ಕಣ್ಣು ಕಣ್ಣು ಕಲೆತಾಗ!

| Published : Jul 14 2024, 01:41 AM IST / Updated: Jul 14 2024, 05:19 AM IST

ಸಾರಾಂಶ

‘ತೆರೆ’ಗಳಿಂದ ದೃಷ್ಟಿ ತೆಗೆದು, ಮನುಷ್ಯರನ್ನು ‘ನೋಡಿ’ ಕಣ್ಣುಗಳ ಮೂಲಕ ಮಾತಾಡುವುದು, ಮಿದುಳನ್ನು ಕಾಪಾಡುವ ತಂತ್ರ. ಮುಖಕ್ಕೆ ಮುಖ ಕೊಟ್ಟು, ಕಣ್ಣು - ಕಣ್ಣುಗಳನ್ನು ಕಲೆಯುವುದು ಮನಸ್ಸು ಮನಸ್ಸುಗಳನ್ನು ಬೆಸೆಯಬೇಕಾದ್ದು ಈ ಹೊತ್ತಿನ ತುರ್ತು.

- ಡಾ. ಕೆ.ಎಸ್. ಪವಿತ್ರ

ನೃತ್ಯ ಕಲಿಸುವಾಗ ವಿದ್ಯಾರ್ಥಿಗಳಿಗೆ ‘ಎಲ್ಲಿ ಕೈ ಹೋಗ್ತುತದೋ ಅಲ್ಲಿ ಕಣ್ಣು ಹೋಗಬೇಕು, ಕಣ್ಣು ಹೋದೆಡೆ ಮನಸ್ಸು ಓಡುತ್ತದೆ, ಆಗ ಅಲ್ಲಿ ಭಾವದ ಅನುಭವ, ಅದರಿಂದಲೇ ರಸದ ಆನಂದ’ ಎನ್ನುವ ಪಾಠ ನನಗೇನೂ ಹೊಸತಲ್ಲ. ಆದರೆ ನೃತ್ಯದಲ್ಲಿ ಕಣ್ಣಿಗೆ ನಾವು ಮಹತ್ವ ನೀಡುವಷ್ಟು ದಿನನಿತ್ಯ ಜಗತ್ತಿನಲ್ಲಿ ನೀಡುತ್ತೇವೆಯೇ?

ಪ್ರತಿದಿನ ಮನೆಯಿಂದ ಹೊರಟು ನಡೆಯುವಾಗ, ಕೆಲಸದ ಗದ್ದಲದಲ್ಲಿ, ಸುತ್ತಮುತ್ತಲ ಬಸ್ಸು-ಕಾರು-ರೈಲುಗಳಲ್ಲಿ, ಕಾಯುವಾಗ ಎಲ್ಲೆಡೆ ತಲೆಗಳು ತಮ್ಮ ತಮ್ಮ ಕೈ ದಿಟ್ಟಿಸುತ್ತಾ ಬಗ್ಗಿರುತ್ತವೆ. ಅಂಗೈ ಗಾತ್ರದ ಮೊಬೈಲ್‌ಗಳು ಇಂದು ನಾವೆಲ್ಲರೂ ಯಾವಾಗಲೂ ಎಲ್ಲರಿಗೂ ಸಿಕ್ಕುವಂತೆ, ಸದಾ ಸಂಪರ್ಕದಲ್ಲಿರುವಂತಹ ಸ್ಥಿತಿಯನ್ನು ಸಾಧ್ಯ ಮಾಡಿವೆ. ವಾಟ್ಸ್ಆ್ಯಪ್- ಎಫ್‌ಬಿ - ಇನ್ಸ್‌ಟಾಗಳಲ್ಲಿ ನಾವು ಕ್ಷಣಕ್ಷಣದ ಸಂದೇಶಗಳನ್ನು ಗಮನಿಸುವಂತೆ ಮಾಡುವಷ್ಟು ಇವು ಸಮರ್ಥ! ಒಂದು ಐಡಿಯಾ- ಪ್ರಶ್ನೆ- ಪೋಸ್ಟ್ ಎಲ್ಲಕ್ಕೂ ಈಗ ನಮ್ಮದು ತತ್‌ಕ್ಷಣದ ಪ್ರತಿಕ್ರಿಯೆ! 

