ದಕ್ಷಿಣ ಶಿಕ್ಷಕರ ಕ್ಷೇತ್ರ: ಹಳೇ ಹುಲಿ ಮರಿತಿಬ್ಬೇಗೌಡರಿಗೆ ಈ ಬಾರಿ ಮೈತ್ರಿ ಸವಾಲು..!

| Published : May 27 2024, 01:09 AM IST / Updated: May 27 2024, 04:11 AM IST

BJP-JDS Alliance
ದಕ್ಷಿಣ ಶಿಕ್ಷಕರ ಕ್ಷೇತ್ರ: ಹಳೇ ಹುಲಿ ಮರಿತಿಬ್ಬೇಗೌಡರಿಗೆ ಈ ಬಾರಿ ಮೈತ್ರಿ ಸವಾಲು..!
Share this Article
  • FB
  • TW
  • Linkdin
  • Email

ಸಾರಾಂಶ

 ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೂ.3 ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಹಳೆ ಹುಲಿ ಮರಿತಿಬ್ಬೇಗೌಡರಿಗೆ ಈ ಬಾರಿ ಎನ್‌ಡಿಎ ಮೈತ್ರಿಕೂಟದ ಕೆ. ವಿವೇಕಾನಂದ ಪ್ರಬಲ ಸವಾಲುವೊಡ್ಡಿದ್ದಾರೆ.  

ಅಂಶಿ ಪ್ರಸನ್ನಕುಮಾರ್

  ಮೈಸೂರು :  ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೂ.3 ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಹಳೆ ಹುಲಿ ಮರಿತಿಬ್ಬೇಗೌಡರಿಗೆ ಈ ಬಾರಿ ಎನ್‌ಡಿಎ ಮೈತ್ರಿಕೂಟದ ಕೆ. ವಿವೇಕಾನಂದ ಪ್ರಬಲ ಸವಾಲುವೊಡ್ಡಿದ್ದಾರೆ.

ಈ ಕ್ಷೇತ್ರದಿಂದ ಒಟ್ಟು 13 ಮಂದಿ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಬಿಜೆಪಿಯ ಡಾ.ಈ.ಸಿ. ನಿಂಗರಾಜ್ ಗೌಡ, ಪಕ್ಷೇತರ ಕೆ.ಆರ್.ರಾಜು ಅವರು ಜೆಡಿಸ್‌ನ ವಿವೇಕಾನಂದ ಅವರನ್ನು ಬೆಂಬಲಿಸಿ ನಾಮಪತ್ರ ವಾಪಸ್ ಪಡೆದರು. ಉಳಿದ ಹನ್ನೊಂದು ಮಂದಿ ಕಣದಲ್ಲಿದ್ದಾರೆ. ಈ ಪೈಕಿ ಹಿಂದೆ ಬೆಂಗಳೂರು ಹಾಗೂ ಚಾಮರಾಜನಗರಿಂದ ಶಾಸಕರಿಂದ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್, ಬೇರೆ ಶಿಕ್ಷಕರ ಕ್ಷೇತ್ರದಿಂದ ಹಿಂದೊಮ್ಮೆ ಆಯ್ಕೆಯಾಗಿದ್ದ ಕೆ.ಸಿ.ಪುಟ್ಟಸಿದ್ದಶೆಟ್ಟಿ ನಿವೃತ್ತ ಡಿಡಿಪಿಯು ಬಿ.ಎನ್.ನಾಗಮಲ್ಲೇಶ್, ಬಿಎಸ್ಪಿ ಮುಖಂಡ ಡಾ.ಹ.ರ.ಮಹೇಶ್ ಕೂಡ ಕಣದಲ್ಲಿದ್ದಾರೆ.

ಒಟ್ಟು 21,549 ಮತದಾರರ ಪೈಕಿ ಮೈಸೂರು ಜಿಲ್ಲೆ-10,439, ಚಾಮರಾಜನಗರ ಜಿಲ್ಲೆ- 2,181, ಮಂಡ್ಯ ಜಿಲ್ಲೆ- 5,403, ಹಾಸನ ಜಿಲ್ಲೆ- 3,506 ಮತದಾರರಿದ್ದಾರೆ. ಮೈಸೂರು ಪ್ರಾದೇಶಿಕ ಆಯುಕ್ತ ಡಾ.ಜೆ.ಸಿ. ಪ್ರಕಾಶ್ ಚುನಾವಣಾಧಿಕಾರಿಯಾಗಿದ್ದಾರೆ. ಜೂ.3 ರಂದು ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ 44 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಜೂ.6 ರಂದು ಮೈಸೂರಿನಲ್ಲಿ ಮತ ಎಣಿಕೆ ನಡೆಯಲಿದೆ.

