ಅಡಿಗಲ್ಲು ಕಳಚಿದೆ : ಪಶ್ಚಿಮ ಘಟ್ಟದ ಜೀವಜಾಲ ಎಮರ್ಜೆನ್ಸಿ ವಾರ್ಡಿನಲ್ಲಿದೆ, ತುರ್ತು ಸಂದೇಶಗಳು ಹೊರಬಿದ್ದಿವೆ

| Published : Aug 04 2024, 01:22 AM IST / Updated: Aug 04 2024, 05:20 AM IST

ಅಡಿಗಲ್ಲು ಕಳಚಿದೆ : ಪಶ್ಚಿಮ ಘಟ್ಟದ ಜೀವಜಾಲ ಎಮರ್ಜೆನ್ಸಿ ವಾರ್ಡಿನಲ್ಲಿದೆ, ತುರ್ತು ಸಂದೇಶಗಳು ಹೊರಬಿದ್ದಿವೆ
Share this Article
  • FB
  • TW
  • Linkdin
  • Email

ಸಾರಾಂಶ

ಪಶ್ಚಿಮ ಘಟ್ಟದ ಜೀವಜಾಲ ಎಮರ್ಜೆನ್ಸಿ ವಾರ್ಡಿನಲ್ಲಿದೆ, ತುರ್ತು ಸಂದೇಶಗಳು ಹೊರಬಿದ್ದಿವೆ, ತಮ್ಮದಲ್ಲದ ತಪ್ಪಿಗೆ ಅಮಾಯಕ ಜೀವಗಳ ಬಲಿಯಾಗಿವೆ.  

- ಶಿವಾನಂದ ಕಳವೆ

ಸರಣಿ ಭೂ ಕುಸಿತಗಳಿಂದ ಕರಾವಳಿ, ಘಟ್ಟ ಪ್ರದೇಶಗಳು ಎಂದಿಲ್ಲದ ಭಯದಲ್ಲಿವೆ. ಕಾಲುದಾರಿಯಲ್ಲಿ ಗುಡ್ಡ, ಬೆಟ್ಟ ಏರಿಳಿಯುತ್ತ ಶತಮಾನಗಳಿಂದ ಬದುಕಿದ ಪಶ್ಚಿಮ ಘಟ್ಟದ ಜನರಲ್ಲಿ ಮನೆ ಹಿಂದಿನ ಗುಡ್ಡ ಏನಾದೀತು? ಆತಂಕವಿದೆ. ಕುಸಿದ ನೆಲೆಯ ಹುಡಿ ಮಣ್ಣು, ಚೂರು ಕಲ್ಲು ನೋಡಿದರೆ ಇಷ್ಟು ವರ್ಷ ಕುಸಿಯದೇ ಇದ್ದದ್ದೇ ಅಚ್ಚರಿ!

73 ವರ್ಷಗಳ ಹಿಂದೆ ಶಿವರಾಮ ಕಾರಂತರು ಕುಡಿಯರ ಕೂಸು ಕಾದಂಬರಿಯಲ್ಲಿ ಕರಿಮಲೆಯ ಕುಸಿತ ಚಿತ್ರಿಸಿದಂತೆ ಬೆಟ್ಟ ಬಂಡೆಗಳುರುಳಿ ಆನೆಗಳೂ ತೇಲಿದ ಘಟನೆ ನಡೆದಿದೆ. ಕಣಿವೆಯ ಊರು ಅರೇ ಕ್ಷಣದಲ್ಲಿ ಇಲ್ಲವಾಗಿ ಹಲವರ ಜೀವ ಹೋಗಿದೆ. ಉಕ್ಕಿದ ಪ್ರವಾಹಕ್ಕೆ ನದಿ, ಝರಿಗಳು ದಿಕ್ಕು ಬದಲಿಸಿವೆ. 

