ಸಾರಾಂಶ
ಬೆಂಗಳೂರು : ಪ್ರಮುಖ ಏರೋಬ್ಯಾಟಿಕ್ ತಂಡಗಳ ಅನುಪಸ್ಥಿತಿಯ ನಡುವೆಯೂ ಬುಧವಾರ ‘ಸೂರ್ಯ ಕಿರಣ’ ತಂಡವು ಮೈನವಿರೇಳಿಸುವ ಪ್ರದರ್ಶನದ ಮೂಲಕ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಜೀವ ತುಂಬಿದ್ದು, ಅಮೇರಿಕಾದ ‘ಎಫ್-35’ ಹಾಗೂ ರಷ್ಯಾದ ಎಸ್‌ಯು-57 ಜುಗಲ್ ಬಂದಿ ಪ್ರದರ್ಶನ ಹೊಸ ಮೆರಗು ತಂದಿದೆ.
ಅಮೇರಿಕಾ ಹಾಗೂ ರಷ್ಯಾ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ತಮ್ಮ 5ನೇ ತಲೆಮಾರಿನ ಯುದ್ಧ ವಿಮಾನಗಳ ತಾಕತ್ತು ಪ್ರದರ್ಶನಕ್ಕೆ ನಿಂತಿದ್ದು, ಬುಧವಾರ ಎರಡೂ ದೈತ್ಯ ಶಕ್ತಿಯ ಯುದ್ಧ ವಿಮಾನಗಳು ಸ್ಪರ್ಧೆಗೆ ಇಳಿದಂತೆ ಸಾಮರ್ಥ್ಯ ಪ್ರದರ್ಶನ ಮಾಡಿದವು.
ಯಲಹಂಕ ವಾಯನೆಲೆಯಲ್ಲಿ ಎರಡೂ ಶಕ್ತಿಯುತ ದೇಶಗಳು ತಮ್ಮ ವೈಮಾನಿಕ ಸಾಮರ್ಥ್ಯ ಸಾಬೀತಿಗೆ ನಿಂತಿದ್ದು, ಎಲ್ಲರ ಕಣ್ಣು ಏರೋ ಇಂಡಿಯಾದತ್ತ ನೆಡುವಂತೆ ಮಾಡಿದೆ. ತನ್ಮೂಲಕ ಪ್ರಮುಖ ಏರೋ ಬ್ಯಾಟಿಕ್ ತಂಡಗಳ ಅನುಪಸ್ಥಿತಿಯಿಂದ ಸಪ್ಪೆಯಾಗಿದ್ದ ಸೂರ್ಯಕಿರಣದ ಅದ್ಭುತ ಚಮತ್ಕಾರ, ಎಫ್-35, ಎಸ್‌ಯು-57 ಹಾಗೂ ತೇಜಸ್ ಎಲ್‌ಸಿಎ ಜುಗಲ್‌ಬಂಧಿಯು ಹೊಸ ಕಳೆ ತುಂಬಿದೆ. ಅಮೆರಿಕದ ಲಾಕ್‌ಹೀನ್ ಮಾರ್ಟಿನ್‌ನಿಂದ ಉತ್ಪಾದನೆಯಾಗಿರುವ ಎಫ್-35 ಅಬ್ಬರ ಜೋರಾಗಿ ಜನರ ಕಿವಿ ಗುಯ್‌ಗುಡುವಂತಾಗಿತ್ತು. 900-1000 ಕಿ.ಮೀ. ವೇಗದಲ್ಲಿ ಹಾರಾಡುವ ಯುದ್ಧ ವಿಮಾನಗಳ ಕಡಿಮೆ ವೇಗದ ಚಾಲನೆ, ಲೂಪ್, ಫ್ಲಿಪ್‌ಗಳಂತೂ ಮೈ ಜುಮ್ಮೆನಿಸುವಂತಿತ್ತು. ಬೆನ್ನಲ್ಲೇ ರಷ್ಯಾದ ಸುಖೋಯ್ 57 ತನ್ನ ಅಬ್ಬರ ಪ್ರದರ್ಶಿಸಿ ತಾನೇನೂ ಕಡಿಮೆಯಿಲ್ಲ ಎಂಬುದನ್ನು ಸಾಬೀತುಪಡಿಸಿತು.
