಸಕರನ್ನು ಟೀಕಿಸುವ ನೈತಿಕತೆ ಎಲ್ಲಿದೆ ಎಂದು ಪ್ರಶ್ನಿಸಿದರು.

ನವಿಲು ನೋಡಿ ಕೆಂಬೂತ ಪುಕ್ಕ ಕೆರೆದುಕೊಂಡಂತೆ ವಿಪಕ್ಷಗಳು ಸುಖಾಸುಮ್ಮನೆ ಟೀಕಿಸುವುದು, ಸುಳ್ಳು ಹೇಳುತ್ತಾ ಜನರನ್ನು ದಿಕ್ಕುತಪ್ಪಿಸುವ, ಶಾಸಕರನ್ನು ತೇಜೋವಧೆ ಮಾಡಲು ಯತ್ನಿಸುತ್ತಿವೆ. ವ್ಯಕ್ತಿ ಯಾರೇ ಇರಲಿ, ಪಕ್ಷ ಯಾವುದೇ ಇರಲಿ. ಉತ್ತಮ ಕೆಲಸ ಮಾಡುವವರನ್ನು ನಿಷ್ಪಕ್ಷಪಾತದಿಂದ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಪರಾಜಿತ ಅಭ್ಯರ್ಥಿ ಬಿ.ಆರ್.ರಾಮಚಂದ್ರ ಅವರು ಮನ್‌ಮುಲ್ ಅಧ್ಯಕ್ಷರಾಗಿ ಹಾಲಿಗೆ ನೀರು ಬೆರೆಸಿ ರಾಜಕಾರಣದಲ್ಲಿ ಬೆಳೆದುಬಂದವರು. ಭ್ರಷ್ಟಾಚಾರ, ಅಕ್ರಮಗಳನ್ನು ನಡೆಸಿ ಎಲ್ಲವನ್ನೂ ಮರೆಮಾಚಿದರು. ಅವರೂ ಶಾಸಕರ ಬಗ್ಗೆ ಲಘುವಾಗಿ ಮಾತನಾಡಿರುವುದು ಅಪಹಾಸ್ಯದ ಸಂಗತಿ ಎಂದು ಜರಿದರು.

ಶಾಸಕ ಪಿ.ರವಿಕುಮಾರ್ ಇದುವರೆಗೂ ೬೦೦ ಕೋಟಿಗೂ ಹೆಚ್ಚು ಹಣವನ್ನು ಜಿಲ್ಲೆಯ ಅಭಿವೃದ್ಧಿಗೆ ತಂದಿದ್ದಾರೆ. ಇನ್ನೂ ಅಭಿವೃದ್ಧಿಯ ಪ್ರಸ್ತಾವನೆಗಳಿಗೆ ಸರ್ಕಾರ ಮಂಜೂರಾತಿ ಕೊಡುವ ಹಂತದಲ್ಲಿದೆ. ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಶಾಸಕರಿಗೆ ಸಾಧ್ಯವಾದರೆ ಬೆಂಬಲ ಕೊಡಿ. ಇಲ್ಲದಿದ್ದರೆ ಲಘುವಾಗಿ ಮಾತನಾಡುವುದು, ಸುಳ್ಳು ಹೇಳುವುದರಿಂದ ದೂರ ಉಳಿಯುವಂತೆ ಸಲಹೆ ನೀಡಿದರು.

ಗೋಷ್ಠಿಯಲ್ಲಿ ಪ್ರದೀಪ್, ಮಂಜುನಾಥ್, ಮನು, ಚಂದನ್, ಚೇತನ್, ನಿತಿನ್, ಸಜ್ಜತ್ ಪಾಷಾ ಇದ್ದರು.

ಜೆಡಿಎಸ್ ಶಾಸಕರು ದೈಹಿಕ, ಮಾನಸಿಕವಾಗಿ ಕಾಂಗ್ರೆಸ್ ಜೊತೆ ಇದ್ದಾರೆ: ಕೆ.ಎಂ.ಉದಯ್

ಮದ್ದೂರು:  ಜೆಡಿಎಸ್‌ನಿಂದ ಆಯ್ಕೆಯಾಗಿರುವ ಹಲವು ಶಾಸಕರು ದೈಹಿಕ ಮತ್ತು ಮಾನಸಿಕವಾಗಿ ಕಾಂಗ್ರೆಸ್ ಪಕ್ಷದ ಜೊತೆಗಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.

ತಾಲೂಕಿನ ದುಂಡನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್‌ನ ಶಾಸಕರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷದ ಸಭೆ, ಸಮಾರಂಭದಲ್ಲಿ ಅಧಿಕೃತವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಪಕ್ಷದಲ್ಲಿ ಉಳಿದು ಕೊಂಡಿರುವವರು ಎಷ್ಟು ಅಂತಾ ಪಕ್ಷದ ನಾಯಕರನ್ನೇ ಕೇಳಬೇಕು ಎಂದು ವ್ಯಂಗ್ಯವಾಡಿದರು.

ಜೆಡಿಎಸ್‌ನಿಂದ ಗೆದ್ದಿರುವವರು ಈಗ ಅವರ ಪಾರ್ಟಿಯಲ್ಲಿ ಉಳಿದುಕೊಂಡಿಲ್ಲ. ಸುಮಾರು 10ರಿಂದ 12 ಶಾಸಕರು ಕಾಂಗ್ರೆಸ್ ನ ಸಂಪರ್ಕದಲ್ಲಿದ್ದಾರೆ. ನಾವು ಜೆಡಿಎಸ್‌ನ ಹುಡುಕಬೇಕೋ ಅಥವಾ ಕಾಂಗ್ರೆಸ್‌ನ ಹುಡುಕಬೇಕೋ ಎಂದು ನಿಖಿಲ್ ಕುಮಾರಸ್ವಾಮಿ ಅವರ ಕಾಂಗ್ರೆಸ್ ಪಕ್ಷವನ್ನು ದುರ್ಬಿನ್ ಹಾಕಿ ಹುಡುಕುವ ಹೇಳಿಕೆಗೆ ತಿರುಗೇಟು ನೀಡಿದರು.

Read more Articles on