ಬೆಂಗಳೂರು : ಅಧಿಕಾರ, ಸ್ಥಾನಮಾನ ಬೇಕು ಎನ್ನುವವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜತೆಗೆ ಹೋಗಿ. ಪಕ್ಷವನ್ನು ಸದೃಢವಾಗಿಸಲು, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರ ಕೈ ಬಲಪಡಿಸಬೇಕೆನ್ನುವವರು ನನ್ನ ಜತೆಗೆ ಬರಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೆಲ್ಲ ಅಧಿಕಾರ, ಸ್ಥಾನಮಾನಕ್ಕಾಗಿ ಬರುತ್ತಾರೋ ಅವರು ಡಿ.ಕೆ. ಶಿವಕುಮಾರ್ ಅವರ ಬಳಿಗೆ ಹೋಗಬೇಕು. ಪಕ್ಷ ಕಟ್ಟಲು, ಸದೃಢಗೊಳಿಸಬೇಕು ಎನ್ನುವವರು ನನ್ನ ಜತೆಗೆ ಬರಲಿ. ಪಕ್ಷ ಸಂಘಟನೆ ಮಾಡುವುದು ಮತ್ತು ಸರ್ಕಾರ ನಡೆಸುವುದು ಬೇರೆಬೇರೆ. ಪಕ್ಷ ನಡೆಸಲು ಸರ್ಕಾರದಿಂದ ಯಾವ ರೀತಿ ನೆರವು ಬೇಕು, ಸರ್ಕಾರಕ್ಕೆ ಪಕ್ಷದಿಂದ ಯಾವ ರೀತಿ ಸಹಕಾರ ಬೇಕು ಎಂಬ ಬಗ್ಗೆ ಚರ್ಚಿಸಲಾಗುವುದು. ಸರ್ಕಾರ ಮತ್ತು ಪಕ್ಷ ಎರಡೂ ಜೋಡೆತ್ತಿನ ರೀತಿಯಲ್ಲಿ ಮುಂದೆ ಕೆಲಸ ಮಾಡುತ್ತವೆ ಎಂದರು.
ರಾಜ್ಯ ಸರ್ಕಾರವೂ ಕಾಂಗ್ರೆಸ್‌ನ ತತ್ವ, ಸಿದ್ಧಾಂತಗಳ ಮೇಲೆ ನಡೆಯಬೇಕು. ಸಂವಿಧಾನ ರಕ್ಷಣೆ, ಮಹಾತ್ಮ ಗಾಂಧೀಜಿ ಅವರ ಸರ್ವ ಧರ್ಮ ಸಮಭಾವ ತತ್ವದ ಅಡಿ ಸಾಗಬೇಕು. ಎಸ್‌ಐಆರ್ ಮೂಲಕ ಮತದಾರರ ಹಕ್ಕು ಕಸಿಯುವ ಪ್ರಯತ್ನ ಆರಂಭವಾಗಿದ್ದು, ಅದನ್ನು ತಡೆಯಲು ಸರ್ಕಾರ ಮುಂದಾಗಬೇಕು ಎಂದು ಹೇಳಿದರು.
ವಿವಿಧ ನಾಯಕರ ಭೇಟಿ:
ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಿ ಎಐಸಿಸಿ ಆದೇಶಿಸಿದ ನಂತರದಿಂದ ಬಿ.ಕೆ.ಹರಿಪ್ರಸಾದ್ ಅವರು ವಿವಿಧ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಗುರುವಾರ ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿದರು. ಈ ವೇಳೆ ಇಬ್ಬರೂ ನಾಯಕರು ಪಕ್ಷ ಸಂಘಟನೆ ಸೇರಿ ಪ್ರಸಕ್ತ ಬೆಳವಣಿಗೆಗಳ ಕುರಿತು ಚರ್ಚಿಸಿದರು.
ನಂತರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಕೆ.ಎಚ್.ಮುನಿಯಪ್ಪ ಸೇರಿ ಇನ್ನಿತರ ಸಚಿವರ ನಿವಾಸಗಳಿಗೆ ತೆರಳಿ ಮಾತುಕತೆ ನಡೆಸಿದರು.
