ಭಾರತೀಯ ಚಿತ್ರರಂಗದ ಸಾಕ್ಷಾತ್‌ ಮಹಾಲಕ್ಷ್ಮೀ ಬಿ ಸರೋಜಾದೇವಿ - ಜಯಮಾಲಾ

| N/A | Published : Jul 15 2025, 12:08 PM IST

B Saroja Devi

ಸಾರಾಂಶ

ಬಿ. ಸರೋಜಾದೇವಿ ಅವರ ದೈಹಿಕ ಅಗಲಿಕೆಯ ಸಂದರ್ಭ ಅವರ ಘನತೆಯ ವೈಭವದ ಬದುಕು, ನಾಯಕಿಯರಿಗೆ ಅವರು ಹಾಕಿಕೊಟ್ಟ ಧೀಮಂತಿಕೆಯ ಮೇಲ್ಪಂಕ್ತಿಯ ಜೊತೆಗೆ ಅವರು ಅನರ್ಘ್ಯ ರತ್ನವಾಗಿ ನನ್ನ ಕಣ್ಣಿಗೆ ಕಂಡ ಬಗೆಯನ್ನು ಇಲ್ಲಿ ದಾಖಲಿಸುತ್ತೇನೆ.

- ಜಯಮಾಲಾ

ಬಿ. ಸರೋಜಾದೇವಿ ಅವರ ದೈಹಿಕ ಅಗಲಿಕೆಯ ಸಂದರ್ಭ ಅವರ ಘನತೆಯ ವೈಭವದ ಬದುಕು, ನಾಯಕಿಯರಿಗೆ ಅವರು ಹಾಕಿಕೊಟ್ಟ ಧೀಮಂತಿಕೆಯ ಮೇಲ್ಪಂಕ್ತಿಯ ಜೊತೆಗೆ ಅವರು ಅನರ್ಘ್ಯ ರತ್ನವಾಗಿ ನನ್ನ ಕಣ್ಣಿಗೆ ಕಂಡ ಬಗೆಯನ್ನು ಇಲ್ಲಿ ದಾಖಲಿಸುತ್ತೇನೆ.

ಅದು 1975ನೇ ಇಸವಿ. ನಾನು ಆ ಹೊತ್ತಿಗೆ ಒಂದಿಷ್ಟು ತುಳು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿದ್ದೆ. ಕನ್ನಡದಲ್ಲಿ ರಾಜ್‌ಕುಮಾರ್‌ ನಟನೆಯ ಸಿನಿಮಾಕ್ಕೆ ನಾಯಕಿಯಾಗಲು ಮೇಕಪ್‌ ಟೆಸ್ಟ್‌ಗೆ ಆಹ್ವಾನ ಬಂದಿತ್ತು. ಅದಕ್ಕಾಗಿ ಚಾಮುಂಡೇಶ್ವರಿ ಸ್ಟುಡಿಯೋಕ್ಕೆ ಹೋಗಿದ್ದೆ. ಮೇಕಪ್‌ ಟೆಸ್ಟ್‌ ಎಲ್ಲಾ ಚೆನ್ನಾಗಿ ನಡೆಯಿತು. ಅಲ್ಲಿಯವರೆಗೆ ಬೃಹತ್ ಶೂಟಿಂಗ್‌ ಸ್ಟುಡಿಯೋಗಳನ್ನು ನೋಡಿರದ ನಾನು, ನೋಡುವ ಉದ್ದೇಶದಿಂದ ಸ್ಟುಡಿಯೋದ ಒಳಹೊಕ್ಕೆ. ಅಲ್ಲಿ ಮೊಟ್ಟ ಮೊದಲ ಬಾರಿ ಬಿ. ಸರೋಜಾದೇವಿ ಅವರನ್ನು ಕಂಡದ್ದು. ಅವರನ್ನು ನೋಡಿದಾಕ್ಷಣ ಘನತೆ, ಸೌಂದರ್ಯ, ವೈಭವಗಳು ಮೇಳೈಸಿದ ಅತ್ಯಪರೂಪದ ವ್ಯಕ್ತಿಯಾಗಿ ಕಂಡರು.

ಅಲ್ಲಿದ್ದವರು ನನ್ನನ್ನು ಅವರಿಗೆ, ‘ರಾಜ್‌ಕುಮಾರ್‌ ಅವರ ಮುಂದಿನ ಸಿನಿಮಾಕ್ಕೆ ಹೀರೋಯಿನ್‌ ಆಗೋಕೆ ಮೇಕಪ್‌ ಟೆಸ್ಟ್‌ಗೆ ಬಂದಿದ್ದಾರೆ’ ಎಂದು ಪರಿಚಯಿಸಿದರು.

