ಸಾರಾಂಶ
ಮುಖ್ಯಮಂತ್ರಿ ಬದಲಾವಣೆ ವಿಚಾರ ಮುಗಿದ ಅಧ್ಯಾಯ. ಒಬ್ಬರು ಸಿಎಂ ಇದ್ದಾಗ ಮತ್ತೊಬ್ಬರು ಆಗುವ ಸಾಧ್ಯತೆಯೇ ಇಲ್ಲ. ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರೇ ದೆಹಲಿಗೆ ಹೋದಾಗ ಸ್ಪಷ್ಟಪಡಿಸಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ಕಾರವಾರ : ಮುಖ್ಯಮಂತ್ರಿ ಬದಲಾವಣೆ ವಿಚಾರ ಮುಗಿದ ಅಧ್ಯಾಯ. ಒಬ್ಬರು ಸಿಎಂ ಇದ್ದಾಗ ಮತ್ತೊಬ್ಬರು ಆಗುವ ಸಾಧ್ಯತೆಯೇ ಇಲ್ಲ. ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರೇ ದೆಹಲಿಗೆ ಹೋದಾಗ ಸ್ಪಷ್ಟಪಡಿಸಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕೆಂದು ಅವರ ಬೆಂಬಲಿಗರು ಹೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರೇ ದೆಹಲಿಯಲ್ಲಿ ಹೇಳಿಕೆ ನೀಡಿದ್ದು, ಸಿಎಂ ಬದಲಾವಣೆ ವಿಚಾರ. ಇನ್ನು ಶಾಸಕರೊಂದಿಗೆ ಸಿದ್ದರಾಮಯ್ಯ ಅವರು ಪ್ರತ್ಯೇಕ ಮಾತುಕತೆ ನಡೆಸುತ್ತಿರುವುದಕ್ಕೂ ಸಿಎಂ ಬದಲಾವಣೆ ವಿಷಯಕ್ಕೂ ಸಂಬಂಧವಿಲ್ಲ.
ಸಿಎಂ ಹಾಗೂ ಡಿಸಿಎಂ ಅವರದ್ದೆಯಾದ ಪ್ರತ್ಯೇಕ ಕಾರ್ಯಕ್ರಮ ಇರುತ್ತವೆ. ಎಲ್ಲ ಸಭೆಗಳನ್ನೂ ಒಟ್ಟಿಗೇ ಮಾಡಬೇಕೆಂದಿಲ್ಲ. ಸಿಎಂ ಶಾಸಕರ ಜತೆ ಒನ್ ಟು ಒನ್ ಮಾತುಕತೆ ನಡೆಸಿದರೆ ಏನು ತಪ್ಪಿದೆ? ಸಿದ್ದರಾಮಯ್ಯ ಅವರಿಗೆ ಶಕ್ತಿ ಪ್ರದರ್ಶನ ಮಾಡುವ ಅವಶ್ಯಕತೆಯೇ ಇಲ್ಲ. ಎಲ್ಲಿ ಹೋದರೂ ಅವರಿಗಿರುವ ಶಕ್ತಿ ಕಂಡುಬರುತ್ತದೆ ಎಂದು ಸಿಎಂ ಪರ ಬ್ಯಾಟ್ ಬೀಸಿದರು.
ಖರ್ಗೆ ಅವರ ಹೆಸರೂ ಸಿಎಂ ಸ್ಥಾನಕ್ಕೆ ಕೇಳಿಬರುತ್ತಿದೆಯಲ್ಲ ಎಂದು ಪ್ರಶ್ನಿಸಿದಾಗ, ಒಬ್ಬರು ಸಿಎಂ ಇದ್ದಾಗ ಮತ್ತೊಬ್ಬರು ಆಗುವ ಸಾಧ್ಯತೆಯೇ ಇಲ್ಲ. ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಬೇಕಿತ್ತು. ಆದರೆ ಅವಕಾಶ ಸಿಗಲಿಲ್ಲ. ಅವರಿಗೆ ಎಲ್ಲ ಅರ್ಹತೆ, ಪ್ರಬುದ್ಧತೆ, ಆಡಳಿತ ನಡೆಸಿದ ಅನುಭವ ಇದೆ. ಅದನ್ನು ಅವರು ಹೇಳಿಕೊಂಡಿದ್ದಾರೆ ಅಷ್ಟೇ ಎಂದರು.
ಮುಂದೆ ಹೈಕಮಾಂಡ್ ಖರ್ಗೆ ಅವರಿಗೆ ಮಣೆ ಹಾಕಿದರೆ ಎಂದು ಮಾಧ್ಯಮ ಪ್ರತಿನಿಧಿಗಳು ಎನ್ನುತ್ತಿದ್ದಂತೆ ನಾನು ಭವಿಷ್ಯ ಹೇಳೋಕಾಗುತ್ತಾ? ಎಂದು ನುಣುಚಿಕೊಂಡರು.