ಸಾಹಿತ್ಯ ಸಮ್ಮೇಳನಗಳು ಕನ್ನಡದ ಅಭಿವೃದ್ಧಿಗೆ ಪ್ರೇರಕವಾಗಲಿ : ಮೊಯ್ಲಿ

| N/A | Published : May 06 2025, 01:48 AM IST / Updated: May 06 2025, 04:37 AM IST

ಸಾರಾಂಶ

ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳು ಹೊಸ ರೂಪ ಪಡೆದುಕೊಂಡು ಕನ್ನಡ ಅಭಿವೃದ್ಧಿಗೆ ಪ್ರೇರಕ ಶಕ್ತಿಯಾಗಿ ನಿಲ್ಲಬೇಕಾದ ಅನಿವಾರ್ಯತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟರು.

 ಬೆಂಗಳೂರು : ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳು ಹೊಸ ರೂಪ ಪಡೆದುಕೊಂಡು ಕನ್ನಡ ಅಭಿವೃದ್ಧಿಗೆ ಪ್ರೇರಕ ಶಕ್ತಿಯಾಗಿ ನಿಲ್ಲಬೇಕಾದ ಅನಿವಾರ್ಯತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟರು.

ಸೋಮವಾರ ಕನ್ನಡ ಸಾಹಿತ್ಯ ಪರಿಷತ್ತಿನ 111ನೇ ಸಂಸ್ಥಾಪನಾ ದಿನದ ಅಂಗವಾಗಿ ಪರಿಷತ್ತಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಸಾಪ ಬರೀ ಸಾಹಿತ್ಯ ಸಮ್ಮೇಳನಗಳಿಗಷ್ಟೇ ಸಿಮೀತವಾಗಬಾರದು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಂಸ್ಕೃತಿಕ ಸಮ್ಮೇಳನವಾಗಿ ರೂಪುಗೊಳ್ಳಬೇಕು. ವೈಜ್ಞಾನಿಕ ಸಮ್ಮೇಳನವನ್ನು ನಡೆಸಲು ಸಹ ಕಸಾಪ ಕಾರ್ಯಪ್ರವೃತ್ತವಾಗುವುದು ಉತ್ತಮ ಎಂದರು.

ರಾಜ್ಯ ಸರ್ಕಾರ ಕೂಡ ಪ್ರತಿ ಜಿಲ್ಲೆಯಲ್ಲಿ ಕನ್ನಡ ಭಾಷೆಯನ್ನು ಒಳಗೊಂಡು ಅಲ್ಲಿನ ಸ್ಥಳೀಯ ವೈವಿಧ್ಯತೆಯನ್ನು ಪ್ರಚುರಪಡಿಸುವಂತಹ ಕೆಲಸವನ್ನು ಚಾಚು ತಪ್ಪದೇ ಮಾಡಬೇಕು.ಪ್ರಾಧಿಕಾರಗಳು, ಅಕಾಡೆಮಿಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಅನಿವಾರ್ಯತೆ ಇದ್ದು, ಕನ್ನಡ ಸಾಹಿತ್ಯ ಪರಿಷತ್ತು ಅವುಗಳಿಗೆ ಮಾರ್ಗದರ್ಶನ ನೀಡಬೇಕಾದ ಅವಶ್ಯಕತೆ ಇದೆ. ಇಂದು ಸೃಜನಶೀಲತೆ ವಿಪುಲವಾಗಿದ್ದರೂ ಕನ್ನಡದಲ್ಲಿ ಸಂಶೋಧನೆ ಹಿಂದೆ ಬಿದ್ದಿದೆ. ತಾಂತ್ರಿಕ ಪರೀಕ್ಷೆಗಳೂ ಕನ್ನಡದಲ್ಲಿ ನಡೆಯುವ ಅಗತ್ಯವಿದೆ ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಗಮನ ಹರಿಸ ಬೇಕು ಎಂದು ಹೇಳಿದರು.

