2047ರ ವೇಳೆಗೆ ದೇಶವನ್ನು ವಿಕಸಿತ ಭಾರತವನ್ನಾಗಿಸುವ ಕನಸನ್ನು ಸಾಕಾರಗೊಳಿಸಲು, ಪ್ರಧಾನಿ ನರೇಂದ್ರ ಮೋದಿ ‘ವಿ ವಿಲ್ ಡು ಇಟ್’(ನಾವು ಸಾಧಿಸಿ ತೋರಿಸುತ್ತೇವೆ) ಎಂಬ ಹೊಸ ಘೋಷವಾಕ್ಯದ ಮೂಲಕ ದೇಶದ ಜನರನ್ನು ಹುರಿದುಂಬಿಸಿದ್ದಾರೆ.
ನವದೆಹಲಿ: 2047ರ ವೇಳೆಗೆ ದೇಶವನ್ನು ವಿಕಸಿತ ಭಾರತವನ್ನಾಗಿಸುವ ಕನಸನ್ನು ಸಾಕಾರಗೊಳಿಸಲು, ಪ್ರಧಾನಿ ನರೇಂದ್ರ ಮೋದಿ ‘ವಿ ವಿಲ್ ಡು ಇಟ್’(ನಾವು ಸಾಧಿಸಿ ತೋರಿಸುತ್ತೇವೆ) ಎಂಬ ಹೊಸ ಘೋಷವಾಕ್ಯದ ಮೂಲಕ ದೇಶದ ಜನರನ್ನು ಹುರಿದುಂಬಿಸಿದ್ದಾರೆ. ಜತೆಗೆ, 5 ಮಹತ್ವದ ಸಂಕಲ್ಪಗಳನ್ನು ಮುಂದಿಟ್ಟಿರುವ ಅವರು, ಒಟ್ಟಾಗಿ ಕೆಲಸ ಮಾಡುವ ಮೂಲಕ ಇವುಗಳನ್ನು ಸಾಧಿಸಬೇಕು ಎಂದು ಕರೆ ನೀಡಿದ್ದಾರೆ.
ಸರ್ಕಾರದ ಮುಖ್ಯಸ್ಥರಾಗಿ 25 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ, ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ‘ವಿಕಸಿತ ಭಾರತ್ ಸಂಕಲ್ಪ ಸಭೆ’ಯಲ್ಲಿ ಮಾತನಾಡಿದ ಮೋದಿ, ‘ಇಂದು 140 ಕೋಟಿ ದೇಶವಾಸಿಗಳು ಕಾಣುತ್ತಿರುವ ವಿಕಸಿತ ಭಾರತದ ಕನಸು ಖಂಡಿತವಾಗಿಯೂ ಸಾಕಾರಗೊಳ್ಳಲಿದೆ. 100 ವರ್ಷಗಳ ಹಿಂದೆ ಕೇವಲ 40 ಕೋಟಿಗಿಂತ ಕಡಿಮೆಯಿದ್ದ ಭಾರತದ ಜನಸಂಖ್ಯೆ ಇಂದು 140 ಕೋಟಿಗೆ ತಲುಪಿದ್ದು, ಈ ಎಲ್ಲ ನಾಗರಿಕರ ಒಗ್ಗಟ್ಟು ಮತ್ತು ಶ್ರಮವೇ 2047ರ ವೇಳೆಗೆ ಭಾರತವನ್ನು ಪ್ರಗತಿಯ ಉನ್ನತ ಶಿಖರಕ್ಕೇರಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೇಶದ ಮುಂದೆ 5 ಸಂಕಲ್ಪ:
