ಸಾರಾಂಶ
ಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಟಸ್ಥರಾಗಿ ಉಳಿಯುತ್ತೇನೆ ಎಂದು ಹೇಳಿಕೆ ನೀಡಿರುವುದು ಅಘಾತ ಉಂಟು ಮಾಡಿದೆ. ತಮ್ಮ ರಾಜಕೀಯ ಭವಿಷ್ಯ ಉಜ್ವಲವಾಗಲು ಬಿಜೆಪಿಗೆ ಸೇರಬೇಕು ಎಂದು ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್ ಹೇಳಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಟಸ್ಥರಾಗಿ ಉಳಿಯುತ್ತೇನೆ ಎಂದು ಹೇಳಿಕೆ ನೀಡಿರುವುದು ಅಘಾತ ಉಂಟು ಮಾಡಿದೆ. ತಮ್ಮ ರಾಜಕೀಯ ಭವಿಷ್ಯ ಉಜ್ವಲವಾಗಲು ಬಿಜೆಪಿಗೆ ಸೇರಬೇಕು ಎಂದು ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್ ಹೇಳಿದರು.
ಸಭೆಯಲ್ಲಿ ಮಾತನಾಡಿದ ಅವರು, ರೈತ ನಾಯಕರಾಗಿದ್ದ ಜಿ.ಮಾದೇಗೌಡ ಹಾಗೂ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಜಿಲ್ಲೆಯಲ್ಲಿ ಮಾದರಿ ರಾಜಕಾರಣಿಗಳಾಗಿ ಗುರುತಿಸಿಕೊಂಡಿದ್ದಾರೆ. ಆದರೆ, ಇವರ ಕುಟುಂಬದ ರಾಜಕೀಯ ಭವಿಷ್ಯವೇ ಅಂತ್ಯವಾಗುತ್ತಾ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಎಸ್.ಎಂ.ಕೃಷ್ಣ ಅವರ ಸಹೋದರ ಪುತ್ರ ಎಸ್.ಗುರುಚರಣ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಿಲ್ಲ. ಕಾಂಗ್ರೆಸ್ ಪಕ್ಷ ಮಧು ಅವರನ್ನು ಗೌರವ ರೀತಿಯಲ್ಲಿ ನಡೆಸಿಕೊಂಡಿಲ್ಲ ಎಂಬುದು ಅವರ ಹೇಳಿಕೆಯಿಂದ ತಿಳಿಯುತ್ತಿದೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ತಟಸ್ಥರಾಗಿರುವುದಾಗಿ ಹೇಳಿಕೆ ನೀಡಿದ್ದಾರೆ ಎಂದರು.
ಮಧು ಮಾದೇಗೌಡರು ರಾಜಕಾರಣದಿಂದ ತಟಸ್ಥರಾಗಿ ಉಳಿಯಬಾರದು. ಅವರ ಸೇವೆ ಮಂಡ್ಯ ಜಿಲ್ಲೆಗೆ ಅಗತ್ಯವಾಗಿದೆ. ಮಧು ಮಾದೇಗೌಡರು ನಮ್ಮ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಕ್ಕೆ ಜೊತೆಯಾಗಬೇಕು ಎಂದು ಕೋರಿದರು.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ಶಾ, ಮಾಜಿ ಸಿಎಂಗಳಾದ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ನಾಯಕತ್ವದಲ್ಲಿ ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಬೇಕು.
ಬಿಜೆಪಿಯಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಭವಿಷ್ಯವಿದೆ. ಅವರ ಸೇವೆಗೆ ಬಿಜೆಪಿ ಪಕ್ಷ ಗೌರವಯುತವಾಗಿ ನಡೆಸಿಕೊಳ್ಳಲಿದೆ. ಮೈತ್ರಿಕೂಟ ಬೆಂಬಲಿಸಿದರೆ ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವುದಕ್ಕೆ ಹೈಕಮಾಂಡ್ ಜೊತೆ ಮಾತುಕತೆ ನಡೆಸಲಾಗುವುದು ಎಂದರು.