ಆದರೆ ಇವುಗಳ ಮಧ್ಯೆ ‘ಕಣ್ಣುಗಳನ್ನು ಕಣ್ಣುಗಳು ನೋಡುವುದು’ ಇಲ್ಲವೇ ಇಲ್ಲ ಎನ್ನುವಷ್ಟು ವಿರಳ! ‘ಕಣ್ಣು ಕಣ್ಣು ಕಲೆತಾಗ’ ಎಂಬ ಹಾಡಿನ ಬದಲು ‘ಚ್ಯಾಟ್ ಚ್ಯಾಟ್ ಸೇರಿದಾಗ’ ಎಂದು ಹಾಡಬೇಕಾಗಬಹುದೇನೋ ಎಂಬ ಸಂದೇಹ.ಈ ‘ದೃಷ್ಟಿ ಪಲ್ಲಟ’ ಸಾಮಾಜಿಕ ಮತ್ತು ಜೀವನ ಶೈಲಿಗಳ ಪಲ್ಲಟಕ್ಕೂ ಕಾರಣವಾಗುತ್ತದೆ ಎನ್ನುವುದೇ ನಾವು ಗಮನಿಸಬೇಕಾದ ಸಂಗತಿ. ಮಾನವ ಮುಖಗಳ ಮೇಲೆ ದೃಷ್ಟಿ ಕೀಲಿಸುವ ಬದಲು ನಾವು ತೆರೆಗಳೊಂದಿಗೆ ದೃಷ್ಟಿಯನ್ನು ‘ಲಾಕ್’ ಮಾಡುತ್ತೇವಷ್ಟೆ. 

ಇದು ಕೇವಲ ನಮ್ಮ ಕಣ್ಣಿನ ಗುರಿಯ ಬದಲಾವಣೆಯಷ್ಟೇ ಅಲ್ಲ, ಇತರರೊಡನೆ ನಾವು ಸಂವಹಿಸುವ-ಅವರ ಭಾವನೆಗಳಿಗೆ ಸ್ಪಂದಿಸುವ ರೀತಿಯ ಬದಲಾವಣೆಯೂ ಹೌದು. ಪರಸ್ಪರ ಅರ್ಥ ಮಾಡಿಕೊಳ್ಳುವಲ್ಲಿ, ನಂಬಿಕೆ ಬೆಳೆಸಿಕೊಳ್ಳುವಲ್ಲಿ ಕಣ್ಣುಗಳ ಪಾತ್ರಕ್ಕೆ ವೈಜ್ಞಾನಿಕ ಪುರಾವೆಯೂ ಗಟ್ಟಿಯಾಗಿಯೇ ಇದೆ.ಮನೋವೈದ್ಯಕೀಯ ವಿಜ್ಞಾನದಲ್ಲಿ ವ್ಯಕ್ತಿಯನ್ನು ಪರೀಕ್ಷೆ ಮಾಡುವ, ಆತನ ಸಮಸ್ಯೆಯನ್ನು ತಿಳಿಯುವ ಮುಖ್ಯ ವಿಧಾನವೆಂದರೆ ‘ಮೆಂಟಲ್ ಸ್ಟೇಟಸ್ ಎಕ್ಸಾಮಿನೇಷನ್’- ಮಾನಸಿಕ ಸ್ಥಿತಿಯ ಪರಿಶೀಲನೆಯೆಂಬ ತಂತ್ರ. ಈ ತಂತ್ರದ ಮೊದಲಲ್ಲಿ ಗಮನಿಸಬೇಕಾದ ಮಹತ್ವದ ಅಂಶ ಸಮಸ್ಯೆಗೆ ಒಳಗಾದ ವ್ಯಕ್ತಿ ವೈದ್ಯನೊಡನೆ ಕಣ್ಣುಗಳ ಸಂಪರ್ಕವನ್ನು ಸಾಧಿಸಲು, ಕಾಯ್ದುಕೊಳ್ಳಲು ಶಕ್ತನೇ ಎಂಬುದು. 

