ಸ್ಟಿಂಗ್ ಆಪರೇಷನ್ಗೂ ಡಿ.ಕೆ.ಶಿವಕುಮಾರ್ಗೂ ಯಾವುದೇ ಸಂಬಂಧವಿಲ್ಲ. ಸ್ಟಿಂಗ್ ಆಪರೇಷನ್ ಜನತಾದಳದವರನ್ನು ಬಿಟ್ಟು ಇನ್ಯಾರು ಮಾಡಿರುವುದಕ್ಕೂ ಸಾಧ್ಯವಿಲ್ಲ. ಅವರ ಸೋಷಿಯಲ್ ಮೀಡಿಯಾ ಪೇಜಿಂದಲೇ ಸಿದ್ದರಾಮಯ್ಯ ಅವರ ಮೇಲೆ ಸ್ಟಿಂಗ್ ನಡೆಸಲಾಗಿದೆ ಎಂಬ ವಿಡಿಯೋ ಹರಿದಾಡುತ್ತಿದೆ. ಹೀಗಾಗಿ ವಿಡಿಯೋ ಹರಿಯಬಿಟ್ಟ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸ್ಟಿಂಗ್ ಆಪರೇಷನ್ ಹಿಂದೆ ಜೆಡಿಎಸ್ ಕೈವಾಡವಿದೆ. ಜೆಡಿಎಸ್ ಕಾರ್ಯಕರ್ತರ ಮೂಲಕ ಸೀಡಿ ಬಿಡುಗಡೆ ಮಾಡಿಸಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಈಗ ಅದನ್ನು ಡಿ.ಕೆ.ಶಿವಕುಮಾರ್ ತಲೆಗೆ ಕಟ್ಟಲು ಹೊರಟಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದರು.ಪಟ್ಟಣದಲ್ಲಿ ಶ್ರೀರಂಗಪಟ್ಟಣದ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ಗೂ ಡಿ.ಕೆ.ಶಿವಕುಮಾರ್ಗೂ ಯಾವುದೇ ಸಂಬಂಧವಿಲ್ಲ. ಸ್ಟಿಂಗ್ ಆಪರೇಷನ್ ಜನತಾದಳದವರನ್ನು ಬಿಟ್ಟು ಇನ್ಯಾರು ಮಾಡಿರುವುದಕ್ಕೂ ಸಾಧ್ಯವಿಲ್ಲ. ಅವರ ಸೋಷಿಯಲ್ ಮೀಡಿಯಾ ಪೇಜಿಂದಲೇ ಸಿದ್ದರಾಮಯ್ಯ ಅವರ ಮೇಲೆ ಸ್ಟಿಂಗ್ ನಡೆಸಲಾಗಿದೆ ಎಂಬ ವಿಡಿಯೋ ಹರಿದಾಡುತ್ತಿದೆ. ಹೀಗಾಗಿ ವಿಡಿಯೋ ಹರಿಯಬಿಟ್ಟ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ, ಇದರಲ್ಲಿ ತಪ್ಪೇನಿದೆ ಎಂದು ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡರು.
ಯಾವುದೋ ಹಳೆಯ ವಿಡಿಯೋ ಎನ್ನಲಾಗುತ್ತಿರುವ ದೃಶ್ಯವನ್ನು ಈಗ ಬಿಡುಗಡೆ ಮಾಡಲು ಕಾರಣವೇನು?. ಯಾವುದೇ ಕಾರಣಕ್ಕೂ ಕಾನೂನು ಮೀರಿ, ಮುಜುಗರ ಉಂಟುಮಾಡುವ ತಪ್ಪನ್ನು ಸಿದ್ದರಾಮಯ್ಯ ಅವರು ಮಾಡುವುದಿಲ್ಲ. ಇಡೀ ಕಾಂಗ್ರೆಸ್ ಇಂತಹ ಕೆಲಸಗಳನ್ನು ಮಾಡುವುದಿಲ್ಲ. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಾಗಲೀ ಅಥವಾ ಕಾಂಗ್ರೆಸ್ ಪಕ್ಷವಾಗಲೀ ಹಸ್ತಕ್ಷೇಪ ಮಾಡುವುದಿಲ್ಲ. ಈ ಸ್ಟಿಂಗ್ ಬಗ್ಗೆ ಪ್ರಧಾನಿ ಮೋದಿ ಅವರೊಟ್ಟಿಗೆ ಮಾತನಾಡಿ, ಕುಮಾರಸ್ವಾಮಿ ಅವರೇ ಸಿಬಿಐ ಸೇರಿದಂತೆ ಯಾವುದೇ ತನಿಖಾ ಸಂಸ್ಥೆಗಳಿಗೆ ಒಪ್ಪಿಸಲಿ. ನಮ್ಮ ಅಭ್ಯಂತರವೇನಿಲ್ಲ ಎಂದು ಸವಾಲೆಸೆದರು.