ನಿರ್ಗಮಿಸುವ ಎರಡು ದಿನ ಮೊದಲು ಬರೆದ ಸಾನೆಟ್ - ದೊರೆ ಬರುವಷ್ಟರಲ್ಲಿ ಒಂದು ಆಟ

| N/A | Published : Jun 22 2025, 07:34 AM IST

Hs Venkateshamurthy
ನಿರ್ಗಮಿಸುವ ಎರಡು ದಿನ ಮೊದಲು ಬರೆದ ಸಾನೆಟ್ - ದೊರೆ ಬರುವಷ್ಟರಲ್ಲಿ ಒಂದು ಆಟ
Share this Article
  • FB
  • TW
  • Linkdin
  • Email

ಸಾರಾಂಶ

ನೀವಿಲ್ಲಿ ಓದುತ್ತಿರುವುದು ಅಣ್ಣ ಬರೆದ ಕೊನೆಯ ಸಾನೆಟ್ಟು. ಅವರು ನಮ್ಮನ್ನೆಲ್ಲ ಅಗಲುವುದಕ್ಕೆ ಎರಡು ದಿನ ಮೊದಲು ಬರೆದದ್ದು.

-ಸುಧೀರ ಹೊದಿಗೆರೆ

ನೀವಿಲ್ಲಿ ಓದುತ್ತಿರುವುದು ಅಣ್ಣ ಬರೆದ ಕೊನೆಯ ಸಾನೆಟ್ಟು. ಅವರು ನಮ್ಮನ್ನೆಲ್ಲ ಅಗಲುವುದಕ್ಕೆ ಎರಡು ದಿನ ಮೊದಲು ಬರೆದದ್ದು. ನಾನು ಕೂಡ ಇದನ್ನು ಅವರು ಹೋದ ನಂತರವೇ ನೋಡಿದ್ದು. ಇದನ್ನು ಓದುತ್ತಿದ್ದಂತೆ ಪಂಪ ಅಣ್ಣನನ್ನು ಎಷ್ಟರ ಮಟ್ಟಿಗೆ ಕಾಡುತ್ತಿದ್ದರು, ಪಂಪನನ್ನು ಅವರು ಎಷ್ಟು ಧ್ಯಾನಿಸುತ್ತಿದ್ದರು ಅನ್ನುವುದು ಗೊತ್ತಾಯಿತು.

ಪಂಪನ ಈ ಪ್ರಸಿದ್ಧ ಸಾಲುಗಳನ್ನು ನೀವು ಓದಿಯೇ ಇರುತ್ತೀರಿ-

ನೆತ್ತಮನಾಡಿ ಭಾನುಮತಿ ಸೋಲ್ತೊಡೆ ಸೋಲಮನೀವುದೆಂದು ಕಾ

ಡುತ್ತಿರೆ ಲಂಬಣಂ ಪಱಯೆ ಮುತ್ತಿನ ಕೇಡನೆ ನೋಡಿ ನೋಡಿ ಬ

ಳ್ಕುತ್ತಿರೆ ಯೇವಮಿಲ್ಲದಿವನಾಯ್ವುದೊ ತಪ್ಪದೆ ಪೇೞಮೆಂಬ ಭೂ

ಪೊತ್ತಮನಂ ಬಿಸುಟ್ಟಿರದೆ ನಿಮ್ಮೊಳೆ ಪೊಕ್ಕೊಡೆ ಬೇಡನಲ್ಲನೇ

ಈ ಆಶಯವನ್ನು ಅಣ್ಣ ಸಾನೆಟ್ಟಿನ ಮೂಲಕ ಹೇಳಲು ಹೊರಟಿದ್ದರು ಅಂತ ಅವರು ಅರೆಬರೆ ಬರೆದಿಟ್ಟ ಹದಿನಾಲ್ಕು ಸಾಲುಗಳನ್ನು ಓದಿದಾಗ ನನಗೆ ಅನ್ನಿಸಿತ. ಅಣ್ಣನಿಗೆ ಸಾನೆಟ್ ಕೂಡ ಇಷ್ಟವಾದ ಪ್ರಕಾರ. ಅವರು ಸುನೀತಗಳ ಸಂಕಲನವನ್ನೇ ತಂದಿದ್ದರು. ಕನ್ನಡದ ಅನೇಕ ಲೇಖಕರ ಕುರಿತು ಸುನೀತ ಬರೆದಿದ್ದರು. ಹಾಗೆಯೇ ಪಂಪಭಾರತವನ್ನೂ ಸರಳವಾಗಿ ಕನ್ನಡಕ್ಕೆ ತಂದಿದ್ದರು. ಪಂಪನನ್ನು ಮತ್ತೆ ಮತ್ತೆ ಓದುತ್ತಲೂ ಇದ್ದರು.

