ಮಧ್ಯಮ ಮಾರ್ಗದಿಂದ ಸಮಾಜ ಬೆಳೆಯಲು ಸಾಧ್ಯ : ಚಲನಚಿತ್ರ ನಿರ್ದೇಶಕ ಡಾ.ಟಿ.ಎಸ್‌.ನಾಗಾಭರಣ

| N/A | Published : Mar 03 2025, 01:45 AM IST / Updated: Mar 03 2025, 07:34 AM IST

ಸಾರಾಂಶ

ಎಡ-ಬಲ ಸಿದ್ಧಾಂತಗಳನ್ನು ಸಮತೋಲಿಸಿಕೊಂಡು ಹೋಗುವ ಮಧ್ಯಮ ಮಾರ್ಗದಿಂದಲೇ ಸಮಾಜ ಬೆಳೆಯಲು ಸಾಧ್ಯ ಎಂದು ಚಲನಚಿತ್ರ ನಿರ್ದೇಶಕ ಡಾ.ಟಿ.ಎಸ್‌.ನಾಗಾಭರಣ ಹೇಳಿದರು.

 ಬೆಂಗಳೂರು : ಎಡ-ಬಲ ಸಿದ್ಧಾಂತಗಳನ್ನು ಸಮತೋಲಿಸಿಕೊಂಡು ಹೋಗುವ ಮಧ್ಯಮ ಮಾರ್ಗದಿಂದಲೇ ಸಮಾಜ ಬೆಳೆಯಲು ಸಾಧ್ಯ ಎಂದು ಚಲನಚಿತ್ರ ನಿರ್ದೇಶಕ ಡಾ.ಟಿ.ಎಸ್‌.ನಾಗಾಭರಣ ಹೇಳಿದರು.

ಭಾನುವಾರ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಸಹಾಯಕ ಪ್ರಾಧ್ಯಾಪಕ ವಿರಾಟ್‌ ಪದ್ಮನಾಭ ಬರೆದಿರುವ ‘ಬೆಟ್ಟದ ಹೂವು’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿ, ಎಡ-ಬಲಗಳು ಶಕ್ತಿಯುತವಾಗಿ ಇರುವಾಗ ಇವೆರಡನ್ನು ಕೊಂಡಿಯಾಗಿ ಬೆಸೆಯುವಾಗ ಮಧ್ಯಮ ಮಾರ್ಗ ಮುಖ್ಯ. ಯಾವುದೇ ವೈಚಾರಿಕತೆ ಬಗೆಗಿನ ಕಟ್ಟುನಿಟ್ಟುತನ ಏಕಮುಖವಾಗಿರುತ್ತದೆ. ಮಧ್ಯಮ ಮಾರ್ಗ ಬಳಸಿಕೊಳ್ಳುವವರಿಗೆ ಇವೆರಡರ ಜವಾಬ್ದಾರಿಯೂ ಇದೆ. ಇವರಿಬ್ಬರನ್ನೂ ಸರಿದೂಗಿಸುವ ಕೆಲಸವನ್ನು ಮಾಡಬೇಕು. ಮಧ್ಯಮ ಮಾರ್ಗದಿಂದ ಸಮಾಜ ಸುಧಾರಣೆ ಆಗುತ್ತದೆ ವಿನಃ ಎಡ -ಬಲಗಳಿಂದಲ್ಲ ಎಂದು ಹೇಳಿದರು.

