ಭಾರತದ ಯುವ ಪೀಳಿಗೆಯಲ್ಲಿ ಎಲ್‌ಡಿಎಲ್ ಕೊಲೆಸ್ಟ್ರಾಲ್ (ಕೆಟ್ಟ ಕೊಲೆಸ್ಟ್ರಾಲ್) ಪ್ರಮಾಣ ಮಿತಿಮೀರುತ್ತಿದ್ದು, ಇದು ಯಾವುದೇ ಮುನ್ಸೂಚನೆ ನೀಡದೆ ಪ್ರಾಣಕ್ಕೆ ಕುತ್ತು ತರುವ ‘ಸೈಲೆಂಟ್ ಕಿಲ್ಲರ್’ ಆಗಿ ಕಾಡುತ್ತಿದೆ. ಈ ಕುರಿತ ವರದಿ ಇಲ್ಲಿದೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ದೇಶಾದ್ಯಂತ ಯುವಜನರಲ್ಲಿ ಹೃದಯಾಘಾತದಂತಹ ಗಂಭೀರ ಹೃದಯ ಸಂಬಂಧಿ ಸಮಸ್ಯೆಗಳು ಆತಂಕಕಾರಿಯಾಗಿ ಹೆಚ್ಚುತ್ತಿವೆ. ಈ ಬೆಳವಣಿಗೆಯ ನಡುವೆ ವೈದ್ಯಕೀಯ ತಜ್ಞರು ಗಂಭೀರ ಎಚ್ಚರಿಕೆಯೊಂದನ್ನು ನೀಡಿದ್ದಾರೆ- ಭಾರತದ ಯುವ ಪೀಳಿಗೆಯಲ್ಲಿ ಎಲ್‌ಡಿಎಲ್ ಕೊಲೆಸ್ಟ್ರಾಲ್ (ಕೆಟ್ಟ ಕೊಲೆಸ್ಟ್ರಾಲ್) ಪ್ರಮಾಣ ಮಿತಿಮೀರುತ್ತಿದ್ದು, ಇದು ಯಾವುದೇ ಮುನ್ಸೂಚನೆ ನೀಡದೆ ಪ್ರಾಣಕ್ಕೆ ಕುತ್ತು ತರುವ ‘ಸೈಲೆಂಟ್ ಕಿಲ್ಲರ್’ ಆಗಿ ಕಾಡುತ್ತಿದೆ.

‘ನನಗೆ 30ರ ಆಸುಪಾಸಿನ ವಯಸ್ಸು. ನಿತ್ಯ ತಪ್ಪದೆ ಕಠಿಣ ವ್ಯಾಯಾಮ ಮಾಡುತ್ತೇನೆ, ಸಮತೋಲಿತ ಪೌಷ್ಟಿಕಾಹಾರವನ್ನೇ ಸೇವಿಸುತ್ತೇನೆ. ಆದರೂ ವಾಡಿಕೆಯ ಸಾಮಾನ್ಯ ಆರೋಗ್ಯ ತಪಾಸಣೆಯಲ್ಲಿ ಅಧಿಕ ಎಲ್‌ಡಿಎಲ್-ಸಿ ಇರುವುದು ಪತ್ತೆಯಾದಾಗ ದಿಗ್ಭ್ರಮೆಗೊಂಡೆ’ ಎನ್ನುತ್ತಾರೆ ಮುಂಬೈ ಮೂಲದ ಉದ್ಯೋಗಿ ರಾಹುಲ್ (ಹೆಸರು ಬದಲಾಯಿಸಲಾಗಿದೆ). ‘ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಕೇವಲ ಆಹಾರವಷ್ಟೇ ಅಲ್ಲ, ಅನುವಂಶಿಕ ಸೇರಿದಂತೆ ಹಲವು ವೈದ್ಯಕೀಯ ಕಾರಣಗಳಿರಬಹುದು ಎಂದು ಹೃದ್ರೋಗ ತಜ್ಞರು ಧೈರ್ಯ ತುಂಬಿದರು. ಜೀವನಶೈಲಿಯ ಜತೆಗೆ ನಿಯಮಿತ ಚಿಕಿತ್ಸೆ ಮುಂದುವರಿಸಲು ಸೂಚಿಸಿದರು’ ಎಂದು ಅವರು ಅನುಭವ ಹಂಚಿಕೊಳ್ಳುತ್ತಾರೆ.

