ಸಾರಾಂಶ
ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಸತತ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ‘ಮೃತಪಟ್ಟಿದ್ದಾರೆ’ ಎಂಬ ಕಾರಣ ನೀಡಿ ಚುನಾವಣಾ ಆಯೋಗ ಕೈಬಿಟ್ಟಿದ್ದ 7 ಮತದಾರರ ಜತೆ ‘ಚಾಯ್ ಪೇ ಚರ್ಚಾ’ ನಡೆಸಿದ್ದಾರೆ.
ನವದೆಹಲಿ: ಬಿಹಾರದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಸತತ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ‘ಮೃತಪಟ್ಟಿದ್ದಾರೆ’ ಎಂಬ ಕಾರಣ ನೀಡಿ ಚುನಾವಣಾ ಆಯೋಗ ಕೈಬಿಟ್ಟಿದ್ದ 7 ಮತದಾರರ ಜತೆ ‘ಚಾಯ್ ಪೇ ಚರ್ಚಾ’ ನಡೆಸಿದ್ದಾರೆ. ಈ ಮೂಲಕ ಚುನಾವಣಾ ಆಯೋಗದ ಲೋಪಗಳ ವಿರುದ್ಧ ಮತ್ತಷ್ಟು ಸಾಕ್ಷ್ಯಗಳನ್ನು ಹೊರಹಾಕುವ ಯತ್ನ ಮಾಡಿದ್ದಾರೆ.
ಎಕ್ಸ್‌ನಲ್ಲಿ ಈ ಕುರಿತ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ‘ಜೀವನದಲ್ಲಿ ಹಲವು ಕುತೂಹಲಕಾರಿ ಅನುಭವಗಳಾಗಿವೆ. ಆದರೆ ಇಲ್ಲಿಯವರೆಗೆ ಸತ್ತವರೊಂದಿಗೆ ಕುಳಿತು ಟೀ ಕುಡಿಯುವ ಅವಕಾಶ ಸಿಕ್ಕಿರಲಿಲ್ಲ. ಈ ಅಮೋಘ ಅನುಭವಕ್ಕಾಗಿ ಚುನಾವಣಾ ಆಯೋಗಕ್ಕೆ ಧನ್ಯವಾದ ತಿಳಿಸುತ್ತೇನೆ’ ಎಂದು ವ್ಯಂಗ್ಯವಾಡಿದ್ದಾರೆ.
ವಿಡಿಯೋದಲ್ಲಿ 4 ಪುರುಷರು ಮತ್ತು 3 ಮಹಿಳೆಯರೊಂದಿಗೆ ರಾಹುಲ್ ಮಾತಾಡುತ್ತಿರುವುದನ್ನು ಕಾಣಬಹುದಾಗಿದೆ. ‘ವಿಶೇಷ ಪರಿಷ್ಕರಣೆ ವೇಳೆ ನಮ್ಮನ್ನು ಮೃತರೆಂದು ಘೋಷಿಸಿದ್ದು ತಿಳಿದುಬಂತು. ಈ ಪ್ರಕ್ರಿಯೆಯಲ್ಲಿ ತೆಗೆದುಹಾಕಲ್ಪಟ್ಟ 65 ಲಕ್ಷ ಜನರಲ್ಲಿ ನಾವೂ ಇದ್ದೆವು. ನಮ್ಮ ಮತದಾನದ ಹಕ್ಕನ್ನು ಮರಳಿ ಪಡೆಯಲು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಈ ಬಗ್ಗೆ ವಿಚಾರಣೆ ನಡೆಯುತ್ತಿದೆ’ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ರಾಹುಲ್, ‘ದೆಹಲಿ ಸುತ್ತಿ ಬನ್ನಿ. ಸತ್ತವರ ಬಳಿ ಟಿಕೆಟ್ ಕೇಳುವುದಿಲ್ಲ’ ಎಂದೂ ಮೃತರೆಂದು ಘೋಷಿಸಲ್ಪಟ್ಟವರ ಜತೆ ತಮಾಷೆ ಮಾಡಿದ್ದನ್ನು ಕಾಣಬಹುದು.