ಸಾರಾಂಶ
ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಭಾರಿ ಆರೋಪ-ಪ್ರತ್ಯಾರೋಪಕ್ಕೆ ತುತ್ತಾಗಿದ್ದ ಕೋವಿಡ್ ಹಗರಣದ ತನಿಖೆಯನ್ನು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಮೊದಲು ಹಗರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಣಯಿಸಿತ್ತು. ಆದರೆ, ಎಸ್‌ಐಟಿ ಮುಖ್ಯಸ್ಥರಾಗಲು ಕೆಲ ಹಿರಿಯ ಐಪಿಎಸ್ ಅಧಿಕಾರಿಗಳು ಹಿಂದೇಟು ಹಾಕಿದ ಕಾರಣಕ್ಕೆ ಎಫ್‌ಐಆರ್ ದಾಖಲಾದ ಎರಡು ತಿಂಗಳ ತರುವಾಯ ಪ್ರಕರಣವನ್ನು ಸಿಐಡಿ ತನಿಖೆಗೆ ಸರ್ಕಾರ ವಹಿಸಿದೆ ಎಂದು ತಿಳಿದು ಬಂದಿದೆ.
ಹಗರಣದ ತನಿಖೆಗಾಗಿ ಎಸ್ಪಿ ರಾಘವೇಂದ್ರ ಹೆಗಡೆ ನೇತೃತ್ವದಲ್ಲಿ ಮೂವರು ಡಿವೈಎಸ್ಪಿಗಳನ್ನೊಳಗೊಂಡ ತನಿಖಾ ತಂಡವನ್ನು ಸಿಐಡಿ ಡಿಜಿಪಿ ಡಾ.ಎಂ.ಎ.ಸಲೀಂ ರಚಿಸಿದ್ದಾರೆ. ರಾಘವೇಂದ್ರ ಹೆಗಡೆ ಅವರು ಈಗಾಗಲೇ 545 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿ ಅಕ್ರಮ, ವಾಲ್ಮೀಕಿ ನಿಗಮದ ಹಗರಣ ಹಾಗೂ ವಿಧಾನ ಪರಿಷತ್‌ನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಸಿ.ಟಿ.ರವಿ ಅವರು ಮಾಡಿದ್ದರೆನ್ನಲಾದ ನಿಂದನೆ ಪ್ರಕರಣದ ತನಿಖೆಯ ನೇತೃತ್ವವನ್ನು ವಹಿಸಿದ್ದಾರೆ.
ಸರ್ಕಾರದ ಆದೇಶ ಹೊರಬಿದ್ದ 24 ತಾಸಿನಲ್ಲೇ ತನಿಖೆಗಿಳಿದಿರುವ ಸಿಐಡಿ, ಈ ಪ್ರಕರಣದಲ್ಲಿ ಅಧಿಕಾರಿಗಳ ವಿಚಾರಣೆಗೆ ಅನುಮತಿ ಕೋರಿ ಸರ್ಕಾರಕ್ಕೆ ಪತ್ರ ಬರೆದಿದೆ. ತನಿಖೆಯ ಆರಂಭದಿಂದಲೇ ರಾಜಕೀಯ ವಲಯದಲ್ಲಿ ಈ ಹಗರಣ ಸಂಚಲನ ಸೃಷ್ಟಿಸಿದ್ದು, ಪ್ರಭಾವಿಗಳಿಗೆ ಸಿಐಡಿ ತನಿಖೆ ಬಿಸಿ ತಟ್ಟಲಿದೆ ಎನ್ನಲಾಗುತ್ತಿದೆ.