ವಿಕಸಿತ ಭಾರತದ ಗುರಿ ತಲುಪಲು ಮೋದಿ ದೇಶದ ಮುಂದೆ 5 ಪ್ರಮುಖ ಸಂಕಲ್ಪಗಳನ್ನು ತೆರೆದಿಟ್ಟರು. ಭಾರತವನ್ನು ವಿಶ್ವದ 3ನೇ ಅತಿದೊಡ್ಡ ಅರ್ಥವ್ಯವಸ್ಥೆಯನ್ನಾಗಿಸುವುದು, ಜಾಗತಿಕ ಉತ್ಪಾದನಾ ಹಬ್ ನಿರ್ಮಿಸುವುದು, ಸಂಪೂರ್ಣ ಆತ್ಮನಿರ್ಭರತೆ ಸಾಧಿಸುವುದು, ಒಲಿಂಪಿಕ್ಸ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸುವುದು ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿ ದೇಶದ ಹೆಜ್ಜೆಗುರುತನ್ನು ವಿಸ್ತರಿಸುವುದು ಈ 5 ಮಹತ್ವದ ಗುರಿಗಳಾಗಿವೆ. ಪ್ರಧಾನಿ ಒಂದೊಂದೇ ಗುರಿಗಳನ್ನು ಪ್ರಸ್ತಾಪಿಸುತ್ತಿದ್ದಂತೆ, ಸಭೆಯಲ್ಲಿದ್ದ ಜನಸ್ತೋಮ ‘ವಿ ವಿಲ್ ಡು ಇಟ್’ ಎಂದು ಒಟ್ಟಾಗಿ ಘೋಷಣೆ ಕೂಗುವ ಮೂಲಕ ಅಭೂತಪೂರ್ವ ಉತ್ಸಾಹ ವ್ಯಕ್ತಪಡಿಸಿತು.
ಸಾಮಾಜಿಕ ವಿಭಜನೆ ಸವಾಲು:
ಇದೇ ವೇಳೆ ಸಾಮಾಜಿಕ ಸವಾಲುಗಳ ಕುರಿತು ಪ್ರಸ್ತಾಪಿಸಿದ ಮೋದಿ, ‘ಮತಬ್ಯಾಂಕ್ ಆಧಾರಿತ ವಿಭಜನೆಯೇ ದೇಶಕ್ಕಿರುವ ದೊಡ್ಡ ಸವಾಲು. ರೈತನ ಹೊಲಕ್ಕೆ ನೀರಿನ ಅಭಾವವಾದಾಗ ಅಥವಾ ವಿದ್ಯುತ್ ಇಲ್ಲದೆ ಕತ್ತಲೆಯಾದಾಗ ಅದು ಯಾವುದೇ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾಗಿರುವುದಿಲ್ಲ. ಸಮಸ್ಯೆ ಎಲ್ಲರದ್ದೂ ಆಗಿರುವಾಗ ಪರಿಹಾರವೂ ಎಲ್ಲರಿಗೂ ತಲುಪಬೇಕು’ ಎಂದು ಪ್ರತಿಪಾದಿಸಿದರು.
25 ಕೋಟಿ ಮಂದಿ ಬಡತನ ಮುಕ್ತ:
ಸರ್ಕಾರದ ಸಾಧನೆಯನ್ನು ಪ್ರಸ್ತಾಪಿಸಿದ ಅವರು, ‘ಒಂದು ಕಾಲದಲ್ಲಿ ಅಸಾಧ್ಯವೆಂದು ಪರಿಗಣಿಸಲ್ಪಟ್ಟಿದ್ದು ಈಗ ಸಾಧಿತವಾಗಿದೆ. ದೇಶದಲ್ಲಿ ಕೇವಲ ಒಂದು ದಶಕದ ಅಲ್ಪಅವಧಿಯಲ್ಲಿ 25 ಕೋಟಿಗೂ ಹೆಚ್ಚು ಮಂದಿ ಬಡತನ ರೇಖೆಗಿಂತ ಹೊರಬರಲಿದ್ದಾರೆ ಎಂದು ಯಾರಾದರೂ ಕಲ್ಪಿಸಿಕೊಂಡಿದ್ದರಾ? ಭಾರತ ಅದನ್ನು ಮಾಡಿ ತೋರಿಸಿದೆ. ಇದೇ ಕಾರಣಕ್ಕೆ ನಾನು 140 ಭಾರತೀಯರ ಶಕ್ತಿ ಮತ್ತು ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಿದ್ದೇನೆ. 25 ವರ್ಷಗಳ ಅನುಭವದಲ್ಲಿ ನಾನಿಷ್ಟನ್ನು ವಿಶ್ವಾಸದಿಂದ ಹೇಳಬಲ್ಲೆ, ಭಾರತದ ಬದಲಾವಣೆಯು ನಮ್ಮ ಕಣ್ಣಮುಂದಿದೆ’ ಎಂದರು.
