ರಾಜ್ಯದಲ್ಲಿ ಗೌರವ ಧನ ₹1000 ಹೆಚ್ಚಳಕ್ಕಾಗಿ ‘ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ’ ಧರಣಿ

| N/A | Published : Mar 18 2025, 01:46 AM IST / Updated: Mar 18 2025, 06:46 AM IST

ಸಾರಾಂಶ

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಗೌರವ ಧನ ಹೆಚ್ಚಿಸಿದಂತೆ ರಾಜ್ಯದಲ್ಲಿನ ಆಶಾ ಕಾರ್ಯಕರ್ತೆಯರ ಗೌರವ ಧನವನ್ನು ₹1000 ಹೆಚ್ಚಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಕಾರ್ಯಕರ್ತೆಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.

 ಬೆಂಗಳೂರು :  ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಗೌರವ ಧನ ಹೆಚ್ಚಿಸಿದಂತೆ ರಾಜ್ಯದಲ್ಲಿನ ಆಶಾ ಕಾರ್ಯಕರ್ತೆಯರ ಗೌರವ ಧನವನ್ನು ₹1000 ಹೆಚ್ಚಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಕಾರ್ಯಕರ್ತೆಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.

ಈ ಆಯವ್ಯಯದಲ್ಲಿ ರಾಜ್ಯದ ಸುಮಾರು 2.50 ಲಕ್ಷ ಅಂಗನವಾಡಿ-ಬಿಸಿಯೂಟ ಕಾರ್ಯಕರ್ತೆಯರಿಗೆ ₹1,000 ಗೌರವಧನ ಹೆಚ್ಚಿಸಲಾಗಿದೆ. ಅದೇ ರೀತಿ 42 ಸಾವಿರ ಆಶಾ ಕಾರ್ಯಕರ್ತೆಯರಿಗೂ ₹1,000 ಹೆಚ್ಚಿಸಿ, ಬಜೆಟ್‌ನಲ್ಲಿ ಸೇರ್ಪಡೆ ಮಾಡಿ ಆದೇಶಿಸಬೇಕು ಎಂದು ಆಗ್ರಹಿಸಿದರು.

ಕಳೆದ ಜನವರಿಯಲ್ಲಿ ಆಶಾ ಕಾರ್ಯಕರ್ತೆಯರು ಹೋರಾಟ ನಡೆಸಿದ್ದಾಗ ಮುಖ್ಯಮಂತ್ರಿಯವರು ಎಪ್ರಿಲ್ 2025ರಿಂದ ಪ್ರತಿ ತಿಂಗಳು ಎಲ್ಲ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಠ ₹10000 ಗೌರವಧನವನ್ನು ನೀಡಲಾಗುವುದು. ಅದಲ್ಲದೆ ಕಾಂಪೋನೆಂಟ್‌ಗಳ ಹೆಚ್ಚುವರಿ ಕೆಲಸದ ಆಧಾರದ ಮೇಲೆ ಹೆಚ್ಚುವರಿ ಪ್ರೋತ್ಸಾಹಧನ ಕೂಡ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಎರಡು ತಿಂಗಳು ಕಳೆದರೂ ಈ ಬಗ್ಗೆ ಆದೇಶವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಶಾ ಕಾರ್ಯಕರ್ತೆಯರಲ್ಲೇ 20 ಆಶಾಗಳಿಗೆ ಒಬ್ಬರಂತೆ ಆಶಾ ಸುಗಮಕಾರರನ್ನು ನೇಮಿಸಿ ₹6000 ನೀಡಲಾಗುತ್ತಿದೆ. ಈಚೆಗೆ ಏಕಾಏಕಿಯಾಗಿ ಆಶಾ ಸುಗಮಕಾರರನ್ನು ಕೆಲಸದಿಂದ ತೆಗೆದು ಆದೇಶ ಹೊರಡಿಸಿದ್ದಾರೆ. ಅಲ್ಲದೆ, 60 ವರ್ಷ ಮೇಲ್ಪಟ್ಟ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ಕೊನೆಗೊಳಿಸಿರುವುದಾಗಿ ತಿಳಿಸಿದ್ದಾರೆ. ಇದರಿಂದ ನಾವು ಅತಂತ್ರರಾಗಿದ್ದೇವೆ ಎಂದರು.

ಆರೋಗ್ಯ ಸಚಿವರ ಸಮ್ಮುಖದಲ್ಲಿ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಇನ್ನುಳಿದ ಬಹುದಿನಗಳ ಸಮಸ್ಯೆ ಪರಿಹಾರಕ್ಕೆ ಕ್ರಮತೆಗೆದುಕೊಳ್ಳಬೇಕು ಎಂದು ಮುಖಂಡರು ಒತ್ತಾಯಿಸಿದರು.