ಗ್ರಾಚ್ಯುಟಿ ಜಾರಿಗಾಗಿ ವಿಧಾನಸೌಧ ಚಲೋ : ಅಂಗನವಾಡಿ ಸಂಘಟನೆಗಳ ಜಂಟಿ ಸಮಾವೇಶದಲ್ಲಿ ನಿರ್ಣಯ

| N/A | Published : Apr 17 2025, 12:46 AM IST / Updated: Apr 17 2025, 04:20 AM IST

ಸಾರಾಂಶ

ಕಳೆದ 25 ವರ್ಷಗಳಲ್ಲಿ ನಿವೃತ್ತರಾದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ನೀಡಬೇಕೆಂದು ಆಗ್ರಹಿಸಿ ಜೂ.4ರಂದು ವಿಧಾನಸೌಧ ಚಲೋ ಹೋರಾಟ ನಡೆಸಲು ರಾಜ್ಯದ ವಿವಿಧ ಅಂಗನವಾಡಿ ಸಂಘಟನೆಗಳನ್ನು ಒಳಗೊಂಡ ಸಂಯುಕ್ತ ಸಂಘರ್ಷ ಸಮಿತಿ ನಿರ್ಧರಿಸಿದೆ.

 ಬೆಂಗಳೂರು : ಕಳೆದ 25 ವರ್ಷಗಳಲ್ಲಿ ನಿವೃತ್ತರಾದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ನೀಡಬೇಕೆಂದು ಆಗ್ರಹಿಸಿ ಜೂ.4ರಂದು ವಿಧಾನಸೌಧ ಚಲೋ ಹೋರಾಟ ನಡೆಸಲು ರಾಜ್ಯದ ವಿವಿಧ ಅಂಗನವಾಡಿ ಸಂಘಟನೆಗಳನ್ನು ಒಳಗೊಂಡ ಸಂಯುಕ್ತ ಸಂಘರ್ಷ ಸಮಿತಿ ನಿರ್ಧರಿಸಿದೆ.

ಬುಧವಾರ ನಗರದಲ್ಲಿ ನಡೆದ ಎಐಟಿಯುಸಿ - ಟಿಯುಸಿಸಿ - ಎಐಯುಟಿಯುಸಿ ನೇತೃತ್ವದ ಅಂಗನವಾಡಿ ಸಂಘಟನೆಗಳ ಜಂಟಿ ಸಮಾವೇಶ ಈ ನಿರ್ಣಯ ಕೈಗೊಂಡಿತು.

ಗ್ರಾಚ್ಯುಟಿಗಾಗಿ ರಾಜ್ಯಾದ್ಯಂತ ವಿವಿಧ ಹಂತದ ಹೋರಾಟ ಕೈಗೊಳ್ಳಲಾಗುವುದು. ಮೇ 17ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಿವೃತ್ತ ವಯೋವೃದ್ಧರು ಧರಣಿ ನಡೆಸಲಿದ್ದಾರೆ. ಸರ್ಕಾರ ನಿರ್ಲಕ್ಷಿಸಿದರೆ ಜೂನ್ 4ರಂದು ನಿವೃತ್ತ ವಯೋವೃದ್ದರು ವಿಧಾನಸೌಧ ಚಲೋ ಹಮ್ಮಿಕೊಳ್ಳಲಿದ್ದೇವೆ ಎಂದು ಸಂಘಟಕರು ಘೋಷಿಸಿದರು.

ಟಿಯುಸಿಸಿ ರಾಜ್ಯಾಧ್ಯಕ್ಷ ಜಿ.ಆರ್.ಶಿವಶಂಕರ್ ಮಾತನಾಡಿ, 1975ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಸೇವೆಗೆ ಸೇರಿದವರು 2011-12ನೇ ಸಾಲಿನಿಂದ ನಿವೃತ್ತಿ ಆಗುತ್ತಿದ್ದಾರೆ. ಆದರೆ ಇದನ್ನು ಪರಿಗಣಿಸದ ರಾಜ್ಯ ಸರ್ಕಾರ 2023ರಿಂದ ನಿವೃತ್ತರಾದವರಿಗೆ ಗ್ರಾಚ್ಯುಟಿ ಜಾರಿಗೊಳಿಸಲು ನಿರ್ಧರಿಸಿರುವುದು ಸರಿಯಲ್ಲ. 2011-12ನೇ ಸಾಲಿನಿಂದ ನಿವೃತ್ತರಾಗಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಇವರಿಗೆ ಒಂದು ಬಾರಿ ನೀಡುವ ಗ್ರಾಚ್ಯುಟಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಧಾನ ಕಾರ್ಯದರ್ಶಿ ನಾಗರತ್ನಮ್ಮ, ಎಐಟಿಯುಸಿ ಸಂಘಟನೆಯ ರಾಜ್ಯಾಧ್ಯಕ್ಷ ಬಿ.ಅಮ್ಜದ್ ಮತ್ತು ಪ್ರಧಾನ ಕಾರ್ಯದರ್ಶಿ ಎಂ.ಜಯಮ್ಮ ಇದ್ದರು.