ಗ್ಯಾರಂಟಿಗಳಿಂದ ಯಾರೂ ಸೋಮಾರಿ ಆಗಲ್ಲ : ರಂಭಾಪುರಿ ಶ್ರೀಗಳ ಹೇಳಿಕೆಗೆ ಮತ್ತೆ ಅತೃಪ್ತಿ

| N/A | Published : Jul 13 2025, 01:18 AM IST / Updated: Jul 13 2025, 06:39 AM IST

ಗ್ಯಾರಂಟಿಗಳಿಂದ ಯಾರೂ ಸೋಮಾರಿ ಆಗಲ್ಲ : ರಂಭಾಪುರಿ ಶ್ರೀಗಳ ಹೇಳಿಕೆಗೆ ಮತ್ತೆ ಅತೃಪ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರು ಸೋಮಾರಿಯಾಗುವುದಿಲ್ಲ. ಆದರೆ ಕೆಲವರು ರಾಜಕೀಯಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಬೇಸರ ವ್ಯಕ್ತಪಡಿಸಿದ್ದಾರೆ.

 ಬೆಂಗಳೂರು :  ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರು ಸೋಮಾರಿಯಾಗುವುದಿಲ್ಲ. ಆದರೆ ಕೆಲವರು ರಾಜಕೀಯಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಬೇಸರ ವ್ಯಕ್ತಪಡಿಸಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ಅಹಲ್ಯಾಬಾಯಿ ಹೋಳ್ಕರ್‌ ಅವರ 300ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚೆಗೆ ರಂಭಾಪುರಿ ಸ್ವಾಮೀಜಿ ಗ್ಯಾರಂಟಿಗಳಿಂದ ಜನ ಸೋಮಾರಿಯಾಗುತ್ತಾರೆ ಎಂದು ನೀಡಿದ್ದ ಹೇಳಿಕೆಗೆ ಈ ರೀತಿ ಪರೋಕ್ಷವಾಗಿ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಬಹಳ ಜನರಿಗೆ ಅರ್ಥವಾಗಿದೆಯೋ ಇಲ್ಲವೋ ತಿಳಿದಿಲ್ಲ. ರಾಜಕೀಯಕ್ಕಾಗಿ ಅಥವಾ ವೈರತ್ವಕ್ಕಾಗಿ ಮಾತನಾಡುತ್ತಾರೋ ಗೊತ್ತಿಲ್ಲ. ಗ್ಯಾರಂಟಿ ಯೋಜನೆಗಳಿಂದ ಜನರು ಸೋಮಾರಿಗಳಾಗುತ್ತಾರೆ ಎಂದು ಟೀಕಿಸುತ್ತಾರೆ. ಎಲ್ಲ ಹೆಣ್ಣು ಮಕ್ಕಳೂ ಬಸ್‌ನಲ್ಲಿ ಸಂಚರಿಸಿದರೆ ಸೋಮಾರಿಗಳಾಗುತ್ತಾರೆಯೇ. 200 ಯೂನಿಟ್‌ವರೆಗೂ ಉಚಿತವಾಗಿ ವಿದ್ಯುತ್‌ ನೀಡಿದರೆ, ಅಕ್ಕಿಯನ್ನು ಉಚಿತವಾಗಿ ನೀಡಿದರೆ ಸೋಮಾರಿಗಳಾಗುತ್ತಾರೆಯೇ ಎಂದು ತರಾಟೆ ತೆಗೆದುಕೊಂಡರು.

2013ರಿಂದ18 ರವೆರೆಗೂ, ಈಗ 2023ರಿಂದ ಇಲ್ಲಿಯವರೆಗೂ ಯಾವಾಗ ಅಧಿಕಾರದಲ್ಲಿದ್ದೇನೆಯೋ ಆಗ ನಾನು ಸಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದ್ದೇನೆ. ಅನ್ನಭಾಗ್ಯ ಕಾರ್ಯಕ್ರಮ ಜಾರಿಗೆ ತಂದಾಗ ಬಿಜೆಪಿ ಶಾಸಕರೊಬ್ಬರು ‘ಉಚಿತವಾಗಿ 5 ಕೆಜಿ ಅಕ್ಕಿ ನೀಡಿ ಬಡವರನ್ನು ಸೋಮಾರಿಗಳನ್ನಾಗಿ ಮಾಡಿದ್ದೀರಿ. ಕೂಲಿಯವರು ಸಿಗುತ್ತಿಲ್ಲ’ ಎಂದು ಟೀಕಿಸಿದ್ದರು. ಆಗ ನಾನು ‘ಹಸಿವು ಮುಕ್ತ ರಾಜ್ಯಕ್ಕಾಗಿ ನಾನು ಹೀಗೆ ಮಾಡಿದ್ದೇನೆ. ಜನರು ಸೋಮಾರಿಗಳಾದರೆ ಆಗಲಿ, ನೀವು ಒಂದಷ್ಟು ದಿವಸ ಕೆಲಸ ಮಾಡಿ’ ಎಂದು ಉತ್ತರಿಸಿದ್ದೆ ಎಂದು ನೆನಪಿಸಿಕೊಂಡರು.