ಸ್ಮಿತ್ ಮಚ್ಛರ್‌ಗೆ ಶ್ಲಾಘನೆ:
ಇತ್ತೀಚೆಗೆ ಉಗ್ರನಿಂದ ಫ್ಲೈದುಬೈ ವಿಮಾನ ಅಪಹರಣವನ್ನು ತಪ್ಪಿಸಿದ ಕ್ಯಾಪ್ಟನ್ ಸ್ಮಿತ್ ಮಚ್ಛರ್ ಅವರ ಸಾಹಸವನ್ನು ಶ್ಲಾಘಿಸಿದ ಮೋದಿ, ‘ಇಂದು ಜಗತ್ತು ಭಾರತೀಯ ಪೈಲಟ್ ಬಗ್ಗೆ ಮಾತನಾಡುತ್ತಿದೆ. ಆದರೆ ಮುಂಬರುವ ದಿನಗಳಲ್ಲಿ ಇಡೀ ವಿಶ್ವವೇ ಮೇಡ್ ಇನ್ ಇಂಡಿಯಾ ವಿಮಾನಗಳ ಬಗ್ಗೆ ಮಾತನಾಡುವ ಕಾಲ ಬರಲಿದೆ. ದೃಢ ನೀತಿಗಳು ಹಾಗೂ ನಿರಂತರ ಕಠಿಣ ಪರಿಶ್ರಮದಿಂದ ಭಾರತದ ಪ್ರತಿಯೊಂದು ಸವಾಲಿಗೆ 140 ಕೋಟಿ ಪರಿಹಾರಗಳು ಸಿಗಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಳಿಕ ತಮ್ಮ ಮೇಲಿಟ್ಟ ನಂಬಿಕೆಗೆ ದೇಶದ ಜನತೆಗೆ ಧನ್ಯವಾದ ಅರ್ಪಿಸಿದರು.
ಮೋದಿ 5 ಸಂಕಲ್ಪಗಳು
1. ದೇಶವನ್ನು ವಿಶ್ವದ 3ನೇ ಅತಿದೊಡ್ಡ ಅರ್ಥವ್ಯವಸ್ಥೆಯಾಗಿ ರೂಪಿಸುವುದು
2. ಎಲ್ಲಾ ವಲಯದಲ್ಲಿ ಜಾಗತಿಕ ಉತ್ಪಾದನಾ ಹಬ್ ಆಗಿ ದೇಶದ ನಿರ್ಮಾಣ
3. ಎಲ್ಲಾ ವಲಯದಲ್ಲೂ ಸಂಪೂರ್ಣ ಆತ್ಮನಿರ್ಭರತೆ ಕನಸು ನನಸಾಗಿಸುವುದು4. 2036 ಒಲಿಂಪಿಕ್ಸ್ ಕ್ರೀಡಾಕೂಟ ಆತಿಥ್ಯ ಸಿಕ್ಕರೆ ಅದರ ಯಶಸ್ವಿ ಆಯೋಜನೆ
5. ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ದೇಶದ ಹೆಜ್ಜೆಗುರುತು ವಿಸ್ತರಣೆ
