ಆರ್ಟ್ ಆಫ್ ಲಿವಿಂಗ್ ಕೌಶಲ್ಯ ಕೇಂದ್ರದಿಂದ 4 ಲಕ್ಷ ಜನಕ್ಕೆ ತರಬೇತಿ

| N/A | Published : Jul 15 2025, 01:00 AM IST / Updated: Jul 15 2025, 05:42 AM IST

Gurudev ravishankar guruji

ಸಾರಾಂಶ

ನಿರುದ್ಯೋಗ ಮತ್ತು ಉದ್ಯೋಗಾರ್ಹತೆಯ ನಡುವಿನ ಅಂತರ ಕಡಿಮೆಗೊಳಿಸುವ ಉದ್ದೇಶದೊಂದಿಗೆ ಆರ್ಟ್ ಆಫ್ ಲಿವಿಂಗ್ ಕೌಶಲ್ಯ ತರಬೇತಿ ಕೇಂದ್ರವು ಶ್ರಮಿಸುತ್ತಿದ್ದು, ದೇಶದಾದ್ಯಂತ 100ಕ್ಕೂ ಹೆಚ್ಚು ಕೌಶಲ್ಯ ಅಭಿವೃದ್ಧಿ ಕೇಂದ್ರ ತೆರೆದು ಈವರೆಗೆ 4.2 ಲಕ್ಷ ಯುವಜನರಿಗೆ ತರಬೇತಿ ನೀಡಿದೆ.

 ಬೆಂಗಳೂರು :  ನಿರುದ್ಯೋಗ ಮತ್ತು ಉದ್ಯೋಗಾರ್ಹತೆಯ ನಡುವಿನ ಅಂತರ ಕಡಿಮೆಗೊಳಿಸುವ ಉದ್ದೇಶದೊಂದಿಗೆ ಆರ್ಟ್ ಆಫ್ ಲಿವಿಂಗ್ ಕೌಶಲ್ಯ ತರಬೇತಿ ಕೇಂದ್ರವು ಶ್ರಮಿಸುತ್ತಿದ್ದು, ದೇಶದಾದ್ಯಂತ 100ಕ್ಕೂ ಹೆಚ್ಚು ಕೌಶಲ್ಯ ಅಭಿವೃದ್ಧಿ ಕೇಂದ್ರ ತೆರೆದು ಈವರೆಗೆ 4.2 ಲಕ್ಷ ಯುವಜನರಿಗೆ ತರಬೇತಿ ನೀಡಿದೆ.

ರವಿಶಂಕರ ಗುರೂಜಿ ಅವರ ಮಾರ್ಗದರ್ಶನದಲ್ಲಿ ಶ್ರೀ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ಆರ್ಟ್‌ ಆಫ್‌ ಲಿವಿಂಗ್‌ ಸರ್ಕಾರ ಮತ್ತು ಖಾಸಗಿ ಕಂಪನಿಗಳೊಂದಿಗೆ ಸಹಯೋಗದೊಂದಿಗೆ ತಂತ್ರಜ್ಞಾನ ಸೇರಿ ಸಾಕಷ್ಟು ಕ್ಷೇತ್ರದಲ್ಲಿ ಯುವ ಸಮುದಾಯದ ಕೌಶಲ್ಯ ಹೆಚ್ಚಿಸುವ ಕೆಲಸ ಮಾಡುತ್ತಿದೆ.

2024ರಲ್ಲಿ ಬಿಡುಗಡೆಯಾದ ಅಂಕಿ-ಅಂಶಗಳ ಪ್ರಕಾರ, 103 ಮಿಲಿಯನ್ ಉದ್ಯೋಗಾವಕಾಶಗಳಿದ್ದರೂ, ಕೇವಲ 74 ಮಿಲಿಯನ್ ಅರ್ಹರು ಲಭ್ಯವಿದ್ದಾರೆ. ಹೀಗೆ ಬೆಳೆಯುತ್ತಿರುವ ಆರ್ಥಿಕತೆಯಲ್ಲಿ ನಿರುದ್ಯೋಗದ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಿದೆ. ಆದರೆ, ಸಾವಿರಾರು ಉದ್ಯಮಿಗಳು ಮತ್ತು ಕೌಶಲ್ಯಪೂರ್ಣ ವೃತ್ತಿಪರರನ್ನು ರೂಪಿಸುವ ಮೂಲಕ ಈ ಅಂತರವನ್ನು ಕಡಿಮೆ ಮಾಡಲು ಕೌಶಲ್ಯ ತರಬೇತಿ ಕೇಂದ್ರ ಕ್ರಮ ವಹಿಸಿದೆ.

