ಸಾರಾಂಶ
ಬೆಂಗಳೂರು : ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್) ದರ ಪರಿಷ್ಕೃತ ಸಮಿತಿ ನೀಡಿರುವ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವಂತೆ, ಸಂಸ್ಥೆಯ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡುವಂತೆ ಸಂಸದ ತೇಜಸ್ವಿ ಸೂರ್ಯ ಬಿಎಂಆರ್ಸಿಎಲ್ಗೆ ಕೋರಿದ್ದಾರೆ.
ಈ ಸಂಬಂಧ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಅವರನ್ನು ಭೇಟಿ ಮಾಡಿ ಪತ್ರ ಸಲ್ಲಿಸಿದ ಅವರು, ‘ಬಿಎಂಆರ್‌ಸಿಎಲ್ ಮೆಟ್ರೋ ರೈಲುಗಳಿಗೆ ಪರಿಷ್ಕೃತ ದರ ರಚನೆಯನ್ನು ಶಿಫಾರಸು ಮಾಡಲು 2024ರ ಸೆಪ್ಟೆಂಬರ್ 7 ರಂದು ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ರಚಿಸಿದ್ದ ದರ ಪರಿಷ್ಕರಣ ಸಮಿತಿ 2024ರ ಡಿಸೆಂಬರ್ 12 ರಂದು ವರದಿ ಸಲ್ಲಿಸಿತ್ತು. ಬಳಿಕ ಸಂಸ್ಥೆ ಶೇ. 71ರಷ್ಟು ದರ ಪ್ರಯಾಣ ದರ ಏರಿಕೆಯಾಗಿದ್ದು, ದೇಶದಲ್ಲೇ ಅತ್ಯಂದ ದುಬಾರಿ ಮೆಟ್ರೋ ಎನ್ನಿಸಿಕೊಂಡಿದೆ.
ದೆಹಲಿ ಮೆಟ್ರೋ ಪ್ರಯಾಣದ ದರ ಪರಿಷ್ಕರಣೆ ವಿಚಾರವಾಗಿ, ನಾಲ್ಕು ವಿಭಿನ್ನ ಸಂದರ್ಭಗಳಲ್ಲಿ ರಚಿಸಲಾದ ದರ ನಿಗದಿ ಸಮಿತಿಯ ವರದಿಗಳನ್ನು ದೆಹಲಿ ಮೆಟ್ರೋ ರೈಲು ನಿಗಮ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಅಪ್‌ಲೋಡ್ ಮಾಡಿದೆ. ಅದೇ ರೀತಿ, ಮುಂಬೈ ಮತ್ತು ಹೈದರಾಬಾದ್‌ನಲ್ಲಿರುವ ಮೆಟ್ರೋ ರೈಲು ಸಂಸ್ಥೆಗಳು ಸಹ ಆಯಾ ದರ ನಿಗದಿ ಸಮಿತಿ ವರದಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಬಿಡುಗಡೆ ಮಾಡಿವೆ. ಈ ಮೂಲಕ ದರ ಪರಿಷ್ಕರಣೆ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕ ವಿಶ್ವಾಸವನ್ನು ಗಳಿಸಿಕೊಂಡಿವೆ.
ಈ ಹಿನ್ನೆಲೆಯಲ್ಲಿ, ಬಿಎಂಆರ್‌ಸಿಎಲ್ ಕೂಡ ದರ ನಿಗದಿ ಸಮಿತಿ ವರದಿಯನ್ನು ಸಾರ್ವಜನಿಕ ವಲಯದಲ್ಲಿ ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸುತ್ತೇನೆ. ಹಾಗೆ ಮಾಡುವುದರಿಂದ ಸಾರ್ವಜನಿಕರ ನಂಬಿಕೆ ಗಳಿಸಿಕೊಳ್ಳಲು ಮತ್ತು ದರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನಿಮ್ಮ ಹೊಣೆಗಾರಿಕೆ ಬಗ್ಗೆ ತಿಳಿಯುತ್ತದೆ ಎಂದು ಒತ್ತಾಯಿಸಿದರು.