ಸಾರಾಂಶ
ಜಾಗತಿಕವಾಗಿ ಪ್ರಸಿದ್ಧಿ ಪಡೆದಿರುವ ಏರೋ ಇಂಡಿಯಾ-2025 ವೈಮಾನಿಕ ಪ್ರದರ್ಶನ ಫೆಬ್ರವರಿ 10ರಿಂದ 14ರ ತನಕ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದೆ.
ಗಿರೀಶ್ ಲಿಂಗಣ್ಣ
ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಜಾಗತಿಕವಾಗಿ ಪ್ರಸಿದ್ಧಿ ಪಡೆದಿರುವ ಏರೋ ಇಂಡಿಯಾ-2025 ವೈಮಾನಿಕ ಪ್ರದರ್ಶನ ಫೆಬ್ರವರಿ 10ರಿಂದ 14ರ ತನಕ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದೆ.
ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನಗಳಲ್ಲಿ ಒಂದಾದ ಏರೋ ಇಂಡಿಯಾ, ಭಾರತೀಯ ವಾಯುಪಡೆ ಮತ್ತು ಭಾಗವಹಿಸುವ ಇತರ ತಂಡಗಳ ರೋಮಾಂಚಕ ವೈಮಾನಿಕ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿ, ಮಿಲಿಟರಿ ಮತ್ತು ವಾಣಿಜ್ಯಿಕ ವೈಮಾನಿಕ ಕ್ಷೇತ್ರದಲ್ಲಿನ ಇತ್ತೀಚಿನ ಸಾಧನೆಗಳನ್ನು ತೋರಲಿದೆ. ವೈಮಾನಿಕ ಪ್ರದರ್ಶನದ ಮೊದಲ ಮೂರು ದಿನಗಳು ಔದ್ಯಮಿಕ ಅತಿಥಿಗಳ ಭೇಟಿಗೆ ಮೀಸಲಾಗಿದ್ದರೆ, ಕೊನೆಯ ಎರಡು ದಿನಗಳು ಸಾರ್ವಜನಿಕರಿಗೆ ಮುಕ್ತವಾಗಿವೆ.
ದೇಶೀಯ ನಿರ್ಮಾಣದ ವೃದ್ಧಿ:
ಏರೋ ಇಂಡಿಯಾ ಒಂದು ವೈಮಾನಿಕ ಮತ್ತು ಏರೋಸ್ಪೇಸ್ ಪ್ರದರ್ಶನವಾಗಿದ್ದು, ಇದನ್ನು ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಇಲಾಖೆಯಡಿ ಕಾರ್ಯ ನಿರ್ವಹಿಸುವ ಡಿಫೆನ್ಸ್ ಎಕ್ಸಿಬಿಷನ್ ಆರ್ಗನೈಸೇಶನ್ (ಡಿಇಒ) ನಿರ್ವಹಿಸುತ್ತದೆ.
ಭಾರತೀಯ ವಾಯುಪಡೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಬಾಹ್ಯಾಕಾಶ ಇಲಾಖೆಗಳು ಜೊತೆಯಾಗಿ ಕಾರ್ಯಾಚರಿಸಿ, ವೈಮಾನಿಕ ಪ್ರದರ್ಶನ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತವೆ.
ಆಧುನಿಕ ಏರೋಸ್ಪೇಸ್ ತಂತ್ರಜ್ಞಾನಗಳು:
ಏರೋ ಇಂಡಿಯಾ 2025ರಲ್ಲಿ, ಜಾಗತಿಕ ಮತ್ತು ಭಾರತೀಯ ವೈಮಾನಿಕ ಸಂಸ್ಥೆಗಳು ತಮ್ಮ ಅತ್ಯಾಧುನಿಕ ಮಿಲಿಟರಿ ಮತ್ತು ನಾಗರಿಕ ವಿಮಾನಗಳ ಮಾದರಿಗಳನ್ನು ಪ್ರದರ್ಶಿಸುವ ನಿರೀಕ್ಷೆಗಳಿವೆ. ಆ ಮೂಲಕ ಭಾರತೀಯ ವಾಯು ಸೇನೆ ಮತ್ತು ರಕ್ಷಣಾ ಸಚಿವಾಲಯದ ಗಮನ ಸೆಳೆಯುವುದು ವೈಮಾನಿಕ ಸಂಸ್ಥೆಗಳ ಉದ್ದೇಶ.