ಆಧುನಿಕತೆಯಲ್ಲಿ ಕಣ್ಣುಮುಚ್ಚಿ ಓಡುವವರನ್ನು ಇನ್ನಷ್ಟು ಕಾಲ ಬದುಕಲು ನಾಲ್ಕು ಹೆಜ್ಜೆ ಹಿಂದಕ್ಕೆ ನಡೆಯಿರೆಂದು ಸಾರಿ ಸಾರಿ ಹೇಳುತ್ತಿವೆ. ಚರ್ಚೆ ಚಾಲ್ತಿಯಲ್ಲಿದೆ. ಮಾರುಕಟ್ಟೆಯಿಂದ ತಂದ ಯಂತ್ರ ಕಳಚಿ ಮತ್ತೆ ಮರು ಜೋಡಣೆಯ ರಿವರ್ಸ್ ಇಂಜಿನಿಯರಿಂಗ್‌ನ ಸುಲಭದ ಕೆಲಸದಂತೆ ನದಿ ಕಣಿವೆ ಬೆಟ್ಟ ಕಟ್ಟುವ ಪುನಃಶ್ಚೇತನ ಸಾಧ್ಯವಿಲ್ಲ! 15 ವರ್ಷಗಳ ಹಿಂದೆ ಕಾರವಾರ ಝರಿವಾಡ ಮಣ್ಣಡಿ ಅರೆಕ್ಷಣದಲ್ಲಿ 19 ಜನ ಸೇರಿದಾಗಲೂ ವಿಶ್ಲೇಷಣೆ ನಡೆದಿದ್ದವು. 

ಇದಾದ ನಂತರ ಕೊಡಗು, ಕಳಚೆ, ಶಿರೂರು, ವಯನಾಡು ಕುಸಿತ ನಡೆದಾಗಲೂ ಚರ್ಚೆ ಸಾಗಿದೆ. ನೆಲದ ಅವಲೋಕನದಲ್ಲಿ ನಮ್ಮ ಭಾರ ಹೆಚ್ಚು ಕಾಣುತ್ತಿದೆ. ಇಂದಿಗೆ 200 ವರ್ಷಗಳ ಹಿಂದೆ ಕರಾವಳಿ ಘಟ್ಟಗಳಲ್ಲಿ ಚಕ್ಕಡಿ ಗಾಡಿಗಳಿಲ್ಲ, ಹಳ್ಳ ಕೊಳ್ಳಗಳು ತಗ್ಗು ದಿನ್ನೆಗಳಿರುವ ಕಾರಣ ಓಡಾಟಕ್ಕೆ ಅನುಕೂಲವಿರಲಿಲ್ಲ. ಕ್ರಿ.ಶ. 1870 ನಂತರದಲ್ಲಿ ಘಟ್ಟ ಕರಾವಳಿಯ ಜೋಡಣೆಗಳಾಗಿ, ಕಟ್ಟಿಗೆಯ ಬ್ರಿಜ್‌ಗಳಾಗಿ ಮರದ ಚಕ್ರದ ಓಡಾಟ ಶುರುವಾಗಿದೆ. ಘಟ್ಟ ಏರುವ ರಸ್ತೆ ಸಮತಟ್ಟಾದ ನದಿಯಂಚಿನ ಪ್ರದೇಶದಲ್ಲಿ ಬೇಸಿಗೆ ಓಡಾಟಕ್ಕೆ ಆರಂಭವಾಗಿತ್ತು. ಗಂಟೆಗೆ ಆರು ಕಿಲೋ ಮೀಟರ್ ಸಂಚರಿಸುವ ಎತ್ತಿನಗಾಡಿಯಿದ್ದ ಜಾಗದಲ್ಲಿ 150 ಕಿಲೋ ಮೀಟರ್ ವೇಗದ ವಾಹನ ಬಂದಿವೆ. 

