ಸಾರಾಂಶ
ಚಿಕ್ಕಬಳ್ಳಾಪುರ : ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ಶ್ರೀ ಸಾಮಾನ್ಯರ ಮನೆಗೆ ನೇರವಾಗಿ ಕುಡಿಯುವ ನೀರು ನೀಡದಿರುವುದು ದೇಶದ ಪ್ರಜಾಪ್ರಭುತ್ವದ ಸೋಲು. ಇದನ್ನು ಅರಿತ ಪ್ರಧಾನಿ ನರೇಂದ್ರ ಮೋದಿ ಜಲ ಜೀವನ್ ಮಿಷನ್ ತಂದು ಕೋಟ್ಯತರ ಜನರ ಮನೆಗೆ ನಲ್ಲಿ ಮೂಲಕ ನೀರು ನೀಡುತ್ತಿದ್ದಾರೆ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.ನಗರ ಹೊರ ವಲಯದ ಜಿಲ್ಲಾಡಳಿತ ಭವನದ ಸಂಸದರ ಕಚೇರಿಯಲ್ಲಿ ಕ್ಷೇತ್ರದ ಜನತೆಯಿಂದ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜಲ ಜೀವನ್ ಮಿಷನ್ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇ50 -ಶೇ50 ಪಾಲನ್ನು ನೀಡಿ ಪೂರ್ಣಗೊಳಿಸಬೇಕಿದೆ ಎಂದರು.
ಜಲ ಜೀವನ್‌ಗೆ ರಾಜ್ಯ ಹಣ ನೀಡಲಿ
ನಮ್ಮ ಸರ್ಕಾರವಿದ್ದಾಗ ಯಡಿಯೂರಪ್ಪ ಮತ್ತು ಬಸವರಾಜ ಬೋಮ್ಮಾಯಿ ಯೋಜನೆ ಅನುಷ್ಠಾನಕ್ಕೆ ಹೆಚ್ಚು ಗಮನ ಹರಿಸಿ ಹಣ ಸಹಾ ಬಿಡುಗಡೆ ಮಾಡಿದ್ದರು. ದೇಶದ ಪ್ರತಿಯೊಬ್ಬರಿಗೂ ನಳದ ಮೂಲಕ ಅವರ ಮನೆಗಳಿಗೆ ನೀಡುವುದು ನಮ್ಮ ಪ್ರಥಮ ಆದ್ಯ ಕರ್ತವ್ಯವಾಗಬೇಕು. ಇದು ಆಡಂಬರದ ವಿಷಯವಂತೂ ಅಲ್ಲ , ಆದರೆ ಕಾಂಗ್ರೆಸ್ ಸರ್ಕಾರ ಬಂದಮೇಲೆ ಇದಕ್ಕೆ ಎಷ್ಟು ಕೊಟ್ಟಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಕೂಡಲೇ ರಾಜ್ಯ ಸರ್ಕಾರ ಜಲ ಜೀವನ್ ಮಿಷನ್ ಯೋಜನೆಗೆ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು. ಜಲ ಜೀವನ್ ಮಿಷನ್ ಮತ್ತು ಅಟಲ್ ಭೂ ಜಲ್ ಯೋಜನೆಯ ಅನುಷ್ಠಾನಕ್ಕೆ ಶೇ 100 ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಟಲ್ ಭೂ ಜಲ್ ಯೋಜನೆಯು ಭೂಮಿಯಲ್ಲಿ ಈಗಾಗಲೆ ಕುಸಿದಿರುವ ನೀರಿನ ಮಟ್ಟವನ್ನು ಮರು ಪೂರಣಮಾಡುವುದಾಗಿದೆ. ವಿಶೇಷವಾಗಿ ಬಯಲು ಸೀಮೆಯ ಜಿಲ್ಲೆಗಳಾದ ಚಿಕ್ಕಬಳ್ಳಾಪುರ,ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಗಳಿಗೆ ಈ ಯೋಜನೆಯಿಂದ ಅನುಕೂಲವಾಗುತ್ತದೆ ಎಂದರು.