ತಿರುಗಿ ನನ್ನತ್ತ ನೋಡಿದ ಸರೋಜಾದೇವಿ ಅವರು, ‘ಚೆನ್ನಾಗಿದ್ದಾಳೆ.. ಇವಳು ಸೆಲೆಕ್ಟ್‌ ಆಗ್ತಾಳೆ’ ಅಂದರು. ಬಹಳ ಅಕ್ಕರೆಯಿಂದ ನನ್ನ ಹಿನ್ನೆಲೆ ವಿಚಾರಿಸಿಕೊಂಡರು. ಅಲ್ಲಿ ಕಾಣಸಿಕ್ಕ ಜಯಂತಿ ಅವರದೂ ಬಹಳ ಸ್ನೇಹಮಯಿ ವ್ಯಕ್ತಿತ್ವ. ಅವರ ವೈಭವ, ಕೈಯಲ್ಲಿದ್ದ ದೊಡ್ಡ ಉಂಗುರವನ್ನೆಲ್ಲ ನಾನು ಅಚ್ಚರಿಯಿಂದ ನೋಡುತ್ತಿದ್ದೆ. ಅದನ್ನು ಗಮನಿಸಿದ ಜಯಂತಿ ಅವರು, ‘ನಾಳೆ ನೀನೂ ಹೀರೋಯಿನ್‌ ಆದಮೇಲೆ ಇಂಥಾದ್ದನ್ನೆಲ್ಲ ಹಾಕ್ಕೊಳ್ಳಬಹುದು’ ಅಂದರು.

ಐವತ್ತು ವರ್ಷಗಳ ಹಿಂದೆ ಸಿನಿಮಾರಂಗಕ್ಕೆ ಅಡಿಯಿಡುವ ಹೊಸ ನಾಯಕಿಯರಿಗೆ ಎಂಥಾ ಪ್ರೀತಿಯ ಸ್ವಾಗತ ಸಿಗುತ್ತಿತ್ತು ಅನ್ನುವುದಕ್ಕೆ ಉದಾಹರಣೆಯಾಗಿ ಇದನ್ನು ಪ್ರಸ್ತಾಪಿಸುತ್ತಿದ್ದೇನೆ. ಅವರೆಲ್ಲ ಆ ಹೊತ್ತಿಗೆ ಕನ್ನಡ ಸಿನಿಮಾರಂಗ ಸ್ಟಾರ್‌ ನಟಿಯರಾಗಿ ಮೆರೆಯುತ್ತಿದ್ದವರು. ಆಗಷ್ಟೇ ಅಡಿಯಿಡುವ ನನ್ನಂಥಾ ಹೊಸಬಳನ್ನು ಅದೆಷ್ಟು ಆದರದಿಂದ, ಗೌರವದಿಂದ ಬರಮಾಡಿಕೊಂಡರಲ್ಲಾ ಅನ್ನುವುದನ್ನು ನೆನೆಸಿಕೊಂಡರೆ ಅಚ್ಚರಿ ಆಗುತ್ತದೆ. ಜೊತೆಗೆ ಅವರ ಆ ಬರಮಾಡಿಕೊಳ್ಳುವಿಕೆ ನಮ್ಮ ಇಡೀ ಸಿನಿಮಾ ಬದುಕಿಗೆ ನೈತಿಕ ಶಕ್ತಿಯಂತಿತ್ತು.

ಇದಾಗಿ ನಾನು ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ನಟಿಸಲಾರಂಭಿಸಿದೆ. ಆಗ ಕನ್ನಡ ಚಿತ್ರರಂಗದ ಹೆಚ್ಚಿನೆಲ್ಲ ಕಲಾವಿದರು, ತಂತ್ರಜ್ಞರು ಚೆನ್ನೈಯಲ್ಲೇ ವಾಸ್ತವ್ಯವಿದ್ದರು. ಚಿತ್ರರಂಗದ ಹೆಚ್ಚಿನ ಚಟುವಟಿಕೆಗಳೆಲ್ಲ ಅಲ್ಲಿಯೇ ನಡೆಯುತ್ತಿತ್ತು.