ಕೊರೋನಾ ಕಾಲದಲ್ಲಿ ವೈದ್ಯಕೀಯ ಸಲಕರಣೆಗಳ ಖರೀದಿ ಹಾಗೂ ಮೃತರ ಪರಿಹಾರ ವಿತರಣೆಯಲ್ಲಿ ಭಾರಿ ಹಗರಣ ನಡೆದಿದೆ ಎಂದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಗಿನ ಆಡಳಿತ ಪಕ್ಷ ಬಿಜೆಪಿ ವಿರುದ್ಧ ಕಾಂಗ್ರೆಸ್ ಆರೋಪಿಸಿತ್ತು. ಅಲ್ಲದೆ, ತಾನು ಅಧಿಕಾರಕ್ಕೇರಿದ ಕೂಡಲೇ ಕೊರೋನಾ ಕಾಲದಲ್ಲಿ ಹಣ ನುಂಗಿದ್ದವರನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿತ್ತು. ಆದರೆ, ಎಸ್‌ಐಟಿ ರಚನೆಗೆ ಸಚಿವ ಸಂಪುಟದಲ್ಲಿ ಅಂಗೀಕಾರ ಸಿಕ್ಕರೂ, ಅದು ಕಾರ್ಯರೂಪಕ್ಕೆ ಬರಲಿಲ್ಲ. ಈಗ ಬಹುಕೋಟಿ ಹಗರಣ ಕಾರಣಕ್ಕೆ ಸಿಐಡಿ ತನಿಖೆಗೆ ಆದೇಶವಾಗಿದೆ ಎಂದು ತಿಳಿದು ಬಂದಿದೆ.
167 ಕೋಟಿ ರು. ಹಗರಣ:
ಕೋವಿಡ್ ಕಾಲದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಕ ಎನ್-95 ಮಾಸ್ಕ್ ಹಾಗೂ ಪಿಪಿಇ ಕಿಟ್ ಸೇರಿದಂತೆ ಇತರ ಉಪಕರಣಗಳ ಖರೀದಿಯಲ್ಲಿ 167 ಕೋಟಿ ರು ಅಕ್ರಮ ನಡೆದಿದೆ ಎಂದು ಆರೋಪಿಸಿ ವಿಧಾನಸೌಧ ಠಾಣೆಗೆ ಡಿ.13 ರಂದು ವೈದ್ಯಕೀಯ ಶಿಕ್ಷಣ ಇಲಾಖೆ ಮುಖ್ಯ ಲೆಕ್ಕಾಧಿಕಾರಿ ಡಾ.ಎಂ.ವಿಷ್ಣುಪ್ರಸಾದ್ ದೂರು ನೀಡಿದ್ದರು. ಈ ದೂರು ಆಧರಿಸಿ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಪಿ.ಜಿ.ಗಿರೀಶ್, ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕ ಜಿ.ಪಿ.ರಘು ಹಾಗೂ ಆರೋಗ್ಯ ಸಂರಕ್ಷಣಾಧಿಕಾರಿ ಎನ್.ಮುನಿರಾಜು, ಲಾಜ್ ಎಕ್ಸ್‌ಪೊರ್ಟ್ಸ್, ಮುಂಬೈ ಮೂಲದ ಎಂ.ಎಸ್. ಪ್ರೂಡೆಂಟ್ ಮ್ಯಾನೇಜ್ಮೆಂಟ್ ಹಾಗೂ ಚುನಾಯಿತ ಪ್ರತಿನಿಧಿಗಳು ಸೇರಿ ಇತರ ಅಧಿಕಾರಿಗಳು ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಎಸ್‌ಐಟಿ ರಚನೆಗೆ ಐಪಿಎಸ್ ನಿರಾಕರಣೆ?