ಅಣ್ಣ ಸಾಮಾನ್ಯವಾಗಿ ಗದ್ಯವನ್ನು ಒಂದೇ ಏಟಿಗೆ ಬರೆದುಬಿಡುತ್ತಿದ್ದರು. ಬಿಳಿಯ ಹಾಳೆಯಲ್ಲಿ ಮುತ್ತಿನಂಥ ಅಕ್ಷರಗಳಲ್ಲಿ ಮೊದಲ ಸಲಕ್ಕೇ ಅಂತಿಮ ಪ್ರತಿ ಬರೆದುಬಿಡುತ್ತಿದ್ದರು. ಅದನ್ನು ತಿದ್ದುವ ಗೋಜಿಗೆ ಹೋಗುತ್ತಿರಲಿಲ್ಲ. ಆದರೆ ಪದ್ಯವನ್ನು ಮಾತ್ರ ಬರೆದ ನಂತರ ನಾಲ್ಕೈದು ಸಲ ಓದಿ, ತಿದ್ದಿ, ಓದಿ ಒಪ್ಪ ಓರಣ ಮಾಡುತ್ತಿದ್ದರು. ಈ ಮೇಲಿನ ಪದ್ಯಕ್ಕೆ ಆ ಭಾಗ್ಯ ಇರಲಿಲ್ಲ. ಅದು ಮೊದಲ ಸಲ ಬರೆಸಿಕೊಂಡು, ಮತ್ತೆ ಮತ್ತೆ ಅವರ ಓರಣಕ್ಕೆ ಒದಗುವ ಭಾಗ್ಯ ಕಳಕೊಂಡಿತು.

ಅಣ್ಣನಷ್ಟು ಅಕ್ಷರ ವ್ಯಾಮೋಹಿಗಳನ್ನು ನಾನು ಕಂಡಿಲ್ಲ. ಆಸ್ಪತ್ರೆಯಲ್ಲಿ, ನಿರ್ಗಮನದ ಹಿಂದಿನ ದಿನ ಕೂಡ ಅವರು, ಬುದ್ಧಚರಣದ ಐದನೇ ಮುದ್ರಣದ ಮುಖಪುಟ ಮತ್ತು ಲೇಖಕನ ಮಾತಿನ ಪುಟಗಳನ್ನು ತರಿಸಿಕೊಂಡು ನೋಡಿ, ತನ್ನನ್ನು ನೋಡಲು ಬಂದವರಿಗೆ ತೋರಿಸುವಂತೆ ಶಾಲಿನಿಗೆ ಹೇಳುತ್ತಿದ್ದರು. ಪ್ರತಿ ಪುಸ್ತಕ ಮರುಮುದ್ರಣವಾದಾಗ ಅವರ ಮನಸ್ಸು ಅರಳುತ್ತಿತ್ತು. ಅದನ್ನು ಆಪ್ತರಿಗೆಲ್ಲ ತಿಳಿಸುತ್ತಿದ್ದರು. ಹೊಸ ಪದ್ಯ ಬರೆದಾಗ ಕೂಡ ತನ್ನವರೆಲ್ಲರಿಗೂ ಕಳಿಸಿ, ಅವರ ಅಭಿಪ್ರಾಯ ತಿಳಿದುಕೊಂಡು, ಪ್ರತಿಯೊಂದು ಅನಿಸಿಕೆಯನ್ನೂ ಗೌರವಿಸುತ್ತಿದ್ದರು.

ನನಗೆ ನೆನಪಿರುವಂತೆ, ಅಣ್ಣ ನಾಟಕವೊಂದನ್ನು ಬರೆಯುವ ಯೋಜನೆ ಹಾಕಿಕೊಂಡಿದ್ದರು. ಅವರ ಪ್ರಸಿದ್ಧವಾದ ಪದ್ಯ ಶ್ರೀಸಂಸಾರಿ. ಅದರಲ್ಲಿ ಶ್ರೀರಾಮ ಎಲ್ಲರನ್ನೂ ಒಳಗೊಳ್ಳುವ ಚಿತ್ರವಿದೆ. ಅದೇ ನೆಲೆಯಲ್ಲಿ ಈಶ್ವರನ ಸಂಸಾರ ಎಂಬ ನಾಟಕ ಬರೆಯೋದು ಬಾಕಿಯಿದೆ ಅಂತ ಹೇಳುತ್ತಲೇ ಇದ್ದರು. ಅನೇಕರ ಜತೆಗೆ ಆ ಆಸೆಯನ್ನು ಹೇಳಿಕೊಂಡಿದ್ದರು ಕೂಡ.

