ಕುರುಡರ ನಗರಿಯಲ್ಲಿ ನಾನು ಕನ್ನಡಿಗಳನ್ನು ಮಾರುತ್ತೇನೆ

| N/A | Published : Apr 27 2025, 12:09 PM IST

Aniruddha Jatkar
ಕುರುಡರ ನಗರಿಯಲ್ಲಿ ನಾನು ಕನ್ನಡಿಗಳನ್ನು ಮಾರುತ್ತೇನೆ
Share this Article
  • FB
  • TW
  • Linkdin
  • Email

ಸಾರಾಂಶ

‘ಕುರುಡರ ನಗರಿಯಲ್ಲಿ ನಾನು ಕನ್ನಡಿಗಳನ್ನು ಮಾರುತ್ತೇನೆ’. ಓದುತ್ತಿರುವ ಹಾಗೇ ಪರವಶನಾದೆನು. ಕಬೀರ್ ದಾಸರು ಯಾವ ಅರ್ಥದಲ್ಲಿ ಇದನ್ನು ಬರೆದರು ಎಂದು ನಾನು ಯೋಚನೆ ಮಾಡುವಂತಾಯಿತು.

- ಅನಿರುದ್ಧ

ಅದೊಂದು ದಿನ ನಾನು ಸಂತ ಕಬೀರ್ ದಾಸರ ಆಧ್ಯಾತ್ಮಿಕ ಮತ್ತು ತಾತ್ವಿಕವಾದ, ಆಂಗ್ಲ ಭಾಷೆಗೆ ತರ್ಜುಮೆಗೊಂಡ ದ್ವಿಪದಿಗಳಾದ ದೋಹೆಗಳನ್ನು ಓದುತ್ತಿದ್ದೆ. ಅವುಗಳಲ್ಲಿನ ಮೊದಲ ದೋಹಾ ‘ಕುರುಡರ ನಗರಿಯಲ್ಲಿ ನಾನು ಕನ್ನಡಿಗಳನ್ನು ಮಾರುತ್ತೇನೆ’. ಓದುತ್ತಿರುವ ಹಾಗೇ ಪರವಶನಾದೆನು. ಕಬೀರ್ ದಾಸರು ಯಾವ ಅರ್ಥದಲ್ಲಿ ಇದನ್ನು ಬರೆದರು ಎಂದು ನಾನು ಯೋಚನೆ ಮಾಡುವಂತಾಯಿತು. ನನ್ನ ನ್ಯೂನತೆಗಳು ಹಾಗೂ ತಪ್ಪುಗಳ ಕಡೆಗೆ ನಾನೇ ಕುರುಡನಾಗಿರುವೆನೇ ಎಂದು ನನ್ನನ್ನು ನಾನೇ ಪ್ರಶ್ನೆ ಮಾಡಿಕೊಂಡೆ.

ನನ್ನ ಮತ್ತು ಕನ್ನಡಿಯ ನಡುವಿನ ಒಂದು ತೆಳುವಾದ ಅಗೋಚರ ರೇಖೆಯು ನನ್ನ ಕನ್ನಡಿಯು ನನಗೆ ಎಲ್ಲವನ್ನೂ ಪ್ರತಿಬಿಂಬಿಸುವುದನ್ನು ತಡೆಯುತ್ತದೆ. ನನ್ನ ಕೂದಲು ಸರಿಪಡಿಸಿಕೊಳ್ಳುವುದು ಅಥವಾ ನನ್ನ ಬಟ್ಟೆಗಳನ್ನು ಅಚ್ಚುಕಟ್ಟಾಗಿ ತೊಟ್ಟುಕೊಳ್ಳುವುದು ಇತ್ಯಾದಿ ಕೆಲವು ಚಿಕ್ಕ ಪುಟ್ಟ ತಿದ್ದುಪಡಿಗಳನ್ನು ಸೂಚಿಸಲು ನನ್ನ ಕನ್ನಡಿಗೆ ಅನುಮತಿ ನೀಡಿದ್ದೇನೆ. ಆದರೆ ಅದು ನನ್ನ ಬಗೆಗಿನ ಸಂಪೂರ್ಣ ಸತ್ಯವನ್ನು ತೆರೆದಿಟ್ಟು, ಬಹಿರಂಗಪಡಿಸುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಿದ್ದೇನೆ. ನಾನು ನನ್ನ ಕನ್ನಡಿಗೆ ಆ ಸ್ವಾತಂತ್ರ್ಯ ಕೊಟ್ಟರೆ, ನನ್ನನ್ನು ನಾನು ಬೇಷರತ್ತಾಗಿ ಪ್ರೀತಿಸಲು ಮತ್ತು ನೆಮ್ಮದಿಯ ಜೀವನ ನಡೆಸುವುದು ಅಸಾಧ್ಯವಾಗುತ್ತದೆ ಎಂಬುದರ ಅರಿವಿದೆ.

