ಬೆಳಗಾವಿ ಉತ್ತರಾಧಿವೇಶನದಲ್ಲಿ ಉತ್ತರ ಕರ್ನಾಟಕ ಕುರಿತ ಚರ್ಚೆ ಕೊನೆಯ ಆದ್ಯತೆಯಾಗುತ್ತಿರುವ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಪ್ರಸಕ್ತ ಅಧಿವೇಶನದಲ್ಲಿ ಮಂಗಳವಾರದಿಂದಲೇ ಉತ್ತರ ಕರ್ನಾಟಕ ಸಮಸ್ಯೆ ಹಾಗೂ ಅಭಿವೃದ್ಧಿ ಕುರಿತು ಚರ್ಚೆ ಪ್ರಾರಂಭಿಸಲು  ತೀರ್ಮಾನಿಸಲಾಗಿದೆ.

 ಸುವರ್ಣ ವಿಧಾನಸೌಧ : ಪ್ರತಿ ಬಾರಿಯ ಬೆಳಗಾವಿ ಉತ್ತರಾಧಿವೇಶನದಲ್ಲಿ ಉತ್ತರ ಕರ್ನಾಟಕ ಕುರಿತ ಚರ್ಚೆ ಕೊನೆಯ ಆದ್ಯತೆಯಾಗುತ್ತಿರುವ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಪ್ರಸಕ್ತ ಅಧಿವೇಶನದಲ್ಲಿ ಮಂಗಳವಾರದಿಂದಲೇ ಉತ್ತರ ಕರ್ನಾಟಕ ಸಮಸ್ಯೆ ಹಾಗೂ ಅಭಿವೃದ್ಧಿ ಕುರಿತು ಚರ್ಚೆ ಪ್ರಾರಂಭಿಸಲು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಈವರೆಗೆ ಸಾಮಾನ್ಯವಾಗಿ 2ನೇ ವಾರ ಉ.ಕ. ಬಗ್ಗೆ ಚರ್ಚೆ ಕೈಗೆತ್ತಿಕೊಳ್ಳಲಾಗುತ್ತಿತ್ತು. ಇದೀಗ ಮೊದಲ ವಾರದ 2ನೇ ದಿನದಿಂದಲೇ ಉ.ಕರ್ನಾಟಕ ಚರ್ಚೆಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ. ಡಿ.9ರಿಂದ ಡಿ.12ರವರೆಗೆ ಉ.ಕರ್ನಾಟಕ ಬಗ್ಗೆ ಚರ್ಚೆ ನಡೆಯಲಿದೆ.

ಹೀಗಾಗಿ ಸದನದಲ್ಲಿ ಉ.ಕ. ಅಭಿವೃದ್ಧಿ ಕೊರತೆ, ಪ್ರಾದೇಶಿಕ ಅಸಮತೋಲನ, ಕಬ್ಬು ಹಾಗೂ ಮೆಕ್ಕೆ ಜೋಳ ಬೆಂಬಲ ಬೆಲೆ, ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಆಮೆಗತಿ, ನೀರಾವರಿ ಯೋಜನೆಗಳು, ರೈತರ ಆತ್ಮಹತ್ಯೆ ಸೇರಿದಂತೆ ವಿವಿಧ ವಿಚಾರ ಪ್ರಸ್ತಾಪವಾಗುವ ಸಾಧ್ಯತೆಯಿದೆ.

ರಾಜ್ಯ ಸರ್ಕಾರವು ಉ.ಕ. ಅಭಿವೃದ್ಧಿಗೆ ನೀಡಿದ್ದ ಭರವಸೆಗಳನ್ನು ಎರಡೂವರೆ ವರ್ಷದಲ್ಲಿ ಪೂರೈಸಿಲ್ಲ ಎಂದು ಸರ್ಕಾರದ ಮೇಲೆ ಮುಗಿಬೀಳಲು ಪ್ರತಿಪಕ್ಷಗಳು ಸಜ್ಜಾಗಿವೆ.

