ಸಾರಾಂಶ
ಬೆಂಗಳೂರು : ಜಾತಿಜನಗಣತಿಯ ಮೂಲ ವರದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಲ್ಲಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಪಾದಿಸಿದ್ದಾರೆ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸರ್ಕಾರಕ್ಕೆ ಬರೆದ ಪತ್ರದ ಪ್ರಕಾರ ಜಾತಿ ಗಣತಿ ವರದಿಯ ಮೂಲ ಪ್ರತಿ ಲಭ್ಯವಾಗಿಲ್ಲ. ಈಗಿರುವುದು ನಕಲಿ ವರದಿ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ರಾಜ್ಯದ ಅಭಿವೃದ್ಧಿ ಬಗ್ಗೆ ಯೋಚಿಸದೆ ಜಾತಿ ಗಣತಿ ವರದಿ ಬಿಡುಗಡೆ ಮಾಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರು ಸಾಯುತ್ತಿದ್ದಾರೆ. ಒಂದು ರಸ್ತೆ ಕೂಡ ನಿರ್ಮಾಣವಾಗಿಲ್ಲ. ಪರಿಸ್ಥಿತಿ ಹೀಗಿರುವಾಗ ಜಾತಿ ಗಣತಿ ವರದಿ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ಕಾಂಗ್ರೆಸ್ಸಿನ ಸಚಿವರು ಇದನ್ನು ವೈಜ್ಞಾನಿಕ ಹಾಗೂ ಅಸಲಿ ಎಂದು ಹೇಳುತ್ತಿದ್ದಾರೆ ಎಂದರು.
ಆಯೋಗದ ಹಿಂದಿನ ಅಧ್ಯಕ್ಷ ಕಾಂತರಾಜು ಸಹಿ ಹಾಕದೆ ಓಡಿಹೋಗಿದ್ದಾರೆ. ಮೂಲ ವರದಿ ಸಿದ್ದರಾಮಯ್ಯ ಅವರ ಮನೆಯಲ್ಲಿದೆ. ಬೇಕಾದ ಜಾತಿಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದು ಸಚಿವ ಸಂಪುಟದಲ್ಲಿ ಗಲಾಟೆಯಾಗಿದೆ. ಯಾರ ಮನೆಗೂ ಹೋಗದೆ ಸಮೀಕ್ಷೆ ಮಾಡಲಾಗಿದೆ. ಎಲ್ಲರೂ ಸಿದ್ದರಾಮಯ್ಯ ಅವರ ಮನೆ, ಕಚೇರಿಯಲ್ಲಿ ಕುಳಿತು ವರದಿ ತಯಾರಿಸಿದ್ದಾರೆ. ಗಣತಿಗೆಂದು ಖರ್ಚಾದ 150 ಕೋಟಿ ರು. ಎಲ್ಲಿ ಹೋಗಿದೆ ಎಂಬುದನ್ನು ಸರ್ಕಾರ ತಿಳಿಸಬೇಕು ಎಂದು ಅಶೋಕ್ ಆಗ್ರಹಿಸಿದರು.