ಬಿ. ಸರೋಜಾದೇವಿ ಅವರ ವೈಭವೋಪೇತ ಮನೆಯೂ ಚೆನ್ನೈಯಲ್ಲೇ ಇತ್ತು. ಅದು ಸರೋಜಾದೇವಿ ಅವರ ಜನ್ಮದಿನದ ಸಂದರ್ಭ. ಅವರಿಗೆ ವಿಶ್‌ ಮಾಡಿ ಬರೋಣ ಅಂತ ಪಾರ್ವತಮ್ಮ ರಾಜ್‌ಕುಮಾರ್‌ ಅವರು ನನ್ನ ಕರೆದರು. ನಾವಿಬ್ಬರೂ ಗಿಫ್ಟ್‌ ಖರೀದಿಸಿ ಅವರ ಮನೆಗೆ ಹೋದೆವು. ನಾವು ಕೂತಿದ್ದಾಗ ಸರೋಜಾದೇವಿ ಅವರು ನಮ್ಮೆದುರು ಕಾಣಿಸಿಕೊಂಡ ರೀತಿ ನನಗಿನ್ನೂ ನೆನಪಿದೆ.

ನೀಲಿ ಬಣ್ಣದ ಸೀರೆ ಕೆಂಪನೆಯ ಅಂಚು. ತಿದ್ದಿ ತೀಡಿದಂಥಾ ಮುಖ, ಮೈ ತುಂಬಾ ಚಿನ್ನದ ಒಡವೆ ಧರಿಸಿದ್ದರು. ಅದೆಷ್ಟು ಚಂದ ಕಾಣುತ್ತಿದ್ದರು ಅಂದರೆ ನಮಗೆ ಅವರ ಮೇಲಿಂದ ದೃಷ್ಟಿ ತೆಗೆಯಲೂ ಆಗುತ್ತಿರಲಿಲ್ಲ. ಪ್ರೀತಿಯಿಂದ ನಮ್ಮನ್ನು ಮಾತನಾಡಿಸಿದರು. ಆ ದಿನ ಅವರ ಮನೆಯಲ್ಲೇ ಊಟ ಮಾಡಿದ್ದೆವು. ಒಬ್ಬಟ್ಟು, ಲಡ್ಡು ಇತ್ಯಾದಿಗಳಿದ್ದ ಮೃಷ್ಟಾನ್ನ ಭೋಜನ.

ಆ ಬಳಿಕ ಸರೋಜಾದೇವಿ ಅವರು ತಮ್ಮ ರೂಮಿಗೆ ತೆರಳಿದರು. ಅಷ್ಟೊತ್ತಿಗೆ ಚಿನ್ನಪ್ಪ ತೇವರ್‌ ಬಂದರು ಅಂತ ಅಲ್ಲೆಲ್ಲ ಗಡಿಬಿಡಿ ಶುರುವಾಯಿತು. ಆ ಕಾಲದ ಬ್ಲಾಕ್‌ ಬಸ್ಟರ್‌ ಹಿಟ್‌ ಸಿನಿಮಾಗಳ ನಿರ್ಮಾಪಕರು ಈ ಚಿನ್ನಪ್ಪ ತೇವರ್‌. ಅವರು ಸರೋಜಾದೇವಿ ಅವರಿಗೆ ಜನ್ಮದಿನದ ಶುಭ ಹಾರೈಸಲು ಬರುವವರಿದ್ದರು. ಅವರು ಬರುತ್ತಿರುವ ವಿಚಾರ ಕೇಳಿ ಹೊರಡುತ್ತಿದ್ದ ನನನ್ನ್ನು ತಡೆದ ಪಾರ್ವತಮ್ಮ ಅವರು, ‘ಸ್ವಲ್ಪ ಹೊತ್ತು ಇದ್ದು ನೋಡೋಣ’ ಎಂದರು. ನಾನು ಅವರೊಂದಿಗೆ ನಿಂತೆ.

ಅವರು ಸರೋಜಾದೇವಿ ಅವರ ಕೋಣೆಗೆ ಹೋದರು. ಸರೋಜಾದೇವಿ ಅವರು ಆಗ ಮಲಗಿದ್ದರು. ಅವರು ತಮ್ಮ ಬ್ಯಾಗ್‌ನಿಂದ ಬಟ್ಟೆಯ ಗಂಟೊಂದನ್ನು ಬಿಚ್ಚಿದರು. ಅದರ ತುಂಬ ಚಿನ್ನದ ನಾಣ್ಯಗಳು!