ಅಂಬೇಡ್ಕರ್‌ ಅವರು ಶೋಷಿತ ಸಮುದಾಯಗಳಿಗೆ ಶಿಕ್ಷಣ-ಸಂಘಟನೆ-ಹೋರಾಟದ ಮಂತ್ರವನ್ನು ನೀಡಿದ್ದಾರೆ. ಅಂಬೇಡ್ಕರ್ ಅವರಿಂದಾಗಿ ಶೂದ್ರ ಮತ್ತು ಮಹಿಳಾ ಕುಲಕ್ಕೆ ಶಿಕ್ಷಣದ ಅವಕಾಶ ಒದಗಿಬಂತು. ಇದಕ್ಕೆ ನಮ್ಮ ಸಂವಿಧಾನ ನೀಡಿದ ಕಡ್ಡಾಯ ಶಿಕ್ಷಣ ಕಾನೂನು ನೆರವಾಯಿತು. ‘ಕುರುಬರಿಗೆ ಅಕ್ಷರ ಹತ್ತಲ್ಲ, ಶಿಕ್ಷಣ ಏಕೆ’ ಎಂದು ನಮ್ಮ ಅಜ್ಜಿ ಹೇಳುತ್ತಿದ್ದರು. ಆದರೆ, ನಾನು ಶಾಲೆಗೆ ಹೋಗಿ ಕಾನೂನು ಪದವಿ ಪಡೆದು ಮುಖ್ಯಮಂತ್ರಿಯಾದೆ. ಇಲ್ಲದಿದ್ದರೆ ಹಸು, ಕುರಿ ಕಾಯುತ್ತಾ ಇರಬೇಕಾಗಿತ್ತು ಎಂದು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ಕುರುಬ ಸಮುದಾಯದ ಹಲವು ಸಾಧಕರನ್ನು ಸನ್ಮಾನಿಸಲಾಯಿತು. ಕನಕ ಗುರು ಪೀಠದ ಈಶ್ವರಾನಂದಪುರಿ ಸ್ವಾಮೀಜಿ, ಸಚಿವ ಬೈರತಿ ಸುರೇಶ್‌, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್‌.ಎಂ.ರೇವಣ್ಣ, ಶಾಸಕ ರಾಘವೇಂದ್ರ ಹಿಟ್ನಾಳ್‌, ರಾಜ್ಯ ಅಹಲ್ಯಾಬಾಯಿ ಹೋಳ್ಕರ್‌ ಮಹಿಳಾ ಸಂಘದ ಸಂಸ್ಥಾಪಕಿ ಎಲ್ಲಮ್ಮ, ಅಧ್ಯಕ್ಷೆ ವಚನ ಪ್ರಸನ್ನಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು. 

ಹೆಣ್ಣು ಮಕ್ಕಳು ಪ್ರತಿಭಾವಂತರು: ರಾಣಿ ಅಹಲ್ಯಾಬಾಯಿ ಅವರು ಶತಮಾನಗಳ ಹಿಂದೆಯೇ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಿದ್ದರು. ಈಗ ಹೆಣ್ಣು ಮಕ್ಕಳು ಶೇ.100 ರಷ್ಟು ಅಂಕ ಪಡೆಯುವುದರಲ್ಲಿ ಮುಂದಿದ್ದು, ವೈದ್ಯರು, ಎಂಜಿನಿಯರ್‌ಗಳಾಗುತ್ತಿದ್ದಾರೆ. ಸೈನ್ಯ, ಅಂತರಿಕ್ಷ ಯಾನದಲ್ಲೂ ಛಾಪು ಮೂಡಿಸಿದ್ದಾರೆ. ಯಾವುದೇ ಸಂಘಟನೆ 25 ವರ್ಷ ಪೂರೈಸಿದರೆ ಅದು ದೊಡ್ಡ ಯಶಸ್ಸಾಗಿದೆ. ಕರ್ನಾಟಕ ರಾಜ್ಯ ಅಹಲ್ಯಾ ಬಾಯಿ ಹೋಳ್ಕರ್ ಮಹಿಳಾ ಸಂಘ ಅತ್ಯಂತ ಯಶಸ್ವಿಯಾಗಿ ಮುನ್ನಡೆದಿದ್ದು ಇದಕ್ಕಾಗಿ ಶ್ರಮಿಸಿದ ಯಲ್ಲಮ್ಮ ಮತ್ತು ಜೊತೆಗಿರುವ ಪ್ರತಿಯೊಬ್ಬರೂ ಅಭಿನಂದನಾರ್ಹರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Read more Articles on