ಅಣ್ಣನಿಗೆ ಪುತಿನ ಅಂದರೆ ಅಕ್ಕರೆ, ಗೌರವ. ಅವರ ಕುರಿತು ಅಂತಃಕರಣದ ಪುತಿನ ಅನ್ನುವ ಪುಸ್ತಕ ಕೂಡ ಬರೆದಿದ್ದರು. ಅದೇ ಶೈಲಿಯಲ್ಲಿ ಕೆ ಎಸ್ ನರಸಿಂಹಸ್ವಾಮಿ ಮತ್ತು ಜಿ ಎಸ್ ಶಿವರುದ್ರಪ್ಪನವರ ಒಡನಾಟದ ಕುರಿತೂ ಪುಸ್ತಕ ಬರೆಯಬೇಕು ಎಂದು ಟಿಪ್ಪಣಿ ಮಾಡಿ ಇಟ್ಟುಕೊಂಡಿದ್ದರು.

ಕಾಯಿಲೆ ಬಿದ್ದು, ನೋವು ಅನುಭವಿಸುತ್ತಿದ್ದ ದಿನಗಳಲ್ಲಿ ಕೂಡ ಅವರು ಕಾವ್ಯದಿಂದ, ಬರಹದಿಂದ ವಿಮುಖರಾಗಲಿಲ್ಲ. ಓದುವುದು, ಹೊಸಬರ ಪುಸ್ತಕ ಓದಿ ಮುನ್ನುಡಿ ಬರೆಯುವುದು ನಿರಂತರವಾಗಿ ನಡೆಯುತ್ತಲೇ ಇತ್ತು. ಅನಾರೋಗ್ಯದ ನಡುವೆಯೇ, ಜಿ ಎಸ್ ಶಿವರುದ್ರಪ್ಪನವರ ಮಗ ಶಿವಪ್ರಸಾದ್ ಅವರ ಮೊನಾಲಿಸಾ ಕವನ ಸಂಕಲನದ ವಿಮರ್ಶೆಯನ್ನು ಕೂಡ ಒಂದೇ ರಾತ್ರಿಯಲ್ಲಿ ಓದಿ ಬರೆದು ಕನ್ನಡಪ್ರಭಕ್ಕೆ ಕಳುಹಿಸಿಕೊಟ್ಟಿದ್ದರು. ಅದು ಪ್ರಕಟವಾಗಿದ್ದು ನೋಡಿ ಸಂತೋಷಪಟ್ಟಿದ್ದರು.