ಹಿರಿಯ ಪತ್ರಕರ್ತ ರವಿಶಂಕರ್ ಕೆ.ಭಟ್ ಮಾತನಾಡಿ, ಕನ್ನಡ ಮನೆ-ಶಾಲೆಗಳ ಬುನಾದಿಯಲ್ಲಿ ಬೆಳೆಯ ಬೇಕು, ಕನ್ನಡ ಮೊದಲ ಆದ್ಯತೆಯಾಗುವ ಕಡೆಗೆ ಪ್ರಯತ್ನಗಳು ಸಾಗಬೇಕು. ನಾವು ಗೋಪುರದ ಕಡೆ ಗಮನ ಹರಿಸಿ ಬುನಾದಿಯನ್ನು ನಿರ್ಲಿಕ್ಷಿಸಬಾರದು ಎಂದು ಹೇಳಿದರು.

ಕಲಾವಿದ ಶ್ರೀಧರ್ ಮಾತನಾಡಿ, ಈ ಜಾಗಕ್ಕೆ ಬರುವುದೇ ಪುಣ್ಯದ ಕೆಲಸ, ಮೇರು ಸಾಧಕರು ಇಲ್ಲಿ ಓಡಾಗಿದ್ದಾರೆ. ಅವರ ನಡೆ-ನುಡಿಗಳ ನಡುವೆ ಅಂತರವಿರಲಿಲ್ಲ. ಅವರು ತೋರಿದ ಹಾದಿಯಲ್ಲಿ ಸಾಗುತ್ತಿರುವ ಪರಿಷತ್ತು ನಮ್ಮೆಲ್ಲರ ಪಾಲಿಗೆ ದೇಗುಲವಿದ್ದಂತೆ ಎಂದರು.

ಕಸಾಪ ಅಧ್ಯಕ್ಷ ಡಾ.ಮಹೇಶ್‌ಜೋಶಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರೆಲ್ಲರ ಮಾತೃ ಸಂಸ್ಥೆ. ಮಹಾತ್ಮ ಗಾಂಧೀಜಿ ಅವರಿಂದಲೇ ರಾಜರ್ಷಿ ಎನ್ನಿಸಿಕೊಂಡ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಪೋಷಣೆ, ಸರ್‌ಎಂವಿ, ಮಿರ್ಜಾ ಇಸ್ಮಾಯಿಲ್‌ ಅವರ ಬೆಂಬಲದಲ್ಲಿ ರೂಪುಗೊಂಡ ಸಾಹಿತ್ಯ ಪರಿಷತ್ತು ಕನ್ನಡಿಗರೆಲ್ಲರ ಭವಿಷ್ಯದ ದಿಕ್ಸೂಚಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಪ್ರಶಸ್ತಿ ಪ್ರದಾನ:

ಕನ್ನಡ ಚಳವಳಿ ವೀರಸೇನಾನಿ ಮ.ರಾಮಮೂರ್ತಿ ಪ್ರಶಸ್ತಿ- ಸ.ರ.ಸುದರ್ಶನ(ಮೈಸೂರು), ಪದ್ಮಭೂಷಣ ಡಾ.ಬಿ.ಸರೋಜಾ ದೇವಿ ದತ್ತಿ ಪುರಸ್ಕಾರ- ಎಚ್‌.ಶಕುಂತಲಾ ಭಟ್‌ (ದಕ್ಷಿಣ ಕನ್ನಡ), ವಿಜಯ ಮೋಹನ್‌ (ತುಮಕೂರು) ಹಾಗೂ ಸತ್ಯವತಿ ವಿಜಯರಾಘವ ಚಾರಿಟಬಲ್ ಟ್ರಸ್ಟ್ ಧರ್ಮದರ್ಶಿ ದತ್ತಿ ಪುರಸ್ಕಾರ- ಡಿ.ಬಿ.ರಜಿಯಾ (ಶಿವಮೊಗ್ಗ) ಮತ್ತು ಡಾ.ಎಚ್.ವಿಶ್ವನಾಥ್ ಮತ್ತು ಎಂ.ಎಸ್.ದತ್ತಿ - ಬಸವಾನಂದ ಸ್ವಾಮೀಜಿ (ಧಾರವಾಡ) ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.