ಸಮಾರಂಭದಲ್ಲಿ ಪ್ರಮುಖ ಅಂತಾರಾಷ್ಟ್ರೀಯ ವೈಮಾನಿಕ ಸಂಸ್ಥೆಗಳಾದ ಏರ್‌ಬಸ್, ಬೋಯಿಂಗ್, ಲಾಕ್‌ಹೀಡ್ ಮಾರ್ಟಿನ್, ಯುನೈಟೆಡ್ ಏರ್‌ಕ್ರಾಫ್ಟ್ ಕಾರ್ಪೋರೇಷನ್ (ಯುಎಸಿ), ರೊಸೊಬೊರೊನ್ ಎಕ್ಸ್‌ಪೋರ್ಟ್, ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ), ಡಸಾಲ್ಟ್ ಏವಿಯೇಶನ್, ಸಾಬ್, ಮಾರ್ಟಿನ್ ಬೇಕರ್, ಸಫ್ರಾನ್, ಜನರಲ್ ಇಲೆಕ್ಟ್ರಿಕ್ (ಜಿಇ), ಮತ್ತು ರಾಲ್ಸ್ ರಾಯ್ಸ್ ಭಾಗವಹಿಸುವ ನಿರೀಕ್ಷೆಗಳಿವೆ.
ಸೆಂಟರ್ ಫಾರ್ ಏರ್ ಪವರ್ ಸ್ಟಡೀಸ್ ಇಂಡಿಯಾ (ಸಿಎಪಿಎಸ್ ಇಂಡಿಯಾ) ಥಿಂಕ್ ಟ್ಯಾಂಕ್ ಪ್ರಕಾರ, ಏರೋ ಇಂಡಿಯಾ 2025ರಲ್ಲಿ ಭಾರತ ಒಂದು ಪ್ರಮುಖ ಅಂತಾರಾಷ್ಟ್ರೀಯ ಎಂಜಿನ್ ಉತ್ಪಾದಕ ಸಂಸ್ಥೆಯೊಡನೆ ಐಪಿ ಹಕ್ಕುಗಳನ್ನು ಪಡೆದು, 110 ಕೆಎನ್ ಥ್ರಸ್ಟ್ ಇರುವ ವಿಮಾನದ ಎಂಜಿನ್ನಿನ ಜಂಟಿ ವಿನ್ಯಾಸ ಮತ್ತು ಉತ್ಪಾದನೆಯ ಕುರಿತ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.
ಅಂತಾರಾಷ್ಟ್ರೀಯ ಸಂಸ್ಥೆಗಳೊಡನೆ, ಪ್ರಮುಖ ಭಾರತೀಯ ರಕ್ಷಣಾ ಸಂಸ್ಥೆಗಳಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್, ಭಾರತ್ ಫೋರ್ಜ್ ಲಿಮಿಟೆಡ್, ಭಾರತ್ ಡೈನಾಮಿಕ್ಸ್ ಲಿಮಿಟೆಡ್, ಅದಾನಿ ಡಿಫೆನ್ಸ್ ಆ್ಯಂಡ್ ಏರೋಸ್ಪೇಸ್, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್, ಬ್ರಹ್ಮೋಸ್ ಏರೋಸ್ಪೇಸ್, ಇಂಡಿಯಾಪೋರ್ಜ್ ಮತ್ತು ಜೆ಼ನ್ ಟೆಕ್ನಾಲಜೀಸ್ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿವೆ.
ರೋಮಾಂಚಕ ವೈಮಾನಿಕ ಪ್ರದರ್ಶನ:
ಈ ವರ್ಷದ ವೈಮಾನಿಕ ಪ್ರದರ್ಶನದಲ್ಲಿ ರಷ್ಯಾದ ಐದನೇ ತಲೆಮಾರಿನ ಸ್ಟೆಲ್ತ್ ಯುದ್ಧ ವಿಮಾನವಾದ ಸು-57 (ಫೆಲೊನ್) ಪ್ರಮುಖ ಆಕರ್ಷಣೆಯಾಗಿದೆ. ಚೀನಾದ ಜು಼ಹಾಯ್ ಏರ್ ಶೋನಲ್ಲಿ ತನ್ನ ಅಸಾಧಾರಣ ಕೌಶಲ ಪ್ರದರ್ಶಿಸಿದ ಒಂದು ತಿಂಗಳ ಬಳಿಕ, ಸು-57 ಇದೇ ಮೊದಲ ಬಾರಿಗೆ ಭಾರತದ ಬಾನಂಗಳದಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಲು ಸಜ್ಜಾಗಿದೆ. ವೈಮಾನಿಕ ಆಸಕ್ತರು ಸು-57 ತನ್ನ ಅಸಾಧಾರಣವಾದ ಕುಶಲ ಚಲನೆಯೊಡನೆ, ಸ್ಟೆಲ್ತ್ ಸಾಮರ್ಥ್ಯವನ್ನೂ ಹೇಗೆ ಹೊಂದಲು ಸಾಧ್ಯವಾಯಿತು ಎಂದು ಆಶ್ಚರ್ಯಪಡುತ್ತಿದ್ದಾರೆ.
