ಕಳೆದ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ಆಗಿದೆ ಎಂದು ಘಂಟಾಘೋಷವಾಗಿ ದಾಖಲೆಗಳ ಸಹಿತ ಆರೋಪ ಮಾಡುತ್ತಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಈ ಬಗ್ಗೆ ಚುನಾವಣಾ ಆಯೋಗದ ಮುಂದೆ ತಮ್ಮ ಸಹಿಯೊಂದಿಗೆ ದೂರು ನೀಡಲು ಹಾಗೂ ಪ್ರಮಾಣ ಪತ್ರ ಸಲ್ಲಿಸಲು ಹಿಂದೇಟು ಹಾಕುತ್ತಿರುವುದೇಕೆ?

 ಬೆಂಗಳೂರು : ಕಳೆದ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ಆಗಿದೆ ಎಂದು ಘಂಟಾಘೋಷವಾಗಿ ದಾಖಲೆಗಳ ಸಹಿತ ಆರೋಪ ಮಾಡುತ್ತಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಈ ಬಗ್ಗೆ ಚುನಾವಣಾ ಆಯೋಗದ ಮುಂದೆ ತಮ್ಮ ಸಹಿಯೊಂದಿಗೆ ದೂರು ನೀಡಲು ಹಾಗೂ ಪ್ರಮಾಣ ಪತ್ರ ಸಲ್ಲಿಸಲು ಹಿಂದೇಟು ಹಾಕುತ್ತಿರುವುದೇಕೆ?

ಈ ಬಗ್ಗೆ ಪಕ್ಷದ ನಾಯಕರು ಹಾಗೂ ಕಾನೂನು ತಜ್ಞರು ತಮ್ಮದೇ ಅಭಿಪ್ರಾಯ ಹಂಚಿಕೊಂಡಿದ್ದಾರೆ. ದೇಶದ ಪ್ರಬಲ ಪ್ರತಿಪಕ್ಷವೊಂದು ತನ್ನ ವಿರುದ್ಧ ಮಾಡಿರುವ ಆರೋಪ ಅತ್ಯಂತ ಗಂಭೀರ ಸ್ವರೂಪದ್ದಾಗಿರುವುದರಿಂದ ಈ ಬಗ್ಗೆ ಕಾಂಗ್ರೆಸ್‌ ಒದಗಿಸಿರುವ ದಾಖಲೆಗಳಿಗೆ ಆ ಪಕ್ಷ ಬದ್ಧತೆ ತೋರಿಸಲಿ ಎಂಬುದು ಆಯೋಗದ ಅಪೇಕ್ಷೆ. ಆದರೆ, ಇದಕ್ಕೆ ಕಾಂಗ್ರೆಸ್‌ ನಾಯಕತ್ವ ಸಿದ್ಧವಿಲ್ಲ. ಇದಕ್ಕೆ ಮುಖ್ಯ ಕಾರಣ ಚುನಾವಣಾ ಅಕ್ರಮಗಳ ಬಗ್ಗೆ ತಾವು ಮಾಡಿದ ಆರೋಪ, ನೀಡಿದ ಸಾಕ್ಷಿ ಆಧಾರ, ದಾಖಲೆಗಳ ಬಗ್ಗೆ ಚುನಾವಣಾ ಆಯೋಗ ತನಿಖೆ ನಡೆಸುತ್ತದೆ. ಆದರೆ, ಈ ತನಿಖೆಯು ನ್ಯಾಯ ಸಮ್ಮತವಾಗಿರುತ್ತದೆ ಎಂಬ ನಂಬಿಕೆ ಕಾಂಗ್ರೆಸ್‌ ನಾಯಕರಿಗೆ ಇಲ್ಲ. ಹೀಗಾಗಿ ತನಿಖೆಯ ನಂತರ ತಾನು ಒದಗಿಸಿದ ದಾಖಲೆ ಹಾಗೂ ಆಧಾರಗಳು ಸರಿಯಲ್ಲ ಅಥವಾ ಸುಳ್ಳು ಎಂದು ಸಾಬೀತಾದರೆ ದೂರುದಾರನೇ ಸಮಸ್ಯೆಗೆ ಸಿಲುಕುವ ಸಾಧ್ಯತೆಯಿದೆ.