ಸೋಮವಾರ ಮಧ್ಯಾಹ್ನ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ಕಲಾಪ ಸಲಹಾ ಸಮಿತಿ ಸಭೆ ನಡೆಯಿತು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ ಆರ್.ಅಶೋಕ್‌, ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್, ಬಿಜೆಪಿ ರಾಜ್ಯಾಧ್ಯಕ್ಷ‌ ಬಿ.ವೈ.ವಿಜಯೇಂದ್ರ, ಉಪನಾಯಕ ಅರವಿಂದ ಬೆಲ್ಲದ್, ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಜರಿದ್ದರು.

ಆಡಳಿತ ಪಕ್ಷದಿಂದಲೇ ಪ್ರಸ್ತಾಪ:

ಸಭೆಯಲ್ಲಿ ಮೊದಲಿಗೆ ಆಡಳಿತ ಪಕ್ಷದಿಂದಲೇ ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರದ ಬಗ್ಗೆ ನಿಲುವಳಿ ಸೂಚನೆ ಮಂಡಿಸಿ ಚರ್ಚೆ ಪ್ರಾರಂಭಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಇದಕ್ಕೆ ಸಮ್ಮತಿಸದ ಆರ್‌. ಅಶೋಕ್‌, ‘ನಾವು ಈಗಾಗಲೇ ನಿಲುವಳಿ ಸೂಚನೆ ಮಂಡನೆಗೆ ಸಭಾಧ್ಯಕ್ಷರ ಕಚೇರಿಗೆ ಅರ್ಜಿ ಸಲ್ಲಿಸಿದ್ದೇವೆ. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಮತ್ತೊಂದು ನೋಟಿಸ್ ಅಗತ್ಯವಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ನಿಲುವಳಿ ಸೂಚನೆಯನ್ನು ವಿಪಕ್ಷವೇ ಮಂಡಿಸಬೇಕೆಂಬುದು ಕ್ರಮ. ಇದರಲ್ಲಿ ಎಲ್ಲ ಪಕ್ಷದವರು ಭಾಗವಹಿಸಿ ಚರ್ಚೆ ನಡೆಸಬಹುದು’ ಎಂದರು.

ಇದಕ್ಕೆ ಒಪ್ಪಿಗೆ ಸೂಚಿಸಿರುವ ಸಿದ್ದರಾಮಯ್ಯ, ಸರ್ಕಾರ ಮಂಗಳವಾರ ಬೆಳಗ್ಗೆಯಿಂದಲೇ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಮಾತನಾಡುವುದಕ್ಕೆ ಅವಕಾಶ ಕಲ್ಪಿಸಿದೆ. ಪ್ರತಿಪಕ್ಷದ ಸದಸ್ಯರು ವಿಧಾನಸೌಧ ಮುತ್ತಿಗೆ ಪ್ರತಿಭಟನೆ ಮುಗಿದ ಬಳಿಕ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.

ಉ.ಕ. ಚರ್ಚೆ ವೇಳೆ ವಿಧೇಯಕ ಇಲ್ಲ?:

ರಾಜ್ಯ ಸರ್ಕಾರವು ದ್ವೇಷ ಭಾಷಣ ನಿಯಂತ್ರಣ, ಸಾಮಾಜಿಕ ಬಹಿಷ್ಕಾರ ತಡೆ, ಗೋಹತ್ಯೆ ನಿಷೇಧ ತಿದ್ದುಪಡಿ ವಿಧೇಯಕ ಸೇರಿದಂತೆ 20 ವಿಧೇಯಕಗಳನ್ನು ಚರ್ಚೆಗೆ ಮಂಡಿಸಿ ಅಂಗೀಕಾರ ಪಡೆಯಬೇಕಿದೆ. ಹೀಗಾಗಿ ಮೊದಲ ದಿನದಿಂದಲೇ ವಿಧೇಯಕ ಮಂಡಿಸಲು ಸಭೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್‌ ಪ್ರಸ್ತಾಪಿಸಿದರು.