ಕಣ್ಣುಗಳ ಸಂಪರ್ಕ ಸಾಧ್ಯವಾದ ವ್ಯಕ್ತಿಗೆ, ವೈದ್ಯನೊಂದಿಗೆ ಅರ್ಥಪೂರ್ಣ ಸಂಬಂಧ-ಸಂವಾದ ಸುಲಭ ಸಾಧ್ಯ. ಆಗ ತನ್ನ ಅಳಲನ್ನು ತೋಡಿಕೊಳ್ಳುವುದಾಗಲಿ, ಚಿಕಿತ್ಸೆ ಪಡೆಯುವುದಾಗಲಿ, ವೈದ್ಯನ ಸಲಹೆ ಪಾಲಿಸುವುದಾಗಲಿ ಎಲ್ಲವೂ ಆ ವ್ಯಕ್ತಿಗೆ ಸಲೀಸು. ‘ಆತ್ಮಾನುಭೂತಿ’ ಎಂಬ ಪದವಿದೆಯಷ್ಟೆ. ಅಂದರೆ ತನ್ನನ್ನು ಮತ್ತೊಬ್ಬರ ಸ್ಥಿತಿಯಲ್ಲಿ ಕಲ್ಪಿಸಿಕೊಂಡು ಅವರ ಭಾವನೆಯನ್ನು ಅರ್ಥ ಮಾಡಿಕೊಳ್ಳುವುದು. ಇಂಥ ‘ಆತ್ಮಾನುಭೂತಿ’ಗೆ ಮತ್ತು ಕಣ್ಣುಗಳ ಸಂಪರ್ಕಕ್ಕೆ ಕಾರಣವಾಗುವ ಮಿದುಳಿನ ಕೇಂದ್ರಗಳು ಒಂದೇ ಎಂಬುದು ಗಮನಾರ್ಹ. ಸಾಮಾನ್ಯವಾಗಿ ಕಣ್ಣು ತಪ್ಪಿಸುವವರು, ಇತರರನ್ನು ನೇರವಾಗಿ ನೋಡದವರು, ಸಂಬಂಧಗಳನ್ನು ಬೆಳೆಸುವುದರಲ್ಲಿ, ಅವುಗಳನ್ನು ಕಾಯ್ದುಕೊಳ್ಳುವುದರಲ್ಲಿ ಆತ್ಮವಿಶ್ವಾಸದಲ್ಲಿ ಹಿಂದೆ ಎಂಬುದು ಮನೋವಿಜ್ಞಾನದ ಪ್ರಕಾರವಷ್ಟೇ ಅಲ್ಲದೆ ನಮ್ಮೆಲ್ಲರ ಸಾಮಾನ್ಯ ಜ್ಞಾನದ ಗ್ರಹಿಕೆಯೂ ಹೌದು. ಆದರೆ ಈಗ ಕಣ್ಣು ತಪ್ಪಿಸುವವರೇ ಹೆಚ್ಚು ಜನ!

ಹುಡುಗ ಹುಡುಗಿಗೆ ‘ಐ ಲವ್ ಯೂ’ ಎನ್ನಬೇಕೆಂದರೂ, ಮೊಬೈಲ್‌ನಲ್ಲಿ ಮೆಸೇಜ್ ಕಳಿಸಿಯೇ-‘ಹಾರ್ಟ್’ ಇಮೋಜಿ ಹಾಕಿಯೇ ಹಾಗೆಂದರಾಯಿತು; ಕಣ್ಣು ಕಣ್ಣು ಕಲೆಯಲೇಬೇಕೆಂದೇನೂ ಇಲ್ಲ ಎನ್ನುವವರೇ! ಅಂದರೆ ಸಂಬಂಧಗಳನ್ನು ಬೆಸೆಯುವಲ್ಲಿ, ಆತ್ಮವಿಶ್ವಾಸದಲ್ಲಿ ನಾವು ದಿನೇ ದಿನೇ ಕೆಳಗಿಳಿಯುತ್ತಿದ್ದೇವೆ! ಆತಂಕ ಮತ್ತು ಪ್ರತ್ಯೇಕಿಸುವಿಕೆಯ ನಿರಂತರ ಚಕ್ರದೊಳಗೆ ಇದು ನಮ್ಮನ್ನು ದೂಡುತ್ತಿದೆ ಎಂಬ ಅರಿವಿಲ್ಲದೆ ನಾವು ಕಣ್ಣುಗಳಿಂದ ಮತ್ತೊಬ್ಬರ ಕಣ್ಣುಗಳನ್ನು ನೋಡುವ ಬದಲು ತೆರೆಯ ಮೇಲೇ ಕಣ್ಣು ಕೀಳದಂತೆ ಗಟ್ಟಿಯಾಗಿ ಊರುತ್ತಿದ್ದೇವೆ! 

ಇಲ್ಲಿಯವರೆಗೆ ‘ಆಟಿಸಂ’ನಿಂದ ನರಳುವ ಮಕ್ಕಳಿಗೆ, ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮಾತ್ರ ‘ಐ ಟು ಐ ಕಾಂಟ್ಯಾಕ್ಟ್’ ವ್ಯಾಯಾಮ ತಂತ್ರಗಳನ್ನು ಕಲಿಸಲು ಪ್ರಯತ್ನಿಸುತ್ತಿದ್ದ ಮನೋವೈದ್ಯರು ಈಗ ತಾವೂ ಇವುಗಳನ್ನು ಮಾಡಿ, ಇಡೀ ಸಮಾಜಕ್ಕೂ ಅದನ್ನು ಅಭ್ಯಾಸ ಮಾಡಿಸಬೇಕಾದ ಪರಿಸ್ಥಿತಿ!ನೋಡುವುದರಲ್ಲಿಯೂ ಎರಡು ಭಾಗಗಳು ಉಂಟಷ್ಟೆ! ಒಂದು ಸ್ವತಃ ನೋಡುವುದು, ಮತ್ತೊಂದು ನಾವು ನೋಡಲ್ಪಡುವುದು. ಮನುಷ್ಯರಲ್ಲಂತೂ ಇದೊಂದು ರೀತಿಯ ಕಣ್ಣಿನ ಮೂಲಕ ನಡೆಯುವ ಸಂಭಾಷಣೆ. 