ಮಂಗಳವಾರದ ವೈಮಾನಿಕ ಪ್ರದರ್ಶನಕ್ಕೆ ಹೋಲಿಸಿದರೆ ಬುಧವಾರದ ಶೋನಲ್ಲಿ ಹೊಸ ಮೆರಗು ಪಡೆದು ನೆರೆದಿದ್ದವರನ್ನು ರಂಜಿಸಿದರು. ಮಂಗಳವಾರದ ಏರೋ ಇಂಡಿಯಾ ಪ್ರದರ್ಶನವು ಫೆ.6ರ ತಾಲೀಮು ಪ್ರದರ್ಶನದ ರೀತಿಯಲ್ಲೇ ಭಾಸವಾಗುತ್ತಿತ್ತು. ಫೆ.10ರ ಉದ್ಘಾಟನಾ ದಿನದ ಶೋನಲ್ಲಿ ಒಂದರ ಬೆನ್ನ ಹಿಂದೆ ಒಂದರಂತೆ ಅಚ್ಚುಕಟ್ಟಾಗಿ ಏರ್‌ಶೋ ಪ್ರದರ್ಶನ ನಡೆದಿತ್ತು. ಆದರೆ ಫೆ.11ರ ಮಂಗಳವಾರ ಆಗೊಂದು ಈಗೊಂದರಂತೆ ವಿಮಾನಗಳು ತಮ್ಮ ಇಚ್ಛೆಯಂತೆ ಹಾರಾಟ ನಡೆಸಿದವು.ಹಿಂದಿನ ಏರ್‌ಶೋಗಳಂತೆ ಯಾವ ಸಮಯಕ್ಕೆ ಯಾವ ವಿಮಾನ ಹಾಗೂ ವೈಮಾನಿಕ ಪ್ರದರ್ಶನ ತಂಡ ಹಾರಾಟ ನಡೆಸುತ್ತವೆ ಎಂಬ ಕನಿಷ್ಠ ಮಾಹಿತಿ, ಸೂಕ್ತ ಕಾಮೆಂಟ್ರಿ ವ್ಯವಸ್ಥೆಯೂ ಇರಲಿಲ್ಲ. ಒಂದೊಂದು ವಿಮಾನದ ಹಾರಾಟದ ನಡುವೆಯೂ 10-20 ನಿಮಿಷದ ವಿರಾಮ ನೀಡುತ್ತಿದ್ದು, ಪ್ರೇಕ್ಷಕರ ತಾಳ್ಮೆ ಪ್ರದರ್ಶಿಸುತ್ತಿತ್ತು.
ಬುಧವಾರವೂ ಕಾಮೆಂಟ್ರಿ ಶಬ್ಧವು ಸೀಮಿತ ಜನರಿಗೆ ಮಾತ್ರ ಕೇಳಿಸುವಂತಿತ್ತು. ಆದರೆ, ಒಂದರ ಹಿಂದೆ ಒಂದರಂತೆ ಯುದ್ದ ವಿಮಾನಗಳು, ಹೆಲಿಕಾಪ್ಟರ್‌ಗಳು, ಸೂರ್ಯಕಿರಣ್ ಹಾರಾಟ ಮಾಡುವ ಮೂಲಕ ಶೋ ಹೊಸ ಮೆರಗು ಪಡೆದುಕೊಂಡಿತು.
ಸೂರ್ಯಕಿರಣ್ ಅಬ್ಬರ:
ಆಸುಮಾನ್ ಚಲೇ ಹಮ್ ಎನ್ನುತ್ತಾ ತನ್ನ ಶೋ ಶುರು ಮಾಡಿದ ಸೂರ್ಯಕಿರಣ್ ತಂಡವು, ‘ವಿ’ ಅಕ್ಷರದ ಫಾರ್ಮೇಷನ್ ಮೂಲಕ ವಿಜಯದ ಸಂಕೇತ ರಚಿಸಿ ತನ್ನ ವಿನ್ಯಾಸಗಳ ಪ್ರದರ್ಶನಕ್ಕೆ ನಾಂದಿ ಹಾಡಿತು.
