ಮಂಡ್ಯ ಲೋಕಸಭಾ ‘ಅಖಾಡ’ಕ್ಕೆ ಪ್ರಥಮ ಬಾರಿಗೆ ಮಾಜಿ ಸಿಎಂ ‘ಎಚ್ಡಿಕೆ ಪ್ರವೇಶ’

| Published : Mar 28 2024, 12:48 AM IST

ಸಾರಾಂಶ

ರಾಜಕೀಯವಾಗಿ ಶಕ್ತಿ ತುಂಬಿರುವ ರಾಮನಗರ ಜಿಲ್ಲೆಯನ್ನು ಬಿಟ್ಟು ಬರುವ ತೊಳಲಾಟಕ್ಕೆ ಸಿಲುಕಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ಕೊನೆಗೂ ಮಂಡ್ಯ ಕ್ಷೇತ್ರದಿಂದ ತಾವೇ ಕಣಕ್ಕಿಳಿಯುವ ದೃಢ ನಿರ್ಧಾರ ಮಾಡಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳ ಪೈಕಿ ಕೆ.ಆರ್.ಪೇಟೆ ಕ್ಷೇತ್ರದಲ್ಲಷ್ಟೇ ಜೆಡಿಎಸ್ ಅಸ್ತಿತ್ವ ಕಾಯ್ದುಕೊಂಡಿದ್ದು, ೭ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಧಿಪತ್ಯವಿದೆ. ಆದರೂ ದೃತಿಗೆಡದ ಎಚ್.ಡಿ.ಕುಮಾರಸ್ವಾಮಿ ಅವರು ಚುನಾವಣೆ ಗೆದ್ದೇ ಗೆಲ್ಲುವೆನೆಂಬ ಉತ್ಸಾಹದಲ್ಲಿ ಇದೇ ಮೊದಲ ಬಾರಿಗೆ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಎನ್ನುವುದು ದೃಢಪಟ್ಟಿದೆ. ಪಕ್ಷದ ಮುಖಂಡರು, ಕಾರ್ಯಕರ್ತರ ಒತ್ತಡಕ್ಕೆ ಮಣಿದು ಮಂಡ್ಯ ಅಖಾಡ ಪ್ರವೇಶಿಸಲು ಎಚ್‌ಡಿಕೆ ನಿರ್ಧರಿಸಿದ್ದಾರೆ. ತಮ್ಮ ಸ್ಪರ್ಧೆಯೊಂದಿಗೆ ಜಿಲ್ಲೆಯೊಳಗೆ ಅಸ್ತಿತ್ವ ಕಳೆದುಕೊಂಡಿರುವ ಜೆಡಿಎಸ್‌ಗೆ ಪುನಶ್ಚೇತನ ನೀಡುವ ಗುರಿಯನ್ನು ದಳಪತಿ ಹೊಂದಿದ್ದಾರೆ.

೨೦೧೯ರ ಲೋಕಸಭಾ ಚುನಾವಣೆಯಲ್ಲಿ ಪುತ್ರ ನಿಖಿಲ್ ಸೋಲಿನ ಸೇಡು ತೀರಿಸಿಕೊಳ್ಳುವುದು. ಸೋಲಿನಿಂದ ದಿಕ್ಕೆಟ್ಟಿರುವ ಸ್ಥಳೀಯ ಜೆಡಿಎಸ್ ನಾಯಕರಿಗೆ ಶಕ್ತಿ ತುಂಬುವುದು. ಮಂಡ್ಯ ಜಿಲ್ಲೆಯನ್ನು ಜೆಡಿಎಸ್ ಭದ್ರಕೋಟೆಯನ್ನಾಗಿಯೇ ಉಳಿಸಿಕೊಂಡು ಪಕ್ಷವನ್ನು ಬಲವರ್ಧನೆಗೊಳಿಸುವ ಮಹತ್ವಾಕಾಂಕ್ಷೆ ಕುಮಾರಸ್ವಾಮಿ ಅವರದ್ದಾಗಿದೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನಾಯಕ ಎನ್.ಚಲುವರಾಯಸ್ವಾಮಿ ನಡುವಿನ ನೇರ ಯುದ್ಧಕಣವಾಗಿ ಮಂಡ್ಯ ಲೋಕಸಭೆ ಚುನಾವಣಾ ಕಣ ಮಾರ್ಪಟ್ಟಿದೆ. ಪ್ರತಿ ಹಂತದಲ್ಲೂ ಜೆಡಿಎಸ್ ಹಿನ್ನಡೆಗೆ ಕಾರಣರಾಗುತ್ತಿರುವ ಕಾಂಗ್ರೆಸ್ ನಾಯಕರನ್ನು ಕಟ್ಟಿಹಾಕಲು ಎಚ್.ಡಿ.ಕುಮಾರಸ್ವಾಮಿಯೇ ಈಗ ಸಾರಥ್ಯ ವಹಿಸಿದ್ದಾರೆ .

