ಸಾರಾಂಶ
ನವದೆಹಲಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಯ ಮಹದೇವಪುರದಲ್ಲಿ ಭಾರೀ ಮತಗಳವು ನಡೆದಿತ್ತು ಎಂಬ ಆರೋಪದ ಬಗ್ಗೆ ನಿವೃತ್ತ ಜಡ್ಜ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆ.7ರಂದು ನಡೆಸಿದ ಪತ್ರಿಕಾಗೋಷ್ಠಿ ಉಲ್ಲೇಖಿಸಿ ವಕೀಲ ರೋಹಿತ್ ಪಾಂಡೆ ಈ ಅರ್ಜಿ ಸಲ್ಲಿಸಿದ್ದಾರೆ. ಆ.7ರಂದು ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ, ಮಹದೇವಪುರ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಹೆಚ್ಚು ಮತದಾರರನ್ನು ಅಕ್ರಮವಾಗಿ ಸೇರ್ಪಡೆ ಮಾಡಿದ್ದಾರೆ ಎಂದು ಆರೋಪಿಸಿ ಈ ಸಂಬಂಧ ಹಲವು ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಈ ಕುರಿತು ತನಿಖೆ ನಡೆಸಬೇಕು ಎಂದು ಪಾಂಡೆ ಮನವಿ ಮಾಡಿದ್ದಾರೆ.
ಅಲ್ಲದೆ ಮತಪಟ್ಟಿ ಪರಿಷ್ಕರಣೆ ಕುರಿತು ಸುಪ್ರೀಂಕೋರ್ಟ್‌ನ ಆದೇಶ ಪಾಲನೆ ಆಗುವವರೆಗೂ ಯಾವುದೇ ಹೊಸ ಮತಪಟ್ಟಿ ಪರಿಷ್ಕರಣೆ ಮಾಡಬಾರದು ಮತ್ತು ಮತಪಟ್ಟಿ ಪರಿಷ್ಕರಣೆ ಕುರಿತು ಸ್ವತಂತ್ರ ತನಿಖೆಗೆ ಆದೇಶಿಸಬೇಕು ಎಂದೂ ಪಾಂಡೆ ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ.
ಪತ್ನಿಯನ್ನು ನೋರಾ ಫತೇಹಿ ಮಾಡಲು ಉಪವಾಸ, ನಿತ್ಯ 3 ಗಂಟೆ ಕಾಲ ವರ್ಕೌಟ್ ಶಿಕ್ಷೆ!
ಗಾಜಿಯಾಬಾದ್: ತನ್ನ ಹೆಂಡತಿ ಬಾಲಿವುಡ್ ನಟಿ ನೋರಾ ಫತೇಹಿಯಂತೆ ಸುಂದರವಾಗಿ ಕಾಣಬೇಕು ಎಂದು ವ್ಯಕ್ತಿಯೊಬ್ಬ ಆಕೆಗೆ ಪ್ರತಿನಿತ್ಯ 3 ಗಂಟೆ ವರ್ಕೌಟ್ ಮಾಡುವಂತೆ ಒತ್ತಾಯ ಮಾಡಿದ್ದಲ್ಲದೆ, ಒಂದು ದಿನ ತಪ್ಪಿದರೂ ಆಹಾರ ಕೊಡದೆ ಉಪವಾಸ ಬೀಳಿಸುತ್ತಿದ್ದ ಅಮಾನುಷ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ಮಹಿಳೆಯೊಬ್ಬಳು ಪತಿ ಶಿವಂ ಉಜ್ವಲ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ‘ನನ್ನ ಗಂಡ ನೀನು ಸುಂದರವಾಗಿಲ್ಲ ಎಂದು ಪದೇ ಪದೇ ಹೀಯಾಳಿಸುತ್ತಿದ್ದ. ನಟಿ ನೋರಾ ಫತೇಹಿಯಂತೆ ನೀನೂ ಸುಂದರವಾಗಿ ಕಾಣಬೇಕು ಎಂದು ಪ್ರತಿನಿತ್ಯ 3 ಗಂಟೆ ವರ್ಕೌಟ್ ಮಾಡುವಂತೆ ಹಿಂಸೆ ನೀಡುತ್ತಿದ್ದ. ತಪ್ಪಿದರೆ ಊಟವನ್ನೂ ಕೊಡುತ್ತಿರಲಿಲ್ಲ’ ಎಂದು ಮಹಿಳೆ ದೂರಿದ್ದಾರೆ.
7000 ಕಿ.ಮೀ ಸಾಮರ್ಥ್ಯದ ಅಗ್ನಿ-5
ಬ್ಯಾಲಿಸ್ಟಿಕ್ ಕ್ಷಿಪಣಿ ಯಶಸ್ವಿ ಪರೀಕ್ಷೆನವದೆಹಲಿ: ರಕ್ಷಣೆ ಮತ್ತು ಸೇನೆಯ ಬಲವರ್ಧನೆಯಲ್ಲಿ ತೊಡಗಿರುವ ಭಾರತ, ಮಧ್ಯಂತರ ಶ್ರೇಣಿ ಬ್ಯಾಲಿಸ್ಟಿಕ್ ಕ್ಷಿಪಣಿಯಾದ ಅಗ್ನಿ-5 ಪರೀಕ್ಷೆಯನ್ನು ಒಡಿಶಾದ ಚಾಂದೀಪುರದಿಂದ ಬುಧವಾರ ಯಶಸ್ವಿಯಾಗಿ ನಡೆಸಿದೆ.
ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್‌ನ ಆಶ್ರಯದಲ್ಲಿ ಈ ಪರೀಕ್ಷೆ ನಡೆದಿದ್ದು, ಎಲ್ಲಾ ಕಾರ್ಯಾಚರಣೆಯ ಮತ್ತು ತಾಂತ್ರಿಕ ಮಾನದಂಡಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈ ಮೂಲಕ, ಅಗ್ನಿ ಅಸ್ತ್ರವು ಸೇನೆ ಸೇರಲು ಸಿದ್ಧ ಎಂಬುದನ್ನು ಸಾಬೀತುಪಡಿಸಿದೆ. ಈ ಕ್ಷಿಪಣಿ 7000 ಕ್ರಮಿಸಿ ದಾಳಿ ಮಾಡಬಲ್ಲ ಸಾಮರ್ಥ್ಯ ಹೊಂದಿದೆ.2024ರ ಮಾರ್ಷ್‌ನಲ್ಲೂ ಡಿಆರ್‌ಡಿಒ ಇದರ ಯಶಸ್ವಿ ಪರೀಕ್ಷೆ ನಡೆಸಿತ್ತು. ಮೊದಲ ಬಾರಿ 2012ರಲ್ಲಿ ಇದೇ ಚಾಂದೀಪುರದಿಂದ ಅಗ್ನಿ-5 ಪರೀಕ್ಷೆ ನಡೆದಿತ್ತು.