ಸಾರಾಂಶ
ಬಿಬಿಎಂಪಿಯಿಂದ ಶೈಕ್ಷಣಿಕ ವರ್ಷ ಆರಂಭಗೊಳ್ಳುತ್ತಿದ್ದಂತೆ ಸೈಕಲ್ ವಿತರಣೆಗೆ ಬೇಕಾದ ತಯಾರಿ ನಡೆಸಲಾಗುತ್ತಿದೆ.
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು :ಬಿಬಿಎಂಪಿಯಿಂದ ಬೆಂಗಳೂರಿನ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಲು ಚಿಂತನೆ ನಡೆಸಿದ್ದು, ಶೈಕ್ಷಣಿಕ ವರ್ಷ ಆರಂಭಗೊಳ್ಳುತ್ತಿದ್ದಂತೆ ಸೈಕಲ್ ವಿತರಣೆಗೆ ಬೇಕಾದ ತಯಾರಿ ನಡೆಸಲಾಗುತ್ತಿದೆ.
ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮೊದಲ ಬಾರಿಗೆ ಸರ್ಕಾರಿ ಪ್ರೌಢ ಶಾಲೆಯ ಹೆಣ್ಣು ಮಕ್ಕಳಿಗೆ ಸೈಕಲ್ ವಿತರಣೆ ಕಾರ್ಯಕ್ರಮ ಜಾರಿಗೊಳಿಸಲಾಗಿತ್ತು. ನಂತರ ಬಾಲಕರಿಗೆ ಯೋಜನೆಯನ್ನು ವಿಸ್ತರಿಸಲಾಯಿತು. ಆದರೆ, ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಸೈಕಲ್ ವಿತರಣೆ ಯೋಜನೆ ಮುಂದುವರೆಸಲಿಲ್ಲ. ಇದೀಗ ಬಿಬಿಎಂಪಿ ತನ್ನ ವ್ಯಾಪ್ತಿಯಲ್ಲಿನ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಸೈಕಲ್ ನೀಡಲು ಮುಂದಾಗಿದೆ.
ಬಿಬಿಎಂಪಿಯ ಪ್ರಸಕ್ತ 2025-26ನೇ ಸಾಲಿನ ಆಯವ್ಯಯದಲ್ಲಿ ಕಲ್ಯಾಣ ಕಾರ್ಯಕ್ರಮಗಳಿಗೆ ₹721.40 ಕೋಟಿ ಮೀಸಲಿಟ್ಟಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚುವರಿಯಾಗಿ ₹167 ಕೋಟಿ ಮೀಸಲಿಟ್ಟಿದೆ. ಈ ಹೆಚ್ಚುವರಿ ಅನುದಾನ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಬಿಬಿಎಂಪಿಯ ಕಲ್ಯಾಣ ವಿಭಾಗದ ಅಧಿಕಾರಿಗಳು ಸೈಕಲ್ ವಿತರಿಸಲು ಉದ್ದೇಶಿಸಿದ್ದಾರೆ.
ಅರ್ಜಿ ಸಲ್ಲಿಸಬೇಕು:
ಪ್ರೌಢ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಲು ಉದ್ದೇಶಿಸಲಾಗಿದ್ದು, ಬಿಬಿಎಂಪಿ ಶಾಲೆಯ ವಿದ್ಯಾರ್ಥಿಗಳ ಜೊತೆಗೆ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಹಾಗೂ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಬಿಬಿಎಂಪಿಗೆ ಅರ್ಜಿ ಸಲ್ಲಿಸಿ ಸೈಕಲ್ ಪಡೆಯಬಹುದಾಗಿದೆ.