ಮರಿತಿಬ್ಬೇಗೌಡರು ಈ ಕ್ಷೇತ್ರದಲ್ಲಿ ಹಳೆಯ ಹುಲಿ. ಈಗಾಗಲೇ ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. 2000- ಕಾಂಗ್ರೆಸ್, 2006- ಪಕ್ಷೇತರ, 2012, 2018- ಜೆಡಿಎಸ್‌ನಿಂದ ಗೆದ್ದಿದ್ದರು. ಈಗ ಐದನೇ ಚುನಾವಣೆ. ಈ ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದಾರೆ.

2000ರಲ್ಲಿ ಈ ಕ್ಷೇತ್ರದ ಚುನಾವಣೆ ನಡೆದಾಗ ಕಾಂಗ್ರೆಸ್ ಟಿಕೆಟ್ ಯಾರಿಗೂ ಬೇಡವಾಗಿತ್ತು. ಏಕೆಂದರೆ ಸುಶಿಕ್ಷತರ ಕ್ಷೇತ್ರದಲ್ಲಿ ಜನತಾ ಪರಿವಾರ ಹಾಗೂ ಬಿಜೆಪಿಯದ್ದೇ ಆಟ. ಕಾಂಗ್ರೆಸ್ ಗೆಲ್ಲುವುದಿಲ್ಲ ಎಂಬುದು ಇದಕ್ಕೆ ಕಾರಣ. ಆದರೆ ಇದನ್ನು ಸುಳ್ಳು ಮಾಡುವಂತೆ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದವರು ಮರಿತಿಬ್ಬೇಗೌಡರು. ಈ ಭಾಗದ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಮೊದಲ ಗೆಲವು ತಂದುಕೊಟ್ಟ ಹೆಗ್ಗಳಿಕೆಯೂ ಅವರದೇ.

ನಂತರ ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಜೆಡಿಎಸ್ ಜೊತೆ ಗುರುತಿಸಿಕೊಂಡಿದ್ದರು. ಆದರೆ, ಅವರಿಗೆ 2006ರಲ್ಲಿ ಟಿಕೆಟ್ ಸಿಗಲಿಲ್ಲ. ಬದಲಿಗೆ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕಿ ಪಿ.ಶಾರದಮ್ಮ ಅವರಿಗೆ ಟಿಕೆಟ್ ನೀಡಲಾಗಿತ್ತು. ಆದರೂ ಮರಿತಿಬ್ಬೇಗೌಡರು ಎದೆಗುಂದದೆ ಶಿಕ್ಷಕರ ವೇದಿಕೆಯ ಹೆಸರಿನಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್- ಹೀಗೆ ಮೂರು ಪಕ್ಷಗಳ ಅಭ್ಯರ್ಥಿಗಳನ್ನು ಸೋಲಿಸಿ, ಎರಡನೇ ಬಾರಿ ಆಯ್ಕೆಯಾದರು.

ಮತ್ತೆ ಜೆಡಿಎಸ್‌ನಲ್ಲಿ ಗುರುತಿಸಿಕೊಂಡ ಅವರು 2012ರಲ್ಲಿ ಮೂರನೇ ಬಾರಿ ಗೆದ್ದು, ಹ್ಯಾಟ್ರಿಕ್ ವೀರ ಎನಿಸಿಕೊಂಡರು.

ಉಪ ಸಭಾಪತಿಯೂ ಆದರು. 2018ರಲ್ಲಿ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಸತತ ನಾಲ್ಕನೇ ಬಾರಿಗೆ ಆಯ್ಕೆಯಾದರು.

ದಕ್ಷಿಣ ಪದವೀಧರ ಕ್ಷೇತ್ರದಿಂದ 2022ರಲ್ಲಿ ತಮ್ಮ ಆಪ್ತ ಜಯರಾಂ ಕೀಲಾರ ಅವರಿಗೆ ಟಿಕೆಟ್ ಬಯಸಿದ್ದರು. ಆದರೆ, ವರಿಷ್ಠರು ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ.ರಾಮು ಅವರಿಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿ, ಪಕ್ಷದಿಂದ ದೂರ ಸರಿದರು. ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡರ ಪರ ಕೆಲಸ ಮಾಡಿದ್ದರು. 2023ರ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದರು. ತಮ್ಮ ಅವಧಿ ಮುಗಿದು, ಚುನಾವಣೆ ಸಮೀಪಿಸಿದ್ದರಿಂದಾಗಿ ಅವರು ತಾಂತ್ರಿಕ ಕಾರಣದಿಂದ ಸಮಸ್ಯೆಯಾಗಬಾರದು ಎಂಬ ಕಾರಣದಿಂದ ಮುಂಚಿತವಾಗಿ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರಿದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರದಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿದರು.