ನನಗೆ ಸ್ಪಷ್ಟವಾಗಿ ನೆನಪಿದೆ, ನಾನು ಚಿಕ್ಕ ಹುಡುಗನಾಗಿದ್ದಾಗ ನನ್ನ ಅಜ್ಜಿ ಕನ್ನಡಿಯ ಮುಂದೆ ಬಹಳ ಹೊತ್ತು ನಿಲ್ಲಬೇಡವೆಂದು ಹೇಳುತ್ತಿದ್ದರು. ಏಕೆಂದರೆ, ನಾನೂ ನೀರಿನಲ್ಲಿ ತನ್ನ ಪ್ರತಿಬಿಂಬ ನೋಡುತ್ತಾ ಉಳಿದು ಬಿಟ್ಟ ನಾರ್ಸಿಸಸ್ ಹೂವಿನ ಹಾಗೆ ಆಗುವೆನೆಂದು ಹೇಳುತ್ತಿದ್ದರು. ಮುಂದುವರಿದು, ಅಜ್ಜಿ ಗ್ರೀಕ್ ಪುರಾಣದ ಕಥೆಗಳಲ್ಲಿ ಬರುವ ಓರ್ವ ಸ್ಫುರದ್ರೂಪಿ ತರುಣ ನಾರ್ಸಿಸಸ್ ಎಂಬುವನು ಅದು ಹೇಗೆ ತನ್ನ ಮೇಲೆ ಹಾಗೂ ತನ್ನ ಪ್ರತಿಬಿಂಬದ ಮೇಲೆ ಮೋಹಗೊಂಡನೆಂಬುದನ್ನು ವಿವರಿಸಿದರು. ಸ್ವಯಂ ಗೀಳು ಹೇಗೆ ವ್ಯಕ್ತಿಯ ವಿನಾಶಕ್ಕೆ ದಾರಿ ಮಾಡಿಕೊಡುತ್ತದೆಂಬ ಪಾಠ ಹೇಳಿ ಕೊಟ್ಟರು.

ಆದರೆ ನಾನೊಬ್ಬ ನಟ. ಜನರು ನನ್ನನ್ನು ನೋಡುತ್ತಾರೆ, ಗಮನಿಸುತ್ತಾರೆ ಮತ್ತು ಅದರ ಮೂಲಕ ನಾನು ಮಾಡುವುದೆಲ್ಲವನ್ನೂ ಪರಿಶೀಲಿಸುತ್ತಾರೆ. ಹಾಗಾಗಿ ನಾನು ನೋಡಲು ಪರಿಪೂರ್ಣನಾಗಿರುವೆನೋ - ಅದೂ ಶಾಟ್ ಕೊಡುವ ಮೊದಲು ಎಂಬುದನ್ನು ಖಚಿತಪಡಿಸಿಕೊಳ್ಳಲು ಕನ್ನಡಿಯಲ್ಲಿ ನನ್ನ ಪ್ರತಿಬಿಂಬವನ್ನು ಸದಾ ಕಾಲ ನೋಡುತ್ತಿರಬೇಕು. ಹೌದು! ಪ್ರಾಯಶಃ ಬೇರೆ ಬೇರೆ ವೃತ್ತಿಗಳಲ್ಲಿರುವ ಯಾವುದೇ ವ್ಯಕ್ತಿಗಿಂತಲೂ ಹೆಚ್ಚೇ ಕನ್ನಡಿಯೊಳಗೆ ಇಣುಕುತ್ತೇನೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ.

ಕನ್ನಡಿಯು ನನ್ನ ನಿರ್ದಿಷ್ಟ ಮುಖಭಾವ ಸ್ಕ್ರಿಪ್ಟ್‌ನಲ್ಲಿ ಬರೆದಿರುವಂತಹ ಸಂದರ್ಭಕ್ಕೆ ಸೂಕ್ತವೇ ಮತ್ತು ಆ ಮುಖಭಾವ ನೋಡುಗರಿಗೆ ಮನದಟ್ಟು ಮಾಡುವಂತಿದೆಯೇ ಇಲ್ಲ ವಿಚಿತ್ರವಾಗಿದೆಯೇ ಎಂಬುದನ್ನು ಅರ್ಥ ಮಾಡಿಕೊಳ್ಳಲು ನನಗೆ ಸಹಾಯ ಮಾಡುತ್ತದೆ.