10ನೇ ತರಗತಿ ಪೂರ್ಣಗೊಳಿಸಿದ 16 ವರ್ಷಕ್ಕಿಂತ ಮೇಲ್ಪಟ್ಟ ಯುವಕರಿಗೆ ನವೀಕೃತ ತರಬೇತಿ ಕಾರ್ಯಕ್ರಮ ನೀಡಲಾಗುತ್ತಿದೆ. ಇವುಗಳಲ್ಲಿ ಸಾಫ್ಟ್-ಸ್ಕಿಲ್ಸ್ ಮಾತ್ರವಲ್ಲದೆ ಮನಸ್ಸು-ದೇಹ ನಿರ್ವಹಣಾ ತಂತ್ರ ಮತ್ತು ಆಧ್ಯಾತ್ಮಿಕ ಅಭ್ಯಾಸಗಳ ಮೂಲಕ ಆಂತರಿಕ ಸಬಲೀಕರಣ ಮಾಡುತ್ತಿರುವುದು ವಿಶೇಷ.

ಹೀಗೆ ತರಬೇತಿ ಪಡೆದ ಓಡಿಶಾ ರಾಜ್ಯದ ಪೊಗ್ರಾಬಹಲ್ ಗ್ರಾಮದಿಂದ ಬಂದ ರಿತಿಕಾ ಡಿಫೈ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್‌ನ ಸಹಭಾಗಿತ್ವದಲ್ಲಿ ನೀಡಲಾಗುವ ಡ್ರೋನ್ ಹಾರಾಟ ತರಬೇತಿ ಪಡೆದರು. ಈಗ ಸ್ಕಿಲ್ ಸೆಂಟರ್‌ನಲ್ಲಿ ಡ್ರೋನ್ ಕಾರ್ಯಕ್ರಮದಲ್ಲಿ ಸಹಾಯಕ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಉತ್ತರ ಕರ್ನಾಟಕದ ಹಳ್ಳಿಯಿಂದ ಬಂದ ಭರತ್, ಜೀವನಕಲೆ ಸಂಸ್ಥೆಯಲ್ಲಿ ಮೊಬೈಲ್ ದುರಸ್ತಿ ತರಬೇತಿಗೆ ಸೇರಿ, ನಂತರ ಬೋಶ್ ಸಂಸ್ಥೆಯ ‘ಬ್ರಿಡ್ಜ್’ ಉದ್ಯೋಗ ಯೋಜನೆಯ ಭಾಗವಾಗಿ ಕೈಗಾರಿಕಾ ಜ್ಞಾನ ಪಡೆದಿದ್ದಾರೆ. ಮಾತನಾಡಲು ಸ್ವಲ್ಪ ಹಿಂಜರಿಯುತ್ತಿದ್ದ ಅವರು ಈಗ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬೇಸಿಗೆ ಕಾಲದ ಇಂಟರ್ನ್‌ಶಿಪ್‌ ತರಬೇತಿ ನೀಡುತ್ತಿದ್ದಾರೆ.

ಒಬ್ಬ ವ್ಯಕ್ತಿಯಲ್ಲಿ ಆತ್ಮ ವಿಶ್ವಾಸ ಜಾಗೃತಗೊಂಡಾಗ, ಅವರು ಯಾವುದೇ ಸವಾಲನ್ನು ಸ್ವೀಕರಿಸಲು ಸಿದ್ಧರಾಗಿರುತ್ತಾರೆ. ಭಾರತೀಯ ಯುವಕರ ಕೌಶಲ್ಯ ಹೆಚ್ಚಿಸಲು ಕೌಶಲ್ಯ ತರಬೇತಿ ಕೇಂದ್ರವು ಶ್ರಮಿಸುತ್ತಿದೆ.

-ರವಿಶಂಕರ ಗುರೂಜಿ, ಆರ್ಟ್ ಆಫ್ ಲಿವಿಂಗ್

Read more Articles on