ನಗರದ ವಿವಿಧೆಡೆ ರಸ್ತೆ ಬದಿಯಲ್ಲಿ ಬಿಸಾಡಿರುವ ಕಸವನ್ನು ತೆರವುಗೊಳಿಸದಿರುವುದು ನಾಚಿಕೆಗೇಡು ಎಂದು ಜಿಬಿಎ ಹಾಗೂ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ವಿರುದ್ಧ ಎಂದು ಉದ್ಯಮಿ ಕಿರಣ್ ಮಜುಮ್ದಾರ್ ಶಾ ಕಿಡಿಕಾರಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ವಿವಿಧೆಡೆ ರಸ್ತೆ ಬದಿಯಲ್ಲಿ ಬಿಸಾಡಿರುವ ಕಸವನ್ನು ತೆರವುಗೊಳಿಸದಿರುವುದು ನಾಚಿಕೆಗೇಡು ಎಂದು ಜಿಬಿಎ ಹಾಗೂ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ವಿರುದ್ಧ ಎಂದು ಉದ್ಯಮಿ ಕಿರಣ್ ಮಜುಮ್ದಾರ್ ಶಾ ಕಿಡಿಕಾರಿದ್ದಾರೆ.ನಗರದೆಲ್ಲೆಡೆ ರಸ್ತೆ ಬದಿಗಳಲ್ಲಿ, ಸೇತುವೆಗಳ ಕೆಳಗೆ, ಖಾಲಿ ಜಾಗಗಳ ಬಳಿ ಕಸ ಬಿದ್ದಿರುವ ಕುರಿತು ವಿಡಿಯೋಗೆ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಕಿರಣ್ ಶಾ ಅವರು, ‘ಜಿಬಿಎ ಮತ್ತು ಬಿಎಸ್‌ಡಬ್ಲ್ಯುಎಂಎಲ್, ನಿಮಗೆ ಇದು ಕಾಣಿಸುತ್ತಿದೆಯೇ? ಏನಾದರು ಮಾಡುವಿರಾ? ಅತ್ಯಂತ ಕೆಟ್ಟ ಮತ್ತು ನಾಚಿಕೆಗೇಡಿನ ಸಂಗತಿ’ ಎಂದು ಪ್ರತಿಕ್ರಿಯಿಸಿದ್ದಾರೆ.
ಜಾಗೃತಿ ಅಗತ್ಯ:ಇದಕ್ಕೆ ಪ್ರತಿಕ್ರಿಯಿಸಿರುವ ಸಾಮಾಜಿಕ ಕಾರ್ಯಕರ್ತ ಅಶ್ವಿನ್ ಮಹೇಶ್, ಸ್ಥಳೀಯವಾಗಿ ಕಸ ವಿಲೇವಾರಿ ವಿಚಾರವಾಗಿ ಸ್ಥಳೀಯರಲ್ಲಿ ಜಾಗೃತಿ ಮೂಡಿಸದ ಹೊರತು ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲಾಗದು. ಈ ರೀತಿ ಕಸ ಎಸೆಯುವ ಅನೇಕ ಸ್ಥಳಗಳು ನಗರದಲ್ಲಿವೆ. ಆದರೆ, ಇದನ್ನು ಸರಿಪಡಿಸುವ ಜನರ ಸಂಖ್ಯೆ ಕಡಿಮೆ ಇದೆ. ತಮ್ಮ ಪ್ರದೇಶದಲ್ಲಿನ ಕಸದ ನಿರ್ವಹಣೆ ಕುರಿತು ನಾಗರಿಕರಿಗೆ ತಕ್ಕ ಮಟ್ಟಿಗೆ ಶಿಸ್ತನ್ನು ಕಲಿಸಿಕೊಡುವ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ.
ಅವಮಾನದ ಸಂಗತಿ:ರವಿಚಂದ್ರ ಎಂಬುವರು ಪ್ರತಿಕ್ರಿಯಿಸಿ, ಇದು ಬೆಂಗಳೂರಿಗರೆಲ್ಲರಿಗೂ ಅವಮಾನದ ಸಂಗತಿ. ಬರೀ ಸರ್ಕಾರವನ್ನೇ ದೂಷಿಸುವುದು ಏಕೆ? ಇಂತಹ ಎಲ್ಲಾ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಮೇಲ್ವಿಚಾರಣೆ ಮಾಡಬೇಕು. ಕಸ ಹಾಕುವವರಿಗೆ ದಂಡ ವಿಧಿಸುವ ಮೂಲಕ ಕ್ರಮ ಕೈಗೊಳ್ಳಬೇಕು. ನಮ್ಮ ಜನರ ವರ್ತನೆಯನ್ನು ಬದಲಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ದೂರು ನೀಡಿ ಸಾಕಾಗಿದೆ:ಅಶ್ವತ್ಥಾಮ ಎಂಬುವರು, ಬೆಂಗಳೂರಿನ ಎಲ್ಲಾ ಕಡೆ ಇಂತಹ ಸ್ಥಳಗಳು ಕಾಣಿಸುತ್ತವೆ. ಈ ಕುರಿತು ದೂರುಗಳನ್ನು ನೀಡಿ ಸಾಕಾಗಿದೆ. ಕಸದ ದೂರುಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಬೇಸತ್ತು ದೂರು ನೀಡುವುದನ್ನು ನಿಲ್ಲಿಸಿದ್ದೇನೆ ಎಂದಿದ್ದಾರೆ.