ಸ್ಪರ್ಧೆಗೆ ದೃಢ ನಿರ್ಧಾರ:

ರಾಜಕೀಯವಾಗಿ ಶಕ್ತಿ ತುಂಬಿರುವ ರಾಮನಗರ ಜಿಲ್ಲೆಯನ್ನು ಬಿಟ್ಟು ಬರುವ ತೊಳಲಾಟಕ್ಕೆ ಸಿಲುಕಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ಕೊನೆಗೂ ಮಂಡ್ಯ ಕ್ಷೇತ್ರದಿಂದ ತಾವೇ ಕಣಕ್ಕಿಳಿಯುವ ದೃಢ ನಿರ್ಧಾರ ಮಾಡಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳ ಪೈಕಿ ಕೆ.ಆರ್.ಪೇಟೆ ಕ್ಷೇತ್ರದಲ್ಲಷ್ಟೇ ಜೆಡಿಎಸ್ ಅಸ್ತಿತ್ವ ಕಾಯ್ದುಕೊಂಡಿದ್ದು, ೭ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಧಿಪತ್ಯವಿದೆ. ಆದರೂ ದೃತಿಗೆಡದ ಎಚ್.ಡಿ.ಕುಮಾರಸ್ವಾಮಿ ಅವರು ಚುನಾವಣೆ ಗೆದ್ದೇ ಗೆಲ್ಲುವೆನೆಂಬ ಉತ್ಸಾಹದಲ್ಲಿ ಇದೇ ಮೊದಲ ಬಾರಿಗೆ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಇದರಿಂದ ಜೆಡಿಎಸ್ ಮುಖಂಡರು-ಕಾರ್ಯಕರ್ತರಲ್ಲಿ ಹೊಸ ಉಮ್ಮಸ್ಸು, ಉತ್ಸಾಹ ಮೂಡಿದೆ. ಸ್ಥಳೀಯ ಜೆಡಿಎಸ್ ನಾಯಕರಿಗೆ ಹೊಸ ಶಕ್ತಿ ಬಂದಂತಾಗಿದ್ದು, ಚುನಾವಣೆಯಲ್ಲಿ ಒಗ್ಗಟ್ಟು ಪ್ರದರ್ಶಿಸುವುದಕ್ಕೆ ರೆಡಿಯಾಗಿದ್ದಾರೆ.

ಗುಟ್ಟನ್ನು ಬಿಟ್ಟುಕೊಡದ ದಳಪತಿಗಳು:

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದವರಲ್ಲಿ ಒಬ್ಬರು ಸ್ಪರ್ಧಿಸುವಂತೆ ಸ್ಥಳೀಯ ಜೆಡಿಎಸ್ ನಾಯಕರು ದಳಪತಿಗಳ ಮೇಲೆ ಒತ್ತಡ ತಂದಿದ್ದರು. ಸ್ಪರ್ಧೆಗೆ ದೇವೇಗೌಡರು ಮತ್ತು ನಿಖಿಲ್ ಕುಮಾರಸ್ವಾಮಿ ಆಸಕ್ತಿ ತೋರಿರಲಿಲ್ಲ. ಆದರೆ, ಕುಮಾರಸ್ವಾಮಿ ಅವರು ಕೊನೆಯವರೆಗೂ ತಮ್ಮ ಸ್ಪರ್ಧೆಯ ಗುಟ್ಟನ್ನು ಬಿಟ್ಟುಕೊಡದೆ ಒಂದೆಡೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರನ್ನೇ ಅಭ್ಯರ್ಥಿ ಎಂದು ಬಿಂಬಿಸುತ್ತಾ, ಮತ್ತೊಂದೆಡೆ ಜಿಲ್ಲೆಯೊಳಗಿನ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಕಾಂಗ್ರೆಸ್‌ನವರ ದಿಕ್ಕುತಪ್ಪಿಸುವ ತಂತ್ರಗಾರಿಕೆಯನ್ನು ನಡೆಸಿಕೊಂಡು ಬಂದರು.