ಗಂಟೆಗೆ 600-800 ವಾಹನ ಸಂಚರಿಸುತ್ತಿವೆ. ಹುಲ್ಲು, ನಾಡಹೆಂಚಿನ ಮನೆಗಳಿದ್ದಲ್ಲಿ ಬಹುಮಹಡಿ ಕಟ್ಟಡಗಳೆದ್ದಿವೆ. ಒಂದು ಚದರ ಕಿಲೋ ಮೀಟರ್ ಜಾಗದಲ್ಲಿ 25- 30 ಜನಗಳೂ 100 ವರ್ಷ ಹಿಂದೆ ಇರಲಿಲ್ಲ, ಜನ ಸಾಂದ್ರತೆ ಭರ್ತಿಯಾಗಿದೆ. ಹಡಗಿನ ಮೂಲಕ ವಿದೇಶಗಳಿಗೆ ಅಕ್ಕಿ ಪೂರೈಸುತ್ತಿದ್ದ ಕರಾವಳಿ ಜಿಲ್ಲೆಗಳ ಭತ್ತದ ಗದ್ದೆಗಳ ಬಯಲು 40 ವರ್ಷಗಳಲ್ಲಿ ಮಹಡಿ ಮಹಲುಗಳಾಗಿದೆ. ಗುಡ್ಡ ಬೆಟ್ಟ ಅಗೆದು ಮಣ್ಣು ಸುರಿಯುವ ಶಕ್ತಿ ಸಮರ ಸಾರ್ವತ್ರಿಕವಾಗಿದೆ. ಹುಚ್ಚಿನ ಓಟದಲ್ಲಿ ಯಾರನ್ನೂ ಹಿಡಿದು ನಿಲ್ಲಿಸಲು ಅಸಾಧ್ಯವಾಗಿ ಕಾನೂನು ಕಣ್ಣು ಮುಚ್ಚಿ ಹಣದಾಹ ಕೈ ಜೋಡಿಸಿದೆ. ಗುಡ್ಡದ ತುದಿಗಳಲ್ಲಿ ನಗರಗಳೆದ್ದಿವೆ. ನದಿ, ಹಳ್ಳಗಳಂಚಿನಲ್ಲಿ ಕೃಷಿ, ವಾಣಿಜ್ಯ ಚಟುವಟಿಕೆ ಬೆಳೆದಿದೆ. ನದಿಗಳಿಗೆ ಕಿಂಡಿತಡೆ ಅಣೆಕಟ್ಟೆಗಳಿವೆ. ಮಳೆ ಪ್ರವಾಹದಲ್ಲಿ ತೇಲಿ ಬಂದ ಕಸಕಡ್ಡಿ ಮರಗಳು ಸಿಲುಕಿ ಹರಿಯುವಿಕೆಗೆ ತಡೆಯಾದರೆ ಏನಾದೀತು?

ನದಿ ಪಾತ್ರ ಬದಲಾಗಿದೆ. 

ಬಾಕ್ಸ್ನಿರ್ಮಾಣ ವಿಶ್ವಾಸ ಕುಸಿದಿದೆ ಅವೈಜ್ಞಾನಿಕ ಕಾಮಗಾರಿ, ನೈಸರ್ಗಿಕ ಅರಣ್ಯ ನಾಶ, ನದಿ ಹಳ್ಳ ಅತಿಕ್ರಮಣ, ಗಣಿಗಾರಿಕೆ, ಅಧಿಕ ಮಳೆ, ಜನವಸತಿ ಹೆಚ್ಚಳ, ಪ್ರವಾಸೋದ್ಯಮ, ರಸ್ತೆ ಅಗಲೀಕರಣ, ಇಂಗುಗುಂಡಿ, ರೆಸಾರ್ಟ್ ಮುಂತಾಗಿ ಕುಸಿತದ ಕಾರಣಗಳ ಪಟ್ಟಿ ಬೆಳೆಯುತ್ತಿದೆ. ‘ಹಿಂದೆಯೂ ಇಲ್ಲೇ ಇದ್ದೆವು, ಇದಕ್ಕಿಂತ ಜಾಸ್ತಿ ಮಳೆ ಸುರಿಯುತ್ತಿತ್ತು, ಅವತ್ತು ಕುಸಿಯದೇ ಹೋಗಿದ್ದು ಇವತ್ತು ಏಕೆ ಕುಸಿದಿದೆ?’ ಪ್ರಶ್ನೆಯಿದೆ. ಭೂಮಿಯ ಒಳಗಡೆ ಏನೋ ಆಗಿದೆ? ಅನುಮಾನಗಳಿವೆ. 

