ಸಾರಾಂಶ
ಕಂಟೋನ್ಮೆಂಟ್ ರೈಲ್ವೆ ಕಾಲೋನಿಯಲ್ಲಿ 368 ಮರಗಳನ್ನು ಕತ್ತರಿಸಲು ಮುಂದಾಗಿರುವುದನ್ನು ವಿರೋಧಿಸಿ ‘ಪರಿಸರಕ್ಕಾಗಿ ನಾವು’ ಸಂಘಟನೆಯವರು ಸ್ಥಳಕ್ಕೆ ಭೇಟಿ ನೀಡಿ ‘ಪರಿಸರ ವ್ಯವಸ್ಥೆ’ ಪರಿಶೀಲಿಸಿದರು.
ಬೆಂಗಳೂರು : ವಸಂತ ನಗರದ ಕಂಟೋನ್ಮೆಂಟ್ ರೈಲ್ವೆ ಕಾಲೋನಿಯಲ್ಲಿ ರೈಲ್ವೆ ಭೂ ಅಭಿವೃದ್ಧಿ ಪ್ರಾಧಿಕಾರವು (ಆರ್‌ಎಲ್‌ಡಿಎ) ವಾಣಿಜ್ಯ ಯೋಜನೆಗಾಗಿ 368 ಮರಗಳನ್ನು ಕತ್ತರಿಸಲು ಮುಂದಾಗಿರುವುದನ್ನು ವಿರೋಧಿಸಿ ‘ಪರಿಸರಕ್ಕಾಗಿ ನಾವು’ ಸಂಘಟನೆಯವರು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ‘ಪರಿಸರ ವ್ಯವಸ್ಥೆ’ ಪರಿಶೀಲಿಸಿದರು.
ರೈಲ್ವೆ ಇಲಾಖೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ಮಲ್ಟಿನ್ಯಾಷನಲ್ ಕಂಪನಿಯೊಂದರ ಜೊತೆ ಒಪ್ಪಂದ ಮಾಡಿಕೊಂಡು ಇಲ್ಲಿ ಕಟ್ಟಡ ನಿರ್ಮಿಸಲು ಉದ್ದೇಶಿಸಿದೆ. ಈ ಸಂಬಂಧ ವಿಸ್ತೃತ ಯೋಜನಾ ವರದಿಯನ್ನೂ ರೂಪಿಸಲಾಗಿದೆ ಎಂಬ ಮಾಹಿತಿಯಿದೆ. ಈಗ ತೋರಿಕೆಗೆ ಅಭಿಪ್ರಾಯ ಕೇಳಲು ಮೇ 20ರಂದು ಸಾರ್ವಜನಿಕರ ಅಭಿಪ್ರಾಯ ಕೇಳಲು ಸಭೆ ಕರೆದಿದೆ. ಮೊದಲು ಆ ಒಪ್ಪಂದ ರದ್ದುಪಡಿಸಿಕೊಂಡು ಜನರ ಅಭಿಪ್ರಾಯ ಪಡೆಯಬೇಕು ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದರು.ಮಾಜಿ ಶಾಸಕ, ‘ಪರಿಸರಕ್ಕಾಗಿ ನಾವು’ ಸಂಘಟನೆ ಅಧ್ಯಕ್ಷ ಎ.ಟಿ.ರಾಮಸ್ವಾಮಿ ಮಾತನಾಡಿ, ನಗರದ ಹೃದಯುಭಾಗದಲ್ಲಿರುವ ಈ ಜೀವವೈದ್ಯ ತಾಣದಲ್ಲಿ ಮರ ಕಡಿಯಲು ಉದ್ದೇಶಿಸಿರುವುದೇ ತಪ್ಪು. ಆಲ, ನೇರಳೆ, ಹಲಸು ಸೇರಿ ನೂರಾರು ವರ್ಷದ ಮರಗಳಿವೆ. ಅಲ್ಲದೆ ಪುರಾಣಕಾಲದ ಮುನೇಶ್ವರಸ್ವಾಮಿ, ಪಚ್ಚಯಮ್ಮ ದೇವಾಲಯ ಕೂಡ ಇದೆ. ಮರ ಕಡಿಯುವ ಬದಲು ಇಲ್ಲಿಯೇ ಒಂದು ಎಕೋ ಪಾರ್ಕ್ ನಿರ್ಮಿಸಲು ಒತ್ತಾಯಿಸುತ್ತೇವೆ ಎಂದರು.
ಮೇ 20 ರಂದು ಸರ್ಕಾರ ಕರೆದಿರುವ ಸಾರ್ವಜನಿಕ ಸಭೆಯಲ್ಲಿ ನೂರಾರು ಜನರು ಭಾಗವಹಿಸಲಿದ್ದು, ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಇಲ್ಲಿನ ಒಂದೇ ಒಂದು ಮರವನ್ನು ಕತ್ತರಿಸಲು ಬಿಡುವುದಿಲ್ಲ. ಒಂದು ಮರ ಕತ್ತರಿಸುವುದೆಂದರೆ, ಒಂದು ಮನುಷ್ಯನನ್ನು ಕೊಲ್ಲುವುದಕ್ಕಿಂತ ಹೆಚ್ಚಿನ ಅಪರಾಧ ಎಂದು ನ್ಯಾಯಾಲಯ ಹೇಳಿದೆ. ಹೀಗಿರುವಾಗ ಅಭಿವೃದ್ಧಿ ಹೆಸರಲ್ಲಿ ನೂರಾರು ಮರ ಕತ್ತರಿಸುವುದು ಎಷ್ಟು ಸರಿ? ಸದ್ಯದ ಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಮರ ಬೆಳೆಸುವುದು, ಸಸಿ ನೆಡುವುದೇ ನಿಜವಾದ ಅಭಿವೃದ್ಧಿ ಎಂದು ಹೇಳಿದರು.