ಬೆಂಗಳೂರಿನ ಕಾವೇರಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥರಾದ ಡಾ. ವಿವೇಕ್ ಜಿ. ಈ ಕುರಿತು ಎಚ್ಚರಿಸುತ್ತಾ, ‘ಹೆಚ್ಚಿನ ಎಲ್‌ಡಿಎಲ್ ಮಟ್ಟವು ವೃದ್ಧಾಪ್ಯ ಅಥವಾ ಜಡ ಜೀವನಶೈಲಿಗೆ ಮಾತ್ರ ಸೀಮಿತ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಉತ್ತಮ ಆಹಾರ ಸೇವಿಸಿ, ಜಿಮ್‌ಗೆ ಹೋಗುವ ಯುವಜನರಲ್ಲೂ ಕುಟುಂಬದ ಅನುವಂಶಿಕ ಹಿನ್ನೆಲೆಯಿಂದಾಗಿ ಇದು ಅಧಿಕವಾಗಿರಬಹುದು. ವಯಸ್ಸು ಮತ್ತು ಫಿಟ್‌ನೆಸ್ ಮಾತ್ರವೇ ಹೃದಯ ಸುರಕ್ಷಿತವಾಗಿದೆ ಎಂಬುದಕ್ಕೆ ಮಾನದಂಡವಲ್ಲ. ಹಾಗಾಗಿ ಪ್ರತಿಯೊಬ್ಬರೂ 18 ವರ್ಷ ತುಂಬುತ್ತಿದ್ದಂತೆ ನಿಯಮಿತ ಲಿಪಿಡ್ ಪ್ರೊಫೈಲ್ ಪರೀಕ್ಷೆ ಆರಂಭಿಸಬೇಕು’ ಎಂದು ಸ್ಪಷ್ಟಪಡಿಸುತ್ತಾರೆ.

ಮುಂದಿನ ಬಾರಿ ಹೃದಯ ತಪಾಸಣೆಗೆ ಹೋದಾಗ, ಸಾಮಾನ್ಯ ಮಾತುಕತೆಗೆ ಸೀಮಿತವಾಗದೆ ವೈದ್ಯರಿಗೆ ಈ ಮೂರು ಪ್ರಮುಖ ಪ್ರಶ್ನೆಗಳನ್ನು ಕೇಳಿ:

1. ‘ಇಂದು ನನ್ನ ಎಲ್‌ಡಿಎಲ್-ಸಿ ಮಟ್ಟ ನಿಖರವಾಗಿ ಎಷ್ಟಿದೆ?’

ರಕ್ತನಾಳಗಳಲ್ಲಿ ಜಿಡ್ಡಿನ ಪದರ (ಪ್ಲೇಕ್) ಶೇಖರಣೆಯಾಗಿ ರಕ್ತಪರಿಚಲನೆಗೆ ಅಡ್ಡಿ ಉಂಟುಮಾಡುವ ಪ್ರಮುಖ ಖಳನಾಯಕ ಎಂದರೆ ಅದು ಎಲ್‌ಡಿಎಲ್. ಇದು ಯಾವುದೇ ಬಾಹ್ಯ ರೋಗಲಕ್ಷಣ ತೋರುವುದಿಲ್ಲ. ಆದ್ದರಿಂದ ಇತ್ತೀಚಿನ ರಕ್ತ ಪರೀಕ್ಷೆಯಲ್ಲಿ ಇದರ ನಿಖರ ಪ್ರಮಾಣ ಎಷ್ಟಿದೆ ಎಂದು ತಿಳಿದುಕೊಳ್ಳುವುದೇ ಹೃದಯ ರಕ್ಷಣೆಯ ಮೊದಲ ಹೆಜ್ಜೆ.

2. ‘ನನ್ನ ವೈಯಕ್ತಿಕ ಎಲ್‌ಡಿಎಲ್-ಸಿ ಗುರಿ (ಟಾರ್ಗೆಟ್) ಎಷ್ಟು?’