ನಾವು ನೂರು ವರ್ಷಗಳ ಹಿಂದೆ ಹೇಗಿದ್ದೇವೆಯೋ ಇವತ್ತು ಹಾಗಿಲ್ಲ, ಭೂ ಬಳಕೆಯ ವಿಚಾರದಲ್ಲಿ ಹಲವು ತಪ್ಪು ಮಾಡಿದ್ದೇವೆ. ಹತ್ತಿಪ್ಪತ್ತು ವರ್ಷಕ್ಕೆ ಕಣಿವೆ, ನದಿ, ಬೆಟ್ಟಗಳ ಸ್ವರೂಪ ಬದಲಾಗುತ್ತಿದೆ. ಆಳಕ್ಕೆ ಬೇರಿಳಿಸದ ಅಕೇಶಿಯಾ, ಸಿಲ್ವರ್, ಕ್ಯಾಸುರಿನಾ, ಮ್ಯಾಜಿಯಂ ನೆಡುತ್ತಾ ಕಡಿಯುತ್ತೇವೆ. ಅಧಿಕ ನೀರು ಬಳಸುವ ಅಡಿಕೆ, ಬಾಳೆ, ಕಬ್ಬು, ಭತ್ತ ಹೆಚ್ಚಿದೆ. ಸುಮಾರು 45 ಲಕ್ಷ ಕೊಳವೆ ಬಾವಿಗಳು ರಾಜ್ಯದಲ್ಲಿವೆ. ರಾಜ್ಯದ ಐದು ಪ್ರಮುಖ ನದಿಗಳಿಂದ 3472.5 ಟಿಎಮ್‌ಸಿ ಮಾತ್ರ ನೀರಿದೆ, ಇವುಗಳಲ್ಲಿ ಶೇಕಡಾ 50 ಬಳಸಿದ್ದೇವೆ. ನಾವು ಎಷ್ಟೇ ಪ್ರಯತ್ನ ಮಾಡಿದರೂ ಕೃಷಿ ಭೂಮಿಯ ಶೇಕಡಾ 60 ಭಾಗಕ್ಕೆ ನೀರಾವರಿ ಅಸಾಧ್ಯವೆಂಬ ಸತ್ಯ ಸರಕಾರದ ಕಡತದಲ್ಲಿದೆ. ಅಧಿಕಾರಕ್ಕಾಗಿ ಅಳಿದುಳಿದ ಬೆಟ್ಟ ಬಗೆಯುವ ಎತ್ತಿನ ಹೊಳೆಯ ಖಾಲಿ ಪೈಪ್ ಯೋಜನೆಯ ಮೂರ್ಖತನಕ್ಕೆ ಏನೆಲ್ಲ ಮಾಡಿದ್ದೇವೆ? ಕುಸಿಯುತ್ತಿರುವುದು ಬೆಟ್ಟ ಮಾತ್ರವಲ್ಲ, ನಾವು ನಂಬಿದ್ದ ನಿರ್ಮಾಣ ವಿಶ್ವಾಸ ಕೂಡ!

 ಆಡಳಿತ ಇನ್ನಾದರೂ ಕಣ್ಣು ತೆರೆಯಬೇಕು

ಓಡುವ ಜನಕ್ಕೆ ಅನುಕೂಲವೆಂದು ಗುಡ್ಡ ತಗ್ಗಿಸಲು ನೇರ ಕತ್ತರಿಸುತ್ತೇವೆ. ರಸ್ತೆ ಅಕ್ಕಪಕ್ಕ ಕಾಂಕ್ರೀಟ್ ಕಾಲುವೆ ಮಾಡುತ್ತೇವೆ. ಒಂದು ಚದರ್ ಮೀಟರ್ ಜಾಗದಲ್ಲಿ ಒಂದು ಮಿಲಿ ಮೀಟರ್ ಮಳೆ ಬಂದರೆ ಒಂದು ಲೀಟರ್ ನೀರು ಸುರಿಯುತ್ತದೆ. ಕಳೆದ ಒಂದು ತಿಂಗಳಿನಲ್ಲಿ ರಾಜ್ಯದ ಮಲೆನಾಡು, ಕರಾವಳಿಯ ಹಲವು ಕಡೆ 120 ರಿಂದ 250 ಮಿಲಿ ಮೀಟರ್ ಮಳೆ ಕೇವಲ 24 ಗಂಟೆಗಳಲ್ಲಿ ಬಂದಿದೆ. ಸುಮಾರು 4000 ಚದರ್ ಮೀಟರ್ ಕ್ಷೇತ್ರದ ಒಂದು ಎಕರೆಯಲ್ಲಿಯೇ 4-6 ಲಕ್ಷ ಲೀಟರ್ ಮಳೆ ನೀರು ಹರಿದಿದೆ. 

ಸಾವಿರಾರು ಎಕರೆಯ ಗುಡ್ಡ ಬೆಟ್ಟಗಳ ಮಧ್ಯೆ ಸಾಗಿರುವ ಹೆದ್ದಾರಿ ಆಸುಪಾಸಿನ ಕೋಟ್ಯಾಂತರ ಲೀಟರ್ ಪ್ರವಾಹ ಶಕ್ತಿ ತೋರಿಸಿದೆ. ಘಟ್ಟಗಳಲ್ಲಿ ಕಿಲೋ ಮೀಟರ್ ರಸ್ತೆ ಸಂಚಾರದಲ್ಲಿ ಎರಡು ಮೂರು ಹಳ್ಳ ದಾಟುತ್ತೇವೆ. ಕೋಟ್ಯಾಂತರ ವರ್ಷಗಳಿಂದ ಬಂದ ಮಳೆ ಕಂಡು ಕೊಂಡ ಜಲ ದಾರಿಯಿದು.

