‘ಮೇ ತಿಂಗಳ ಉರಿಬಿಸಿಲಿನಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಬಿಸಿಲಿನ ಕಾವಿಗೆ ಸುಡುತ್ತಿದ್ದ ಕಲ್ಲುಗಳ ಮೇಲೆ ಬರಿಗಾಲಿನಲ್ಲಿ ನೃತ್ಯ ಮಾಡದಂತೆ ನನ್ನ ಅಮ್ಮ ಎಚ್ಚರಿಸಿದ್ದರು’ ಎಂದು ನೆನಪುಗಳನ್ನು ಹೇಮಾಮಾಲಿನಿ ಮೆಲುಕು ಹಾಕಿದ್ದಾರೆ.
ಮುಂಬೈ: ಕರ್ನಾಟಕದ ರಾಮನಗರ ಜಿಲ್ಲೆಯ ರಾಮದೇವರ ಬೆಟ್ಟದ ಮೇಲೆ ಬಹುತೇಕ ನಡೆದ ‘ಶೋಲೆ’ ಸಿನಿಮಾದ ಚಿತ್ರೀಕರಣದ ಅನುಭವಗಳನ್ನು ನಟಿ ಹೇಮಾಮಾಲಿನಿ ಹಂಚಿಕೊಂಡಿದ್ದು, ‘ಮೇ ತಿಂಗಳ ಉರಿಬಿಸಿಲಿನಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಬಿಸಿಲಿನ ಕಾವಿಗೆ ಸುಡುತ್ತಿದ್ದ ಕಲ್ಲುಗಳ ಮೇಲೆ ಬರಿಗಾಲಿನಲ್ಲಿ ನೃತ್ಯ ಮಾಡದಂತೆ ನನ್ನ ಅಮ್ಮ ಎಚ್ಚರಿಸಿದ್ದರು’ ಎಂದು ನೆನಪುಗಳನ್ನು ಮೆಲುಕು ಹಾಕಿದ್ದಾರೆ.
1975ರಲ್ಲಿ ಬಿಡುಗಡೆಯಾದ ಜನಪ್ರಿಯ ಚಿತ್ರ ಶೋಲೆ
1975ರಲ್ಲಿ ಬಿಡುಗಡೆಯಾದ ಜನಪ್ರಿಯ ಚಿತ್ರ ಶೋಲೆಯ ಹೆಚ್ಚಿನ ಚಿತ್ರೀಕರಣ ರಾಮದೇವರ ಬೆಟ್ಟದ ಮೇಲೆಯೇ ನಡೆದಿತ್ತು. ಅದು ಮೇ ಸಮಯವಾದ್ದರಿಂದ ಬಿಸಿಲಿನ ಕಾವು ತೀವ್ರವಾಗಿದ್ದು, ನಟನೆ ದೊಡ್ಡ ಸವಾಲಾಗಿತ್ತು.
ಸುಡುವ ಬಂಡೆಗಳ ಮೇಲೆ ಅಭಿನಯಿಸಬೇಕಿತ್ತು
ಈ ಕುರಿತು ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿದ ನಟಿ ಹೇಮಾಮಾಲಿನಿ, ‘ಮರಳು, ಕೆಸರು, ಅದರಲ್ಲೂ ವಿಶೇಷವಾಗಿ ಸುಡುವ ಬಂಡೆಗಳ ಮೇಲೆ ಅಭಿನಯಿಸಬೇಕಿತ್ತು. ಕಲ್ಲುಗಳ ಮೇಲೆ ಬರಿಗಾಲಿನಲ್ಲಿ ಹೆಜ್ಜೆಯಿಡುವುದೂ ತ್ರಾಸದಾಯಕವಾಗಿತ್ತು. ಇದಕ್ಕೆ ನನ್ನ ಅಮ್ಮ ಚಿಂತಿತಳಾಗಿದ್ದಳು. ತೆಳುವಾದ ಗವುಸು ತೊಡುವಂತೆ ಸೂಚಿದ್ದಳು. ನಾನು ಹಾಗೇ ಮಾಡಿದೆ. ಆದರೆ ನೃತ್ಯ ಮಾಡುವ ವೇಳೆ ಅದು ಕಾಣುತ್ತದೆ, ತೆಗೆಯಿರಿ ಎಂದು ನಿರ್ದೇಶಕ ರಮೇಶ್ ಸಿಪ್ಪಿ ಸೂಚಿಸಿದರು. ನಾನು ವಿನಂತಿಸಿದರೂ ಕೇಳಲಿಲ್ಲ. ಕೊನೆಗೆ ಬರಿಗಾಲಿನಲ್ಲೇ ನೃತ್ಯ ಮಾಡಿದೆ. ಆ ಬಳಿಕ ತಣ್ಣೀರಿನಲ್ಲಿ ಕಾಲು ಮುಳುಗಿಸಿಕೊಳ್ಳುತ್ತಿದ್ದೆ. ನನ್ನ ವರ್ಷಗಳ ಭರತನಾಟ್ಯದ ಅನುಭವ ಅದನ್ನು ಸಹಿಸಿಕೊಳ್ಳುವಂತೆ ಮಾಡಿತು’ ಎಂದಿದ್ದಾರೆ.