ಬಿಜೆಪಿ ಸಂಘಟಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಿದ ತೃಪ್ತಿ ನನಗಿದೆ: ಸಿ.ಪಿ.ಉಮೇಶ್
ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯನ್ನು ಬಲಿಷ್ಠವಾಗಿ ಸಂಘಟಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಿದ ತೃಪ್ತಿ ನನಗಿದೆ ಎಂದು ಬಿಜೆಪಿ ನಿಕಟ ಪೂರ್ವ ಅಧ್ಯಕ್ಷ ಸಿ.ಪಿ.ಉಮೇಶ್ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ನೂತನ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಅವರಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿ, ನಾನು ಅಧ್ಯಕ್ಷನಾಗಿ ಬಂದಾಗ ಬಿಜೆಪಿಯಲ್ಲಿ ಬಣ, ಗುಂಪು ರಾಜಕಾರಣ ಹೆಚ್ಚಾಗಿತ್ತು.
ಕಾರ್ಯಕರ್ತರು ಒಬ್ಬೊಬ್ಬರು ನಾಯಕರೊಂದಿಗೆ ಗುರುತಿಸಿಕೊಳ್ಳುತ್ತಿದ್ದರು. ಆದರೆ, ನಾನು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರ ಮಾರ್ಗದರ್ಶನದಲ್ಲಿ ಬಣ, ಗುಂಪುಗಾರಿಕೆಗೆ ಅವಕಾಶ ನೀಡದೇ ಜಿಲ್ಲೆಯಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟಿದ್ದೇನೆ ಎಂದರು.
ದೇಶದಲ್ಲಿ ದೊಡ್ಡ ಪಕ್ಷವಾಗಿ ಬಿಜೆಪಿ ಉಳಿಯಲಿದೆ. ಅದರಂತೆ ಮಂಡ್ಯದಲ್ಲೂ ಪಕ್ಷ ಉಳಿಯಬೇಕು. ಅದಕ್ಕಾಗಿ ನಾವೆಲ್ಲರೂ ಸಂಘಟನೆ ಮಾಡಬೇಕು. ಪಕ್ಷ ಸೋಲಲಿ, ಗೆಲ್ಲಲಿ ಸಂಘಟನೆ ನಿರಂತರವಾಗಿರಬೇಕು. ಬಿಜೆಪಿ ಜಿಲ್ಲೆಯ ನೂತನ ಸಾರಥಿಯಾಗಿರುವ ಡಾ.ಇಂದ್ರೇಶ್ ಅವರಿಗೂ ಎಲ್ಲರೂ ಸಹಕರಿಸುವ ಮೂಲಕ ಪಕ್ಷ ಬಲಪಡಿಸಬೇಕು ಎಂದು ಕೋರಿದರು.
ಇಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಪಕ್ಷದ ಭಾಗವಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಮುಂದೆ ಒಂದೇ ಪಕ್ಷ ಇರಲಿದೆ. ದೊಡ್ಡಪಕ್ಷವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಮಂಡ್ಯ ಜಿಲ್ಲೆಯ ರಾಜಕಾರಣಕ್ಕೆ ಬರಲು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಎಸ್.ಎಂ.ಕೃಷ್ಣ ಅವರು ಕಾರಣರಾಗಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಲು ಇವರೆಲ್ಲರ ಕೊಡುಗೆ ಇದೆ. ನಂತರ ಸಹಕಾರ ಭಾರತಿ ಸಂಘ ಹಾಗೂ ಮತ್ತೆ 6 ತಿಂಗಳ ನಂತರ ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದರು. ಮಾರ್ಗದರ್ಶಕರಾದ ನಿರ್ಮಲ್‌ಕುಮಾರ್ ಸುರಾನ ಸಹಕಾರ ಹೆಚ್ಚಿದೆ. ಅಲ್ಲದೆ, ರಾಜ್ಯಾಧ್ಯಕ್ಷರಾಗಿದ್ದ ನಳೀನ್‌ಕುಮಾರ್ ಕಟೀಲ್ ಅವರು ನನಗೆ ಹೆಚ್ಚು ಪ್ರೋತ್ಸಾಹ ನೀಡಿದರು ಎಂದರು.