ಸಾರಾಂಶ
ನಮ್ಮದು ಜನಪರ ಸರ್ಕಾರ, ಗ್ಯಾರಂಟಿಗಳ ಸರ್ಕಾರ ಎಂದು ಬೀಗುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ಇನ್ನೂ ತುಂಬಿಲ್ಲ. ಗ್ಯಾರಂಟಿ ಹೆಸರಲ್ಲಿ 2 ವರ್ಷಗಳಿಂದ ಭ್ರಷ್ಟಾಚಾರದಲ್ಲಿ ಮುಳುಗಿದೆ.
ಚಿಕ್ಕಬಳ್ಳಾಪುರ: ನಮ್ಮದು ಜನಪರ ಸರ್ಕಾರ, ಗ್ಯಾರಂಟಿಗಳ ಸರ್ಕಾರ ಎಂದು ಬೀಗುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ಇನ್ನೂ ತುಂಬಿಲ್ಲ. ಗ್ಯಾರಂಟಿ ಹೆಸರಲ್ಲಿ 2 ವರ್ಷಗಳಿಂದ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈ ಸರ್ಕಾರಕ್ಕೆ ಇನ್ನೂ 3 ವರ್ಷ ಸಮಯವಿದ್ದು ಅಲ್ಲಿಯವರೆಗೆ ಪಾಪಿ ಚಿರಾಯು ಎಂಬಂತೆ ಎಷ್ಟು ಪಾಪ ಮಾಡುತ್ತಾರೋ ಮಾಡಲಿ ಎಂದು ಸಂಸದ ಡಾ.ಕೆ.ಸುಧಾಕರ್ ವ್ಯಂಗ್ಯವಾಡಿದರು.
ಚಿಕ್ಕಬಳ್ಳಾಪುರದ ನಗರಸಭೆ ಆವರಣದಲ್ಲಿ ಶನಿವಾರ ನಡೆದ ಬಜೆಟ್ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಗ್ಯಾರಂಟಿಗಳ ಭಾರಕ್ಕೆ ರಾಜ್ಯ ಸರ್ಕಾರ ದಿವಾಳಿಯತ್ತ ಸಾಗಿದೆ. ಆರ್ಥಿಕ ಸ್ಥಿತಿಗತಿಗಳನ್ನು ಯಾವ ರೀತಿ ನಿಭಾಯಿಸಬೇಕಿತ್ತು, ಯಾವ ರೀತಿ ಆಡಳಿತ ನಡೆಸಬೇಕಿತ್ತೋ ಹಾಗೆ ಮಾಡುವುದರಲ್ಲಿ ಎಡವಿದ್ದಾರೆ. ಹೀಗಾಗಿ ಕರ್ನಾಟಕ ರಾಜ್ಯದ ಆರ್ಥಿಕತೆ ಭಯ ಹುಟ್ಟಿಸುವ ದಿಕ್ಕಿನತ್ತ ಸಾಗುತ್ತಿದೆ ಎಂದರು.
ಗ್ಯಾರಂಟಿ ಕೊರ್ಡಪ್ಪಾ ಇಲ್ಲದಿದ್ದರೆ ಬೆಳಕಾಗೊಲ್ಲ ಎಂದು ಯಾರೂ ಕೂಡ ಇವರನ್ನು ಕೇಳಿರಲಿಲ್ಲ. ರೈತರಿಗೆ, ಮಹಿಳೆಯರಿಗೆ ವಿದ್ಯಾರ್ಥಿಗಳಿಗೆ ಹೀಗೆ ಈ ಸರ್ಕಾರ ನಿತ್ಯವೂ ಎಲ್ಲ ವರ್ಗದ ತಲೆಯ ಮೇಲೆ ತೆರಿಗೆಯ ಭಾರ ಹಾಕುತ್ತಿದ್ದಾರೆ.
ರೈತರಿಗೆ ಕೊಡುವ ಹಾಲಿನ ಬೆಲೆ ಇಳಿಸಿ, ಗ್ರಾಹಕರು ಕುಡಿಯುವ ಹಾಲಿಗೆ ಬೆಲೆ ಏರಿಸಿದ್ದಾರೆ. 18 ತಿಂಗಳಲ್ಲಿ 4 ಬಾರಿ ಹಾಲಿನ ಬೆಲೆ ಏರಿಕೆ ಮಾಡಿದ್ದರೂ ರೈತರಿಗೆ ಹಣ ವರ್ಗಾಯಿಸಿಲ್ಲ. ರೈತರಿಗೆ ಕೊಡುವುದರಲ್ಲೇ ₹3 ಕಡಿಮೆ ಮಾಡಿದ್ದಾರೆ ಎಂದು ಕುಟುಕಿದರು.