ಸಾರಾಂಶ
ಕನ್ನಡಪ್ರಭ ವಾರ್ತೆ ಭಾರತೀನಗರ
ಲೋಕಸಭಾ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡರು ತಟಸ್ಥ ನಿಲುವು ತೆಗೆದಿರುವುದು ನನಗೆ ಗೊತ್ತಿಲ್ಲ ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸ್ಪಷ್ಟಪಡಿಸಿದರು.ಕೊತ್ತತ್ತಿ 2ನೇ ವೃತ್ತಿ ವ್ಯಾಪ್ತಿಯ ಸೂನಗಹಳ್ಳಿ, ಹೆಮ್ಮಿಗೆ. ಕಬ್ಬನಹಳ್ಳಿ, ಬಿ.ಹೊಸೂರು ಹಾಗೂ ಚಿಕ್ಕರಸಿನಕೆರೆ ಹೋಬಳಿ ವ್ಯಾಪ್ತಿಯ ಗ್ರಾಮಗಳ ಭಕ್ತಾಧಿಗಳೊಂದಿಗೆ ಮಲೈಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದ ವೇಳೆ ಮೆಳ್ಳಹಳ್ಳಿ ಬಳಿ ಮಾತನಾಡಿದರು.
ಜಿ.ಮಾದೇಗೌಡರು ಶಾಸಕರಾಗಿ, ಸಂಸದರಾಗಿ, ಕೇಂದ್ರ ಸಚಿವರಾಗಿ ಕಾಂಗ್ರೆಸ್ ಪಕ್ಷಕ್ಕೆ ಹಲವು ವರ್ಷಗಳ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ. ಮಧು ಮಾದೇಗೌಡರು, ಜಿ.ಮಾದೇಗೌಡರ ಜೊತೆ ಪಕ್ಷಕ್ಕೆ ದುಡಿದಿದ್ದಾರೆ ಎಂದರು.ಮದ್ದೂರು ತಾಲೂಕಿನಲ್ಲಿ ಆದ ಕೆಲವು ರಾಜಕೀಯ ಬದಲಾದ ಪರಿಸ್ಥಿತಿಯಿಂದ ಮಧು ಅಣ್ಣರಿಗೆ ಅಪಮಾನ ಹಾಗೂ ಮನಸ್ಸಿಗೆ ನೋವುಂಟಾಗಿರಬಹುದು. ಇದರಿಂದ ಲೋಕಸಭಾ ಚುನಾವಣೆಯಲ್ಲಿ ತಟಸ್ಥ ನಿಲುವಿನ ಬಗ್ಗೆ ಮಾತನಾಡಿದ್ದಾರೆ. ಅವರ ನಿಲುವು ನಮಗೂ ಕೂಡ ನೋವುಂಟು ಮಾಡಿದೆ ಎಂದು ವಿಷಾದಿಸಿದರು.
ರಾಜ್ಯ ಹಾಗೂ ಜಿಲ್ಲಾ ನಾಯಕರೊಡಗೂಡಿ ಮಧು ಅಣ್ಣರೊಂದಿಗೆ ಜೊತೆ ಕುಳಿತು ಮಾತನಾಡಿ ಅವರ ಸಮಸ್ಯೆ ಅರಿತು ಬಗೆ ಹರಿಸಲು ಮುಂದಿನ ದಿನಗಳಲ್ಲಿ ಪ್ರಯತ್ನಿಸುತ್ತೇವೆ ಎಂದರು.ಮಲೈಮಹದೇಶ್ವರ ಬೆಟ್ಟಕ್ಕೆ ತೆರಳುವ ಭಕ್ತಾದಿಗಳ ಪಾದಯಾತ್ರೆಗೆ ಕಳೆದ ವರ್ಷ ನಾನೆ ಚಾಲನೆ ನೀಡಿದ್ದೆ. ಈ ವೇಳೆ ಮುಂದಿನ ವರ್ಷ ಪಾದಯಾತ್ರೆ ಬರುವುದಾಗಿ ಹರಕೆ ಹೊತ್ತಿದ್ದೆ. ಅದನ್ನು ತೀರಿಸಲು ಭಕ್ತಾದಿಗಳೊಂದಿಗೆ ತಾವು ಪಾದಯಾತ್ರೆಯಲ್ಲಿ ತೆರಳುತ್ತಿದ್ದೇನೆ ಎಂದರು.