ಕಾರ್ಲ್‌ಮಾರ್ಕ್ಸ್‌ ಹೇಳಿದ್ದನ್ನು ಕೇಳುವ ಜೊತೆಗೆ ಭರತಮುನಿ ಹೇಳಿದ್ದನ್ನೂ ಕೇಳಬೇಕಾಗುತ್ತದೆ. ಬಹಳಷ್ಟು ಮೇಷ್ಟ್ರುಗಳಿಗೆ ಈ ಕೇಳಿಸಿಕೊಳ್ಳುವ ಕ್ರಿಯೆ ಇರುವುದಿಲ್ಲ. ಹೀಗೆ ಕೇಳಿಸಿಕೊಳ್ಳುವ ಕ್ರಿಯೆ ಬಹಳಷ್ಟು ಜನರಲ್ಲಿ ಇಲ್ಲದಿರುವ ಕಾರಣದಿಂದಲೇ ನಾವು ಅತಂತ್ರರಾಗಿದ್ದೇವೆ ಎಂದು ಅಭಿಪ್ರಾಯಪಟ್ಟರು.ಕೃತಿ ಹಾಗೂ ಸಿನಿಮಾಕ್ಕೆ ವಿಮರ್ಶಕ ಮುಖ್ಯ. ಯಾವುದೇ ಕೃತಿ ತಾರ್ಕಿಕ ಅಂತ್ಯ ಕಾಣುವುದೇ ಅದರ ವಿಮರ್ಶೆಯಿಂದ. ಎಷ್ಟೋ ಬಾರಿ ಸಿನಿಮಾದ ನಿರ್ದೇಶಕ ಕಾಣದ್ದನ್ನು ವಿಮರ್ಶಕ ಕಾಣುತ್ತಾನೆ. ಆದರೆ, ಸಿನಿಮಾದವರಿಗೆ ವಿಮರ್ಶೆ ಇಷ್ಟ ಆಗುವುದಿಲ್ಲ. ನಾವು ವಿಮರ್ಶೆಯನ್ನು ಮೀರಿ ಬೆಳೆದಿದ್ದೇವೆ ಎಂದುಕೊಳ್ಳುತ್ತಿವೋ ಅಲ್ಲಿಗೆ ಬೆಳವಣಿಗೆ ಕುಂಠಿತವಾಗಿದೆ ಎಂದರ್ಥ. ‘ಬೆಟ್ಟದ ಹೂವು’ ನಿರ್ದೇಶಕ ಲಕ್ಷ್ಮೀನಾರಾಯಣ ಅವರು ಎಂದಿಗೂ ವಿಮರ್ಶೆಯನ್ನು ವಿರೋಧ ಮಾಡಿರಲಿಲ್ಲ ಎಂದರು.

ವಕೀಲ, ಪತ್ರಕರ್ತ ವೀರೇಂದ್ರ ಪಿ.ಎಂ.ಕೃತಿ ವಿಶ್ಲೇಷಣೆ ಮಾಡಿ, ‘ಬೆಟ್ಟದ ಹೂವು’ ಗಂಭೀರವಾಗಿ ಗಮನಿಸಬೇಕಾದ ಕೃತಿ. ಕಲಾತ್ಮಕ ಸಿನಿಮಾ ಎಂದರೆ ಪ್ರಾಜ್ಞರು ನೋಡುವಂತಹದ್ದು, ಜನಪ್ರಿಯ ಸಿನಿಮಾ ಎಂದರೆ ಜನರ ಅಭಿರುಚಿ ಕೆಡಿಸುತ್ತವೆ ಎಂಬ ಅಪವಾದವಿದೆ. ಇವೆರಡರ ನಡುವಿನ ಬ್ರಿಡ್ಜ್‌ ಸಿನಿಮಾಗಳ ಬಗ್ಗೆ ಕೃತಿಯಲ್ಲಿ ವಿಶೇಷವಾಗಿ ಚರ್ಚೆಯಾಗಿದೆ. ಕಾಲಘಟ್ಟದಲ್ಲಿ ಕನ್ನಡಸಾಹಿತ್ಯ ಪರಂಪರೆಯಲ್ಲಿ ಆದ ಬದಲಾವಣೆಗಳು ಕನ್ನಡ ಸಿನಿಮಾ ಜಗತ್ತಿನಲ್ಲೂ ಪ್ರತಿಫಲಿಸಿದ್ದನ್ನು ಕೃತಿಯಲ್ಲಿ ಹೇಳಲಾಗಿದೆ. ಕೃತಿಕಾರ ವಿರಾಟ್‌ ಪದ್ಮನಾಭ ಅವರು ಜಾಳುಜಾಳಾಗಿ ಬರೆಯದೇ ಆಳವಾಗಿ ಅಧ್ಯಯನ ಮಾಡಿ ಬರೆದಿದ್ದಾರೆ ಎಂದು ವಿಶ್ಲೇಷಿಸಿದರು.

ಪತ್ರಕರ್ತ ಸುಭಾಷ್ ಹೂಗಾರ್ ಮಾತನಾಡಿದರು. ಬೆಂಗಳೂರು ಆಕಾಶವಾಣಿ ಉದ್ಘೋಷಕಿ ಬಿ.ಕೆ.ಸುಮತಿ, ಸ್ನೇಹ ಬುಕ್‌ ಹೌಸ್‌ನ ಕೆ.ಬಿ.ಪರಶಿವಪ್ಪ, ತ್ರಿವೇಶಿ ಹರ್ಷಿತಾ ಸೇರಿ ಇತರರಿದ್ದರು.