ಕಳೆದ ಎರಡು ಚುನಾವಣೆಗಳಲ್ಲೂ ಮರಿತಿಬ್ಬೇಗೌಡರ ಎದುರಾಳಿಯಾಗಿದ್ದ ಎಂ.ಲಕ್ಷ್ಮಣ ಈ ಬಾರಿ ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಕಳೆದ ಬಾರಿ (2018) ಬಿಜೆಪಿಯಿಂದ ಜೆಎಸ್ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ.ನಿರಂಜಮೂರ್ತಿ ಅಭ್ಯರ್ಥಿಯಾಗಿದ್ದರು. ಅದಕ್ಕೂ ಮೊದಲು ಸತತ ಮೂರು ಚನಾವಣೆಗಳಲ್ಲಿ (2000, 2006, 2012) ಪ್ರೊ.ಎಸ್.ಎಂ.ಗುರುನಂಜಯ್ಯ ಅಭ್ಯರ್ಥಿಯಾಗಿದ್ದರು.

ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಹಲವಾರು ಬಾರಿ ಗೆದ್ದಿದೆ. ಆದರೆ, ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಈವರೆಗೆ ಗೆಲ್ಲಲು ಸಾಧ್ಯವಾಗಿಲ್ಲ. ಐದು ಬಾರಿ ಪಕ್ಷೇತರರು, ಮೂರು ಬಾರಿ ಜನತಾ ಪರಿವಾರ, ಒಮ್ಮೆ ಕಾಂಗ್ರೆಸ್ ಗೆದ್ದಿದೆ.

ದಕ್ಷಿಣ ಪದವೀಧರ ಕ್ಷೇತ್ರದಿಂದ ಎರಡು ಬಾರಿ ಗೆದ್ದಿದ್ದ ಕೆ.ಟಿ. ಶ್ರೀಕಂಠೇಗೌಡರು ಕಳೆದ ಬಾರಿ ಸ್ಪರ್ಧಿಸಿರಲಿಲ್ಲ. ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಈ ಬಾರಿ ಶಿಕ್ಷಕರ ಕ್ಷೇತ್ರದಿಂದ ಕಣಕ್ಕಿಳಿಯಲು ಪ್ರಯತ್ನಿಸಿದ್ದರು. ಆದರೆ ವರಿಷ್ಠರು ಅರಣ್ಯ ವಸತಿ ಮತ್ತು ವಿಹಾರಧಾಮಗಳ ಮಾಜಿ ಅಧ್ಯಕ್ಷ ಕೆ. ವಿವೇಕಾನಂದ ಅವರಿಗೆ ಟಿಕೆಟ್ ನೀಡಿದ್ದಾರೆ. ಬಿಜೆಪಿಯಿಂದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡರಿಗೆ ಟಿಕೆಟ್ ಘೋಷಿಸಲಾಗಿತ್ತು. ಅವರು ನಾಮಪತ್ರ ಕೂಡ ಸಲ್ಲಿಸಿದ್ದರು. ಆದರೆ, ಜೆಡಿಎಸ್ ಕಳೆದ ಬಾರಿ ತಾನು ಗೆದ್ದಿರುವ ಕ್ಷೇತ್ರವನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ತಮಗೆ ಈ ಕ್ಷೇತ್ರ ನೀಡಬೇಕು ಎಂದು ಪಟ್ಟು ಹಿಡಿದಿದ್ದರಿಂದ ನಿಂಗರಾಜ್ ಗೌಡರಿಗೆ ಬಿ ಫಾರಂ ಸಿಗಲಿಲ್ಲ. ವರಿಷ್ಠರ ಮನವೊಲಿಕೆ ಮೇರೆಗೆ ನಾಮಪತ್ರ ವಾಪಸ್ ಪಡೆದರು. ಶ್ರೀಕಂಠೇಗೌಡರ ಬೆಂಬಲಿಗರು ಸಹ ನಾಮಪತ್ರ ಸಲ್ಲಿಸುವಂತೆ ಪಟ್ಟು ಹಿಡಿದಿದ್ದರು. ಆದರೆ ಅವರು ಜೆಡಿಎಸ್‌ನ ಉಭಯ ಬಣಗಳ ನಡುವೆ ಸಂಘರ್ಷದಂದಾಗಿ ಕೈಗೆ ಪೆಟ್ಟಾಗಿ ಅವರು ನಾಮಪತ್ರ ಸಲ್ಲಿಸಲು ಸಾಧ್ಯವಾಗಲಿಲ್ಲ.

