2025ರ ವರ್ಷಾಂತ್ಯಕ್ಕೆ ಗ್ರೇಟರ್‌ ಬೆಂಗ್ಳೂರು ಚುನಾವಣೆ : ರಾಮಲಿಂಗಾ ರೆಡ್ಡಿ

| N/A | Published : May 16 2025, 01:53 AM IST / Updated: May 16 2025, 04:15 AM IST

Ramalinga reddy
2025ರ ವರ್ಷಾಂತ್ಯಕ್ಕೆ ಗ್ರೇಟರ್‌ ಬೆಂಗ್ಳೂರು ಚುನಾವಣೆ : ರಾಮಲಿಂಗಾ ರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ಅಭಿವೃದ್ಧಿ ದೃಷ್ಟಿಯಿಂದಾಗಿ ಗ್ರೇಟರ್‌ ಬೆಂಗಳೂರು ಆಡಳಿತ ಆರಂಭವಾಗಿದ್ದು, ಈ ವರ್ಷದ ಅಂತ್ಯದಲ್ಲಿ ಗ್ರೇಟರ್‌ ಬೆಂಗಳೂರಿಗೆ ಚುನಾವಣೆ ನಡೆಸಲಾಗುವುದು ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.

 ಬೆಂಗಳೂರು : ಬೆಂಗಳೂರು ಅಭಿವೃದ್ಧಿ ದೃಷ್ಟಿಯಿಂದಾಗಿ ಗ್ರೇಟರ್‌ ಬೆಂಗಳೂರು ಆಡಳಿತ ಆರಂಭವಾಗಿದ್ದು, ಈ ವರ್ಷದ ಅಂತ್ಯದಲ್ಲಿ ಗ್ರೇಟರ್‌ ಬೆಂಗಳೂರಿಗೆ ಚುನಾವಣೆ ನಡೆಸಲಾಗುವುದು ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು 1983ರಲ್ಲಿ ಪಾಲಿಕೆ ಸದಸ್ಯನಾಗಿದ್ದಾಗ ಬೆಂಗಳೂರಿನಲ್ಲಿ 20 ಲಕ್ಷ ಜನಸಂಖ್ಯೆಯಿತ್ತು. ಆನಂತರ ಬಿಬಿಎಂಪಿ ರಚಿಸಲಾಯಿತು. ಈಗ 1.40 ಕೋಟಿ ಜನಸಂಖ್ಯೆ ನಗರದಲ್ಲಿದೆ ಹಾಗೂ ಬಿಬಿಎಂಪಿ ವ್ಯಾಪ್ತಿ ಮೀರಿ ನಗರ ಬೆಳೆಯುತ್ತಿದೆ. ಹೀಗಾಗಿ ಆಡಳಿತ ಸುಗಮಗೊಳಿಸುವುದು ಹಾಗೂ ಅಭಿವೃದ್ಧಿ ಸಮರ್ಪಕವಾಗಿ ಮಾಡಲು ಗ್ರೇಟರ್‌ ಬೆಂಗಳೂರು ರಚಿಸಲಾಗಿದ್ದು, ಈ ವರ್ಷದ ಅಂತ್ಯದೊಳಗೆ ಪಾಲಿಕೆ ರಚಿಸಿ ಚುನಾವಣೆ ಮಾಡುತ್ತೇವೆ ಎಂದರು.