ಕನ್ನಡಿಯಲ್ಲಿ ಮುಖ ನೋಡಿಕೊಳ್ಳುವಾಗಲೆಲ್ಲ ಅದರೆದುರು ಸ್ವಲ್ಪ ಹೊತ್ತು ಠಳಾಯಿಸುವೆನಾದರೂ ನನ್ನ ಪ್ರತಿಬಿಂಬದಲ್ಲಿ ಸಂಪೂರ್ಣವಾಗಿ ಕಳೆದು ಹೋಗದಂತೆ ಎಚ್ಚರ ವಹಿಸುತ್ತೇನೆ. ಇಲ್ಲ! ಇದು ನಾನೆಲ್ಲಿ ಅಪಾಯಕರವಾಗಿ ನನ್ನ ಮೇಲೆಯೇ ಗೀಳು ಬೆಳೆಸಿಕೊಂಡು ಬಿಡುವೆನೋ ಎಂಬ ಭಯಕ್ಕಾಗಿ ಅಲ್ಲ. ಆದರೆ... ಇಲ್ಲ! ನನ್ನ ದೋಷಗಳನ್ನು ನನಗೇ ತೋರಿಸಿಕೊಳ್ಳದಿದ್ದ ಮೇಲೆ ಅವುಗಳನ್ನು ನಿಮ್ಮೆಲ್ಲರ ಜೊತೆಗೆ ಹೇಗೆ ಹಂಚಿಕೊಳ್ಳಲಿ...? ಈ ಕಾರಣಕ್ಕಾಗಿಯೇ ನಾನು ನನ್ನ ಕನ್ನಡಿಯ ಮೇಲೆ ನಿರ್ಬಂಧಗಳನ್ನು ಹೇರಿದ್ದೇನೆ‌.

ಕನ್ನಡಿಯು ನನ್ನ ಬಗೆಗಿನ ಸಂಪೂರ್ಣ ಸತ್ಯವನ್ನು ಎಂದೂ ಬೊಟ್ಟು ಮಾಡಿ ತೋರಿಸಬಾರದು, ತೋರಿಸಲು ಸಾಧ್ಯವೂ ಆಗದು. ನಾನೇನು ಮತ್ತು ನಾನು ಮಾಡಿದ ತಪ್ಪುಗಳೇನೇನು ಎಂಬುದನ್ನು ಅದು ನನಗೆ ನೆನಪಿಸಬಾರದು. ನನ್ನ ವಾಸ್ತವವನ್ನು ಎದುರಿಸಲು ಹೆದರುವೆನೋ ಏನೋ. ಓಹ್! ಉದ್ದೇಶರಹಿತವಾಗಿ ನನ್ನ ಆತಂಕವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆನೇ? ಹಾಗೇ ಅಪ್ಪಿತಪ್ಪಿ ನಾನು ಪರಿಪೂರ್ಣನಲ್ಲ ಎಂಬುದನ್ನು ಹೊರಗೆಡವಿದೆನೇ?

ನಾನು ಹೆದರಿಕೊಂಡಿರುವುದು ಹೇಗೆ ಸಾಧ್ಯ? ಹೇಗೂ ನಾನೊಬ್ಬ ಹೀರೋ. ನನ್ನ ಮತ್ತು ಕನ್ನಡಿಯ ನಡುವೆ ಆ ತೆಳುವಾದ ಅಗೋಚರ ಗೆರೆ ಇಲ್ಲದೆ ಹೋಗಿದ್ದಲ್ಲಿ ನಿಜಕ್ಕೂ ಏನಾಗುತ್ತದೆ? ಆ ಕಠೋರ ನಿರ್ಬಂಧಗಳನ್ನು ಆಚೆ ನೂಕದೇ ಹೋದರೆ? ಇರಲಿ, ನನ್ನ ರಕ್ಷಣೆಗೆ ನನ್ನ ಬಳಿ ಇನ್ನೊಂದು ಗುರಾಣಿ ಇದೆ. ನಾನೇನೇನು ಮಾಡಿರುವೆನೋ ಅವೆಲ್ಲದಕ್ಕೂ ನನ್ನ ಬಳಿ ತರ್ಕವಿದೆ. ನನ್ನ ದೃಷ್ಟಿಕೋನವಿದೆ... ನನಗೆ ಈಗ ಸಮಾಧಾನವಾಯಿತು.