ಕೋವಿಡ್ ಹಗರಣ ಕುರಿತು ಐಜಿಪಿ ನೇತೃತ್ವದಲ್ಲಿ ಎಸ್‌ಐಟಿ ರಚಿಸುವುದಾಗಿ ಸಚಿವ ಸಂಪುಟದಲ್ಲಿ ನಿರ್ಣಯ ಅಂಗೀಕಾರವಾಗಿತ್ತು. ಆದರೆ, ಹಗರಣದಲ್ಲಿ ಪ್ರಭಾವಿ ರಾಜಕಾರಣಿಗಳು ಹಾಗೂ ಐಎಎಸ್ ಅಧಿಕಾರಿಗಳ ಹೆಸರು ಪ್ರಸ್ತಾಪವಾದ ಕಾರಣಕ್ಕೆ ತನಿಖೆಯ ಸಾರಥ್ಯ ವಹಿಸಲು ಐಪಿಎಸ್ ಅಧಿಕಾರಿಗಳು ಹಿಂದೇಟು ಹಾಕಿದರು. ಅಲ್ಲದೆ, 5 ಕೋಟಿ ರು.ಗೂ ಅಧಿಕ ಮೊತ್ತದ ಆರ್ಥಿಕ ವಂಚನೆ ಪ್ರಕರಣಗಳ ತನಿಖೆ ಸಾಮಾನ್ಯವಾಗಿ ಸಿಐಡಿಗೆ ವರ್ಗವಾಗುತ್ತದೆ. ಇದೇ ಕಾರಣ ಕೊಟ್ಟು ಕೋವಿಡ್ ಹಗರಣವನ್ನು ಸಿಐಡಿಗೆ ಸರ್ಕಾರ ವಹಿಸಿದೆ ಎಂದು ತಿಳಿದು ಬಂದಿದೆ.
- ಎಸ್‌ಐಟಿಗೆ ವಹಿಸಲು ನಿರ್ಧರಿಸಿದ್ದ ಸಂಪುಟ- ಐಪಿಎಸ್‌ಗಳ ಹಿಂದೇಟು: ಈಗ ಸಿಐಡಿಗೆ ವರ್ಗ- ಅಧಿಕಾರಿಗಳ ವಿಚಾರಣೆಗೆ ಅನುಮತಿ ಯಾಚನೆ
- ಕೋವಿಡ್ ಕಾಲದಲ್ಲಿ ವೈದ್ಯಕೀಯ ಸಲಕರಣೆ ಖರೀದಿ, ಪರಿಹಾರ ವಿತರಣೆಯಲ್ಲಿ ಭಾರಿ ಹಗರಣ ಆರೋಪ- ವಿಧಾನಸಭೆ ಚುನಾವಣೆ ವೇಳೆ ಆಗಿನ ಆಡಳಿತ ಪಕ್ಷವಾಗಿದ್ದ ಬಿಜೆಪಿ ವಿರುದ್ಧ ಆರೋಪ ಮಾಡಿದ್ದ ಕಾಂಗ್ರೆಸ್- ಅಧಿಕಾರಕ್ಕೆ ಬರುತ್ತಿದ್ದಂತೆ ಕೋವಿಡ್ ಹಣ ನುಂಗಿದ್ದವರನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿದ್ದ ನಾಯಕರು- ಅದರಂತೆ ಕೋವಿಡ್ ಅಕ್ರಮ ತನಿಖೆಗೆ ಎಸ್‌ಐಟಿ ರಚನೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ- ಆದರೆ ತನಿಖೆ ನೇತೃತ್ವ ಹೊರಲು ಕೆಲ ಐಪಿಎಸ್ ಅಧಿಕಾರಿಗಳ ಹಿಂದೇಟು. ಹೀಗಾಗಿ ಸಿಐಡಿಗೆ ಪ್ರಕರಣ
ಅಧಿಕಾರಿಗಳ ಹಿಂದೇಟು ಏಕೆ?
- ಕೋವಿಡ್ ಹಗರಣದಲ್ಲಿ ಪ್ರಭಾವಿ ರಾಜಕಾರಣಿಗಳು, ಐಎಎಸ್ ಅಧಿಕಾರಿಗಳ ಹೆಸರು ಪ್ರಸ್ತಾಪವಾಗಿತ್ತು
- ಹೀಗಾಗಿ ಐಪಿಎಸ್ ಅಧಿಕಾರಿಗಳು ತನಿಖೆಯ ಸಾರಥ್ಯ ವಹಿಸಲು ಹಿಂದೇಟು ಹಾಕಿದರು ಎನ್ನಲಾಗಿದೆ