ಪರಿಸರ ತಜ್ಞರು ಮಾತನಾಡಿ, ಜೀವ ಉಳಿಸುವ ಮರಗಳನ್ನು ವಾಣಿಜ್ಯ ಉದ್ದೇಶಕ್ಕೆ ಕತ್ತರಿಸುವುದಕ್ಕೆ ಅನುಮತಿ ನೀಡುವ ಸರಕಾರಕ್ಕೆ ನಾಚಿಕೆಯಾಗಬೇಕು. ಮೆಟ್ರೋ, ಉಪನಗರ ರೈಲು ಸೇರಿ ಹಲವು ಯೋಜನೆಗಳಿಗೆ ಮೇಲಿಂದ ಮೇಲೆ ಬೆಂಗಳೂರಿನ ಹಸಿರು ಹೊಂದಿಕೆ ಸಂಪೂರ್ಣ ನಾಶವಾಗುತ್ತಿದೆ. ಬಿಸಿಲಿನ ತಾಪಮಾನ ಹೆಚ್ಚಾಗಿದೆ. ನೀರಿಗೆ ಹಾಹಕಾರ ಉಂಟಾಗಿದೆ. 1973ರಲ್ಲಿ ನಗರದ ಶೇ.33ರಷ್ಟಿದ ಅರಣ್ಯ ಶೇ.21ಕ್ಕೆ ಇಳಿಕೆಯಾಗಿದೆ. ಒಂದು ಮರ ಕಡಿದರೆ 10 ಸಸಿ ನೆಡಬೇಕು ಎನ್ನುವ ಕ್ರಮ ಇದೆ. ಆದರೆ, ಸಸಿ ಎಲ್ಲಿ ನಿಟ್ಟಿದ್ದಾರೆ. ನೆಟ್ಟ ಸಸಿ ಎಷ್ಟು ಬದುಕಿವೆ ಎನ್ನುವ ಲೆಕ್ಕಚಾರವೇ ಇಲ್ಲ ಎದು ಅಸಮಾಧಾನ ವ್ಯಕ್ತಪಡಿಸಿದರು.
ಪರಿಸರಕ್ಕಾಗಿ ನಾವು ಸಂಘಟನೆಯ ಪ್ರಮುಖರಾದ ಇಂದೂಧರ ಹೊನ್ನಾಪುರ, ಸಂಘಟನೆಯ ಕಾರ್ಯಾಧ್ಯಕ್ಷ ಆಂಜನೇಯ ರೆಡ್ಡಿ , ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಮರ ವೈದ್ಯ ವಿಜಯ್ ನಿಶಾಂತ್, ಜೋಸೆಫ್ ಹೂವರ್, ಜೇಮ್ಸ್ ಅಲೆಕ್ಸಾಂಡರ್, ಪರಿಸರ ಮಂಜು ಸೇರಿ ಇತರರಿದ್ದರು.
ಮೇ 20ರ ಸಭೆಗೆ 100 ಮಂದಿಗೆ ಅವಕಾಶ
ಬೆಂಗಳೂರು: ಕಂಟೋನ್ಮೆಂಟ್ ರೈಲ್ವೆ ಕಾಲೋನಿ ಆವರಣದಲ್ಲಿರುವ ಮರಗಳ ತೆರವಿಗೆ ಆಕ್ಷೇಪ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮೇ 20 ರಂದು ಸಾರ್ವಜನಿಕರ ಸಭೆ ನಡೆಸುವುದಕ್ಕೆ ಬಿಬಿಎಂಪಿ ಅರಣ್ಯ ವಿಭಾಗ ನಿರ್ಧರಿಸಿದೆ. ಸಭೆಯನ್ನು ಮೇ 20ರ ಬೆಳಗ್ಗೆ 11 ರಿಂದ 3 ಗಂಟೆವರೆಗೆ ಮಹಾತ್ಮ ಗಾಂಧಿ ರೈಲ್ವೆ ಕಾಲೋನಿ ಅನುಗ್ರಹ ಕಮ್ಯುನಿಟಿ ಹಾಲ್‌ನಲ್ಲಿ ಏರ್ಪಡಿಲಾಗಿದ್ದು, ಸಭೆಯಲ್ಲಿ 100 ಮಂದಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದು ಬಿಬಿಎಂಪಿ ಅರಣ್ಯ ವಿಭಾಗವು ಗುರುವಾರ ಹೊರಡಿಸಿರುವ ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಲಾಗಿದೆ.