ಕರ್ನಾಟಕದಲ್ಲಿರುವ ‘ಗೃಹಲಕ್ಷ್ಮಿ’ ಯೋಜನೆ ರೀತಿ ತಮಿಳುನಾಡಿನ ಮಹಿಳೆಯರಿಗೂ ಮಾಸಿಕ 2 ಸಾವಿರ ರು. ನೀಡುವ ಭರವಸೆ ಸೇರಿದಂತೆ ಅನೇಕ ಘೋಷಣೆಗಳಿರುವ ಕಾಂಗ್ರೆಸ್‌ ಪ್ರಣಾಳಿಕೆಯನ್ನು ಡಿಸಿಎಂ ಡಿ.ಕೆ. ಶಿವಕುಮಾರ್‌ ಗುರುವಾರ ಚೆನ್ನೈನಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಡುಗಡೆ ಮಾಡಿದರು.

ಚೆನ್ನೈ: ಕರ್ನಾಟಕದಲ್ಲಿರುವ ‘ಗೃಹಲಕ್ಷ್ಮಿ’ ಯೋಜನೆ ರೀತಿ ತಮಿಳುನಾಡಿನ ಮಹಿಳೆಯರಿಗೂ ಮಾಸಿಕ 2 ಸಾವಿರ ರು. ನೀಡುವ ಭರವಸೆ ಸೇರಿದಂತೆ ಅನೇಕ ಘೋಷಣೆಗಳಿರುವ ಕಾಂಗ್ರೆಸ್‌ ಪ್ರಣಾಳಿಕೆಯನ್ನು ಡಿಸಿಎಂ ಡಿ.ಕೆ. ಶಿವಕುಮಾರ್‌ ಗುರುವಾರ ಚೆನ್ನೈನಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಡುಗಡೆ ಮಾಡಿದರು.

ಇದರಲ್ಲಿ, ಹುದ್ದೆ ಖಾಲಿಯಾದ 300 ದಿನಗಳಲ್ಲಿ 3 ಲಕ್ಷ ಸರ್ಕಾರಿ ಹುದ್ದೆ ಭರ್ತಿ, ಭೂ ರಹಿತ ರೈತರಿಗೆ ವಾರ್ಷಿಕ 6 ಸಾವಿರ ರು. ಆರ್ಥಿಕ ನೆರವು, ಧಾರ್ಮಿಕ ಪ್ರವಾಸೋದ್ಯಮಕ್ಕೆ ವಿಶೇಷ ಕಾರ್ಯಕ್ರಮ, ಭೂ ದಾಖಲೆ ಹಂಚಿಕೆ ಜತೆಗೆ ಎಲ್ಲಾ ವರ್ಗದವರ ಹಿತ ಕಾಪಾಡುವ ಭರವಸೆಗಳನ್ನು ನೀಡಲಾಗಿದೆ.

ಈ ವೇಳೆ ಮಾತನಾಡಿದ ಶಿವಕುಮಾರ್‌, ‘ತಮಿಳುನಾಡಿಗೆ ದೇಶದಲ್ಲೇ ತನ್ನದೇ ಆದ ಇತಿಹಾಸವಿದೆ. ಇಲ್ಲಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ಪ್ರಾಮುಖ್ಯತೆಯಿರುವ ಕಾರಣ, ಜನರನ್ನು ತಮಿಳುನಾಡಿನ ದೇವಾಲಯಗಳತ್ತ ಆಕರ್ಷಿಸಲು ಕಾರ್ಯಕ್ರಮ ರೂಪಿಸಲಾಗುವುದು. ಕಾರ್ತಿ ಚಿದಂಬಂರಂ ಹಾಗೂ ತಂಡ ರಾಜ್ಯದೆಲ್ಲೆಡೆ ಸಂಚರಿಸಿ, ಜನರ ಭಾವನೆ ಅರಿತು ಪ್ರಣಾಳಿಕೆ ರೂಪಿಸಿದ್ದಾರೆ. ಮಹಿಳೆಯರನ್ನು ಸಬಲರನ್ನಾಗಿಸಲು ಅವರಿಗೆ ಮಾಸಿಕ 2 ಸಾವಿರ ರು. ನೀಡಲು ತೀರ್ಮಾನಿಸಲಾಗಿದೆ. ಅಂತೆಯೇ ಪಿಂಚಣಿ ದರ ಏರಿಕೆ ಮಾಡಲಾಗಿದ್ದು, ಭೂರಹಿತ ರೈತರಿಗೆ ವಾರ್ಷಿಕ 6 ಸಾವಿರ ರು. ನೀಡಲಾಗುವುದು’ ಎಂದರು.

ಕರ್ನಾಟಕದಲ್ಲಿ ನುಡಿದಂತೆ ನಡೆದಿದ್ದೇವೆ:

‘ಕರ್ನಾಟಕದಲ್ಲಿ ನಾವು ಕೊಟ್ಟ 5 ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಮೊದಲ 6 ತಿಂಗಳ ಒಳಗಾಗಿ ಜಾರಿ ಮಾಡಿದೆವು. ಪ್ರಧಾನಿ ಸೇರಿದಂತೆ ಬಿಜೆಪಿಯ ಅನೇಕ ಸ್ನೇಹಿತರು ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿ, ಇದು ಸಾಧ್ಯವೇ ಎಂದು ಪ್ರಶ್ನಿಸಿದರು. ಆದರೆ ಈಗ ದೇಶದೆಲ್ಲೆಡೆ ನಮ್ಮ ಮಾದರಿಯನ್ನೇ ಅವಲಂಬಿಸಿದ್ದಾರೆ’ ಎನ್ನುತ್ತಾ ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರದ ಉದಾಹರಣೆ ನೀಡಿದರು.

ಬಿಜೆಪಿ ವಿರುದ್ಧ ವಾಗ್ದಾಳಿ

ಈ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ‘ಯುಪಿಎ ಸರ್ಕಾರದ ಅವಧಿಯಲ್ಲಿ ಮನರೇಗಾ ಮೂಲಕ ಉದ್ಯೋಗ ಖಾತರಿ, ಆಹಾರ ಭದ್ರತೆ, ಶೈಕ್ಷಣಿಕ, ಮಾಹಿತಿ ಹಕ್ಕು ನೀಡಿದ್ದೇವೆ. ಆದರೆ ಬಿಜೆಪಿ ಅಥವಾ ಅದರ ಮೈತ್ರಿ ಸರ್ಕಾರ ತಮ್ಮ ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ’ ಎಂದರು. ಜತೆಗೆ, ಈ ಬಾರಿ ಅಧಿಕಾರಕ್ಕೇರಲು ಜನಾಶೀರ್ವಾದವನ್ನೂ ಬೇಡಿದರು.