ಜಲ ಮರುಪೂರಣಕ್ಕೆ ಒತ್ತು
ಈ ಬಾಗದಲ್ಲಿ ಭೂಮಿಯ ಅಂತರ್ ಜಲ ಮಟ್ಟ ಕುಸಿದು ಹೋಗಿದೆ. ಅಂತರ್ ಜಲ ಮಟ್ಟ ಮರು ಪೂರ್ಣವಾದರೆ ಈ ಬಾಗದ ಕುಡಿಯುವ ನೀರು ಮತ್ತು ಕೃಷಿ ನೀರಾವರಿಗೆ ಅನುಕೂಲವಾಗಿ ಅನ್ನದಾತರು ಉತ್ತಮ ಬೆಳೆ ಬೆಳೆಯ ಬಹುದಾಗಿದೆ ಮತ್ತು ಇದರಿಂದ ಅವರ ಜೀವನ ಮಟ್ಟ ಸುಧಾರಣೆಯಾಗುತ್ತದೆ ಎಂದರು.
ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ರಾಜ್ಯಕ್ಕೆ ಸಾಕಷ್ಟು ಅನುದಾನಗಳು ಸಿಗುತ್ತದೆ ಎಂಬ ನಿರಿಕ್ಷ ನಮಗೆ ಇದೆ. ಅದರಲ್ಲೂ ಪ್ರಮುಖವಾಗಿ ಹೆದ್ದಾರಿ ರಸ್ತೆಗಳು, ರೈಲ್ವೆ ಯೋಜನೆಗಳು, ಮತ್ತು ನೀರಾವರಿ ಯೋಜನೆಗಳು ಸೇರಿದಂತೆ ಕೇಂದ್ರದ ಯೋಜನೆಗಳು ಕರ್ನಾಟಕಕ್ಕೆ ಸಿಬಹುದು. ಅದೇ ರೀತಿ ರೈಲ್ವೆ ಸಚಿವ ವಿ.ಸೋಮಣ್ಣರಲ್ಲಿ ನಾನು ಮನವಿ ಮಾಡಿರುವ ಬೆಂಗಳೂರು ಉಪನಗರ ರೈಲು ಯೋಜನೆಯಲ್ಲಿ ಎಫ್‌ಎಲ್‌ಎಸ್ ನಿರ್ಣಾಯಕವಾಗಿದ್ದು, ಕಾರಿಡಾರ್ 1 ಮತ್ತು 4 ರಲ್ಲಿ ಈ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಆದ್ಯತೆ ನೀಡಬೇಕು ಎಂದು ಕೋರಿದರು.
ದೊಡ್ಡಬಳ್ಳಾಪುರ ಮತ್ತು ಚನ್ನಸಂದ್ರ ರೈಲು ನಿಲ್ದಾಣ ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು ಕಾಲಮಿತಿ ಹಾಕಿಕೊಂಡು ಶೀಘ್ರ ಪೂರ್ಣಗೊಳಿಸಬೇಕು. ಹೊಸ ರೈಲು ಮಾರ್ಗ ಯೋಜನೆಗಳಾದ ಚಿಕ್ಕಬಳ್ಳಾಪುರ-ಗೌರಿಬಿದನೂರು (44 ಕಿ.ಮೀ.), ಚಿಕ್ಕಬಳ್ಳಾಪುರ-ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ (103 ಕಿ.ಮೀ.), ಶ್ರೀನಿವಾಸಪುರ-ಮದನಪಲ್ಲಿ (75 ಕಿ.ಮೀ.) ಮಾರಿಕುಪ್ಪಂ-ಕುಪ್ಪಂ (23.7 ಕಿ.ಮೀ.) ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಬೇಕು. ಬೆಂಗಳೂರು ಉಪನಗರ ರೈಲು ಯೋಜನೆಯ ಕಾರಿಡಾರ್, ದೇವನಹಳ್ಳಿ-ಯಲಹಂಕ ಮತ್ತು ಕಾರಿಡಾರ್ , ರಾಜಾನುಕುಂಟೆ-ಯಲಹಂಕ ಮಾರ್ಗಗಳನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ಕೋರಿದ್ದೇನೆ.
