ಬೆಂಗಳೂರು : ಈ ತಿಂಗಳು 18ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಆಂಧ್ರಪ್ರದೇಶದ ವೈ.ಎಸ್‌.ಶರ್ಮಿಳಾ ರೆಡ್ಡಿ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮನ್ಸೂರ್‌ ಅಲಿ ಖಾನ್‌ ಆಯ್ಕೆಯಾಗುವ ಸಾಧ್ಯತೆ ಇದೆ.

ಕಾಂಗ್ರೆಸ್‌ನಿಂದ ಮೂವರು ಅಭ್ಯರ್ಥಿಗಳು

ಕಾಂಗ್ರೆಸ್‌ನಿಂದ ಮೂವರು ಅಭ್ಯರ್ಥಿಗಳು ಆಯ್ಕೆಯಾಗುವುದು ಖಚಿತವಾಗಿದ್ದು, ಖರ್ಗೆ ಅವರ ಜೊತೆ ಹೈಕಮಾಂಡ್‌ ಅಭ್ಯರ್ಥಿಯಾಗಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ,ಎಸ್‌, ರಾಜಶೇಖರ್‌ ರೆಡ್ಡಿ ಅವರ ಪುತ್ರಿ ವೈ.ಎಸ್‌.ಶರ್ಮಿಳಾ ರೆಡ್ಡಿ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಮನ್ಸೂರ್‌ ಅಲಿಖಾನ್‌ ಅವರಿಗೆ ಟಿಕೆಟ್‌ ನೀಡುವ ಸಂಭವವಿದೆ.

ಮನ್ಸೂರ್‌ ಅಲಿಖಾನ್‌ ಅವರು ರಾಜ್ಯದ ಹಿರಿಯ ರಾಜಕಾರಣಿ

ಮನ್ಸೂರ್‌ ಅಲಿಖಾನ್‌ ಅವರು ರಾಜ್ಯದ ಹಿರಿಯ ರಾಜಕಾರಣಿ, ರಾಜ್ಯಸಭೆ ಉಪಾಧ್ಯಕ್ಷರಾಗಿದ್ದ ದಿ. ಕೆ.ರೆಹಮಾನ್‌ ಖಾನ್‌ ಅವರ ಪುತ್ರ. ಅವರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದಕ್ಕೂ ಮುನ್ನ ಎಐಸಿಸಿ ಕಾರ್ಯದರ್ಶಿಯಾಗಿ ಸಹ ಕೆಲಸ ಮಾಡಿದ್ದರು.