ಸಾರಾಂಶ
ಮೈಸೂರು : ಕಲಾವಿದ, ರಂಗಕರ್ಮಿ ಉಮೇಶ್ ತೆಂಕನಹಳ್ಳಿ ಅವರು ‘ಕಪ್ಪು ಹಲ್ಲಿನ ಕಥೆ’ ನೈಜ ಘಟನೆ ಆಧರಿಸಿದ, ಗ್ರಾಮೀಣ ಸೊಗಡಿನ ಕಾದಂಬರಿ ರಚಿಸಿದ್ದಾರೆ.
ಈಗ ಹಚ್ಚೆ ಹಾಕಿಸಿಕೊಳ್ಳುವುದು ಫ್ಯಾಷನ್! ಹಿಂದಿನ ಕಾಲದಲ್ಲಿ ಹಲ್ಲಿಗೆ ಕಪ್ಪು ಹಾಕಿಸಿಕೊಳ್ಳುವುದು ಕೂಡ ಫ್ಯಾಷನ್ ಆಗಿತ್ತು!. ಆದರೆ ಕ್ರಮೇಣ ಇದು ಮರೆಯಾಯಿತು. ಆ ಕಾಲಕ್ಕೆ ಫ್ಯಾಷನ್ ಎಂದು ಹಲ್ಲಿಗೆ ಕಪ್ಪು ಹಾಕಿಸಿಕೊಂಡ ಗೌರಮ್ಮ ಅದರ ಜೊತೆಗೆ ಬೇಗ ಮಕ್ಕಳೂ ಆಗದಿದ್ದಾಗ ಗಂಡ ಸಣ್ಣಮರಿಯಪ್ಪನಿಂದ ಶೋಷಣೆಗೆ ಗುರಿಯಾಗಿ ಇಡೀ ಬದುಕನ್ನು ನರಕ ಮಾಡಿಕೊಂಡಿದ್ದು, ಮಕ್ಕಳಾದ ನಂತರ ಒಂದು ಮಗು ಸತ್ತಿದ್ದು- ಹೀಗೆ ಆಕೆಯ ದುರಂತ ಕಥನ ಸಾಗುತ್ತದೆ. ಅದುವೆ ಇಡೀ ಕಾದಂಬರಿಯ ವಸ್ತು.
ಊರಲ್ಲಿ ಯಾರೇ ಮೈನೆರೆದರೂ ಮದುವೆಗೆ ಮುಂಚೆ ಹಲ್ಲಿಗೆ ಕಪ್ಪು ಹಾಕಿಸಬೇಕೆಂದು ಸಲಹೆ ನೀಡುವ ಅಜ್ಜಿಯರ ಗ್ಯಾಂಗು,
ಆ ಅಜ್ಜಿಯರ ಮಾತಿಗೆ ಕಟ್ಟು ಬಿದ್ದ ಗೌರಿಯ ತಾಯಿ ನಂಜಮ್ಮ. ಸೋದರ ಮಾವ ನಂಜಣ್ಣ, ಸ್ವಂತ ಸಂಬಂಧಿಯೇ ಆದ ಗಂಡ ಸಣ್ಣಮರಿಯಪ್ಪ ಮೊದಲಾದವರ ಚಕ್ರವ್ಯೂಹದಲ್ಲಿ ಸಿಲುಕಿ ನಲುಗುವ, ಕಷ್ಟಗಳನ್ನು ಮೆಟ್ಟಿನಿಂತು, ಯಾವುದೇ ಸಂದರ್ಭದಲ್ಲೂ ಆತ್ಮಸ್ಥೈರ್ಯ ಕಳೆದುಕೊಳ್ಳದೇ, ಬಂಜೆ ಎಂಬ ಅಪಮಾನ, ಗಂಡನ ಕಿರುಕುಳ ನೋಡಿ ಅಪ್ಪ ತವರಿಗೆ ಕರೆದರೂ ಹೋಗದೆ, ನಂತರ ಮಕ್ಕಳಾದರೆ ಹಳಿ ತಪ್ಪಿರುವ ತನ್ನ ಬದುಕು ಸರಿಹೋಗಬಹುದು ಎಂದು ಮಾಂತ್ರಿಕನ ದೌರ್ಜನ್ಯ ಸಹಿಸುವ ಸಹನಾಮೂರ್ತಿ ಗೌರಮ್ಮ ಗಂಡನೇ ಸೋಲುವಂತೆ ಮಾಡಿ, ಕುಟುಂಬವನ್ನು ಉಳಿಸಿಕೊಂಡು ಗೆಲ್ಲುತ್ತಾಳೆ.
ಗ್ರಾಮೀಣ ಸಂಸ್ಕೃತಿಯ ಸೊಗಡು, ಜೀವನಕ್ರಮಗಳು ಆಡುಭಾಷೆಯಲ್ಲಿಯೇ ದಾಖಲಾಗಿವೆ. ಇಲ್ಲಿ ಬರುವ ಡೈಲಾಗ್ಗಳು ‘ಪುಟ್ನಂಜ’ ಸಿನಿಮಾದಲ್ಲಿ ಉಮಾಶ್ರೀ ಪಾತ್ರವನ್ನು ಮೀರಿಸುವಂತಿವೆ!. ಪುಟ್ನಂಜಿಯಂತೆ ಕೋಳಿ ಕಾಣಿಸದಿದ್ದಾಗ ಅವ್ವ- ಮಗನ ನಡುವೆ ನಡೆಯುವ ಸಂಭಾಷಣೆಯೂ ಇದೆ!.