ಆದರೆ, ಉತ್ತರ ಕರ್ನಾಟಕ ಚರ್ಚೆ ವೇಳೆ ಪ್ರಶ್ನೋತ್ತರ, ಶೂನ್ಯ ವೇಳೆ ಹೊರತುಪಡಿಸಿ ಯಾವುದೇ ವಿಷಯ ಕೈಗೆತ್ತಿಕೊಳ್ಳಬಾರದು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಹೀಗಾಗಿ ಮೊದಲ ಉ.ಕ. ಚರ್ಚೆಗೆ ಅವಕಾಶ ಕೊಡೋಣ. ಬಳಿಕ ಈ ಬಗ್ಗೆ ನಿರ್ಧರಿಸೋಣ ಎಂದು ಹೇಳಿ ಸಭೆಯಲ್ಲಿ ಸ್ಪೀಕರ್‌ ಅವರು ಉಭಯ ಪಕ್ಷಗಳ ಪ್ರತಿನಿಧಿಗಳಿಗೆ ಸಮಾಧಾನ ಹೇಳಿದರು ಎಂದು ತಿಳಿದುಬಂದಿದೆ.

ಶಾಲೆಗಳ ದುಸ್ಥಿತಿ ಬಗ್ಗೆ ನಿಲುವಳಿ?:

ಕಲಾಪ ಸಲಹಾ ಸಮಿತಿ ಸಭೆ ವೇಳೆ ಕಾನೂನು ಸುವ್ಯವಸ್ಥೆ ಹಾಳಾಗಿರುವ ಬಗ್ಗೆಯೂ ಚರ್ಚೆ ನಡೆಸುವುದಕ್ಕೆ ಅವಕಾಶ ನೀಡಬೇಕೆಂದು ಬಿಜೆಪಿ ಪ್ರತಿಪಾದಿಸಿತು. ಉ.ಕ. ಭಾಗ ಸೇರಿದಂತೆ ರಾಜ್ಯಾದ್ಯಂತ ಇರುವ ಶಾಲೆಗಳ ದುಸ್ಥಿತಿ ಹಾಗೂ ಶೈಕ್ಷಣಿಕ ಸಮಸ್ಯೆ ಬಗ್ಗೆಯೂ ನಿಲುವಳಿ ಮಂಡಿಸಲು ನೋಟಿಸ್‌ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಉ.ಕ. ಸಮಸ್ಯೆ ಹೆಚ್ಚಳ

ಉತ್ತರ ಕರ್ನಾಟಕದಲ್ಲಿ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗಿದ್ದು ಸರ್ಕಾರ ಯಾವುದೇ ರೀತಿಯಲ್ಲೂ ನೆರವಿಗೆ ಬಂದಿಲ್ಲ. ಹೀಗಾಗಿ ಪ್ರಾರಂಭದಿಂದಲೇ ಉತ್ತರ‌‌ ಕರ್ನಾಟಕದ ಬಗೆಗಿನ ಚರ್ಚೆಗೆ ಅವಕಾಶ ನೀಡಬೇಕೆಂಬುದು ನಮ್ಮ ಪ್ರಬಲ ಪ್ರತಿಪಾದನೆಯಾಗಿತ್ತು.‌ ಈ ಭಾಗದ ಎಲ್ಲಾ ಸಮಸ್ಯೆ ಮುಂದಿಟ್ಟುಕೊಂಡು ಚರ್ಚೆ ನಡೆಸುತ್ತೇವೆ.

- ಆರ್.ಅಶೋಕ, ವಿಧಾನಸಭೆ ಪ್ರತಿಪಕ್ಷ ನಾಯಕ.

ಯಾವ ವಿಷಯಗಳು ಪ್ರಸ್ತಾಪ?

- ಉತ್ತರ ಕರ್ನಾಟಕ ಅಭಿವೃದ್ಧಿ ಕೊರತೆ, ಪ್ರಾದೇಶಿಕ ಅಸಮತೋಲನ

- ಕಬ್ಬು ಹಾಗೂ ಮೆಕ್ಕೆಜೋಳ ಬೆಂಬಲ ಬೆಲೆ, ರೈತರ ಸರಣಿ ಆತ್ಮಹತ್ಯೆ

- ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಆಮೆಗತಿ, ಮಹದಾಯಿ ಸ್ಕೀಂ

- ಕಳೆದ 2.5 ವರ್ಷದಲ್ಲಿ ನೀಡಲಾಗಿದ್ದ ಈಡೇರದ ಭರವಸೆಗಳ ಬಗ್ಗೆ ಚರ್ಚೆ