ಸಾರ್ವತ್ರಿಕ ಚುನಾವಣೆಗೂ ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರಗಳಿಂದ ನಡೆಯುವ ಚುನಾವಣೆಗೂ ಸಾಕಷ್ಟು ವ್ಯತ್ಯಾಸವಿದೆ. ಏಕೆಂದರೆ ಇಲ್ಲಿ ನೋಂದಾಯಿತರು ಮಾತ್ರ ಮತ ಚಲಾಯಿಸಲು ಅರ್ಹರು. ನೋಂದಣಿ ಚುನಾವಣಾಧಿಕಾರಿಗಳ ಕೆಲಸವಾದರೂ ಕೂಡ ಅಭ್ಯರ್ಥಿಗಳಾಗುವವರ ಪೈಕಿ ಯಾರು ಎಷ್ಟು ಮಂದಿಯನ್ನು ನೋಂದಾಯಿಸಿದ್ದಾರೆ, ಎಷ್ಟು ಮಂದಿಯನ್ನು ಭೇಟಿ ಮಾಡಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಹೀಗಾಗಿ ಮರಿತಿಬ್ಬೇಗೌಡ, ವಿವೇಕಾನಂದ ಹಲವಾರು ತಿಂಗಳುಗಳಿಂದಲೂ ಚುನಾವಣೆಗೆ ಸಿದ್ಧತೆ ನಡೆಸಿದ್ದರು. ಮರಿತಿಬ್ಬೇಗೌಡರಂತೂ ಮೌಲ್ಯಮಾಪನ ಕೇಂದ್ರಗಳು, ಕಾಲೇಜುಗಳಿಗೆ ಭೇಟಿ ನೀಡುತ್ತಾ ಪ್ರಚಾರ ನಡೆಸಿದ್ದರು. .

ಮರಿತಿಬ್ಬೇಗೌಡರ ನಾಮಪತ್ರ ಸಲ್ಲಿಕೆ ವೇಳೆ ಸ್ವತಃ ಸಿಎಂ ಸಿದ್ದರಾಮಯ್ಯ, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ. ವೆಂಕಟೇಶ್, ಮಧು ಬಂಗಾರಪ್ಪ ಸೇರಿದಂತೆ ಈ ನಾಲ್ಕು ಜಿಲ್ಲೆಗಳ ಶಾಸಕರು ಸಾಥ್ ನೀಡಿದರೆ, ವಿವೇಕಾನಂದ ನಾಮಪತ್ರ ಸಲ್ಲಿಸುವಾಗ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಆರ್. ಅಶೋಕ್, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಕಾರ್ಯಾಧ್ಯಕ್ಷ ಸಾ.ರಾ. ಮಹೇಶ್, ಸಂಸದ ಬಿ.ವೈ. ರಾಘವೇಂದ್ರ, ರಾಜವಂಶಸ್ಥ ಯದುವೀರ್ ಮೊದಲಾದವರು ಸಾಥ್ ನೀಡಿದ್ದರು. ಇದಲ್ಲದೆ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ, ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮೊದಲಾದವರು ಪ್ರಚಾರ ನಡೆಸಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಕಾಂಗ್ರೆಸ್ ಸರ್ಕಾರ ಇದ್ದಾಗ ಆಗಿರುವ ಕೆಲಸಗಳು, ಬಿಜೆಪಿ- ಜೆಡಿಎಸ್ ಸರ್ಕಾರಗಳು ಇದ್ದಾಗ ಮಾಡಿರುವ ಕೆಲಸಗಳನ್ನು ನೆನಪಿಸಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿರುವುದು, ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದು, ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ, ಜೊತೆಗೆ ಇದೇ ಭಾಗದವರಾದ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ ಅವರ ವರ್ಚಸ್ಸು ಕೂಡ ಅಲ್ಪಮಟ್ಟಿಗೆ ಕೆಲಸ ಮಾಡುತ್ತದೆ. ಕಳೆದ 24 ವರ್ಷಗಳಿಂದಲೂ ಯಾವುದೇ ಪಕ್ಷ ಅಥವಾ ಪಕ್ಷೇತರರಾಗಿ ನಿಂತರೂ ಗೆಲ್ಲುತ್ತಾ ಬರುತ್ತಿರುವ ಹಳೆ ಹುಲಿ ಮರಿತಿಬ್ಬೇಗೌಡರು ಗೆಲುವಿನ ಓಟವನ್ನು ಮುಂದುವರೆಸುತ್ತಾರ? ಅಥವಾ ಇದೇ ಮೊದಲ ಬಾರಿಗೆ ನೇರ ಹೋರಾಟ ನಡೆಯುತ್ತಿರುವುದರಿಂದ ಎನ್ಡಿಎ ಮೈತ್ರಿಕೂಟದ ಬಿಜೆಪಿ- ಜೆಡಿಎಸ್ ಜಂಟಿಯಾಗಿ ಅದಕ್ಕೆ ಬ್ರೇಕ್ ಹಾಕುತ್ತಾರಾ? ಕಾದು ನೋಡಬೇಕಿದೆ.

