ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಧರ್ಮಸ್ಥಳ ಗ್ರಾಮ ಪ್ರಕರಣದ ದೂರುದಾರ, ದೂರುದಾರನ ಹಿಂದಿರುವ ವ್ಯಕ್ತಿಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಸುಕುಧಾರಿಯು ಧರ್ಮಸ್ಥಳದ ವಿಷಯದಲ್ಲಿ ಸಾಕಷ್ಟು ಪ್ರಚಾರ ತೆಗೆದುಕೊಂಡು ರಾಜ್ಯ ಸರ್ಕಾರ ಎಸ್ಐಟಿ ಸ್ಥಾಪಿಸುವ ಮಟ್ಟಕ್ಕೂ ಹೋಗಿದ್ದ. ಕಳೆದ 2-3 ವಾರಗಳಿಂದ ತನಿಖೆ ಜೊತೆಗೆ ಧರ್ಮಸ್ಥಳ, ಮಂಜುನಾಥೇಶ್ವರನ ಕ್ಷೇತ್ರದ ಕುರಿತು ಸಾಕಷ್ಟು ಅಪಪ್ರಚಾರಗಳು ನಡೆದಿದ್ದವು. ರಾಜ್ಯ-ರಾಷ್ಟ್ರೀಯ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗೆ ಒಳಗಾಗಿತ್ತು ಎಂದರು.
ರಾಜ್ಯ ಸರ್ಕಾರದ ಕ್ರಮ ಹಿಟ್ ಆ್ಯಂಡ್ ರನ್ ಆಗಬಾರದು. ದೂರುದಾರ, ದೂರುದಾರನ ಹಿಂದಿರುವ ಪ್ರಭಾವಿ ವ್ಯಕ್ತಿಗಳೇ ಇರಬಹುದು; ಎಡಪಂಥೀಯ ಸಂಘಟನೆಗಳೇ ಇರಬಹುದು. ಇವರೆಲ್ಲರ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಪ್ರತಿಪಾದಿಸಿದರು.ಕೆಲವು ವ್ಯಕ್ತಿಗಳು ಸಂಘಟನೆ ಮಾಡಿಕೊಂಡು ಧರ್ಮಸ್ಥಳದ ವಿರೋಧವಾಗಿ ಚರ್ಚೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬಗ್ಗೆ ಆರೋಪ ಮಾಡಿದ್ದಾರೆ. ಆರೆಸ್ಸೆಸ್ ಪ್ರಚಾರಕರ ಬಗ್ಗೆ ಆಗಲಿ ಅಥವಾ ಸಂತೋಷ್ ಅವರ ಬಗ್ಗೆ ಈ ರೀತಿ ಹೇಳಿಕೆ ನೀಡಿದ್ದು ನನ್ನನ್ನೂ ಒಳಗೊಂಡಂತೆ ರಾಜ್ಯದ ಅನೇಕ ಸ್ವಯಂಸೇವಕರಿಗೆ ನೋವಾಗಿದೆ. ಪ್ರಚಾರಕರು, ಆರ್‌ಎಸ್‌ಎಸ್‌ಗೆ ಅಗೌರವ ತರುವುದನ್ನು ನೋಡಿಕೊಂಡು ರಾಜ್ಯ ಸರ್ಕಾರ ಸುಮ್ಮನೇ ಕೂಡಬಾರದು. ಸರ್ಕಾರ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.