ಕೋಲಾರ ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕೈಗಾರಿಕೆ ಸ್ಥಾಪನೆ

| Published : Oct 24 2024, 12:49 AM IST / Updated: Oct 24 2024, 04:20 AM IST

ಸಾರಾಂಶ

ಅರ್ಬನ್ ಸಿಟಿ ರೈಲ್ವೆ ಲೈನ್ ಅನ್ನು ಮಾಲೂರು ತನಕ ಮಾಡಲು ಕ್ರಿಯಾಯೋಜನೆ ನಡೆಸಿದ್ದಾರೆ. ಬಂಗಾರಪೇಟೆ ತನಕ ವಿಸ್ತರಣೆ ಮಾಡಲು ಮನವಿ ಮಾಡಲಾಗಿದೆ. ಬಂಗಾರಪೇಟೆ ತಾಲೂಕಿನಲ್ಲಿ ಸಣ್ಣ ಕೈಗಾರಿಕೆಯನ್ನು ಸ್ಥಾಪನೆ ಮಾಡಲಾಗುವುದು ಮತ್ತು ಪಶುಸಂಗೋಪನೆಗೆ ಒತ್ತು ನೀಡಲಾಗುವುದು.

 ಬಂಗಾರಪೇಟೆ : ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ಸಂಸದ ಎಂ. ಮಲ್ಲೇಶ್ ಬಾಬು ತಿಳಿಸಿದರು. ತಾಲೂಕಿನ ಕಾಮಸಮುದ್ರ ಗ್ರಾಮದ ಕೆಸಿಆರ್ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಸಮಾಲೋಚನ ಸಭೆಯಲ್ಲಿ ಅವರು ಮಾತನಾಡಿದರು.

ಕೇಂದ್ರ ಸಚಿವರ ಜತೆ ಚರ್ಚೆ

ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ರವರು ಕೈಗಾರಿಕೆ ಸ್ಥಾಪಿಸುವ ಬಗ್ಗೆ ಹುಸಿ ಭರವಸೆಗಳನ್ನು ನೀಡುತ್ತಿದ್ದಾರೆ. ಆದರೆ ವಾಸ್ತವ ಸ್ಥಿತಿಗತಿಗಳು ಬೇರೆಯಾಗಿವೆ. ಅತಿ ಶೀಘ್ರದಲ್ಲಿ ಕೇಂದ್ರ ಸಚಿವರೊಂದಿಗೆ ಕೈಗಾರಿಕೆ ಸ್ಥಾಪನೆ ಕುರಿತು ಚರ್ಚೆ ನಡೆಸಲಾಗುವುದು ಎಂದರು.

ಅರ್ಬನ್ ಸಿಟಿ ರೈಲ್ವೆ ಲೈನ್ ಅನ್ನು ಮಾಲೂರು ತನಕ ಮಾಡಲು ಕ್ರಿಯಾಯೋಜನೆ ನಡೆಸಿದ್ದಾರೆ.ನಾನು ಬಂಗಾರಪೇಟೆ ತನಕ ವಿಸ್ತರಣೆ ಮಾಡಲು ಮನವಿ ಮಾಡಿದ್ದೇನೆ. ತಾಲೂಕಿನಲ್ಲಿ ಸಣ್ಣ ಕೈಗಾರಿಕೆಯನ್ನು ಸ್ಥಾಪನೆ ಮಾಡಲಾಗುವುದು ಮತ್ತು ಪಶುಸಂಗೋಪನೆ ಯೋಜನೆಯನ್ನು ಜಾರಿಗೆ ತರಲು ಪ್ರಯತ್ನ ಮಾಡುತ್ತಿದ್ದೇನೆ ಇದರಿಂದ ತಾಲೂಕಿನ ರೈತರಿಗೆ ಅನುಕೂಲವಾಗುತ್ತದೆ ಎಂದು ಅ‍ರು ಹೇಳಿದರು.

ಜಿಲ್ಲೆಗೆ ಕೃಷ್ಣಾ ನದಿ ನೀರು

ಕೃಷ್ಣ ನದಿಯ ನೀರನ್ನು ನಮ್ಮ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ನೀಡಬೇಕೆಂದು ಈಗಾಗಲೇ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರವರಿಗೆ ಮನವಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಡಿಸಿಎಂ ಪವನ್ ಕಲ್ಯಾಣ್ ರವರನ್ನು ಭೇಟಿ ಮಾಡಲು ತಾಲೂಕಿನ ಹಾಲಿ ಶಾಸಕರು ಹಾಗೂ ಮಾಜಿ ಶಾಸಕರು, ಮುಖಂಡರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ನಮ್ಮ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು ನೀಡುವಂತೆ ಒತ್ತಾಯ ಮಾಡಲಾಗುವುದು. ಕೃಷ್ಣಾ ನದಿಯ ನೀರನ್ನು ಎರಡು ಜಿಲ್ಲೆಗಳಿಗೆ ತರುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿವಿ ಮಹೇಶ್ ಮಾತನಾಡಿ, ಮುಂಬರುವ ಎಪಿಎಂಸಿ, ಪಿ ಎಲ್ ಡಿ ಬ್ಯಾಂಕ್, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಚುನಾವಣೆಗಳಿಗೆ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬ ಚಿಂತೆಯನ್ನು ಬಿಟ್ಟು ಕಾರ್ಯಕರ್ತರು ಎಲ್ಲರೂ ಒಗ್ಗಟ್ಟಾಗಿ ತಮ್ಮ ತಮ್ಮ ಗ್ರಾಮಗಳಲ್ಲಿ ಪಕ್ಷ ಸಂಘಟನೆಗಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ. ನಾರಾಯಣಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯ ಕೆ ಚಂದ್ರಾರೆಡ್ಡಿ, ಬಿಜೆಪಿ ಮಂಡಲ ಅಧ್ಯಕ್ಷರಾದ ಸಂಪಂಗರೆಡ್ಡಿ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಜೆಡಿಎಸ್ ಅಧ್ಯಕ್ಷ ಮುನಿರಾಜು,ಕೃಷಿಕ ಸಮಾಜ ತಾಲೂಕು ಅಧ್ಯಕ್ಷ ರಾಜರೆಡ್ಡಿ,ಪುರಸಭೆ ಸದಸ್ಯ ಕಪಾಲಿಶಂಕರ್, ಕೇತಗಾನಹಳ್ಳಿ ಗ್ರಾಮ ಅಧ್ಯಕ್ಷರಾದ ಮಂಜುಳಾ, ಶಶಿಧರ್ ರೆಡ್ಡಿ,ಮಾರ್ಕಂಡೇಗೌಡ, ಹನುಮಪ್ಪ ತಿಪ್ಪಾರೆಡ್ಡಿ, ಸೀತಾರಾಮಪ್ಪ, ಪಾರ್ಥಸಾರಥಿ, ಶ್ರೀನಿವಾಸ್ ಮೂರ್ತಿ, ತಿಮ್ಮರೆಡ್ಡಿ, ನಾರಾಯಣಸ್ವಾಮಿ, ಬಾಲಕೃಷ್ಣ, ಯಲ್ಲಪ್ಪ, ಮಂಜುನಾಥ್, ಬಾಲಚಂದ್ರ, ಚೌಡಪ್ಪ ಮೊದಲಾದವರು ಇದ್ದರು.