ಆರಂಭದಲ್ಲಿ, ಎಫ್-35 (ಲೈಟ್ನಿಂಗ್ 2) ಹಾಗೂ ಎಫ್-16 (ಫೈಟಿಂಗ್ ಫಾಲ್ಕನ್) ಯುದ್ಧ ವಿಮಾನಗಳು ಏರೋ ಇಂಡಿಯಾ 2025ರಲ್ಲಿ ಪಾಲ್ಗೊಳ್ಳುತ್ತಿಲ್ಲ ಎನ್ನಲಾಗಿತ್ತು. ಆದರೆ, ನಂಬಿಕಾರ್ಹ ಮೂಲಗಳ ಪ್ರಕಾರ, ಅವುಗಳೂ ಪಾಲ್ಗೊಳ್ಳುವುದು ಖಾತ್ರಿಯಾಗಿದೆ.
ಜೊತೆಗೆ, ಭಾರತದ ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್- ತೇಜಸ್ ಎಂಕೆ 1ಎ, ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್- ಪ್ರಚಂಡ್, ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ಮತ್ತು ಹಿಂದೂಸ್ತಾನ್ ಟರ್ಬೋ ಟ್ರೈನರ್-40 ಸೇರಿವೆ.
ಒಂಬತ್ತು ಬಿಎಇ ಹಾಕ್ ಎಂಕೆ 132 ಯುದ್ಧ ವಿಮಾನಗಳನ್ನು ಒಳಗೊಂಡಿರುವ ಭಾರತೀಯ ವಾಯುಪಡೆಯ ‘ಸೂರ್ಯ ಕಿರಣ್ ಏರೋಬ್ಯಾಟಿಕ್ ಟೀಮ್ (ಎಸ್‌ಕೆಎಟಿ)’ ತನ್ನ ಸಾಟಿಯಿಲ್ಲದ ವೈಮಾನಿಕ ಪ್ರದರ್ಶನದ ಮೂಲಕ ವೀಕ್ಷಕರನ್ನು ಸೆಳೆಯಲಿದೆ. ಈ ಆಧುನಿಕ ಜೆಟ್ ಟ್ರೈನರ್‌ಗಳು ತಮ್ಮ ಕುಶಲತೆ, ನಿಖರತೆಗೆ ಹೆಸರಾಗಿದ್ದು, ವೈಮಾನಿಕ ಪ್ರದರ್ಶನಕ್ಕೆ ಹೇಳಿಮಾಡಿಸಿದ ವಿಮಾನಗಳಾಗಿವೆ.
ಸುರಕ್ಷತಾ ಕಾರಣಗಳಿಂದ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್‌ಗಳ ಬಳಕೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿದಿರುವುದರಿಂದ, ಭಾರತೀಯ ವಾಯುಪಡೆಯ ಸಾರಂಗ್ ಹೆಲಿಕಾಪ್ಟರ್ ತಂಡದ ಹಾರಾಟ ಪ್ರದರ್ಶನ ಅನಿಶ್ಚಿತವಾಗಿದೆ.
ಆಧುನಿಕ ತಂತ್ರಜ್ಞಾನ ಪ್ರದರ್ಶನ:
ಹಾರಾಟ ಪ್ರದರ್ಶನ ಮಾತ್ರವಲ್ಲದೆ, ಏರೋ ಇಂಡಿಯಾ 2025ರಲ್ಲಿ ಸಾರ್ವಜನಿಕರಿಗೆ ನೆಲದಲ್ಲಿ ವಿವಿಧ ಮಿಲಿಟರಿ ಮತ್ತು ನಾಗರಿಕ ವಿಮಾನಗಳು ಮತ್ತು ಉಪಕರಣಗಳ ವೀಕ್ಷಣೆಗಾಗಿ ವಸ್ತು ಪ್ರದರ್ಶನ ಮತ್ತು ತಂತ್ರಜ್ಞಾನ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ.