ಇದು ಪ್ರಾಶಸ್ತ್ಯದ ಮತದ ಚುನಾವಣೆ. ಆದ್ದರಿಂದ ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಭಾರೀ ಅಂತರ ಇದ್ದಲ್ಲಿ ಮಾತ್ರ ಸುರಕ್ಷಿತವಾಗಿ ಗೆಲುವಿನ ದಡ ಸೇರಬಹುದು. ಇಲ್ಲದಿದ್ದರೆ ಕಡಿಮೆ ಮತ ಪಡೆದ ಅಭ್ಯರ್ಥಿಯನ್ನು ಹೊರ ಹಾಕುವ ಆತ ಪಡೆದ ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಹಂಚುವ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಆಗ ಯಾರ ಕೈ ಬೇಕಾದರೂ ಮೇಲಾಗಬಹುದು.

ಕಣದಲ್ಲಿರುವವರು

ಮರಿತಿಬ್ಬೇಗೌಡ (ಕಾಂಗ್ರೆಸ್)

ಕೆ.ವಿವೇಕಾನಂದ (ಜೆಡಿಎಸ್)

ಎಂ.ನಾಗೇಂದ್ರ ಬಾಬು (ಕರ್ನಾಟಕ ಜನತಾಪಕ್ಷ)

ಡಾ.ಎಸ್.ಅನಿಲ್‌ಕುಮಾರ್, ಎನ್.ಅಂಬರೀಷ್, ನಾಗಮಲ್ಲೇಶ್, ಎಸ್.ನಿಂಗರಾಜ, ಕೆ.ಸಿ.ಪುಟ್ಟಸಿದ್ದಶೆಟ್ಟಿ, ಆರ್.ಮಹೇಶ್, ಕೆ. ರಾಜು, ವಾಟಾಳ್ ನಾಗರಾಜ್ (ಪಕ್ಷೇತರರು)

ಕ್ಷೇತ್ರದ ಲೆಕ್ತಾಚಾರ

ಒಟ್ಟು- 21,549

ಪುರುಷರು- 11,998

ಮಹಿಳೆಯರು- 9,550

ಇತರೆ- 1ಕ್ಷೇತ್ರ ವ್ಯಾಪ್ತಿಯ ಜಿಲ್ಲೆಗಳು-4

ತಾಲೂಕುಗಳು- 26

ವಿಧಾನಸಭಾ ಕ್ಷೇತ್ರಗಳು- 29

ಲೋಕಸಭಾ ಕ್ಷೇತ್ರಗಳು- 

4ಕಳೆದ ಬಾರಿಯ ಫಲಿತಾಂಶ- 2018

ಮರಿತಿಬ್ಬೇಗೌಡ (ಜೆಡಿಎಸ್)- 6,003

ಎಂ.ಲಕ್ಷ್ಮಣ (ಕಾಂಗ್ರೆಸ್)- 5,514

ಬಿ.ನಿರಂಜನಮೂರ್ತಿ (ಬಿಜೆಪಿ)- 3,931

(ಪ್ರಥಮ ಪ್ರಾಶಸ್ತ್ಯದ ಮತಗಳು)