ಜಿಬಿಎ ತಾತ್ಕಾಲಿಕ, ಮತ್ತೆ ಮಹಾನಗರ ಪಾಲಿಕೆ ತರುತ್ತೇವೆ : ಆರ್.ಅಶೋಕ್‌

| N/A | Published : Sep 16 2025, 02:00 AM IST / Updated: Sep 16 2025, 07:31 AM IST

Karnataka LoP R Ashoka

ಸಾರಾಂಶ

ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ತಂದಿರುವ ಐದು ಮಹಾನಗರ ಪಾಲಿಕೆಗಳು ತಾತ್ಕಾಲಿಕ. ನಮ್ಮ ಸರ್ಕಾರ ಬಂದ ಮೇಲೆ ಒಂದೇ ಮಹಾನಗರ ಪಾಲಿಕೆ ಮಾಡುತ್ತೇವೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.

 ಬೆಂಗಳೂರು :  ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ತಂದಿರುವ ಐದು ಮಹಾನಗರ ಪಾಲಿಕೆಗಳು ತಾತ್ಕಾಲಿಕ. ನಮ್ಮ ಸರ್ಕಾರ ಬಂದ ಮೇಲೆ ಒಂದೇ ಮಹಾನಗರ ಪಾಲಿಕೆ ಮಾಡುತ್ತೇವೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನವರು ಮಾಡುತ್ತಿರುವುದು ಓಳು.  

ಈಗಿರುವ 198 ವಾರ್ಡ್‌ಗಳಲ್ಲಿ ಶೇ.90ರಷ್ಟು ಎಂಜಿನಿಯರ್‌ಗಳೇ ಇಲ್ಲ. ಇನ್ನು 500 ವಾರ್ಡ್‌ಗಳನ್ನು ಮಾಡಲು ಹೊರಟಿದ್ದಾರೆ. ಈಗಿರುವ ಪಾಲಿಕೆಯೇ ಪಾಪರ್ ಆಗಿದೆ. ಅದರ ಸೊಂಟ ಮುರಿದು ಹೋಗಿದೆ. ಒಂದು ಸಾವಿರಕ್ಕೂ ಅಧಿಕ ನೇಮಕಾತಿ ಮಾಡಿದರೆ ಹಣ ಎಲ್ಲಿಂದ ತರುತ್ತಾರೆ? ಬಹಳ ಕಡೆ ಶಂಕುಸ್ಥಾಪನೆಯಾಗಿ, ಕಾಮಗಾರಿಗಳೇ ಸ್ಥಗಿತಗೊಂಡಿವೆ. ಇಂಥ ಸ್ಥಿತಿಯಲ್ಲಿ ಆಡಳಿತ ನಡೆಯುವುದಿಲ್ಲ ಎಂದರು.

ಬೆಂಗಳೂರಿನಲ್ಲಿ ಐದು ಸಾವಿರ ಕೋಟಿ ರು. ಬಿಡುಗಡೆಯಾಗಿದ್ದರೂ ರಸ್ತೆ ದುರಸ್ತಿ ಮಾಡಿಲ್ಲ. ಶುದ್ಧ ಕುಡಿಯುವ ನೀರಿನ ಘಟಕದ 20 ಲೀ. ನೀರಿನ ದರವನ್ನು 5 ರಿಂದ 10 ರು.ಗೆ ಏರಿಸಲಾಗಿದೆ. ತೈಲ ದರ, ಹಾಲಿನ ದರ ಏರಿಕೆ, ಹೊಸದಾಗಿ ಕಸ ಶುಲ್ಕ ಹೇರಲಾಗಿದೆ. ಇನ್ನು ಗಾಳಿಗೂ ಶುಲ್ಕ ತಂದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಬ್ರ್ಯಾಂಡ್‌ ಬೆಂಗಳೂರು ಸಾಕಾರವಾಗಲಿದೆ ಎಂದು ವ್ಯಂಗ್ಯವಾಡಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಶೋಕ್‌, ಆನೇಕಲ್ ನಲ್ಲಿ ಫಲವತ್ತಾದ 2300 ಎಕರೆ ಜಮೀನು ಭೂ ಸ್ವಾಧೀನ ಮಾಡಿದ್ದಾರೆ.ಬಿಡದಿಯಲ್ಲೂ ಬೆಟ್ಟ ಗುಡ್ಡಗಳನ್ನು ಬಿಟ್ಟಿಲ್ಲ. ಕೆಂಗೇರಿಯಲ್ಲೇ ಭೂ ಸ್ವಾಧೀನಕ್ಕೆ ನೋಟಿಸ್ ಬಂದಿದೆ. ಬೆಂಗಳೂರಿನ ಸುತ್ತಮುತ್ತ 50 ಸಾವಿರ ಎಕರೆ ಜಮೀನನ್ನು ಸ್ವಾಧೀನ ಮಾಡುತ್ತಿದ್ದಾರೆ. ಬಿಡದಿಯಲ್ಲಿ ಹೋರಾಟ ಮಾಡಲು ನಮ್ಮ ಪಕ್ಷದ ಡಾ.ಸಿ.ಎನ್‌.ಅಶ್ವತ್ಥನಾರಾಯಣ್ ಹೋಗುತ್ತಿದ್ದಾರೆ. ನಾನು ಕೂಡ ಹೋಗುವ ಬಗ್ಗೆ ಯೋಚಿಸುತ್ತೇನೆ ಎಂದು ತಿಳಿಸಿದರು.

Read more Articles on