ಅವರು ಆ ಚಿನ್ನದ ನಾಣ್ಯಗಳನ್ನು ಬೊಗಸೆಯಲ್ಲಿ ತೆಗೆದುಕೊಂಡು ಸರೋಜಾದೇವಿಯ ಅವರ ಮೇಲಕ್ಕೆ ಕನಕಾಭಿಷೇಕ ಮಾಡುವ ರೀತಿ ಹಾಕಿ, ‘ಅಮ್ಮಡಿ ಅಮ್ಮಡಿ ಏಳು, ನನ್ನ ಪಾಲಿನ ಮಹಾಲಕ್ಷ್ಮೀ ನೀನು. ಇವತ್ತು ನಿನ್ನ ಜನ್ಮದಿನ. ಎದ್ದೇಳು ತಾಯಿ’ ಎನ್ನುತ್ತಿದ್ದರು. ನಾನು ಇದನ್ನೆಲ್ಲ ನಿಬ್ಬೆರಗಾಗಿ ನೋಡುತ್ತಿದ್ದೆ. ನಾವು ನೋಡುತ್ತಿರುವಂತೇ ಮೂರು ಬಾರಿ ಬೊಗಸೆ ತುಂಬ ಚಿನ್ನದ ನಾಣ್ಯಗಳನ್ನು ಅವರ ಮೇಲೆ ಹಾಕಿದ್ದರು. ಆಮೇಲೆ ಚಿನ್ನಪ್ಪ ಅವರು ಊಟ ಮಾಡಿ ಹೊರಟರು. ಅಂಥಾ ಬದುಕು ಸರೋಜಾದೇವಿ ಅವರದಾಗಿತ್ತು.

ಆ ಕಾಲಕ್ಕೆ ಅಂದರೆ 50 ವರ್ಷಗಳ ಹಿಂದೆಯೇ ಅವರ ಸಂಭಾವನೆ 6 ಲಕ್ಷ ರು.ಗಳಾಗಿದ್ದವು. ಆಗ ಒಂದು ಸವರನ್‌ ಅಂದರೆ 12 ಗ್ರಾಂ ಚಿನ್ನ 250 ರು.ಗೆ ಸಿಗುತ್ತಿತ್ತು. ಹತ್ತು ಸಾವಿರ ಕೊಟ್ಟರೆ ದೊಡ್ಡ ಸೈಟು ಮಾಡಿಕೊಳ್ಳಬಹುದಿತ್ತು. ಹಣಕ್ಕೆ ಅಷ್ಟು ಮೌಲ್ಯವಿದ್ದ ಕಾಲ. ಆಗಿನ 6 ಲಕ್ಷ ರು. ಅಂದರೆ ಈಗಿನ 60 ಕೋಟಿ ರು.ಗೆ ಸಮ. ಈಗಿನ ನಾಯಕಿಯರನ್ನು ಗಮನಿಸಿ ಪ್ಯಾನ್‌ ವರ್ಲ್ಡ್‌ ಮಟ್ಟದಲ್ಲಿ ಮಿಂಚುತ್ತಿರುವ ಭಾರತೀಯ ನಟಿಯರಿಗೆ ಹೆಚ್ಚೆಂದರೆ 20 ರಿಂದ 30 ಕೋಟಿ ರು. ಸಂಭಾವನೆ ಸಿಗುತ್ತಿದೆ. ದೊಡ್ಡ ನಟಿಯರ ಸಂಭಾವನೆ 10 ಕೋಟಿ ಆಸುಪಾಸಿನಲ್ಲೇ ಇದೆ. ಅಂಥಾದ್ದರಲ್ಲಿ ಸರೋಜಾದೇವಿ ಆ ಕಾಲದಲ್ಲೇ ಆ ಮಟ್ಟಿನ ಸಂಭಾವನೆ ಪಡೆಯುತ್ತಿದ್ದರೆಂದರೆ ಅವರ ಶ್ರೀಮಂತಿಕೆ ಯಾವ ಮಟ್ಟಿದ್ದಿರಬಹುದು, ಊಹಿಸಿ.

ತಮಿಳು ಸಿನಿಮಾರಂಗದಲ್ಲಿ ಅವರ ತಾರಾ ಮೌಲ್ಯ ಬೆಳೆಯುತ್ತಲೇ ಹೋಯಿತು. ಬಹುಶಃ ಇದೇ ಕಾರಣಕ್ಕೆ ಇರಬಹುದು, ಅವರು ಪರಭಾಷೆಯ ಚಿತ್ರಗಳಲ್ಲಿ ಬಿಸಿ ಆದ ಮೇಲೆ ಕನ್ನಡದಲ್ಲಿ ನಟಿಸಿದ್ದು ಕಡಿಮೆ. ಏಕೆಂದರೆ ಅವರ ಸಂಭಾವನೆ ಭರಿಸುವುದು ಅಂದುಕೊಂಡಷ್ಟು ಸುಲಭವಲ್ಲ.