ಕೇಸರಿ, ಬಿಳಿ, ಹಸಿರು ತ್ರಿವರ್ಣದ ಧ್ವಜದ ಬಣ್ಣಗಳನ್ನು ಯಲಹಂಕ ವಾಯುನೆಲೆ ತುಂಬಾ ಹರಡಿದ ತಂಡವು ಬಳಿಕ ಎ ಅಕ್ಷರದ ಮೂಲಕ ಏರೋಸ್ಪೇಸ್ ಕ್ಷೇತ್ರಕ್ಕೆ ಸೆಲ್ಯೂಟ್ ಮಾಡಿ ತಂಡವು ಒಂದೊಂದಾಗಿ ತನ್ನ ಸಿಗ್ನೇಚರ್ ವಿನ್ಯಾಸಗಳನ್ನು ಪ್ರದರ್ಶಿಸುತ್ತಾ ಜನರನ್ನು ಮಂತ್ರಮುಗ್ಧರನ್ನಾಗಿಸಿತು. ಬ್ಯಾಟಲ್ ರೋಲ್ ವಿನ್ಯಾಸ, 800 ಕಿ.ಮೀ. ವೇಗದಲ್ಲಿ ಹಿಂಬದಿಯಿಂದ ಬಂದು ಕಿವಿ ಚುಯ್‌ಗುಡುವಂತೆ ಹಾರಿ ಹೋಗುವುದು, ತ್ರಿಶೂಲ ಫಾರ್ಮೇಷನ್ ಮೂಲಕ ಬೆಂಗಳೂರಿನ ನಂದೀಶ್ವರನಿಗೆ ನಮನ ಸಲ್ಲಿಸಿದ ತಂಡಕ್ಕೆ ಚಪ್ಪಾಳೆಯ ಸುರಿಮಳೆಯೇ ಸುರಿಯಿತು.
ವಿಮಾನಗಳು ಮುಂದೆ ಹೋಗುತ್ತಿದ್ದಾಗ ಎರಡು ವಿಮಾನ ಅದರ ಸುತ್ತಾ ಗಿರಕಿ ಹೊಡೆಯುತ್ತಾ ಮುನ್ನಡೆಯುವ ಸೂರ್ಯಕಿರಣ್‌ನ ಡಿಎನ್‌ಎ ಫಾರ್ಮೇಷನ್‌ಗಂತೂ ಜನರು ಫಿದಾ ಆದರು.
ಕಣ್ಣಾಮುಚ್ಚಾಲೆ ಆಡಿದ ವಿಮಾನಗಳು:
ಪ್ರತಿ ಫಾರ್ಮೇಷನ್‌ನಲ್ಲೂ ವೀಕ್ಷಕರ ಕಣ್ತಪ್ಪಿಸಿ ಬೇರೆಯಾಗುವ ಮತ್ತೊಬ್ಬ ಪೈಲಟ್ ಹಿಂಬದಿಯಿಂದ ಬಂದು ಅತ್ಯಾಕರ್ಷಕ ವಿನ್ಯಾಸ ಮಾಡುವ ಮೂಲಕ ವೀಕ್ಷಕರೊಂದಿಗೆ ಕಣ್ಣಾ ಮುಚ್ಚಾಲೆ ಆಡಿದರು.
ಇನ್ನೇನು ಮುಗಿಯಿತು ಎನ್ನುವಷ್ಟರಲ್ಲೇ ಪಿಕ್ಚರ್ ಅಭಿ ಬಾಕಿ ಹೈ ಎನ್ನುವಂತೆ ಬಂದು ಆಕಾಶದಲ್ಲಿ ಹೃದಯದ ಚಿತ್ತಾರ ಮೂಡಿಸಿ ಅದಕ್ಕೊಂದು ಬಾಣದ ಚಿನ್ಹೆ ಬಿಟ್ಟು ಏರ್‌ಶೋ ಪ್ರಿಯರನ್ನು ಮೆಚ್ಚಿಸಿದರು.
ಇದೇ ವೇಳೆ ತುಮಕೂರಿನಲ್ಲಿ ಉತ್ಪಾದನೆಯಾದ ಎಲ್‌ಯುಎಚ್ ಹೆಲಿಕಾಪ್ಟರ್ ಟೇಲ್ ಅಪ್ ವಿನ್ಯಾಸ, ರಿವರ್ಸ್ ಸಂಚಾರದಂತಹ ಆಕರ್ಷಕ ವಿನ್ಯಾಸಗಳೊಂದಿಗೆ ರಂಜಿಸಿತು. ಇದರ ನಡುವೆ ಎಚ್‌ಟಿಟಿ 40, ಎಚ್‌ಟಿ-2, ಐಜೆಟಿ, ಹಂಸ ಎನ್‌ಜಿ, ಡಾರ್ನಿಯರ್, ಬಿ-1ಬಿ, ಕೆಸಿ -135 ಏರ್‌ಕ್ರ್ಯಾಫ್ಟ್ ಹಾಗೂ ಹೆಲಿಕಾಪ್ಟರ್‌ಗಳು ಸಹ ಯಲಹಂಕ ವಾಯುನೆಲೆಯಲ್ಲಿ ಹಾರಾಡುವ ಮೂಲಕ ಏರ್‌ಶೋಗೆ ಮೆರಗು ನೀಡಲು ಯತ್ನಿಸಿದವು.