 ಈಗ ಕುಸಿತವಾದ ಎಲ್ಲೆಡೆಯೂ ಇನ್ನಷ್ಟು ಹೊಸ ಹಳ್ಳ ಜನಿಸಿವೆ. ನೇರ ರಸ್ತೆ ವಾಹನಕ್ಕೆ ಅನುಕೂಲ, ಆದರೆ ಭೂಮಿಗೆ ಅಪಾಯ! ರಸ್ತೆಯಲ್ಲಿ ಗಟಾರದ ನೀರು ವೇಗ ಹರಿದು ಸರಣಿ ಅಪಾಯಗಳಾಗಿದೆ.ಕಾಡು, ಮಣ್ಣು, ಮಳೆಗೆ ತಕ್ಕಂತೆ ನಿರ್ಮಾಣ ತಜ್ಞತೆ ಬೇಕು. ಅದು ಹೇಗೆಂದು ಸ್ಥಳ ನೋಡಿ ನಿರ್ಧರಿಸಬೇಕು. ಘಟ್ಟ, ನದಿಯಂಚಿನಲ್ಲಿ ಹುಲ್ಲು ಮರಗಿಡಗಳು ಭೂಮಿ ಹಿಡಿದು ನಿಲ್ಲುವಷ್ಟು ಪರಿಣಾಮಕಾರಿಯಾಗಿ ಕಾಂಕ್ರೀಟ್ ಮಾಡುವುದಿಲ್ಲ. 

ಕಡಿದಾದ ಬೆಟ್ಟದಲ್ಲಿ ಬಿರುಗಾಳಿ, ಜಡಿ ಮಳೆಯಲ್ಲಿ ಬದುಕಿ ಬೆಳೆಯುವ ಸಸ್ಯ ಸಂಕುಲಗಳಿವೆ. ಉದ್ಯಮಗಳ ಅನುಕೂಲಕ್ಕೆ ಇಷ್ಟು ಕಾಲ ನೆಡುತೋಪು ಬೆಳೆಸಿದ ಅರಣ್ಯ ಇಲಾಖೆ ಕುಸಿಯುವ ಬೆಟ್ಟ ಹಿಡಿದು ನಿಲ್ಲಿಸುವ ಕಿರಾಲಬೋಗಿ, ಲಾವಂಚ, ಉಪ್ಪುಚಂದ್ರಿಕೆ, ಆನೆ ಹುಲ್ಲು, ಅವಲಕ್ಕಿ ಜಡ್ಡು, ಬಿದಿರು, ಮುಂಡಿಗೆ ಮುಂತಾದ ಸಸ್ಯ ಕಲಿಕೆ ಶುರು ಮಾಡಬೇಕು. ಘಟನೆಯ ಮೂಲ ಕಾನೂನು ಹಾಗೂ ಪರಿಸರ ಕಾಳಜಿ ಹರಾಜಾಗಿದ್ದೆಂಬುದು ಜಾಹೀರಾಗಿದೆ. ಇಷ್ಟು ಕಾಲ ಕಣ್ಣುಮುಚ್ಚಿ ಓಡಾಡಿದ ಆಡಳಿತ ಇನ್ನಾದರೂ ಕಣ್ಣು ತೆರೆಯಬೇಕು. ಕಾಡಿನೂರಿನ ಅಡಿಗಲ್ಲುಗಳು ಕಳಚಿ ಬೀಳುತ್ತಿವೆ. ಬೆಟ್ಟಗಳ ಕಾಲು ಕತ್ತರಿಸಿದ್ದಕ್ಕೆ ತಲೆಕೆಳಗಾಗಿದೆ. ಸರಕಾರ, ಗುತ್ತಿಗೆದಾರರು ಒಟ್ಟಿಗೆ ನಿಂತು ಭೂಮಿ ಕಾಡು, ನದಿಗಾಗಿ ಯೋಚಿಸಬೇಕು. ಕುಸಿತಕ್ಕೆ ನಾವು ಏನೆಲ್ಲ ಮಾಡಿದೆವೆಂದು ಜನಗಳೂ ಅವಲೋಕಿಸಬೇಕು. ಪರಿಸರದ ಮೇಲಿನ ಒತ್ತಡ ಕಡಿಮೆ ಮಾಡಲು ನಾಲ್ಕು ಹೆಜ್ಜೆ ಹಿಂದೆ ನಡೆಯುವ ದೃಢ ನಿರ್ಧಾರದಿಂದ ಮಾತ್ರ ಕುಸಿತ ನಿಯಂತ್ರಣ ತುಸು ಸಾಧ್ಯ.