ಕಬೀರ್ ದಾಸರ ಇನ್ನೊಂದು ದೋಹಾ, ‘ನಿನಗೆ ಸತ್ಯ ಬೇಕೆಂದರೆ ನಾನು ನಿನಗೆ ಸತ್ಯ ಹೇಳುವೆ. ನಿನ್ನೊಳಗಿರುವ ಆ ಗುಪ್ತ ದನಿ, ನಿನ್ನ ನಿಜ ದನಿ, ಅದನ್ನು ಕೇಳಿಸಿಕೋ’, ಕೂಡ ಓದಿದೆ. ನನ್ನ ಆತ್ಮಸಾಕ್ಷಿ ಎಣೆಯಿಲ್ಲದಂತೆ ನನ್ನನ್ನು ಸದಾ ಕಾಲ ಚುಚ್ಚುತ್ತಿರುತ್ತದೆ ಎಂಬುದನ್ನು ಅರಿತುಕೊಳ್ಳಲು ಈ ದೋಹಾ ಸಹಾಯ ಮಾಡಿತು.

ಹಂ... ಹೌದು! ನನ್ನ ಆತ್ಮಸಾಕ್ಷಿಯನ್ನೂ ನಿರ್ಬಂಧಿಸುತ್ತೇನೆ, ಇರಿ.

ನಾನು ಪ್ರಯತ್ನ ಪಡುತ್ತಿದ್ದೇನೆ... ಆದರೆ ಮುಂಚಿನಂತೆ ಅದು ನನ್ನ ಮೇಲೆ ಎರಗುವುದನ್ನು ಮುಂದುವರೆಸಿದೆ...

ಆಗ ನಾನೇನು ಮಾಡಬೇಕು? ಕಬೀರ್ ದಾಸರ ಮತ್ತೊಂದು ದೋಹಾದ ಮೊದಲ ಸಾಲು, ‘ಕ್ಷಮೆ ಶ್ರೇಷ್ಟನಾದ ವ್ಯಕ್ತಿಗೆ ತಕ್ಕುದಾಗಿದೆ’ ಎಂಬುದೇ ಈ ಪ್ರಶ್ನೆಗೆ ಉತ್ತರ. ನನ್ನ ಹಿಂದಿನ ತಪ್ಪುಗಳಿಗೆ ನನ್ನನ್ನು ನಾನೇ ಕ್ಷಮಿಸಿಕೊಳ್ಳುವುದು, ಸಾಧ್ಯವಾಗುವ ಎಲ್ಲ ರೀತಿಯಿಂದಲೂ ನನ್ನನ್ನು ತಿದ್ದಿಕೊಳ್ಳುವುದು ಮತ್ತು ಅವುಗಳನ್ನು ಮತ್ತೆ ಮಾಡದಿರುವುದು ಹಾಗೂ ಹೊಸ ತಪ್ಪುಗಳನ್ನು ಮಾಡದಿರಲು ನನ್ನ ಶಕ್ತಿ ಮೀರಿ ಪ್ರಯತ್ನಿಸುವುದು.

ಹೀಗೆ ಮಾಡುವುದರಿಂದ ಸಂಪೂರ್ಣ ಆತ್ಮವಿಶ್ವಾಸದಿಂದ ಕನ್ನಡಿಯಲ್ಲಿ ಇಣುಕಿ, ನನ್ನ ಪ್ರತಿಬಿಂಬವನ್ನು ಕಂಡು ಯಾವುದೇ ನಿರ್ಬಂಧಗಳನ್ನು ಹೇರದೆಯೇ ನನ್ನ ಆತ್ಮಸಾಕ್ಷಿಯನ್ನು ಎದುರುಗೊಳ್ಳುವೆನೆಂದು ಖಚಿತವಾಗಿ ನಂಬುತ್ತೇನೆ.

ಸಂತ ಕಬೀರ್ ದಾಸರು ಹೇಳಿದ ಹಾಗೆ, ‘ಗುರುವು ದೇವರಿಗಿಂತಲೂ ದೊಡ್ಡವನು’, ಕಬೀರ್ ದಾಸರು ನನ್ನ ಶ್ರೇಷ್ಠ ಗುರುಗಳಲ್ಲಿ ಒಬ್ಬರು. ಅವರಿಗೆ ನಾನು ನಮಿಸುತ್ತೇನೆ.