ಸಿದ್ದರಾಮಯ್ಯನವರನ್ನು ಒಲಿಸಿಕೊಳ್ಳುವ ಸಲುವಾಗಿ ಕುಮಾರಸ್ವಾಮಿ ವ್ಯವಸ್ಥಿತವಾಗಿ ಸಂಚು ರೂಪಿಸಿ, ಜೆಡಿಎಸ್ ಕಾರ್ಯಕರ್ತರ ಮೂಲಕ ಸೀಡಿ ಬಿಡುಗಡೆ ಮಾಡಿಸಿದ್ದಾರೆ. ಕುಮಾರಸ್ವಾಮಿ ಅವರ ಹಸ್ತಕ್ಷೇಪವಿಲ್ಲದೆ ಜೆಡಿಎಸ್ ಕಾರ್ಯಕರ್ತರು ಬಿಡುಗಡೆ ಮಾಡಲು ಸಾಧ್ಯವೇ. ಸತ್ಯವನ್ನು ಮರೆಮಾಚಲು ಈಗ ಜನರ ಮುಂದೆ ಡಿ.ಕೆ.ಶಿವಕುಮಾರ್ ಷಡ್ಯಂತ್ರವೆಂದು ಬಿಂಬಿಸಲು ಹೊರಟಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕುಮಾರಸ್ವಾಮಿ ಅವರಿಗೆ ಕಾಮನ್ ಸೆನ್ಸ್ ಇಲ್ಲ, ಅವರು ಏನು ಮಾತನಾಡುತ್ತಾರೆ ಅಂತ ಅವರಿಗೇ ಗೊತ್ತಿಲ್ಲ. ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಅವರ ಕೆಲಸ ಮಾಡಬೇಕು. ಅದನ್ನು ಬಿಟ್ಟು ಹೀಗೆ ಮಾತನಾಡಲು ಅವರಿಗೆ ತಲೆ ಕೆಟ್ಟಿರಬೇಕು ಎಂದು ಟೀಕಿಸಿದರು.ಕುಮಾರಸ್ವಾಮಿಗೆ ಸಾಮಾನ್ಯ ತಿಳಿವಳಿಕೆ ಇದಿದ್ದರೆ ಹಾಸನದಲ್ಲಿ ಸೀಡಿ ವಿತರಣೆ ಮಾಡಿದವರ ಮೇಲೆ ಕ್ರಮ ಆಗಿಲ್ಲ. ಸೀಡಿ ಬಿಡುಗಡೆ ಮಾಡಿದ್ದು ಜೆಡಿಎಸ್ ಸೋಷಿಯಲ್ ಮೀಡಿಯಾ. ಇದೀಗ ಅವರ ಬಗ್ಗೆಯೇ ಅನುಕಂಪ ತೋರಿಸುತ್ತಿದ್ದಾರೆ. ಅದೇ ಅನುಕಂಪ ಸೀಡಿಯಲ್ಲಿರುವ ಹೆಣ್ಣು ಮಕ್ಕಳ ಮೇಲೆ ಏಕಿಲ್ಲ. ನಮ್ಮ ಮನೆಯ ಮಗ ಇಂತಹ ಕೃತ್ಯ ಮಾಡಿದ್ದು ತಪ್ಪು ಎಂದು ಅವರ ಕುಟುಂಬ ನಾಡಿನ ಜನತೆಗೆ ಕ್ಷಮೆ ಕೇಳಿದ್ದಾರಾ ಎಂದು ಪ್ರಶ್ನಿಸಿದರು.
ಕೆಆರ್ಎಸ್ ಅಣೆಕಟ್ಟೆ ಬಳಿ ಕಾವೇರಿ ಆರತಿ ವಿಚಾರವಾಗಿ ಪ್ರತಿಕ್ರಿಯಿಸಿ, ಕಾವೇರಿ ಆರತಿಯನ್ನು ನಾವು ಆಡಂಬರದಿಂದ ಮಾಡುತ್ತಿಲ್ಲ. ಕಾವೇರಿ ತಾಯಿಗೆ ಪೂಜೆ ಮಾಡುತ್ತಿದ್ದೇವೆ ಅಷ್ಟೇ. ಅದನ್ನೇ ಆಡಂಬರ ಅಂದುಕೊಂಡರೆ ಏನು ಮಾಡೋಣ. ಕಾವೇರಿಯಿಂದ ಜನರು, ರೈತರಿಗೆ ನೆಮ್ಮದಿ, ಶಾಂತಿ, ಉತ್ತಮ ಮಳೆ-ಬೆಳೆಗಾಗಿ ಪೂಜೆ ಮಾಡುತ್ತಿದ್ದೇವೆ. ಕಾವೇರಿ ಆರತಿ ಡಿ.ಕೆ ಶಿವಕುಮಾರ್ ಅವರ ಸಂಕಲ್ಪ, ನಾವು ಅದನ್ನು ಮುಂದುವರಿಸುತ್ತಿದ್ದೇವೆ ಎಂದರು.