ಈ ವೇಳೆ ತಾಪಂ ಮಾಜಿ ಸದಸ್ಯ ಬಿ.ಗಿರೀಶ್, ಗ್ರಾಪಂ ಸದಸ್ಯ ಕೆ.ವಿ.ಶ್ರೀನಿವಾಸ್, ಮುಖಂಡರಾದ ಅಣ್ಣೂರು ಆರ್.ಸಿದ್ದಪ್ಪ, ಚಾಟಿಸಿದ್ದೇಗೌಡ, ಕಾರ್ಕಹಳ್ಳಿ ಸ್ವರೂಪ್ ಚಂದ್ರ ಸೇರಿದಂತೆ ಮತ್ತಿತರರಿದ್ದರು.ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಖಂಡನೆಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಸಂಸದ ಅನಂತ್‌ಕುಮಾರ್ ಹೆಗಡೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿ ಅಸಭ್ಯ ಶಬ್ಧ ಬಳಸಿರುವುದನ್ನು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಂ.ಎಲ್. ಸುರೇಶ್ ಖಂಡಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಮಗನೆ ಎನ್ನುವ ಶಬ್ಧ ಬಳಸಿ ವಾಗ್ದಾಳಿ ನಡೆಸಿರುವುದು ಅವರಿಗೆ ಶೋಭೆ ತರುವುದಿಲ್ಲ. ನಮಗೂ ಅವರಿಗಿಂತಲೂ ಅಸಭ್ಯ ಪದ ಬಳಕೆ ಮಾಡಲು ಬರುತ್ತದೆ. ಆದರೆ, ನಾವು ಸುಸಂಸ್ಕೃತರಾಗಿದ್ದೇವೆ. ಆದ್ದರಿಂದ ಅವರಷ್ಟು ನೀಚ ಹಾದಿಗೆ ಹೋಗುವುದಿಲ್ಲ ಎಂದರು.ಹೇಳಿಕೆ ನೀಡಿದ ತಕ್ಷಣ ಸಿದ್ದರಾಮಯ್ಯ ಅವರಲ್ಲಿ ಕ್ಷಮೆ ಕೇಳಬೇಕಾಗಿತ್ತು. ಅದು ಬಿಟ್ಟು ಮತ್ತೆ ಮತ್ತೆ ತಮ್ಮ ಹೇಳಿಕೆ ಸಮರ್ಥಿಸಿಕೊಳ್ಳುವ ಮೂಲಕ ಶೋಷಿತ ಸಮುದಾಯವನ್ನು ಅವಮಾನಿಸುತ್ತಿದ್ದಾರೆ. ಕೂಡಲೇ ಸಂಸದ ಅನಂತ್‌ಕುಮಾರ್ ಹೆಗಡೆ ಅವರನ್ನು ಬಿಜೆಪಿ ಪಕ್ಷದಿಂದ ವಜಾ ಮಾಡಬೇಕು ಎಂದು ಬಿಜೆಪಿ ವರಿಷ್ಠರನ್ನು ಒತ್ತಾಯಿಸಿದರು.ಇದೇ ರೀತಿ ತಮ್ಮ ಧೋರಣೆ ಮುಂದುವರಿಸಿದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ತೆರಳಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಂ.ಜೆ. ಶಶಿಧರ್, ಎಸ್.ಎನ್. ರಾಜು, ಶ್ರೀನಿವಾಸ್ ಎಂ. ಮಹೇಶ್ ಇದ್ದರು.