ವಿಶ್ವರೂಪ ದರ್ಶನ, ಮಡಿಕೆ ಮಾರುವವರೊಂದಿಗಿನ ನಮ್ಮ ನಂಟು, ಕಗ್ಗಂಟಿನ ಗಾಳಿ ಬೀಜ ಹಲ್ಲಿಟ್ಟು, ಉಳುಕಿನ ತಳಕು, ಹೇಳುವ ಕಥೆಗೆ ಸಾಕು ಪ್ರಾಣಗಳ ತೊಡಕು, ಹೊಸ ಅವಿಷ್ಕಾರದ ಫ್ಯಾಷನ್ ಲೋಕದಲ್ಲಿ, ಸಂಬಂಧಗಳ ಸೆಳೆತ, ಮದ್ದರೆಯುವ ಕಾಯಕ, ಪರೀಕ್ಷೆಯ ಫಲಿತಾಂಶ, ಅಗೆದಷ್ಟು ಆಳ ಕೊನೆ ಇಲ್ಲ, ಉತ್ಪಾಹ ಇಲ್ಲದ ಮದುವೆ, ಗಾಯದ ಮೇಲೆ ಬರೆ, ಕನಸು ನನಸಾಗುವ ಹೊಸಿಲಲ್ಲಿ, ಕಮರಿದ ಕನಸು, ಮಾತಿಗೆಳೆದು ಅವಮಾನಿಸುವ ಚಾಳಿ, ಗೊಂದಲವಾದ ಮರುಮದುವೆ, ಕುರುವು ಕೊಟ್ಟ ಚೌಡಿ, ಪವಾಡ ಪುರುಷನಾದ ಪಂಡಿತ, ಕಮರಿ ಕಮರಿ ಅರಳಿದ ಹೂವುಗಳು, ತಾತ್ತಾರವನ್ನು ಹಸಿವು ಕೇಳುವುದೇ..! ಗೌರಮ್ಮ ಗಾರಮ ಆದಾಗ, ದಾನದ ಮಹಿಮೆ, ಖಿನ್ನತೆ ತಂದ ಆಡಂಬರ, ನಳಪಾಕ ಪ್ರವೀಣೆ ಡೈರಿ ವನಜಾ, ವೈದ್ಯರಿಗೂ ಸವಾಲ್ ಎಸೆದ ಕಪ್ಪು ಹಲ್ಲು, ವಿದಾಯ ಅಧ್ಯಾಯಗಳ ಮೂಲಕ ಉಮೇಶ್ ತೆಂಕನಹಳ್ಳಿ ಅವರು ಇಡೀ ಗ್ರಾಮೀಣ ಬದುಕನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಹಿಂದಿನ ಗ್ರಾಮೀಣರ ಸಾಮಾಜಿಕ ಸ್ಥಿತಿಗತಿ ಹೇಗಿತ್ತು?, ಊರಿಗೆ ಬರುತ್ತಿದ್ದ ಮಡಿಕೆ ಮತ್ತಿತರರ ಮಾರಾಟಗಾರರ ಕಥೆ, ವಯಸ್ಕರ ಶಿಕ್ಷಣ ಯೋಜನೆ ಬಂದಾಗ ಅಕ್ಷರ ಕಲಿಯಲು ಹೋದವರು ಓದಲು ಬಾರದಿದ್ದರೂ ಒತ್ತು,ದೀರ್ಘ ಇಲ್ಲದ ಸಹಿ ಮಾಡಲು ಕಲಿತದ್ದು ಇವೇ ಮೊದಲಾದ ವಿಷಯಗಳನ್ನು ಬಿಡಿ, ಬಿಡಿ ಲಲಿತ ಪ್ರಬಂಧಗಳ ರೀತಿಯಲ್ಲಿರುವ ಈ ಕಾದಂಬರಿಯ ಮೂಲಕ ತಿಳಿಯಬಹುದು.
ಈ ಕಾದಂಬರಿಯನ್ನು ಚನ್ನರಾಯಪಟ್ಟಣದ ಪ್ರತಿಮಾ ಟ್ರಸ್ಟ್ ಪ್ರಕಟಿಸಿದೆ. ಡಾ.ಚಂದ್ರು ಕಾಳೇನಹಳ್ಳಿ ಅವರ ಮುನ್ನುಡಿ, ಅರಸೀಕೆರೆ ಯೋಗಾನಂದ ಅವರ ಬೆನ್ನುಡಿ ಇದೆ. ಆಸಕ್ತರು ಉಮೇಶ್ ತೆಂಕನಹಳ್ಳಿ, ಮೊ. 94489 40602 ಸಂಪರ್ಕಿಸಬಹುದು.