ಸಾರಾಂಶ
ವಿಧಾನಪರಿಷತ್ತಿನ ನಾಲ್ಕು ನಾಮಕರಣ ಸ್ಥಾನಗಳಿಗೆ ಅಖೈರುಗೊಂಡಿದ್ದ ಪಟ್ಟಿಗೆ ಹೈಕಮಾಂಡ್ ತಾತ್ಕಾಲಿಕ ಬ್ರೇಕ್ ನೀಡಿದೆ. ಇನ್ನಷ್ಟು ಚರ್ಚೆಯ ಅಗತ್ಯವಿರುವ ಹಿನ್ನೆಲೆಯಲ್ಲಿ ಪಟ್ಟಿಗೆ ತಡೆ ನೀಡಲಾಗಿದೆ.
ಬೆಂಗಳೂರು : ಪಕ್ಷದ ಮುಖಂಡರು, ಕಾರ್ಯಕರ್ತರ ತೀವ್ರ ಆಕ್ಷೇಪ ಹಿನ್ನೆಲೆಯಲ್ಲಿ ವಿಧಾನಪರಿಷತ್ತಿನ ನಾಲ್ಕು ನಾಮಕರಣ ಸ್ಥಾನಗಳಿಗೆ ಅಖೈರುಗೊಂಡಿದ್ದ ಪಟ್ಟಿಗೆ ಹೈಕಮಾಂಡ್ ತಾತ್ಕಾಲಿಕ ಬ್ರೇಕ್ ನೀಡಿದೆ. ಇನ್ನಷ್ಟು ಚರ್ಚೆಯ ಅಗತ್ಯವಿರುವ ಹಿನ್ನೆಲೆಯಲ್ಲಿ ಪಟ್ಟಿಗೆ ತಡೆ ನೀಡಲಾಗಿದೆ.
ರಾಜ್ಯ ಸರ್ಕಾರವು ವಿವಿಧ ಕ್ಷೇತ್ರಗಳ ಗಣ್ಯರನ್ನು ಪರಿಷತ್ತಿಗೆ ನಾಮಕರಣ ಮಾಡಬೇಕಿತ್ತು. ಅದರಂತೆ ಶಿಫಾರಸು ಮಾಡಲಾಗಿದ್ದ ಪಟ್ಟಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿದವರಿಗೆ ಅವಕಾಶ ಸಿಕ್ಕಿಲ್ಲ ಎಂದು ಕಾರ್ಯಕರ್ತರು ಹಾಗೂ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಮನ್ನಣೆ ನೀಡಿರುವ ಕಾಂಗ್ರೆಸ್ ಹೈಕಮಾಂಡ್ ಈ ಪಟ್ಟಿ ಪರಿಷ್ಕರಿಸುವ ಅಗತ್ಯವಿದೆ ಎಂದು ರಾಜ್ಯ ನಾಯಕರಿಗೆ ಸೂಚನೆ ನೀಡಿದೆ.
ಆದರೆ, ರಾಜ್ಯ ನಾಯಕರು ಪತ್ರಿಕೋದ್ಯಮ, ಸಂಘಟನೆಯಂಥ ವಿವಿಧ ಕ್ಷೇತ್ರಗಳ ಗಣ್ಯರನ್ನು ನಾಮಕರಣ ಮಾಡಲು ಅವಕಾಶವಿರುವುದರಿಂದ ಹಾಲಿ ಪಟ್ಟಿಯನ್ನು ಹೈಕಮಾಂಡ್ ಅವಗಾಹನೆಗೆ ತರಲಾಗಿತ್ತು ಎಂದು ಮನದಟ್ಟು ಮಾಡಿಕೊಡಲು ಯತ್ನಿಸಿದರು. ಆದರೆ, ಈ ಬಗ್ಗೆ ಇನ್ನಷ್ಟು ಚರ್ಚೆ ನಡೆಯಬೇಕಿರುವುದರಿಂದ ಹಾಗೂ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರು ಬುಧವಾರದಿಂದ ವಿದೇಶ ಪ್ರವಾಸ ತೆರಳಲಿರುವ ಕಾರಣ ಸದ್ಯಕ್ಕೆ ಪಟ್ಟಿಗೆ ಬ್ರೇಕ್ ಹಾಕಲು ತೀರ್ಮಾನಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ ವೇಳೆ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ಮೂಲಗಳು ಹೇಳಿವೆ.
ಖಾಲಿ ಇರುವ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ಪಕ್ಷದ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಆರತಿ ಕೃಷ್ಣ, ರಮೇಶ್ ಬಾಬು ಮತ್ತು ಡಿ.ಜಿ.ಸಾಗರ್ ಅವರ ಹೆಸರು ಒಳಗೊಂಡಿದ್ದ ಪಟ್ಟಿಯನ್ನು ಅಂತಿಮಗೊಳಿಸಲಾಗಿತ್ತು. ಇದಕ್ಕೆ ಹೈಕಮಾಂಡ್ ಕೂಡ ಒಪ್ಪಿಗೆ ನೀಡಿತ್ತು. ಆದರೆ, ಪಟ್ಟಿ ಬಹಿರಂಗಗೊಳ್ಳುತ್ತಿದ್ದಂತೆಯೇ ಪಕ್ಷದೊಳಗೆ ತೀವ್ರ ಆಕ್ಷೇಪ ಕೇಳಿ ಬಂದ ಹಿನ್ನೆಲೆಯಲ್ಲಿ ಇದೀಗ ಅದಕ್ಕೆ ಬ್ರೇಕ್ ಬಿದ್ದಿದೆ.