‘ಕೆಲವರು ನಾನೇ ಹೆಚ್ಚು, ನಾನು ಇಲ್ಲದಿದ್ದರೆ ಮುಸ್ಲಿಂ ಸಮುದಾಯಕ್ಕೆ ಮತ್ತೊಬ್ಬ ನಾಯಕ ಇಲ್ಲ ಎಂಬ ಭಾವನೆಯಲ್ಲಿದ್ದಾರೆ. ನಾವು ಬಿಜೆಪಿ ಸೋಲಿಸಲು ಹೋದರೆ ನಮ್ಮಲ್ಲಿನ ಕೆಲವರು ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನಿಸಿದರು’ ಎಂದು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕ ರಿಜ್ವಾನ್ ಅರ್ಷದ್ ಗಂಭೀರ ಆರೋಪ
ಬೆಂಗಳೂರು : ‘ಕೆಲವರು ನಾನೇ ಹೆಚ್ಚು, ನಾನು ಇಲ್ಲದಿದ್ದರೆ ಮುಸ್ಲಿಂ ಸಮುದಾಯಕ್ಕೆ ಮತ್ತೊಬ್ಬ ನಾಯಕ ಇಲ್ಲ ಎಂಬ ಭಾವನೆಯಲ್ಲಿದ್ದಾರೆ. ನಾವು ಬಿಜೆಪಿ ಸೋಲಿಸಲು ಹೋದರೆ ನಮ್ಮಲ್ಲಿನ ಕೆಲವರು ಡಬಲ್ ಗೇಮ್ ಆಡಿ ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನಿಸಿದರು’ ಎಂದು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕ ರಿಜ್ವಾನ್ ಅರ್ಷದ್ ಗಂಭೀರ ಆರೋಪ ಮಾಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಅಲ್ಪಸಂಖ್ಯಾತ ಕಲ್ಯಾಣ ಖಾತೆ ಸಚಿವ ಜಮೀರ್ ಅಹಮದ್ ಖಾನ್ ಅವರತ್ತ ಚಾಟಿ ಬೀಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಲ್ಪಸಂಖ್ಯಾತರ ಚಾಂಪಿಯನ್ ಎನಿಸಿಕೊಂಡವರು ಅಬ್ದುಲ್ ಜಬ್ಬಾರ್ ಅವರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದರು. ಮುಖ್ಯಮಂತ್ರಿಗಳ ಮುಂದೆಯೂ ಅದೇ ‘ಒಬ್ಬ ನಾಯಕರು’, ಕೊಟ್ಟರೆ ಜಬ್ಬಾರ್‌ಗೆ ಕೊಡಿ ಎಂದರು. ಜಬ್ಬಾರ್ ಅವರು ಇಲ್ಲದಿದ್ದರೆ ಬೇರೆ ಮುಸ್ಲಿಂ ಆಕಾಂಕ್ಷಿಗಳು ಇರಲಿಲ್ಲವೇ? ಒಬ್ಬ ವ್ಯಕ್ತಿಯ ಪರ ನಿಂತು ಸಮುದಾಯದ ಪರ ಎಂದು ಹೇಳಿಕೊಳ್ಳುವುದು ಸರಿಯೇ? ಟಿಕೆಟ್ ನೀಡಲಿಲ್ಲ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದೆ ಎಂದು ಅಪಪ್ರಚಾರ ಮಾಡುವುದು ಸರಿಯೇ’ ಎಂದು ಕಿಡಿಕಾರಿದರು.
ಜಬ್ಬಾರ್ ಅವರ ಪರ ಪಟ್ಟು ಹಿಡಿದಿದ್ದು ಯಾರು ಎಂಬ ಪ್ರಶ್ನೆಗೆ, ‘ಅವರು ಯಾರು ಎಂಬುದನ್ನು ನೀವೇ ತಿಳಿದುಕೊಳ್ಳಿ. ದಾವಣಗೆರೆ ದಕ್ಷಿಣ ಕ್ಷೇತ್ರದ ಪ್ರಚಾರಕ್ಕೆ ಬಾರದವರು ಮೂವರು. ಒಬ್ಬರ ಮೇಲೆ ಕ್ರಮ ಆಗಿದೆ. ಇನ್ನಿಬ್ಬರು ಇದ್ದಾರಲ್ಲ? ಅದರಲ್ಲಿ ಯಾರು ಜಬ್ಬಾರ್‌ಗೆ ಟಿಕೆಟ್ ಕೊಡಿಸಬೇಕು ಎಂದು ಪಟ್ಟು ಹಿಡಿದರೋ ಅವರು ಇಬ್ಬರಲ್ಲಿ ಇಬ್ಬರು’ ಎಂದು ಪರೋಕ್ಷವಾಗಿ ಅಲ್ಪಸಂಖ್ಯಾತ ಕಲ್ಯಾಣ ಖಾತೆ ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ಆರೋಪ ಮಾಡಿದರು.