ನಾಳೆ, ಜೂನ್ 23, ಅಣ್ಣನ ಹುಟ್ಟುಹಬ್ಬ. ಅವರಿಗೆ ಎಂಬತ್ತೊಂದು ತುಂಬುತ್ತಿತ್ತು. ಈ ಮಳೆಗಾಲ ಅಣ್ಣನಿಲ್ಲದೇ ಕಳೆಯುತ್ತಿದೆ. ಅಣ್ಣನ ಮೂವತ್ತು ಮಳೆಗಾಲ ಅನ್ನುವ ಸಂಕಲನ ನೆನಪಾಗುತ್ತಿದೆ. ಅದರ ಮೊದಲ ಮಾತಲ್ಲಿ ಜಿ ಎಸ್ ಶಿವರುದ್ರಪ್ಪನವರು ಹೊಸಗನ್ನಡ ಕಾವ್ಯಸಂದರ್ಭದ ನವ್ಯೋತ್ತರ ಕಾಲಮಾನದಲ್ಲಿ ಕನ್ನಡ ಕಾವ್ಯಲೋಕವನ್ನು ಪ್ರವೇಶಿಸಿದ ಡಾ. ಎಚ್.ಎಸ್.ವೆಂಕಟೇಶಮೂರ್ತಿಯವರ ಕವಿತೆ ಈ ''''ಮೂವತ್ತು ಮಳೆಗಾಲ''''ಗಳಲ್ಲಿ ಪಡೆದುಕೊಂಡ ಸಮೃದ್ಧಿಯನ್ನೂ, ವೈವಿಧ್ಯವನ್ನೂ, ಪ್ರಯೋಗಶೀಲತೆಯನ್ನೂ ಮತ್ತು ನಾವೀನ್ಯತೆಯನ್ನೂ, ಅವರ ಸಮಕಾಲೀನರಾದ ಇನ್ನಿತರ ಯಾವ ಕವಿಗಳ ಇಷ್ಟರ ಮಟ್ಟಿಗೆ ಪಡೆದುಕೊಳ್ಳಲಿಲ್ಲ ಎಂದರೆ ಅದು ಉತ್ಪ್ರೇಕ್ಷೆಯ ಮಾತೇನೂ ಅಲ್ಲ. ಅಭಿಜಾತ ಮತ್ತು ಆಧುನಿಕ ಕಾವ್ಯಪರಂಪರೆಯೊಂದಿಗೆ ನಿರಂತರ ಸಂವಾದ ಹಾಗೂ ಅನುಸಂಧಾನಗಳನ್ನು ನಡೆಸುತ್ತಾ ಕಾವ್ಯಪ್ರಯೋಗಪರಿಣತಮತಿಯಾದ ಸೃಜನಶೀಲತೆಗೆ ಮಾತ್ರ ಈ ಬಗೆಯ ಯಶಸ್ಸು ಸಾಧ್ಯ. ಈ ಗೆಲುವಿನ ಹಾದಿಯಲ್ಲಿ ವೆಂಕಟೇಶಮೂರ್ತಿಯವರ ಕಾವ್ಯನಾಮರ್ಥ್ಯ ಕನ್ನಡ ಪ್ರಧಾನ ಧಾರೆಯಾದ ಕಥನಕ್ಕೆ ವಿವಿಧ ಕಾವ್ಯಪ್ರಕಾರಗಳ ಮೂಲಮಾನದಲ್ಲಿ ತಂದುಕೊಟ್ಟ ಆಯಾಮಗಳು ಅವರನ್ನು ಈ ಕಾಲದ ಮಹತ್ವದ ಜನಪ್ರೀತಿಯ ಕವಿಗಳಲ್ಲಿ ಒಬ್ಬರನ್ನಾಗಿ ಮಾಡಿದೆ ಎಂದು ಬರೆದದ್ದು ನೆನಪಾಗುತ್ತಿದೆ.

ನಿರ್ಗಮಿಸುವ ಎರಡು ದಿನ ಮೊದಲು ಬರೆದ ಸಾನೆಟ್

ದೊರೆ ಬರುವಷ್ಟರಲ್ಲಿ ಒಂದು ಆಟ

ನೆತ್ತ ಪಲ್ಲಂಗದ ಮೇಲೆ ತೆರೆದೇ ಇತ್ತು. ದೊರೆ ಬರುವಷ್ಟರಲ್ಲಿ

ಒಂದು ಆಟ ಎಂದು ಕರ್ಣ ಕಾಯಿ ಹೂಡಿದನು. ಪಣವೊಡ್ಡಿದ ರಭಸದ ಆಟ; ಗೆದ್ದದ್ದು

-ಆಹಾ, ಕರ್ಣ. ಗೆದ್ದ ಉತ್ಸಾಹದಲ್ಲಿ

ಕೊರಳ ಸರಕ್ಕೇ ಕೈ ಹಾಕಿದನು.

ಕೊಟ್ಟೆ ಕೊಟ್ಟೆ ಎಂದು ಕೊಸರಾಡುತ್ತಿರುವಷ್ಟರಲ್ಲಿ

ಸರ ಹರಿದು ಚೆಲ್ಲಾಪಿಲ್ಲಿ.

ಆಣಿಮುತ್ತಿನ ಸರ. ಸುಯೋಧನ

ಆಯ್ದು ಕೊಟ್ಟ ಮುತ್ತಲ್ಲಿ ಒಂದು

ಮಿರುಮಿರುಗಿದ ಮುತ್ತು ಸೆರಗಲ್ಲೇ

ಉಳಿಯಿತು. ಒತ್ತಿನುಗುರು ಮೊಲೆ

ನಡುವೆ ಕೆಂಪಗೆ ಕಲೆ ಮೂಡಿಸುತ್ತಾ

ಮುತ್ತುಹಾರದ ಕಲೆ.

ಬೆರಳಿಟ್ಟು ನಕ್ಕನು ಸುಯೋಧನ.

(ಲೇಖಕರು ಎಚ್ಎಸ್ ವೆಂಕಟೇಶ ಮೂರ್ತಿ ಅವರ ಎರಡನೇ ಪುತ್ರ ಮತ್ತು ಪ್ರತಿಷ್ಠಿತ ಐಟಿ ಸಂಸ್ಥೆಯೊಂದರಲ್ಲಿ ಉದ್ಯೋಗಿ)

Read more Articles on