ಎಚ್ಎಎಲ್ ತನ್ನ ಕಾಂಬ್ಯಾಟ್ ಏರ್ ಟ್ರೈನಿಂಗ್ ಸಿಸ್ಟಮ್ (ಸಿಎಟಿಎಸ್) - ವಾರಿಯರ್ ವಿಂಗ್‌ಮ್ಯಾನ್ ವಿಮಾನದ ಸಂಭಾವ್ಯ ವಿನ್ಯಾಸ ವ್ಯವಸ್ಥೆಯನ್ನು ಪ್ರದರ್ಶಿಸಲಿದೆ. ಜನವರಿ 13ರಂದು ಇದರ ಎಂಜಿನ್ ಗ್ರೌಂಡ್ ರನ್ ಪ್ರಕ್ರಿಯೆಯನ್ನು ಎಚ್ಎಎಲ್ ಯಶಸ್ವಿಯಾಗಿ ಪೂರ್ಣಗೊಳಿಸಿತ್ತು.
ಏರೋ ಇಂಡಿಯಾ 2025ರಲ್ಲಿ ಭಾಗವಹಿಸುವ ಪ್ರಮುಖ ಅಂತಾರಾಷ್ಟ್ರೀಯ ಕಂಪನಿಗಳಲ್ಲಿ ಲಾಕ್‌ಹೀಡ್ ಮಾರ್ಟಿನ್ ಸಹ ಒಂದಾಗಿದೆ. ಈ ಸಂಸ್ಥೆ ನೈಜ ಅನುಭವವನ್ನು ಒದಗಿಸುವ ರೀತಿಯ 3ಡಿ ವ್ಯವಸ್ಥೆಯನ್ನು ಪ್ರದರ್ಶಿಸಲಿದೆ. ಲಾಕ್‌ಹೀಡ್ ಮಾರ್ಟಿನ್ ತನ್ನ ಸಿ-130 ಸೂಪರ್ ಹರ್ಕ್ಯುಲಸ್ ಕಾರ್ಯತಂತ್ರದ ವಿಮಾನ, ಎಫ್-21 ಯುದ್ಧ ವಿಮಾನ, ಎಂಎಚ್-60 ''ರೋಮಿಯೋ'' ಸೀಹಾಕ್ ಹೆಲಿಕಾಪ್ಟರ್, ಜ್ಯಾವೆಲಿನ್ ಆ್ಯಂಟಿ ಟ್ಯಾಂಕ್ ಕ್ಷಿಪಣಿಗಳು ಮತ್ತು ಎಸ್-92 ಬಹುಪಾತ್ರಗಳ ಹೆಲಿಕಾಪ್ಟರ್‌ಗಳನ್ನು ಪ್ರದರ್ಶಿಸಲಿದೆ.
ಯುರೋಪಿನ ರಕ್ಷಣಾ ಸಂಸ್ಥೆಯಾದ ಎಂಬಿಡಿಎ ಒಂದು ಪ್ರಮುಖ ಒರಿಜಿನಲ್ ಇಕ್ವಿಪ್ಮೆಂಟ್ ಮ್ಯಾನುಫಾಕ್ಚರರ್ (ಒಇಎಂ) ಆಗಿದ್ದು, ತನ್ನ ಆಧುನಿಕ ಕ್ಷಿಪಣಿ ವ್ಯವಸ್ಥೆಗಳನ್ನು ಪ್ರದರ್ಶಿಸಲಿದೆ. ಇದರಲ್ಲಿ ಮಿಟಿಯೋರ್ (ದೀರ್ಘ ವ್ಯಾಪ್ತಿಯ, ಗಾಳಿಯಿಂದ ಗಾಳಿಗೆ ದಾಳಿ ನಡೆಸುವ ಕ್ಷಿಪಣಿ), ಮತ್ತು ಎಂಐಸಿಎ (ವಿವಿಧ ರೀತಿಯ ಯುದ್ಧಗಳಿಗೆ ಬಳಕೆಯಾಗುವ ಬಹುಮುಖಿ ಕ್ಷಿಪಣಿ) ಕ್ಷಿಪಣಿಗಳು ಸೇರಿವೆ.
ಏರೋ ಇಂಡಿಯಾ 2025ರಲ್ಲಿ ಡ್ರೋನ್ ಮತ್ತು ರಕ್ಷಣಾ ತಂತ್ರಜ್ಞಾನದಲ್ಲಿ ಕಾರ್ಯಾಚರಿಸುತ್ತಿರುವ ಹಲವು ಭಾರತೀಯ ಸಂಸ್ಥೆಗಳೂ ಪಾಲ್ಗೊಳ್ಳಲಿವೆ.