ಕೊಲೆಸ್ಟ್ರಾಲ್ ನಿಯಂತ್ರಣದ ಮಾನದಂಡ ಎಲ್ಲರಿಗೂ ಒಂದೇ ಆಗಿರುವುದಿಲ್ಲ. ಕಾರ್ಡಿಯಾಲಜಿ ಸೊಸೈಟಿ ಆಫ್ ಇಂಡಿಯಾ (ಸಿಎಸ್‌ಐ) ಮಾರ್ಗಸೂಚಿಯಂತೆ ವ್ಯಕ್ತಿಯ ಅಪಾಯದ ತೀವ್ರತೆಯ ಮೇಲೆ ಗುರಿ ನಿರ್ಧರಿಸಲಾಗುತ್ತದೆ:

ಕಡಿಮೆ ಅಪಾಯ: < 116 mg/dL

ಮಧ್ಯಮ ಅಪಾಯ: < 100 mg/dL

ಹೆಚ್ಚಿನ ಅಪಾಯ (ಮಧುಮೇಹ, ಅಧಿಕ ರಕ್ತದೊತ್ತಡ, ಕಿಡ್ನಿ ಸಮಸ್ಯೆ): < 70 mg/dL

ಅತ್ಯಧಿಕ ಅಪಾಯ (ಹಿಂದೆ ಹೃದಯಾಘಾತ, ಸ್ಟೆಂಟ್ ಅಥವಾ ಬೈಪಾಸ್ ಆದವರು): < 55 mg/dL

3. ನಾನು ನನ್ನ ನಿಗದಿತ ಗುರಿ ತಲುಪಿದ್ದೇನೆಯೇ? ಇಲ್ಲದಿದ್ದರೆ ಮುಂದಿನ ಚಿಕಿತ್ಸೆ ಏನು?

ಕೇವಲ ಆಹಾರ ಪಥ್ಯ ಅಥವಾ ನಿಗದಿತ ಮಾತ್ರೆ ಸೇವನೆಯಿಂದಲೇ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬಂದಿದೆ ಎಂದು ಭಾವಿಸುವುದು ತಪ್ಪು. ಜೀವನಶೈಲಿ ಬದಲಾವಣೆ ಹಾಗೂ ಆರಂಭಿಕ ಮಾತ್ರೆಗಳಿಂದ ಗುರಿ ಮುಟ್ಟಲು ಸಾಧ್ಯವಾಗದಿದ್ದರೆ, ತಜ್ಞ ವೈದ್ಯರು ಚಿಕಿತ್ಸೆಯನ್ನು ಪರಿಷ್ಕರಿಸುತ್ತಾರೆ. ಹೆಚ್ಚಿನ ಅಪಾಯದಲ್ಲಿರುವವರಿಗೆ ಪಿಸಿಎಸ್‌ಕೆ9 ಇನ್ಹಿಬಿಟರ್‌ಗಳು ಹಾಗೂ ಎಸ್‌ಐಆರ್‌ಎನ್‌ಎ ನಂತಹ ಸುಧಾರಿತ ಚುಚ್ಚುಮದ್ದು ಚಿಕಿತ್ಸೆಗಳು ಇಂದು ಲಭ್ಯವಿವೆ.

ಕೊಲೆಸ್ಟ್ರಾಲ್ ನಿಯಂತ್ರಣವೆನ್ನುವುದು ಕೇವಲ ತಾತ್ಕಾಲಿಕ ಕ್ರಮವಲ್ಲ, ಅದು ಆಜೀವ ಬದ್ಧತೆ. ಸಕಾಲಿಕ ತಪಾಸಣೆ, ನಿರಂತರ ಚಿಕಿತ್ಸೆ ಮತ್ತು ವೈದ್ಯಕೀಯ ಮಾರ್ಗದರ್ಶನದಿಂದ ಮಾತ್ರವೇ ಆರೋಗ್ಯಕರ ಹೃದಯ ಹಾಗೂ ಸುದೀರ್ಘ ಆಯುಷ್ಯ ಸಾಧ್ಯ.