2015ರಲ್ಲಿ ನಮ್ಮ ಸರ್ಕಾರವಿದ್ದಾಗ ಸರಿಯಾದ ಸಮಯದಲ್ಲಿ ಚುನಾವಣೆ ಮಾಡಿದೆವು. ಅದಾದ ನಂತರ ಬಿಜೆಪಿ ಅಧಿಕಾರದಲ್ಲಿದ್ದಾಗ ಚುನಾವಣೆ ಮುಂದೂಡಲಾಯಿತು. ಚುನಾವಣೆ ಮುಂದೂಡುವ ಪರಿಪಾಠ ಬಿಜೆಪಿಯವರದ್ದು. ನಾವು ಈ ವರ್ಷದ ಅಂತ್ಯದೊಳಗೆ ಚುನಾವಣೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಗ್ರೇಟರ್‌ ಬೆಂಗಳೂರಿನ ಅಡಿಯಲ್ಲಿ 3 ಪಾಲಿಕೆಗಳನ್ನು ರಚಿಸುವಂತೆ ಸಲಹೆ ನೀಡಿದ್ದೇವೆ. 3 ಪಾಲಿಕೆಗಳನ್ನು ಮಾಡಿದರೆ ನಗರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಬಿಜೆಪಿ ನಾಯಕರು ಇದನ್ನು ವಿರೋಧಿಸುತ್ತಿದ್ದಾರೆ. ಆದರೆ, ಅವರಿಗೆ ಸಾಮಾನ್ಯ ಜ್ಞಾನ ಕಡಿಮೆ. ಕರ್ನಾಟಕದಲ್ಲಿ ಮೊದಲು ಹಳೇ ಮೈಸೂರು ಇದ್ದಾಗ 9 ಜಿಲ್ಲೆಗಳಿದ್ದವು, ಈಗ 31 ಜಿಲ್ಲೆಗಳಾಗಿಲ್ಲವೇ? ಬಿಜೆಪಿ ಅವರಿಗೆ ಆಡಳಿತ ಮಾಡುವುದಕ್ಕೆ ಬರಲಿಲ್ಲ. ಬಿಬಿಎಂಪಿ ರಚಿಸಿದಾಗ 110 ಹಳ್ಳಿಗಳನ್ನು ಸೇರ್ಪಡೆ ಮಾಡಲಾಯಿತು. ಆದರೆ, ಅಲ್ಲಿಗೆ ಕುಡಿಯುವ ನೀರು ಪೂರೈಕೆ ಮಾಡಲಿಲ್ಲ ಹಾಗೂ ಒಳಚರಂಡಿ ವ್ಯವಸ್ಥೆ ರೂಪಿಸಲಿಲ್ಲ. ಅವರು ಕೆಲಸ ಮಾಡುವುದಿಲ್ಲ, ನಾವು ಮಾಡುತ್ತೇವೆಂದರೆ ಟೀಕಿಸುತ್ತಾರೆ ಎಂದು ಹೇಳಿದರು.

ಹಿರಿಯರಿಗೆ ಸಂಪುಟದಲ್ಲಿ ಅವಕಾಶ ಕೊಡಬೇಕುಸಚಿವ ಸಂಪುಟ ಪುನಾರಚನೆ ಕುರಿತ ಪ್ರಶ್ನೆಗೆ ಉತ್ತರಿಸಿದ ರಾಮಲಿಂಗಾರೆಡ್ಡಿ, ಪಕ್ಷದಲ್ಲಿ ಹಲವರು ಹಿರಿಯರಿದ್ದಾರೆ. ಅವರಿಗೂ ಅವಕಾಶ ನೀಡಬೇಕಾಗುತ್ತದೆ. ಐದಾರು ಬಾರಿ ಗೆದ್ದವರು ಪಕ್ಷದಲ್ಲಿದ್ದು, ಅವರಿಗೆ ಅವಕಾಶ ಕೊಡಬೇಕು ಎನ್ನುವುದು ಸಮರ್ಪಕವೇ. ಇನ್ನು, ಸಚಿವ ಸಂಪುಟ ಪುನಾರಚನೆ ಕುರಿತಂತೆ ಹೈಕಮಾಂಡ್‌ ನಿರ್ಧಾರವೇ ಅಂತಿಮ. ತ್ಯಾಗ ಮಾಡುವ ವಿಚಾರದಲ್ಲಿ ಹೈಕಮಾಂಡ್‌ ನಾಯಕರು ಹೇಗೆ ಹೇಳುತ್ತಾರೋ ಹಾಗೆ ಕೇಳಬೇಕಾಗುತ್ತದೆ ಎಂದರು.