ಸಚಿವ ಸತೀಶ್ ಜತೆಗೆ ಹರಿಪ್ರಸಾದ್ ಮಾತುಕತೆ
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸಕ್ಕೂ ಬಿ.ಕೆ.ಹರಿಪ್ರಸಾದ್ ಭೇಟಿ ನೀಡಿದರು. ಈ ವೇಳೆ ಇಬ್ಬರೂ, ಪಕ್ಷ ಸಂಘಟನೆ, ಸರ್ಕಾರದ ಕಾರ್ಯದ ಕುರಿತಂತೆ ಸಮಾಲೋಚನೆ ನಡೆಸಿದರು. ಜತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸತೀಶ್ ಕೈತಪ್ಪಿದ್ದರ ಬಗ್ಗೆಯೂ ಚರ್ಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಕೆ.ಹರಿಪ್ರಸಾದ್ ಅವರು, ಸತೀಶ್ ಜಾರಕಿಹೊಳಿ ಕೂಡ ಕೆಪಿಸಿಸಿ ಅಧ್ಯಕ್ಷರಾಗಬೇಕು ಎಂದು ಅಂದುಕೊಂಡಿದ್ದರು. ಆದರೆ, ಕೆಲಷರತ್ತು, ನಿಯಮದಿಂದಾಗಿ ಅವರಿಗೆ ಸ್ಥಾನ ಸಿಗಲಿಲ್ಲ. ಕೊನೆಗೆ ಹೈಕಮಾಂಡ್ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದೆ. ಹೀಗಾಗಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷ ಮತ್ತು ಸರ್ಕಾರದ ನಡುವಿನ ಸಮನ್ವಯ ಕುರಿತು ಮಾತುಕತೆ ನಡೆಸುತ್ತೇವೆ. ಸತೀಶ್ ಅವರು ಈ ಹಿಂದಿನಿಂದಲೂ ವಿವಿಧ ಸಂದರ್ಭದಲ್ಲಿ ಪಕ್ಷ ಸಂಘಟನೆ ಕೆಲಸ ಮಾಡಿದ್ದಾರೆ. ಈಗಲೂ ಪಕ್ಷವನ್ನು ಗಟ್ಟಿಗೊಳಿಸಲು ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ದೆಹಲಿ ಮಟ್ಟದಲ್ಲಿ ಕೆಲಸ ಮಾಡಿದ ಅನುಭವದ ಹಿನ್ನೆಲೆಯಲ್ಲಿ ಹೈಕಮಾಂಡ್ ನಾಯಕರು ನನ್ನನ್ನು ಕೆಪಿಸಿಸಿ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಇದು ಸಂತಸದ ಸಂಗತಿಯಾಗಿದ್ದು, ಸೋನಿಯಾಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿ ಎಲ್ಲ ನಾಯಕರಿಗೂ ಧನ್ಯವಾದ ತಿಳಿಸುತ್ತೇನೆ. ದೆಹಲಿಗೆ ತೆರಳಿ ಸೋನಿಯಾಗಾಂಧಿ ಸೇರಿ ಉಳಿದ ನಾಯಕರ ಭೇಟಿ ನಂತರ ಪದಗ್ರಹಣದ ದಿನಾಂಕ ನಿಗದಿ ಮಾಡಲಾಗುವುದು.
-ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ನೂತನ ಅಧ್ಯಕ್ಷ
- ರಾಜ್ಯ ಕಾಂಗ್ರೆಸ್ ಸರ್ಕಾರ ಪಕ್ಷದ ತತ್ವ, ಸಿದ್ಧಾಂತಗಳ ಮೇಲೆ ನಡೆಯಬೇಕು
- ಸಂವಿಧಾನ, ಗಾಂಧೀಜಿ ಅವರ ಸರ್ವ ಧರ್ಮ ಸಮಭಾವದಂತೆ ನಡೆಯಬೇಕು
- ಎಸ್‌ಐಆರ್ ಮೂಲಕ ಮತದಾರರ ಹಕ್ಕು ಕಸಿಯುವ ಯತ್ನ ತಡೆಯಬೇಕು
- ಸರ್ಕಾರಕ್ಕೆ ಪಕ್ಷದಿಂದ ಯಾವ ಸಹಕಾರ ನೀಡಬೇಕೆಂದು ಚರ್ಚೆ: ಹರಿಪ್ರಸಾದ್
