ಮತಚೋರಿ, ಎಸ್ಐಆರ್ ವಿರುದ್ಧ ರಾಷ್ಟ್ರೀಯ ಮಟ್ಟದ ಹೋರಾಟದ ನಡುವೆಯೇ ಕರ್ನಾಟಕದ ನಾಲ್ಕು ಸೇರಿ ದೇಶದ ಒಟ್ಟು ನಾಲ್ಕು ರಾಜ್ಯಗಳ 28 ಸ್ಥಾನಗಳಿಗೆ ಇತ್ತೀಚೆಗೆ ನಡೆದ ಮೇಲ್ಮನೆ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗದೆ ಸಂಪೂರ್ಣ ಧೂಳೀಪಟವಾಗಿದೆ.
ನವದೆಹಲಿ: ಮತಚೋರಿ, ಎಸ್ಐಆರ್ ವಿರುದ್ಧ ರಾಷ್ಟ್ರೀಯ ಮಟ್ಟದ ಹೋರಾಟದ ನಡುವೆಯೇ ಕರ್ನಾಟಕದ ನಾಲ್ಕು ಸೇರಿ ದೇಶದ ಒಟ್ಟು ನಾಲ್ಕು ರಾಜ್ಯಗಳ 28 ಸ್ಥಾನಗಳಿಗೆ ಇತ್ತೀಚೆಗೆ ನಡೆದ ಮೇಲ್ಮನೆ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗದೆ ಸಂಪೂರ್ಣ ಧೂಳೀಪಟವಾಗಿದೆ.
28 ಕ್ಷೇತ್ರಗಳ ಪೈಕಿ 12 ಕಡೆ ಕಾಂಗ್ರೆಸ್ ಸ್ಪರ್ಧೆ ಮಾಡಿತ್ತು. ಆದರೆ ಒಂದು ಸ್ಥಾನದಲ್ಲೂ ಗೆಲುವು ಕಾಣುವಲ್ಲಿ ಪಕ್ಷ ವಿಫಲವಾಗಿದೆ. ಈ ಹಿಂದಿನ ಚುನಾವಣೆಯಲ್ಲಿ ಇದೇ 12 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 3 ಕಡೆ ಗೆಲುವು ಸಾಧಿಸಿತ್ತು.
ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಮತ್ತು ಕರ್ನಾಟಕದ ಒಟ್ಟು 28 ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ಗೆ ಇತ್ತೀಚೆಗೆ ನಡೆದ ಚುನಾವಣೆ ಫಲಿತಾಂಶ ಇದೀಗ ಪ್ರಕಟವಾಗಿದೆ. ಅದರಲ್ಲೂ ಕರ್ನಾಟಕದಲ್ಲಿ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷ ಶೂನ್ಯ ಸಂಪಾದನೆ ಮಾಡಿದ್ದು, ಪಕ್ಷಕ್ಕೆ ಭಾರೀ ಆಘಾತ ನೀಡಿದೆ.
ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟ ನಾಲ್ಕಕ್ಕೆ ನಾಲ್ಕೂ ಸ್ಥಾನ ಗೆದ್ದಿದೆ. ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪ್ರತಿಪಕ್ಷಗಳ ಸಾಲಿನಲ್ಲಿದೆ. ಹೀಗಾಗಿ ಅಲ್ಲಿನ ಸೋಲನ್ನು ಕಡೆಗಣಿಸಬಹುದಾದರೂ ಕರ್ನಾಟಕದಲ್ಲಿ ಪಕ್ಷ ಅಧಿಕಾರದಲ್ಲಿದ್ದರೂ ಒಂದು ಸ್ಥಾನವನ್ನೂ ಗೆಲ್ಲದೇ ಹೋಗಿದ್ದು ಭಾರೀ ಹಿನ್ನಡೆಯಂದೇ ಭಾವಿಸಲಾಗುತ್ತಿದೆ.
ಉತ್ತರ ಪ್ರದೇಶದಲ್ಲಿ ಒಟ್ಟು 11 ಸ್ಥಾನಗಳಿಗೆ ಚುನಾವಣೆ
ಉತ್ತರ ಪ್ರದೇಶದಲ್ಲಿ ಒಟ್ಟು 11 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಬಿಜೆಪಿ ಈಗಾಗಲೇ ಐದು ಸ್ಥಾನಗಳಲ್ಲಿ ಗೆದ್ದಿದ್ದು, 3 ಸ್ಥಾನಗಳಲ್ಲಿ ಸಮಾಜವಾದಿ ಪಕ್ಷ ಗೆದ್ದಿದೆ. ಇನ್ನೂ ಮೂರು ಸ್ಥಾನಗಳ ಫಲಿತಾಂಶ ಪ್ರಕಟಣೆ ಬಾಕಿ ಇದೆ. ಇನ್ನು ಬಿಹಾರದ ಎಂಟು ಸ್ಥಾನಗಳಲ್ಲಿ ಆರ್ಜೆಡಿ, ಬಿಜೆಪಿ ತಲಾ ಒಂದೊಂದು ಸ್ಥಾನ ಗೆದ್ದಿದೆ. ವಿಶೇಷವೆಂದರೆ ಪ್ರಶಾಂತ್ ಕಿಶೋರ್ ಅವರ ಜನ್ ಸೂರಜ್ ಪಾರ್ಟಿ(ಜೆಎಸ್ಪಿ) ಕೂಡ ಒಂದು ಸ್ಥಾನ ಗೆಲ್ಲುವ ಮೂಲಕ ಮೇಲ್ಮನೆಯಲ್ಲಿ ತನ್ನ ಖಾತೆ ತೆರೆದಿದೆ. ಆದರೆ, ಕಾಂಗ್ರೆಸ್ಗೆ ಮಾತ್ರ ಇಲ್ಲೂ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ.
ಕಾಂಗ್ರೆಸ್ಗೆ ಎಲ್ಲೆಲ್ಲಿ ಸೋಲು:
ಕರ್ನಾಟಕದಲ್ಲಿ ಸ್ಪರ್ಧಿಸಿದ್ದ 4ರ ಪೈಕಿ 4ರಲ್ಲೂ ಸೋಲು. ಬಿಹಾರದಲ್ಲಿ 8 ಸ್ಥಾನಗಳ ಪೈಕಿ 5ರಲ್ಲಿ ಸ್ಪರ್ಧೆ ಇಲ್ಲೂ ಎಲ್ಲದರಲ್ಲೂ ಸೋಲು. ಇನ್ನು ಮಹಾರಾಷ್ಟ್ರದ 5 ಸ್ಥಾನಗಳ ಪೈಕಿ 3ರಲ್ಲಿ ಸ್ಪರ್ಧೆ, ಅಲ್ಲಿಯೂ ಎಲ್ಲದರಲ್ಲೂ ಸೋಲು. ಹೀಗಾಗಿ ಸ್ಪರ್ಧಿಸಿದ್ದ 12ರ ಪೈಕಿ ಒಂದರಲ್ಲೂ ಗೆಲುವು ಸಿಕ್ಕಿಲ್ಲ.