ಕ್ರಿಯಾ ಯೋಜನೆ ಸಿದ್ಧತೆಗೆ ಸೂಚನೆ:
ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆಗೆ ಬೇಕಾಗುವ ಅನುದಾನ ಎಷ್ಟು, ಲಭ್ಯವಿರುವ ಅನುದಾನ ಸೇರಿದಂತೆ ಮೊದಲಾದ ಅಂಶಗಳನ್ನು ಪರಿಶೀಲಿಸುವ ಜತೆಗೆ ಎಷ್ಟು ವಿದ್ಯಾರ್ಥಿಗಳು ಬಿಬಿಎಂಪಿಯ ವ್ಯಾಪ್ತಿಯಲ್ಲಿ 8ನೇ ತರಗತಿಗೆ ಈ ಬಾರಿ ದಾಖಲಾತಿ ಪಡೆಯಲಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಲು ಕಲ್ಯಾಣ ವಿಭಾಗದ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.
ಪರಿಸರ ಪ್ರೇಮ ಜಾಗೃತಿ:
ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಈಗಾಗಲೇ ಪರಿಸರ ಪ್ರೇಮದ ಬಗ್ಗೆ ಜಾಗೃತಿ ಮೂಡಿಸಲು ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ನಡುವೆ ನಗರದಲ್ಲಿ ಹೆಚ್ಚಾಗುತ್ತಿರುವ ಸಂಚಾರ ದಟ್ಟಣೆಯಿಂದ ಉಂಟಾಗುತ್ತಿರುವ ಮಾಲಿನ್ಯ ಕಡಿಮೆ ಮಾಡುವುದಕ್ಕೆ ಸೈಕಲ್ ಬಳಕೆಯೂ ಒಂದು ಪರಿಹಾರವಾಗಿದೆ. ಈ ಕುರಿತು ಮಕ್ಕಳಿಗೆ ಸೈಕಲ್ ವಿತರಿಸುವ ಮೂಲಕ ಜಾಗೃತಿ ಮೂಡಿಸುವುದು ಬಿಬಿಎಂಪಿಯ ಉದ್ದೇಶವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಲವು ಹೊಸ ಯೋಜನೆ ಜಾರಿಗೆ ತಯಾರಿ:
ಬಿಬಿಎಂಪಿ ಕಲ್ಯಾಣ ವಿಭಾಗದಿಂದ ಒಂಟಿ ಮನೆ, ಇ-ವಾಹನ, ಅಂಗವಿಕರಿಗೆ ತ್ರಿಚಕ್ರ ವಾಹನ, ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸಹಾಯಧನ, ಲ್ಯಾಪ್ ಟಾಪ್ ವಿತರಣೆ ಸೇರಿದಂತೆ ಮೊದಲಾದ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಈ ಬಾರಿ ಹೆಚ್ಚುವರಿಯಾಗಿ ಸೈಕಲ್ ವಿತರಣೆ, ಆ್ಯಪ್ ಆಧಾರಿತ ಕಲಿಕಾ ಕೋರ್ಸ್, ಸಾಹಸ ಕ್ರೀಡೆ ಸೇರಿದಂತೆ ಮೊದಲಾದ ಕಾರ್ಯಕ್ರಮದೊಂದಿಗೆ ವಿದ್ಯಾರ್ಥಿ ಮತ್ತು ಯುವಕರಿಗೆ ಧನ ಸಹಾಯ ನೀಡುವ ಬಗ್ಗೆ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ.
2025-26ನೇ ಸಾಲಿನ ಬಜೆಟ್ ಅನುದಾನಕ್ಕೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ರೂಪಿಸಲಾಗುತ್ತಿದ್ದು, ಈ ವೇಳೆ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಅನುಕೂಲವಾಗುವ ವಿವಿಧ ಯೋಜನೆಗಳನ್ನು ಜಾರಿಗೆ ಸಂಬಂಧಿಸಿದಂತೆ ಚಿಂತನೆ ನಡೆಸಲಾಗಿದೆ.
- ಸುರಳ್ಕರ್ ವಿಕಾಸ್ ಕಿಶೋರ್, ವಿಶೇಷ ಆಯುಕ್ತ, ಬಿಬಿಎಂಪಿ ಕಲ್ಯಾಣ ವಿಭಾಗ