ಏಕೆಂದರೆ, ಜನತಾ ಪ್ರಾತಿನಿಧ್ಯ ಕಾಯ್ದೆ 1950ರ ಸೆಕ್ಷನ್‌ 31ರಡಿ ಸುಳ್ಳು ಪ್ರಮಾಣ ಪತ್ರ ನೀಡಿದ ವ್ಯಕ್ತಿಯನ್ನು ಶಿಕ್ಷೆಗೆ ಒಳಪಡಿಸಬಹುದು. ಅಲ್ಲದೆ, ಸುಳ್ಳು ದಾಖಲೆಗಳನ್ನು ನೀಡುವುದು ಕೂಡ ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್‌ 227ರ ಅಡಿ ಅಪರಾಧ. ಪ್ರಮಾಣ ಪತ್ರ ನೀಡುವಾಗ ಈ ಎಲ್ಲವುಗಳ ಬಗ್ಗೆ ತನಗೆ ತಿಳಿವಳಿಕೆ ಇದೆ ಎಂದು ಪ್ರಮಾಣ ಪತ್ರದಲ್ಲೇ ದೂರುದಾರ ಪ್ರಮಾಣಿಕರಿಸಬೇಕಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ಮೇಲ್ನೋಟಕ್ಕೆ ತಾವು ನಡೆಸಿದ ಅಧ್ಯಯನದಲ್ಲಿ ಕಂಡುಬಂದಿರುವ ಮತಗಳವು ಬಗ್ಗೆ ಪ್ರಮಾಣ ಪತ್ರ ನೀಡಿದರೆ ಕಾನೂನಾತ್ಮಕ ಹೋರಾಟಕ್ಕೆ ಕಮಿಟ್‌ ಆದಂತಾಗಲಿದೆ. ಇದು ಸಮಸ್ಯೆಯೂ ಆಗಬಹುದು. ಹಾಗಾಗಿ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕಿರಬಹುದು ಎನ್ನಲಾಗಿದೆ.

ಇನ್ನು ಪಕ್ಷದ ಮುಖಂಡರು ಹೇಳುವ ಪ್ರಕಾರ, ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಮೊದಲೇ ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಅನುಮಾನ ಕಾಂಗ್ರೆಸ್‌ನದ್ದಾಗಿದೆ. ಈಗ ನಮ್ಮ ನಾಯಕ ರಾಹುಲ್‌ ಗಾಂಧಿ ಅವರು ಪ್ರಮಾಣ ಪತ್ರ ಸಲ್ಲಿಸಿದರೆ ಅದನ್ನು ದುರುಪಯೋಗಪಡಿಸಿಕೊಂಡು ಅವರನ್ನು ಕಾನೂನಡಿ ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆಯಿದೆ.

ಅಲ್ಲದೆ, ಈ ಆಂದೋಲನದ ಉದ್ದೇಶ ಮತಗಳವು ನಡೆಯುತ್ತಿರುವ ವಿಚಾರದ ಬಗ್ಗೆ ಜನ ಜಾಗೃತಿ ಮೂಡಿಸುವುದು, ಚುನಾವಣಾ ಆಯೋಗಕ್ಕೂ ಚುರುಕು ಮಟ್ಟಿಸುವುದಾಗಿತ್ತು. ನಿಜವಾದ ಬದ್ಧತೆ ಇದ್ದರೆ ಸ್ವಾಯತ್ತ ಸಂಸ್ಥೆಯಾಗಿರುವ ಆಯೋಗ ಈ ಬಗ್ಗೆ ತನಿಖೆ ನಡೆಸಿ ಸತ್ಯಾಸತ್ಯತೆ ಹೊರ ತರಬೇಕು. ಅದು ಆಗದಿದ್ದರೆ ಕೊನೆಯ ಪಕ್ಷ ಮುಂದಿನ ಚುನಾವಣೆಗಳಲ್ಲಾದರೂ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಜನರೂ ಎಚ್ಚೆತ್ತುಕೊಳ್ಳಲಿದ್ದಾರೆ ಎನ್ನುತ್ತಾರೆ ಪಕ್ಷದ ಕೆಲ ಪ್ರಮುಖ ಮುಖಂಡರು.