ಸರೋಜಾದೇವಿ ಅವರ ಗಟ್ಟಿತನವೂ ನನ್ನನ್ನು ಬೆರಗಾಗಿಸುತ್ತದೆ. ಅವರನ್ನು ಅವರ ತಾಯಿ ಅಷ್ಟು ಜತನದಿಂದ ಕಾಪಿಟ್ಟುಕೊಂಡಿದ್ದರು. ತಾಯಿ ತೀರಿಕೊಂಡಾಗ ಸರೋಜಾದೇವಿ ಅವರು ಕುಸಿಯುತ್ತಾರೆ ಎಂದು ಎಲ್ಲರೂ ಭಾವಿಸಿದರು. ಆದರೆ ಸರೋಜಾದೇವಿ ಕುಸಿಯಲಿಲ್ಲ. ಅವರು ಪತಿಯನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಯಾವ ಮಟ್ಟಿಗೆ ಎಂದರೆ, ಸರೋಜಾದೇವಿ ಅವರೇ ಅಂದರೆ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಸರೋಜಾದೇವಿ ಶ್ರೀ ಹರ್ಷ ಅಂದರೆ ಖುಷಿಯಿಂದ ಮಾತನಾಡುತ್ತಿದ್ದರು. ಅಷ್ಟು ಪ್ರೀತಿಸುತ್ತಿದ್ದ ಗಂಡ ಅಗಲಿದಾಗ ಸರೋಜಾದೇವಿ ಅವರಿಗೆ ಆಘಾತ ಸಹಿಸುವುದು ಕಷ್ಟ ಎಂದು ಬಹಳಷ್ಟು ಮಂದಿ ಹೇಳಿದರು. ಆದರೂ ಸರೋಜಾದೇವಿ ಗಟ್ಟಿಯಾಗಿ ನಿಂತರು. ದತ್ತು ಪುತ್ರಿಯ ಅಗಲಿಕೆಯೂ ಅವರ ಗಟ್ಟಿತನವನ್ನು ಅಲುಗಾಡಿಸಲಿಲ್ಲ.

ಅವರ ಪತಿ ಶ್ರೀಹರ್ಷ ಅವರು ಇಂಜಿನಿಯರ್‌ ಆಗಿದ್ದವರು. ಅವರು ಬದುಕಿದ್ದಾಗ ನಮ್ಮ ಮನೆಯ ಪ್ಲಾನ್‌ ಮಾಡಿಕೊಡಲು ಹೇಳುವಂತೆ ಸರೋಜಾದೇವಿ ಅವರ ಬಳಿ ಹೇಳಿಸಿದ್ದೆ. ಅವರು ಈ ವಿಚಾರವನ್ನು ಶ್ರೀಹರ್ಷ ಅವರ ಬಳಿ ಹೇಳಿದ್ದರು. ಆದರೆ ನಾನು ಆ ಹೊತ್ತಿಗೆ ಬಿಡುವಿಲ್ಲದ ಶೆಡ್ಯೂಲ್‌ನಲ್ಲಿದ್ದ ಕಾರಣ ಅದನ್ನು ಕಾರ್ಯರೂಪಕ್ಕೆ ತರಲಾಗಲಿಲ್ಲ.

ಅವರು ನನಗೆ ಎರಡು ಮೂಗುತಿಯನ್ನೂ ಕೊಟ್ಟಿದ್ದರು. ಅದನ್ನು ನೀಡಿ ನೀನು ಮೂಗುತಿ ಹಾಕಿದರೆ ಬಹಳ ಚೆಂದ ಕಾಣ್ತೀಯಾ ಅಂದಿದ್ದರು. ಅದಿನ್ನೂ ನನ್ನ ಬಳಿ ಜೋಪಾನವಾಗಿದೆ, ನೀನು ಚಂದ ಕಾಣ್ತೀಯ ಅಂದ ಅವರ ಬೆಚ್ಚನೆಯ ಅಂತಃಕರಣ ಬೆರೆತ ದನಿಯ ಸಮೇತ.

Read more Articles on