ಬಿಜೆಪಿ ಗೆಲ್ಲಿಸಲು ಯತ್ನಿಸಿದರು:
ಯಾರು ಮತ ವಿಭಜಿಸಿ ಬಿಜೆಪಿ ಗೆಲ್ಲಿಸಬೇಕು ಎಂದು ಪ್ರಯತ್ನ ಪಟ್ಟರು ಎಂಬುದು ಗೊತ್ತಿದೆ. ಅವರ ಪ್ರಯತ್ನ ಯಾವುದೇ ಫಲ ನೀಡಿಲ್ಲ. ಕೆಲವರು ನಾನೇ ಹೆಚ್ಚು, ನಾನು ಇಲ್ಲದಿದ್ದರೆ ಮುಸ್ಲಿಂ ಸಮುದಾಯಕ್ಕೆ ಇನ್ಬೊಬ್ಬ ನಾಯಕ ಇಲ್ಲ ಎನ್ನುವ ಭಾವನೆಯಲ್ಲಿದ್ದಾರೆ. ಇದರಿಂದಲೇ ಮುಸ್ಲಿಂ ನಾಯಕ ಪಟ್ಟಕ್ಕೆ ಧಕ್ಕೆ ಬಂದಿದೆ. ಯಾವ ಮುಸ್ಲಿಂ ನಾಯಕರು ಚುನಾವಣೆಯಲ್ಲಿ ಹೇಗೆ ಕೆಲಸ ಮಾಡಿದರು ಎಂಬ ಬಗ್ಗೆ ಹೈಕಮಾಂಡ್‌ಗೆ ಗೊತ್ತಿದೆ. ನಾವು ಬಿಜೆಪಿ ಸೋಲಿಸಲು ಹೋಗಿದ್ದೆವು. ಆದರೆ ನಮ್ಮಲ್ಲಿ ಕೆಲವರು ಡಬಲ್ ಗೇಮ್ ಆಡಿದರು ಎಂದು ರಿಜ್ವಾನ್ ಆರೋಪ ಮಾಡಿದರು.
ಅಬ್ದುಲ್ ಜಬ್ಬಾರ್ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಬ್ದುಲ್ ಜಬ್ಬಾರ್ ಅವರ ರಾಜೀನಾಮೆ ಬಗ್ಗೆ ಮಾಧ್ಯಮಗಳಲ್ಲಿ ನೋಡಿದೆ. ಅವರ ಪತ್ರದಲ್ಲಿ ಮೂರನೇ ತಾರೀಖು ಎಂದು ಇದೆ. ಬಹುಶಃ ಕಾಂಗ್ರೆಸ್‌ಗೆ ಹಿನ್ನಡೆ ಆಗಲಿ ಎಂದು ಆಗಲೇ ರಾಜೀನಾಮೆ ಬರೆದಿಟ್ಟುಕೊಂಡಿದ್ದರೋ ಏನೋ ಗೊತ್ತಿಲ್ಲ ಎಂದು ದೂರಿದರು.
- ದಾವಣಗೆರೆ ಉಪಚುನಾವಣೆ ವಿಚಾರದಲ್ಲಿ ಕಾಂಗ್ರೆಸ್ ಒಳಬೇಗುದಿ ಸ್ಫೋಟ
- ನಾವು ಬಿಜೆಪಿ ಸೋಲಿಸಲು ಹೋಗಿದ್ವಿ. ಆದರೆ ಒಬ್ಬರಿಂದ ಅಪಪ್ರಚಾರ
- ರಾಜ್ಯದ ಮುಸ್ಲಿಂ ಸಚಿವರೊಬ್ಬರ ವಿರುದ್ಧ ಶಾಸಕ ರಿಜ್ವಾನ್ ಅರ್ಷದ್ ಕಿಡಿ