ಚುನಾವಣೆ ಘೋಷಣೆಯಾದ ನಂತರದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವ ಕಾರ್ಯಚಟುವಟಿಕೆಗಳು ಬಿರುಸನ್ನು ಪಡೆದುಕೊಂಡವು. ಎಚ್‌ಡಿಕೆ ಹೊರತುಪಡಿಸಿ ಮತ್ಯಾರಿಂದಲೂ ಚುನಾವಣೆಯನ್ನು ಗೆಲ್ಲುವುದಕ್ಕೆ ಸಾಧ್ಯವಿಲ್ಲವೆಂದ ರಾಜಕೀಯ ಸಂದಿಗ್ಧತೆಯ ಪರಿಸ್ಥಿತಿಯನ್ನು ಜಿಲ್ಲಾ ಜೆಡಿಎಸ್‌ನೊಳಗೆ ಸೃಷ್ಟಿಸಲಾಯಿತು. ಆ ವೇಳೆಗೆ ಎಚ್.ಡಿ.ಕುಮಾರಸ್ವಾಮಿ ಅಭ್ಯರ್ಥಿಯಾಗಿ ಬರುವ ಸಾಧ್ಯತೆಗಳಿಲ್ಲವೆಂದು ನಂಬಿದ್ದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು ಅವರನ್ನು ಕಣಕ್ಕಿಳಿಸಿ ಪ್ರಚಾರ ಆರಂಭಿಸಿತ್ತು.

ರಾಜಕೀಯ ಪರಿಸ್ಥಿತಿ ಅವಲೋಕನ:

ಇಲ್ಲಿಯವರೆಗೆ ಜೆಡಿಎಸ್ ಅಭ್ಯರ್ಥಿ ಯಾರೆಂಬ ಗುಟ್ಟನ್ನು ಬಿಟ್ಟುಕೊಡದ ಜೆಡಿಎಸ್, ಅಂತಿಮವಾಗಿ ಕುಮಾರಸ್ವಾಮಿ ಅವರನ್ನೇ ಅಧಿಕೃತ ಅಭ್ಯರ್ಥಿಯನ್ನಾಗಿ ಮಾಡಿದೆ. ಕಳೆದ ಚುನಾವಣೆಯಂತೆ ಕುಟುಂಬ ರಾಜಕಾರಣದ ಭಾವನೆ ಜನರ ಮನಸ್ಸಿಗೆ ಬರಬಹುದೆಂಬ ಕಾರಣದಿಂದಲೇ ನಿಧಾನವಾಗಿ ಜಿಲ್ಲೆಯೊಳಗಿನ ರಾಜಕೀಯ ಪರಿಸ್ಥಿತಿಯನ್ನು ಅವಲೋಕನ ಮಾಡಿ ಎಚ್‌ಡಿಕೆ ಅವರನ್ನು ಅಭ್ಯರ್ಥಿ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಕಳೆದ ಬಾರಿಯಷ್ಟು ಜನರ ಭಾವನೆ ಕೆರಳಿಲ್ಲ, ರಾಜಕೀಯ ವಾತಾವರಣ ತಿಳಿಯಾಗಿರುವುದರಿಂದ ಕುಮಾರಸ್ವಾಮಿ ಅವರೇ ಅಖಾಡ ಪ್ರವೇಶಿಸುತ್ತಿದ್ದಾರೆ.

ರಣತಂತ್ರ-ಪ್ರತಿತಂತ್ರ:

ಕುಮಾರಸ್ವಾಮಿ ಅಭ್ಯರ್ಥಿಯಾಗುವುದು ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ನಡುಕ ಹುಟ್ಟಿದೆ. ಎಚ್‌ಡಿಕೆ ಅವರನ್ನು ಮಣಿಸಲು ನಾನಾ ರೀತಿಯ ರಣತಂತ್ರಗಳನ್ನು ರೂಪಿಸಲಾಗುತ್ತಿದೆ. ೨೦೧೯ರಲ್ಲಿ ಸಂಸದೆ ಸುಮಲತಾ ಅಂಬರೀಶ್ ಸ್ವಾಭಿಮಾನದ ಕಹಳೆ ಊದಿದ್ದರು. ಅದು ನಿರೀಕ್ಷೆಗೂ ಮೀರಿ ಯಶಸ್ಸನ್ನು ತಂದುಕೊಟ್ಟಿತ್ತು. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಸ್ವಾಭಿಮಾನ ಕಾಂಗ್ರೆಸ್ ಕೈ ಹಿಡಿಯುವುದು ಕಷ್ಟ. ಕಾಂಗ್ರೆಸ್‌ನ ಚುನಾವಣಾ ಸಾರಥಿ, ಎಚ್‌ಡಿಕೆ ವೈರಿಯಾಗಿರುವ ಎನ್.ಚಲುವರಾಯಸ್ವಾಮಿ ಅವರು ಬೇರೆ ತಂತ್ರಗಳನ್ನು ಹೂಡುವುದಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಅದಕ್ಕೆ ಪ್ರತಿತಂತ್ರ ರೂಪಿಸಿ ದಳಪತಿಯನ್ನು ಗೆಲ್ಲಿಸಿಕೊಳ್ಳಲು ಸ್ಥಳೀಯ ಜೆಡಿಎಸ್ ನಾಯಕರೂ ಸಜ್ಜಾಗುತ್ತಿದ್ದಾರೆ.