ಕೋವಿಡ್ ಸಮಯದಲ್ಲಿ ಬಾಯಿಗೆ ಮಾಸ್ಕ್ ಕಟ್ಟಿ ಮಾತನಾಡುವ ಅವಕಾಶ ಕಡಿಮೆಯಿದ್ದಾಗ, ನಾವು ಮೂಕವಾಗಿಯೇ ಸಂವಹಿಸಿದ್ದೇ ಕಣ್ಣುಗಳ ಮುಖಾಂತರ! ಹಳೆಯ ಇಂಗ್ಲಿಷ್ ಗಾದೆಯೊಂದರ ‘ಕಣ್ಣುಗಳು ಆತ್ಮದ ಕಿಂಡಿ’ ಎಂಬ ಹೇಳಿಕೆ ನಮಗೆ ಪೂರ್ತಿ ಅರ್ಥವಾದ ಸಮಯವದು! ಮಗುವಿನ ಬೆಳವಣಿಗೆಯ ಹಂತಗಳಲ್ಲೂ ಅಷ್ಟೆ, ತಾಯಿ-ಮಗುವಿನ ಬಾಂಧವ್ಯಕ್ಕೆ, ಮಗು ತಾಯಿಯನ್ನು ನೋಡಿ ನಗುವುದು ಬಹು ಅವಶ್ಯಕ. 

ನೇರವಾಗಿ ದಿಟ್ಟಿಸುವುದನ್ನೇ ಒಂದು ತಂತ್ರವಾಗಿಸಿ ಮಕ್ಕಳು ಸುಳ್ಳು ಹೇಳಿದರೆ ಕಂಡು ಹಿಡಿಯುತ್ತೇವೆ ಎನ್ನುವ ಹಿರಿಯರು ಅದೆಷ್ಟೋ! ಪಾಪ! ನಮ್ಮ ಮಿದುಳುಗಳು ಅದೆಷ್ಟೋ ಮಿಲಿಯನ್ ವರ್ಷಗಳಿಂದ ವಿಕಾಸ ಹೊಂದಿ ದಿಟ್ಟಿಸುವ, ಇನ್ನೊಬ್ಬರ ಕಣ್ಣಿನೊಡನೆ ಸಂಪರ್ಕ ಸಾಧಿಸಿ ಸಂಬಂಧಗಳನ್ನು ಬೆಸೆಯುವ, ಪ್ರೀತಿ-ದ್ವೇಷಗಳನ್ನು ಸಾಧ್ಯವಾಗಿಸುವ, ಏಕ ಕಾಲಕ್ಕೆ ಓಡುತ್ತಾ-ನೋಡುತ್ತಾ ಚೆಂಡು ಹಿಡಿಯುವ ಕಣ್ಣು-ಕೌಶಲವನ್ನು ತಮ್ಮದಾಗಿಸಿಕೊಂಡಿವೆ. ಆಗಾಗ್ಗೆ ಇದನ್ನು ಅಭ್ಯಾಸ ಮಾಡುವುದು, ತಲೆಯೆತ್ತಿ, ‘ತೆರೆ’ಗಳಿಂದ ದೃಷ್ಟಿ ತೆಗೆದು, ಮನುಷ್ಯರನ್ನು ‘ನೋಡಿ’ ಕಣ್ಣುಗಳ ಮೂಲಕ ಮಾತಾಡುವುದು, ಮಿದುಳನ್ನು ಕಾಪಾಡುವ ತಂತ್ರ. ಮುಖಕ್ಕೆ ಮುಖ ಕೊಟ್ಟು, ಕಣ್ಣು - ಕಣ್ಣುಗಳನ್ನು ಕಲೆಯುವುದು ಮನಸ್ಸು ಮನಸ್ಸುಗಳನ್ನು ಬೆಸೆಯಬೇಕಾದ್ದು ಈ ಹೊತ್ತಿನ ತುರ್ತು.