ಅದೇ ರೀತಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆದ್ದಾರಿ ಯೋಜನೆಗಳನ್ನು ಜಾರಿ ಮಾಡಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಲ್ಲೂ ಮನವಿ ಪತ್ರ ಸಲ್ಲಿಸಿದ್ದು,ಚಿಕ್ಕಬಳ್ಳಾಪುರ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ 44 ಮತ್ತು ರಾಷ್ಟ್ರೀಯ ಹೆದ್ದಾರಿ 69 ರ ನಡುವೆ ಚತುಷ್ಫಥ ಹೊರವರ್ತುಲ ರಸ್ತೆ ನಿರ್ಮಿಸಲು ಕಾರ್ಯಸಾಧ್ಯತಾ ವರದಿ,ವಿಸ್ತೃತ ಯೋಜನಾ ವರದಿ ರೂಪಿಸಲು ಒಪ್ಪಿಗೆ ನೀಡಬೇಕು. ಚಿಕ್ಕಬಳ್ಳಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ-7 ರ ಎಲ್‌ಸಿ ನಂ. 39 ರಲ್ಲಿ ಚತುಷ್ಪಥ ರೈಲು ಮೇಲ್ಸೇತುವೆ ನಿರ್ಮಿಸಲು 40 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಬೇಕು. ಗೌರಿಬಿದನೂರಿನಲ್ಲಿ ರಾಜ್ಯ ಹೆದ್ದಾರಿ-9 ನಲ್ಲಿ ಚತುಷ್ಪಥ ರೈಲು ಮೇಲ್ಸೇತುವೆ ನಿರ್ಮಿಸಲು 75 ಕೋಟಿ ರೂ. ಅನುದಾನ ನೀಡಬೇಕು. ರಾಷ್ಟ್ರೀಯ ಹೆದ್ದಾರಿ-234 ರ ಅಗಲೀಕರಣದಿಂದ ಪ್ರಯಾಣದ ಅವಧಿ ಹಾಗೂ ದಟ್ಟಣೆ ಕಡಿಮೆಯಾಗಲಿದ್ದು, ಈ ಕುರಿತು ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದೇನೆ ಎಂದರು.
ಸಂಸದರ ಅಹವಾಲು ಸ್ವೀಕಾರ ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂಧನೆ ಕಾರ್ಯಕ್ರಕ್ಕೆ ಚಿಕ್ಕಬಳ್ಳಾಪುರ, ಗೌರಿಬಿದನೂರು, ಮಂಚೇನಹಳ್ಳಿ, ಬಾಗೇಪಲ್ಲಿ ಇನ್ನೂ ಹಲವಾರು ಕ್ಷೇತ್ರಗಳಿಂದ ಜನ ಸಾಗರವೇ ಹರಿದು ಬಂದಿತ್ತು. ಈ ವೇಳೆ ಮುಖಂಡರಾದ ಕೆ.ವಿ.ನಾಗರಾಜ್, ಮರಳುಕುಂಟೆ ಕೃಷ್ಣಮೂರ್ತಿ,ರಂಗಪ್ಪ, ಸೀನಪ್ಪ, ನಾಯನಹಳ್ಳಿ ಶ್ರೀನಿವಾಸ್, ಗೌರಿಬಿದನೂರು ಜೆಡಿಎಸ್ ಮುಖಂಡ ನರಸಿಂಹ ಮೂರ್ತಿ ಮತ್ತಿತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))